ಡಿ.ಕೆ ಶಿವಕುಮಾರ್​ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ..!

ಡಿಜಿಟಲ್ ಕನ್ನಡ ಟೀಮ್:

ಕೊರೊನಾ ನಡುವೆ ಅಂತರ್​ ಜಿಲ್ಲಾ ಹಾಗೂ ಅಂತರ್​ ರಾಜ್ಯದ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಅನುಕೂಲ ಮಾಡಿಕೊಡುವಂತೆ ಸೂಚನೆ ಕೊಡಲಾಗಿತ್ತು. ಕೇಂದ್ರದ ಆದೇಶದ ಅನ್ವಯ ಬೇರೆ ಬೇರೆ ಜಿಲ್ಲೆಗಳಿಂದ ಬಂದಿದ್ದ ವಲಸೆ ಕಾರ್ಮಿಕರನ್ನು ತಮ್ಮ ಹುಟ್ಟೂರುಗಳಿಗೆ ಕಳುಹಿಸಲು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿತ್ತು. ಆದರೆ ಬೆಂಗಳೂರಿನಿಂದ ರಾಯಚೂರು, ಯಾದಗಿರಿ, ಕೊಪ್ಪಳ ಭಾಗಕ್ಕೆ ಬಸ್​ಗಳಲ್ಲಿ ಕಾರ್ಮಿಕರನ್ನು ಕರೆದುಕೊಂಡು ಹೋಗಿ ಆ ಕಡೆಯಿಂದ ವಾಪಸ್​ ಖಾಲಿ ಬಸ್​ ಬರಬೇಕು. ಹಾಗಾಗಿ ಎರಡೂ ಕಡೆಯ ಹಣವನ್ನು ಕಾರ್ಮಿಕರೇ ಭರಿಸಬೇಕು ಎಂದು ಕೆಎಸ್​ಆರ್​ಟಿಸಿ ಆದೇಶ ಮಾಡಿತ್ತು. ಸಾರಿಗೆ ಇಲಾಖೆ ಆದೇಶ ಕಾರ್ಮಿಕರ ಕಣ್ಣು ಕೆಂಪಾಗುವಂತೆ ಮಾಡಿತ್ತು.

ಮೊದಲೇ ಕೂಲಿ ಇಲ್ಲದೆ ಜೀವನ ನಿರ್ವಹಣೆಯೇ ಕಷ್ಟ ಎನ್ನುವಂತಿದ್ದ ವಲಸೆ ಕಾರ್ಮಿಕರಿಂದ ಹಣ ವಸೂಲಿ ವಿಚಾರ ತಿಳಿದು ಮೆಜೆಸ್ಟಿಕ್​ ಬಂದಿದ್ದ ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಕೆಎಸ್​ಆರ್​ಟಿಸಿ ನಿರ್ಧಾರವನ್ನು ಖಂಡಿಸಿದ್ದರು. ಕೂಡಲೇ ಕಾರ್ಮಿಕರನ್ನು ಉಚಿತವಾಗಿ ಅವರ ಊರುಗಳಿಗೆ ಕಳುಹಿಸಲು ವ್ಯವಸ್ಥೆ ಮಾಡುವಂತೆ ಆಗ್ರಹ ಮಾಡಿದ್ದರು. ಒಂದು ವೇಳೆ ಸರ್ಕಾರದ ವತಿಯಿಂದ ಉಚಿತ ಪ್ರಯಾಣ ಸಾಧ್ಯವೇ ಇಲ್ಲ ಎನ್ನುವುದಾದರೆ ಕೆಪಿಸಿಸಿ ವತಿಯಿಂದ ಹಣ ಪಾವತಿ ಮಾಡುವುದಾಗಿಯೂ ತಿಳಿಸಿದ್ದರು. ಇಲ್ಲದಿದ್ದರೆ ಭಿಕ್ಷೆ ಬೇಡಿಯಾದರೂ ಸರಿ ನಾನು ಹಣ ಕಟ್ಟುತ್ತೇನೆ ಉಚಿತವಾಗಿ ಕಳುಹಿಸಿ ಕೊಡಿ ಎಂದು ಡಿ.ಕೆ ಶಿವಕುಮಾರ್​ ಆಗ್ರಹ ಮಾಡಿದ್ದರು.

ಕಾಂಗ್ರೆಸ್​ ಟೀಕೆಗೆ ಮಣಿದ ರಾಜ್ಯ ಸರ್ಕಾರ, ಕಾರ್ಮಿಕರು ಮತ್ತು ಬಡ ಕೂಲಿ ಕಾರ್ಮಿಕರನ್ನು ಉಚಿತವಾಗಿ ಕರೆದುಕೊಂಡು ಹೋಗಲು ನಿರ್ಧಾರ ಮಾಡಿದೆ. ಈ ಬಗ್ಗೆ ಪತ್ರಿಕ ಪ್ರಕಟಣೆ ಹೊರಡಿಸಿದ್ದು, ಕಾರ್ಮಿಕರ ಪರಿಸ್ಥಿತಿಯನ್ನು ಗಮನಿಸಿ ಇಂದಿನಿಂದ 3 ದಿನಗಳ ಕಾಲ ಅಂದರೆ ಮಂಗಳವಾರದ ಜಿಲ್ಲಾ ಕೇಂದ್ರಗಳಿಂದ ಮತ್ತು ರಾಜಧಾನಿ ಬೆಂಗಳೂರಿನಿಂದ ಕರ್ನಾಟಕದಲ್ಲಿನ ತಮ್ಮ ತಮ್ಮ ಊರುಗಳಿಗೆ ಹೋಗುವ ಎಲ್ಲರಿಗೂ ಉಚಿತವಾಗಿ ಕೆ.ಎಸ್.ಆರ.ಟಿ.ಸಿ ಬಸ್‍ಗಳಲ್ಲಿ ತೆರಳಲು ಅನುವು ಮಾಡಿಕೊಡಲಾಗಿದೆ. ಈ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಿಎಂ ಬಿ.ಎಸ್​ ಯಡಿಯೂರಪ್ಪ ಆದೇಶ ಮಾಡಿದ್ದಾರೆ.

ಒಟ್ಟಾರೆ, ಡಬಲ್​ ಚಾರ್ಜ್​ ಮಾಡಿದ್ದ ಕೆಎಸ್​ಆರ್​ಟಿಸಿಗೆ ಸಿಂಗಲ್​ ಚಾರ್ಜ್​ಗೆ ಆದೇಶ ಮಾಡಿದ್ದರು. ಇದೀಗ ವಿರೋಧ ಪಕ್ಷಗಳ ಆಕ್ರೋಶಕ್ಕೆ ಮಣಿದು ಉಚಿತ ಸಾರಿಗೆ ಸೌಲಭ್ಯಕ್ಕೆ ಮುಂದಾಗಿದೆ.

Leave a Reply