ಕಾರ್ಮಿಕರ ಬಳಿ ಶ್ರೀಮಂತಿಕೆ ಇಲ್ಲದಿರಬಹುದು, ಹಾಗಂತ ಅವರನ್ನು ಕೀಳಾಗಿ ಕಾಣಬೇಡಿ: ಡಿಕೆಶಿ ಕಿಡಿ

ಡಿಜಿಟಲ್ ಕನ್ನಡ ಟೀಮ್:

ರಾಜ್ಯದ ಕಾರ್ಮಿಕರ ಬಳಿ ಶ್ರೀಮಂತಿಕೆ ಇಲ್ಲದಿರಬಹುದು. ಹಾಗಂತ ಅವರನ್ನು ಕೀಳಾಗಿ ನೋಡಬೇಡಿ. ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಿ. ಅವರನ್ನು ಹಗಲಿರಳು ರಸ್ತೆಯಲ್ಲಿ ನಿಲ್ಲಿಸಿದಿರಲ್ಲಾ ನಿಮಗೆ ಅದಕ್ಕಿಂತ ನಾಚಿಕೆಗೇಡಿನ ವಿಚಾರ ಬೇರೆ ಬೇಕೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಹೊರ ರಾಜ್ಯಗಳಲ್ಲಿ ಸಿಲುಕಿರುವ ರಾಜ್ಯದ ಕಾರ್ಮಿಕರನ್ನು ವಾಪಸ್ ಕರೆತರಲು ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಕಾಂಗ್ರೆಸ್ ನಿಯೋಗದ ಮನವಿ ಸಲ್ಲಿಕೆ ಹಾಗೂ ತಮ್ಮ ವಿರುದ್ಧ ಸಚಿವರುಗಳು ಮಾಡಿರುವ ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ಹೇಳಿದ್ದಿಷ್ಟು:

‘ನಾನು ಎಲ್ಲಿಗೆ ಹೋಗಬೇಕು, ಎಲ್ಲಿಗೆ ಹೋಗಬಾರದು ಎಂದು ಹೇಳಲು ಅಶೋಕ್ ಯಾರು? ನನಗೆ ಅಶೋಕ್ ಅನುಮತಿ ಬೇಕಿಲ್ಲ. ಕೇವಲ ನನಗಷ್ಟೇ ಅಲ್ಲ. ನಮ್ಮ ಪಕ್ಷದ ಯಾವುದೇ ಕಾರ್ಯಕರ್ತನಿಗೂ ಅವರ ಅನುಮತಿ ಅಗತ್ಯವಿಲ್ಲ. ಒಬ್ಬ ರಾಜಕಾರಣಿಯಾಗಿ, ಒಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿ ಜನರ ನೆರವಿಗೆ ಧಾವಿಸುವುದು ನನ್ನ ಕರ್ತವ್ಯ. ಸಂವಿಧಾನದಲ್ಲಿ ಯಾರಿಗೆ ಯಾವ, ಯಾವ ಹಕ್ಕು ನೀಡಲಾಗಿದೆ ಎಂಬ ವಿಚಾರವನ್ನು ನನ್ನ ಆತ್ಮೀಯ ಮಿತ್ರ ಅಶೋಕ್ ಅವರು ತಿಳಿದುಕೊಳ್ಳಲಿ. ಅವರಿಗೆ ಪಕ್ಷದಲ್ಲಿ ಆಂತರಿಕ ಸಮಸ್ಯೆ ಇದೆ. ಅವರು ಎಷ್ಟು ಸಂಕಟದಲ್ಲಿದ್ದಾರೆ ಎಂಬುದರ ಅರಿವು ನನಗಿದೆ. ಜನ ಉಂಟು, ನಾವುಂಟು. ಭಕ್ತ ಉಂಟು, ಭಗವಂತ ಉಂಟು. ರಾಜ್ಯದ ಜನರೇ ನಮ್ಮ ಪಾಲಿನ ದೇವರು. ಅಶೋಕ್ ಅವರಾಗಲಿ, ಸವದಿ ಅವರಾಗಲಿ ಒಂದು ವಿಷಯ ಅರ್ಥ ಮಾಡಿಕೊಳ್ಳಬೇಕು. ಅವರು ಕಾರ್ಮಿಕರು, ವಲಸಿಗರು ಅಂತಾ ಕಡೆಗಣಿಸಲು ಹೋಗಬೇಡಿ. ಈ ರಾಜ್ಯ, ದೇಶದ ಅಬಿವೃದ್ಧಿಗೆ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಶ್ರೀಮಂತಿಕೆ ಇಲ್ಲದಿರಬಹುದು, ಆದರೆ ಅವರನ್ನು ಗೌರವಯುತವಾಗಿ ಕಾಣಬೇಕು. ನೀವು ಅವರನ್ನು ಯಾವ ರೀತಿ ನಡೆಸಿಕೊಂಡಿದ್ದೀರಿ. ಅವರು ಹೇಗೆ ಹಗಲು-ರಾತ್ರಿ, ಬಸ್ ನಿಲ್ದಾಣದಲ್ಲಿ, ರಸ್ತೆಯಲ್ಲಿ ಬಿದ್ದಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಿ. ನಿಮಗೆ ಕಿಂಚಿತ್ತಾದರೂ ಕರುಣೆ, ಹೃದಯವಿಲ್ಲವೇ? ಇದಕ್ಕಿಂತ ದೊಡ್ಡ ಅವಮಾನ ಬೇರೆ ಏನಿದೆ?

ನಾವು ಕೊಟ್ಟ ಚೆಕ್ ಅನ್ನು ಅವರು ಸ್ವೀಕರಿಸಲು ಮುಂದೆ ಬಂದಿಲ್ಲ. ಅವರು ಯಾವ ಸಮಯಕ್ಕೆ, ಎಲ್ಲಿಗೆ ಬರಲು ಹೇಳುತ್ತಾರೋ ಅಲ್ಲಿಗೆ ಹೋಗಿ ಕೊಡುತ್ತೇನೆ. ಅಧಿಕಾರಿಯೊಬ್ಬರು ಸಿಎಂ ನಿಧಿಗೆ ಕೊಡುವಂತೆ ಹೇಳಿದ್ದಾರೆ. ಅವರು ನಾವು ಕೊಡುವ ಹಣವನ್ನು ಎಲ್ಲಿ ಬೇಕಾದರೂ ಬಳಸಿಕೊಳ್ಳಲಿ, ನಮಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಕಾರ್ಮಿಕರಿಗೆ ಉಚಿತ ಪ್ರಯಾಣ ವಿಚಾರದಲ್ಲಿ ತಡವಾದರೂ ನಮ್ಮ ಬೇಡಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಭಿನಂದನೆಗಳು. ಅವರು ಸರ್ಕಾರದಲ್ಲಿ ಏಕಾಂಗಿಯಾಗಿ ಹೋರಾಡುತ್ತಿದ್ದು, ಅವರಿಗೆ ಅವರ ನಾಯಕರಿಂದ, ಸಹೋದ್ಯೋಗಿಗಳಿಂದ ಬೆಂಬಲ ಸಿಗುತ್ತಿಲ್ಲ. ಆರ್ ಎಸ್ಎಸ್ ನವರು ಬೈಯ್ದ ಮೇಲೆ ಬಿಜೆಪಿ ನಾಯಕರು ಈಗ ಬಸ್ ನಿಲ್ದಾಣಕ್ಕೆ ಹೋಗಿದ್ದಾರೆ. ಅವರು ಸ್ಪಂದಿಸಲಿ, ಅದನ್ನು ನಾನು ಪ್ರಶ್ನಿಸುವುದಿಲ್ಲ. ಇದೇ ಪ್ರಜ್ಞೆ ಮುಂಚೆ ಎಲ್ಲಿ ಹೋಗಿತ್ತು?

*ಮಹಿಳಾ ಕಾಂಗ್ರೆಸ್ ಪ್ರತಿಭಟನೆ ಸಮರ್ಥನೆ:*
ನಿನ್ನೆ ಕಾಂಗ್ರೆಸ್ ಮಹಿಳಾ ಶಾಸಕಿಯರ ಪ್ರತಿಭಟನೆ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ ಮಾಡಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಸುರೇಶ್ ಕುಮಾರ್ ಅಣ್ಣ ನೀವು ನಿಮ್ಮ ಸಿಎಂ ಅವರ ಬಾಯಿ ಮುಚ್ಚಿಸಬಹುದು. ಮಕ್ಕಳಿಗೆ ಗರ್ಭಿಣಿಯರಿಗೆ ಕೊಡುವ ಆಹಾರ ಮಾರಾಟ ಮಾಡಿದ್ರೆ ಸುಮ್ನೆ ಇರೋಕೆ ಆಗತ್ತಾ. ನಮಗೂ ಅಷ್ಟೋ, ಇಷ್ಟೋ ಪರಿಜ್ಞಾನ ಇದೆ. ಸರ್ಕಾರ ಅಂದರೆ ಏನು? ಯಾವ ರೀತಿ ಕೆಲಸ ಮಾಡುತ್ತದೆ ಅಂತಾ ಗೊತ್ತಿದೆ. ಅಕ್ಷಯ ಪಾತ್ರೆ ಸಂಸ್ಥೆಗೆ ನೀಡಿದ ಸರ್ಕಾರಿ ಗುತ್ತಿಗೆಯನ್ನು ಲಿಂಬಾವಳಿ ಸಾಹೇಬ್ರು ದುರ್ಬಳಕೆ ಮಾಡಿಕೊಂಡರು. ಈ ವಿಚಾರವಾಗಿ ಎಲ್ಲ ಮಾಹಿತಿ, ದಾಖಲೆ ನಿಮಗೆ ಕೊಟ್ಟಿದ್ದೇನೆ. ಇನ್ನು ಮಕ್ಕಳು, ಬಾಣಂತಿಯರಿಗೆ ನೀಡುವ ಊಟವನ್ನು ರೀಪ್ಯಾಕ್ ಮಾಡುತ್ತಿದ್ದೀರಲ್ಲಾ, ಈ ದೇಶದಲ್ಲಿ ನಿಮಗೆ ಇದ್ದಕಿಂತಾ ನಾಚಿಕೆಗೇಡಿನ ವಿಚಾರ ಬೇರೆ ಇದೆಯೇ? ಆದರೂ ನೀವು ನಿಮ್ಮ ಹೇಳಿಕೆಗಳ ಮೂಲಕ ಪ್ರಧಾನಮಂತ್ರಿಗಳು ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಅವಮಾನ ಮಾಡುತ್ತಿದ್ದೀರಿ.

ನಮ್ಮ ಮಹಿಳಾ ಕಾಂಗ್ರೆಸ್ ಸದಸ್ಯರು ಅದನ್ನೇ ಕೇಳಿದ್ದು. ನಮ್ಮ ಮೋಟಮ್ಮ ಅವರಾಗಲಿ, ಜಯಮಾಲಾ ಅವರಾಗಲಿ, ಉಮಾಶ್ರೀ ಅವರಾಗಲಿ ಅವರೆಲ್ಲರೂ ಅದೇ ಖಾತೆಯನ್ನು ನಿಭಾಯಿಸಿ ಅನುಭವ ಹೊಂದಿದ್ದಾರೆ. ಅವರಿಗೆ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತೆ ಅಂತಾ ಚೆನ್ನಾಗಿ ಗೊತ್ತಿದೆ. ಅವರು ಪ್ರತಿಭಟನೆ ಮಾಡಿದರೆ ಅವರನ್ನು ಬಂಧಿಸುತ್ತಾರೆ. ಪ್ರತಿಪಕ್ಷಗಳಿಗೆ ಪ್ರತಿಭಟನೆ ಮಾಡುವ ಅವಕಾಶ ಇಲ್ಲವೇ? ಯಾವುದೋ ಪೊಲೀಸ್ ಅಧಿಕಾರಿ ಮಹಿಳಾ ಶಾಸಕಿ, ನಾಯಕರ ಕಡೆ ಲಾಠಿ ತೋರಿಸಿ, ಐದು ವರ್ಷ ಜೈಲಿಗೆ ಹಾಕಿಸುತ್ತೇನೆ ಅಂತಾ ಧಮಕಿ ಹಾಕುತ್ತಾರೆ. ಅವರಿಗೆ ಮಹಿಳಾ ಆಯೋಗ, ಮಾನವ ಹಕ್ಕು ಆಯೋಗದ ಬಗ್ಗೆ ಗೊತ್ತಿಲ್ಲ ಅನಿಸುತ್ತೆ. ಅಧಿಕಾರಿಗಳಿಗೆ ಹೇಗೆ ಗೌರವ ನೀಡಬೇಕು ಅಂತಾ ನಮಗೂ ಗೊತ್ತಿದೆ. ಈ ವಿಚಾರದಲ್ಲಿ ಆ ಹೆಣ್ಣು ಮಕ್ಕಳು ಹೋರಾಟ ಮಾಡದೇ ಬೇರೆ ಯಾರು ಹೋರಾಟ ಮಾಡಬೇಕು?

*25 ಸಂಸದರು, ರೈಲ್ವೇ ಸಚಿವರಿದ್ದಾರೆ ಒಂದು ರೈಲು ವ್ಯವಸ್ಥೆ ಮಾಡಿಸಲಿ*
ನಮ್ಮ ರಾಜ್ಯದಿಂದ 25 ಸಂಸದರನ್ನು ಆಯ್ಕೆ ಮಾಡಿ ಕಳಿಸಿದ್ದೇವೆ. ರೈಲ್ವೇ ಖಾತೆ ರಾಜ್ಯ ಸಚಿವರೂ ಕೂಡ ನಮ್ಮ ರಾಜ್ಯದವರೇ. ಹೀಗಿರುವಾಗ ಬೇರೆ ರಾಜ್ಯಗಳಲ್ಲಿ ನೀಡಲಾಗಿರುವ ರೈಲು ಸೇವೆಯನ್ನು ರಾಜ್ಯದಲ್ಲೂ ತಂದು ಹೊರ ರಾಜ್ಯಗಳಲ್ಲಿ ಸಿಲುಕಿರುವ ನಮ್ಮ ಜನರನ್ನು ವಾಪಸ್ ಕರೆ ತರಲು ಏನು ಸಮಸ್ಯೆ? ರೈಲ್ವೇ ಇಲಾಖೆ ಪಿಎಂ ನಿಧಿಗೆ 150 ಕೋಟಿ ನೀಡಿದೆ. ಅಲ್ಲಿಗೆ ನೀಡುವ ಬದಲು ಬಡ ಕಾರ್ಮಿಕರಿಗಾಗಿ ರೈಲು ಸೇವೆ ನೀಡಬಹುದಿತ್ತು. ರಾಜ್ಯ ಸರ್ಕಾರ ರೈಲ್ವೇ ಇಲಾಖೆ ಜತೆ ಮಾತುಕತೆ ನಡೆಸಿ ರೈಲು ವ್ಯವಸ್ಥೆ ಕಲ್ಪಿಸಲಿ. ಅದಕ್ಕೆ ಬೇಕಾದ ಹಣವನ್ನು ನಾವು ನೀಡುತ್ತೇವೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ನಮ್ಮ ಪಕ್ಷ ಪ್ರಯಾಣದ ವೆಚ್ಚ ಭರಿಸಲು ನಿರ್ಧರಿಸಿದೆ.

ಮುಖ್ಯಮಂತ್ರಿಗಳು ಉಚಿತ ಬಸ್ ವ್ಯವಸ್ಥೆ ಕಲ್ಪಿಸಿರುವುದು ಸ್ವಾಗತಾರ್ಹ. ನಮ್ಮ ಪಕ್ಷದ ಪರವಾಗಿ ನಾನು ಮನವಿ ಮಾಡಿರಬಹುದು, ಆದರೆ ಇದು ನನ್ನ ಜಯ ಎಂದು ನಾನು ಪರಿಗಣಿಸುವುದಿಲ್ಲ. ಈ ನಾಡಿನ ಜನತೆ, ಬಡವರಿಗೆ ಸಿಕ್ಕ ಗೌರವ. ಇದು ಅವರ ಕರ್ಮಭೂಮಿ. ಈ ರಾಜ್ಯದ ಅಭಿವೃದ್ಧಿ ಮಾಡಿರುವುದು ಅವರು. ಅವರಿಗೆ ಗೌರವ ಕೊಡಬೇಕಾದದ್ದು, ನಮ್ಮ ಕರ್ತವ್ ಹಾಗೂ ಧರ್ಮ. ಹೀಗಾಗಿ ಇದರಲ್ಲಿ ನಾವು ಕ್ರಿಡಿಟ್ ತೆಗೆದುಕೊಳ್ಳುವುದಿಲ್ಲ.

Leave a Reply