ಸರ್ಕಾರಕ್ಕೆ ರಾಮನಗರ ಸಹೋದರರ ಸವಾಲು..! ಸೈನಿಕ ಫುಲ್ ಸೈಲೆಂಟ್..!

ಡಿಜಿಟಲ್ ಕನ್ನಡ ಟೀಮ್:

ಬೆಂಗಳೂರಿನ ಪಾದರಾಯನಪುರ ವಾರ್ಡ್‌ನಲ್ಲಿ ದಾಂಧಲೆ ಮಾಡಿದ ಆರೋಪದಲ್ಲಿ 130 ಮಂದಿಯನ್ನು ಬಂಧಿಸಿ ಅದರಲ್ಲಿ 119 ಜನರನ್ನು ರಾಮನಗರದ ಜೈಲಿನಲ್ಲಿ ಇಡಲಾಗಿತ್ತು. ಅದರಲ್ಲಿ ಐವರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾದ ಬಳಿಕ ಎಲ್ಲರನ್ನೂ ಮತ್ತೆ ಬೆಂಗಳೂರಿಗೆ ವಾಪಸ್ ಶಿಫ್ಟ್ ಮಾಡಿದ್ದು, ಹಜ್ ಭವನದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಆದರೆ ಮೊದಲೇ ಹಜ್ ಭವನ ಸೇರಿದಂತೆ ಸಾಕಷ್ಟು ಕಡೆ ಅವಕಾಶವಿದ್ದರೂ ರಾಮನಗರ ಜೈಲು ಖಾಲಿ ಮಾಡಿಸಿ, ಅಲ್ಲಿಗೆ ಬಂಧಿತ ಆರೋಪಿಗಳನ್ನು ಕರೆದುಕೊಂಡು ಹೋಗಿದ್ದಕ್ಕೆ ರಾಮನಗರದ ಸಹೋದರರು ಸರ್ಕಾರಕ್ಕೆ ಸವಾಲು ಎಸೆದಿದ್ದಾರೆ.

ರಾಜ್ಯ ಸರ್ಕಾರ ತೆಗೆದುಕೊಂಡು ನಿಲುವುಗಳ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್, ಯಾವುದೇ ಓರ್ವ ಸೆನ್ಸಿಬಲ್ ರಾಜಕಾರಣಿ ಇಂತಹ ದ್ವೇಷ ರಾಜಕಾರಣ ಮಾಡುವುದಿಲ್ಲ. ಈ ವಿಚಾರದಲ್ಲಿ ಚೀಫ್ ಮಿನಿಸ್ಟರ್ ಅಸಹಾಯಕರು. ಕೊರೊನಾ ಸೆಂಟರ್‌ಗೆ ಬೇಕಾದಷ್ಟು ಜಾಗ ಇತ್ತು. ಮಲ್ಲೇಶ್ವರಂ ಆಸ್ಪತ್ರೆಯಲ್ಲಿ ಇಡಲು ಡಿಸಿಎಂ ಅಶ್ವತ್ಥ ನಾರಾಯಣ ಅವಕಾಶ ಕೊಟ್ಟಿಲ್ಲ.
ಒಂದೂವರೆ ಲಕ್ಷ ಜನ ಬೆಂಗಳೂರಿಗೆ ಬಂದು ಕೆಲಸ ಮಾಡ್ತಾರೆ. ಆದರೂ ಒಬ್ಬರಿಗೂ ಸೋಂಕು ಬಂದಿರಲಿಲ್ಲ. ರಾಮನಗರ ಸೇಫ್ ಜೋನ್‌ನಲ್ಲಿ ಇತ್ತು. ಇದು ಕ್ಷಮೆಗೆ ಅರ್ಹವಾದ ವಿಷಯವಲ್ಲ. ಇಲ್ಲಿವರೆಗೂ ಡಿಸಿಎಂ ಅಶ್ವತ್ಥ ನಾರಾಯಣ ನಮ್ಮ ಜಿಲ್ಲಾ ಉಸ್ತುವಾರಿ ಸಚಿವ ಅಂತಾನೆ ಗೊತ್ತಿರಲಿಲ್ಲ. ಈಗ ವ್ಯಾಪಕ ಕೊಳಕಿದೆ ಕ್ಲೀನ್ ಮಾಡ್ತೀನಿ ಅಂತ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇವರು ಉಯ್ದಿದೆಲ್ಲ ನಮಗೆ ಬರ್ತಿದೆ. ಕೊರೊನಾ ಸೋಂಕು ಅಂಟಿಸ್ತಾರೆ ಅಂತಾ ನಾನು ಅಂದುಕೊಂಡಿರಲಿಲ್ಲ ಎಂದು ಸರ್ಕಾರವನ್ನು ಟೀಕಿಸಿದ್ದಾರೆ.

ಮಾಜಿ ಸಿಎಂ ಹಾಗೂ ಹಾಲಿ ರಾಮನಗರ ಕ್ಷೇತ್ರದ ಶಾಸಕ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿ ಪಾದರಾಯನಪುರ ಆರೋಪಿಗಳನ್ನು ರಾಮನಗರಕ್ಕೆ ಯಾಕೆ ಶಿಫ್ಟ್ ಮಾಡಿದ್ರು ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ. ಆರೋಪಿಗಳನ್ನ ರಾಮನಗರಕ್ಕೆ ಶಿಫ್ಟ್ ಮಾಡಬೇಕು ಅನ್ನೋದೇ ಹುಡುಗಾಟಿಕೆಯ ನಿರ್ಧಾರ. ಇದನ್ನ ಯಾರು ಯಾವ ಉದ್ದೇಶದಿಂದ ಸರ್ಕಾರಕ್ಕೆ ಸಲಹೆ ಕೊಟ್ಟರೋ ಗೊತ್ತಿಲ್ಲ. ಆ ಅಲೋಕ್ ಮೋಹನ್ ನೀಡಿರುವ ಸಲಹೆಯನ್ನ‌ ಸರ್ಕಾರ ಜನರ ಮುಂದೆ ಇಡಲಿ. ಕಳೆದ ಒಂದು ತಿಂಗಳಿನಿಂದ ಸರ್ಕಾರಕ್ಕೆ ಜನ ನೀಡಿದ್ದ ಸಹಕಾರ ನೀರಿನಲ್ಲಿ‌ ಹೋಮ ಮಾಡಿದಂತಾಯಿತು. ರಾಮನಗರದ ಈ ಸ್ಥಿತಿಗೆ ಸರ್ಕಾರವೇ ನೇರ ಹೊಣೆ. ಅಲೋಕ್ ಮೋಹನ್ ಎಂಬ ಅಧಿಕಾರಿಗೆ ನನ್ನ‌ ಮೇಲೆ‌ ದ್ವೇಷ. ನನ್ನ ಮೇಲಿನ ದ್ವೇಷವನ್ನು ರಾಮನಗರ ಜನರ ಮೇಲೆ ತೀರಿಸಿಕೊಳ್ಳವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಆರಂಭದಲ್ಲೇ ಸರ್ಕಾರಕ್ಕೆ ನಾನು ಈ ಬಗ್ಗೆ ಎಚ್ಚರಿಸಿದ್ದೆ.
ರಾಮನಗರಕ್ಕೆ ಆರೋಪಿಗಳನ್ನ ಕರೆತರೋದನ್ನು ವಿರೋಧಿಸಿದ್ದೆ. ಆರಂಭದಲ್ಲಿ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ಒಪ್ಪಿದ್ದರು. ಆದರೂ ಅಧಿಕಾರಿಗಳ ಒತ್ತಡಕ್ಕೆ ಮಣಿದು ರಾಮನಗರಕ್ಕೆ ಶಿಫ್ಟ್ ಮಾಡಲಾಗಿತ್ತು ಎಂದು ಕುಟುಕಿದ್ದಾರೆ.

ರಾಮನಗರಕ್ಕೆ ಕೊರೊನಾ ಹರಡಿಸಲು ನಡೆದ ವ್ಯವಸ್ಥಿತ ಪಿತೂರಿ ನಡೆಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ. ರಾಮನಗರದ ವಾತಾವರಣ ಸರ್ಕಾರ ಹಾಳು ಮಾಡಿದೆ ಎಂದಿರುವ ಡಿ.ಕೆ ಸುರೇಶ್, ಡಿ.ಕೆ. ಶಿವಕುಮಾರ್ ಮನೆಯನ್ನು ಕಾರಾಗೃಹ ಮಾಡಬೇಕಾ ಎಂದು ವ್ಯಂಗ್ಯವಾಡಿದ್ದ ಡಿಸಿಎಂ ಅಶ್ವತ್ಥ ನಾರಾಯನ್‌ಗೆ ತಿರುಗೇಟು ಕೊಟ್ಟಿದ್ದು, ಶಿವಕುಮಾರ್ ಮನೆಯನ್ನು ಕಾರಾಗೃಹ ಮಾಡಲು ಖಂಡಿತಾವಾಗಿಯೂ ಸರ್ಕಾರಕ್ಕೆ ಅವಕಾಶ ಇದೆ. ಈಗ ಅವರಿಗೆ ಅಧಿಕಾರ ಇದೆ, ಮುಂದಿನ ದಿನದಲ್ಲಿ ನೋಡಿಕೊಳ್ತೀವಿ. ದ್ವೇಷ ಯಾರ ಮೇಲಾದರೂ ಇರಲಿ. ನನ್ನನ್ನ ಬಂಧಿಸಲಿ, ಬೇಕಿದ್ದರೆ ಶಿವಕುಮಾರ್ ಅವರನ್ನು ಇನ್ನೊಂದು ಸರಿ ಬಂಧಿಸಲಿ. ಆದರೆ ರಾಮನಗರದ ಜನರ ನೆಮ್ಮದಿ ಹಾಳು ಮಾಡಿದಿರಲಿ ಎಂದು ಡಿಸಿಎಂ ಅಶ್ವತ್ಥ ನಾರಾಯಣ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ರಾಮನಗರಕ್ಕೆ ಸರ್ಕಾರ ಕೊರೊನಾ ತಂದ ವಿಚಾರದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ಸರ್ಕಾರದ ಗೊಂದಲದ ನಿರ್ಧಾರಗಳಿಗೆ ಚಾಟಿ ಬೀಸಿದ್ದಾರೆ. ಸರ್ಕಾರ ಮಾಡಿದ್ದು ಸರಿಯಲ್ಲ ಎಂದು ಕಟ್ಟುನಿಟ್ಟಾಗಿ ತಿಳಿಸಿದ್ದಾರೆ. ಇನ್ನೂ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ ಸುರೇಶ್ ಕೂಡ ಸರ್ಕಾರದ ನಡಾವಳಿ ಬಗ್ಗೆ ಕೆಂಡ ಕಾರಿದ್ದಾರೆ. ದ್ವೇಷವಿದ್ದರೆ ನಮ್ಮ ಮೇಲೆ ತೀರಿಸಿಕೊಳ್ಳಿ ರಾಮನಗರ ಜನರ ಮೇಲೆ ಬೇಡ ಎಂದು ಕಡ್ಡಿ ತುಂಡಾದಂತೆ ಹೇಳಿದ್ದಾರೆ. ಆದರೆ ರಾಮನಗರ ಜಿಲ್ಲೆಯಲ್ಲಿ ಅಸ್ತಿತ್ವ ಸಾಧಿಸಲು ಯತ್ನಿಸುತ್ತಿರುವ ಗೊಂಬೆ ನಾಡಿನ ಸೈನಿಕ ಯೋಗೇಶ್ವರ್ ಮಾತ್ರ ಸೈಲೆಂಟ್ ಆಗಿದ್ದಾರೆ. ಕ್ರೈಸ್ತ ಪ್ರತಿಮೆ ನಿರ್ಮಾಣದ ವಿರುದ್ಧ ಎರಡೆರಡು ಬಾರಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದ ಯೋಗೇಶ್ವರ್ ಅವರಿಗೆ ರಾಮನಗರದ ಜನತೆ ಬೇಡವಾದರೇ ಎನ್ನುವ ಪ್ರಶ್ನೆಗೆ ಅವರೇ ಉತ್ತರಿಸಬೇಕಿದೆ.

Leave a Reply