ಕೊರೋನಾ ಹಾಟ್​ಸ್ಪಾಟ್ ಮೈಸೂರಲ್ಲಿ ಆಯುಕ್ತರು ಮೇಯರ್ ನಡುವೆ ಕಿತ್ತಾಟ..!

ಡಿಜಿಟಲ್ ಕನ್ನಡ ಟೀಮ್:

ಕೊರೊನಾ ಹಾಟ್​ಸ್ಪಾಟ್​ಗಳಲ್ಲಿ ಮೈಸೂರಿಗೆ ಪ್ರಮುಖ ಸ್ಥಾನ. ನಂಜನಗೂಡಿನ ಕಂಪನಿಯಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕು 60ಕ್ಕೂ ಹೆಚ್ಚು ಜನರಿಗೆ ವ್ಯಾಪಿಸಿತ್ತು. 2 ಸಾವಿರ ಜನರನ್ನು ತಪಾಸಣೆ ಮಾಡಲಾಗಿತ್ತು. ತಿಂಗಳ ಕಾಲ ಕೊರೊನಾ ಹಾಟ್​ಸ್ಪಾಟ್​ ಆಗಿದ್ದ ಮೈಸೂರಲ್ಲಿ ಇತ್ತೀಚಿಗೆ ಸೋಂಕಿತ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಸಮಯದಲ್ಲಿ ಅಧಿಕಾರಿಗಳು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕಿರುವುದು ಅತ್ಯಗತ್ಯ. ಆದರೆ ಮೈಸೂರಿನಲ್ಲಿ ಮಹಾನಗರ ಪಾಲಿಕೆ ಮೇಯರ್​ ಹಾಗೂ ಪಾಲಿಕೆ ಆಯುಕ್ತರು ಕಚ್ಚಾಡಿಕೊಂಡಿದ್ದಾರೆ.

ಮೈಸೂರು ಪಾಲಿಕೆಯಲ್ಲಿ ಮೇಯರ್ ಹಾಗೂ ಆಯುಕ್ತರ ನಡುವೆ ಜಟಾಪಟಿ ಸರಿ ಮಾಡಲು ಮೈಸೂರು ಉಸ್ತುವಾರಿ ಸಚಿವ S.T ಸೋಮಶೇಖರ್​ ಸಂಧಾನಕ್ಕೆ ಆಗಮಿಸಿದ್ದರು. ಮೈಸೂರು ಪಾಲಿಕೆಯಲ್ಲಿ ಸಚಿವ ಎಸ್‌.ಟಿ ಸೋಮಶೇಖರ್​ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲಿಕೆ ಆಯುಕ್ತರು ಹಾಗೂ ಪಾಲಿಕೆ ಸದಸ್ಯರು ಭಾಗಿಯಾಗಿದ್ದರು. ಕೊರೊನಾ ಕೆಲಸದ ಸಂದರ್ಭದಲ್ಲಿ ಪಾಲಿಕೆ ಸದಸ್ಯರು ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಮೇಯರ್ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವೆ ಬಿಸಿಬಿಸಿ ಮಾತಿನ ಚಕಮಕಿ ನಡೀತು.

ಸಂಧಾನ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ಸಚಿವ ಎಸ್​.ಟಿ ಸೋಮಶೇಖರ್​, ಮೈಸೂರು ಪಾಲಿಕೆ ಮೇಯರ್ ಹಾಗೂ ಆಯುಕ್ತರ ನಡುವೆ ಸಮನ್ವಯದ ಕೊರತೆ ಇತ್ತು. ನಾನು ಸಭೆ ಮಾಡಿ ಮಾತನಾಡಿದ್ದೇನೆ. ಕಾರ್ಯಕ್ರಮಗಳ ಬಗ್ಗೆ ನನಗೆ ಮಾಹಿತಿ ನೀಡಲ್ಲ. ಪಾಲಿಕೆ ಸದಸ್ಯರನ್ನ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಅಂತ ಮೇಯರ್​ ಹೇಳಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಅಂತ ಆಯುಕ್ತರಿಗೆ ಹೇಳಿದ್ದೇನೆ. ಕೋವಿಡ್ – 19 ಸಂದರ್ಭದಲ್ಲಿ ಎಲ್ಲರು ಚೆನ್ನಾಗಿ ಕೆಲಸ ಮಾಡಿದ್ದಾರೆ. ಎಲ್ಲೋ ಅಲ್ಪ ಸ್ವಲ್ಪ ಮೇಯರ್ ಹಾಗೂ ಆಯುಕ್ತ ನಡುವೆ ಗೊಂದಲ ಉಂಟಾಗಿತ್ತು. ಅದನ್ನ ಸರಿ ಮಾಡಿಕೊಳ್ಳಿ ಅಂತ ಹೇಳಿದ್ದೇನೆ ಎಂದಿದ್ದಾರೆ. ಒಟ್ಟಾರೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವೆ ಸಮನ್ವಯ ಕೊರತೆ ಇದೆ ಎಂದು ಸ್ವತಃ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಮೈಸೂರು ಪಾಲಿಕೆ ಆಯುಕ್ತರ ನಡೆ ನನಗೆ ಅಸಮಾಧಾನ ತಂದಿದೆ. ಮೇಯರ್ ಸ್ಥಾನಕ್ಕೂ ಬೆಲೆ ಕೊಡ್ತಿಲ್ಲ. ಸದಸ್ಯರ ಮಾತಿಗೂ ಬೆಲೆ ಕೊಡ್ತಿಲ್ಲ ಎಂದು ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನಿಂ ಗಂಭೀರ ಆರೋಪ ಮಾಡಿದ್ದರು. ಪಾಲಿಕೆ ಆಯುಕ್ತ ಗುರುದತ್ ಹೆಗಡೆ ವಿರುದ್ದ ಅಸಮಾಧಾನ ಹೆಚ್ಚಾಗ್ತಿದ್ದ ಹಾಗೆ ಸಚಿವರು ಸಭೆ ನಡೆಸಿ ಸಂಧಾನ ಮಾಡಿದ್ದಾರೆ. ಪಾಲಿಕೆ ಆಯುಕ್ತರು, ಅಧಿಕಾರಿಗಳು ತಮಗಿಷ್ಟ ಬಂದಂತೆ ಕೆಲಸ ಮಾಡ್ತಿದ್ದಾರೆ. ದಾನಿಗಳು ಎಷ್ಟು ಹಣ ಕೊಟ್ಟರು..? ಏನು ಕೊಟ್ಟರು..? ಎನ್ನುವ ಮಾಹಿತಿ ಕೊಟ್ಟಿಲ್ಲ. ಪಾಲಿಕೆಯ ಮೊಬೈಲ್ ಕ್ಲಿನಿಕ್ ಕಾರ್ಯಕ್ರಮಕ್ಕೆ ನನಗೆ ಸರಿಯಾಗಿ ಆಹ್ವಾನವನ್ನೇ ನೀಡಿರಲಿಲ್ಲ ಎಂದು ದೂರಿದ್ದರು.

Leave a Reply