ಡಿಜಿಟಲ್ ಕನ್ನಡ ಟೀಮ್:
ತಾವು ನೀಡಿದ ರಚನಾತ್ಮಕ ಸಲಹೆ ಸ್ವೀಕರಿಸುವ ಬದಲು, ತಾವು ಎತ್ತಿ ತೋರಿಸುವ ಲೋಪದೋಷಗಳನ್ನು ತಿದ್ದಿಕೊಳ್ಳುವ ಬದಲು ಸಚಿವರುಗಳು ತಮ್ಮ ವಿರುದ್ಧ ಪ್ರತಿದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಲಾಕ್ ಡೌನ್ ನಿಂದ ವೃತ್ತಿ ಆಧಾರಿತ ಸಮುದಾಯಗಳು, ರೈತರು, ಕಾರ್ಮಿಕರು, ಉದ್ದಿಮೆದಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಶುಕ್ರವಾರ ಕರೆದಿದ್ದ ಕಾಂಗ್ರೆಸ್ ಸೇರಿದಂತೆ ನಾನಾ ಪಕ್ಷಗಳ ಮುಖಂಡರ ಸಭೆಯಲ್ಲಿ ಭಾಗವಹಿಸಿದ್ದ ಡಿಕೆ ಶಿವಕುಮಾರ್ ಅವರು, ‘ಪ್ರತಿಪಕ್ಷವಾಗಿ ನಾವು ನಮ್ಮ ಕರ್ತವ್ಯ ಮಾಡಬಾರದೇ? ಸರಕಾರದ ಅನ್ಯಾಯ, ಅಕ್ರಮಗಳನ್ನು ನೋಡಿಕೊಂಡು ಸುಮ್ಮನ್ನಿರಬೇಕೇ’ ಎಂದು ಪ್ರಶ್ನಿಸಿದರು.
‘ನೀವು ಪ್ರತಿಪಕ್ಷ ನಾಯಕ ಹಾಗೂ ಪಕ್ಷದ ಅಧ್ಯಕ್ಷರಾಗಿದ್ದಾಗ ಸುಮ್ಮನೇ ಕೂತಿದ್ದಿರಾ? ಸರ್ಕಾರದ ಲೋಪದೋಷಗಳನ್ನು ಎತ್ತಿ ಹಿಡಿಯಲಿಲ್ಲವೇ? ನೀವು ಮಾಡಿದ ಕೆಲಸವನ್ನೇ ಇಂದು ನಾವು ಮಾಡಿದರೇ ಅದು ತಪ್ಪೇ? ನಮ್ಮ ಸಲಹೆ ಹಾಗೂ ಟೀಕೆಗಳನ್ನು ಸ್ವೀಕರಿಸುವ ವಿಶಾಲ ಮನೋಭಾವ ನಿಮ್ಮ ಸಚಿವರುಗಳಿಗೆ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಕಿಡಿಕಾರಿದರು.
ಸರ್ಕಾರದ ವತಿಯಿಂದ ಅಕ್ಷಯ ಫೌಂಡೇಷನ್ ನೀಡಿದ ಆಹಾರ ಪದಾರ್ಥಗಳ ಮೇಲೆ ಬಿಜೆಪಿ ನಾಯಕರಾದ ಅರವಿಂದ ಲಿಂಬಾವಳಿ ಅವರು ತಮ್ಮ ಹೆಸರು ಹಾಕಿಕೊಂಡು ದುರ್ಬಳಕೆ ಮಾಡಿಕೊಂಡಿದ್ದು, ಸರ್ಜಾಪುರ, ಆನೆಕಲ್ ಗಳಲ್ಲಿ ಬಡವರಿಗೆ ಸೇರಬೇಕಾಗಿದ್ದ ಅಕ್ಕಿ, ಮಕ್ಕಳು ಮತ್ತು ಬಾಣಂತಿಯರಿಗೆ ಸೇರಬೇಕಿದ್ದ ಬೇಳೆ, ಸಕ್ಕರೆಗಳನ್ನು ಮರು ಪ್ಯಾಕಿಂಗ್ ಮಾಡಿದ ಫೋಟೋ ಮತ್ತಿತರ ದಾಖಲೆಗಳನ್ನು ಡಿಕೆ ಶಿವಕುಮಾರ್ ಸಭೆಯಲ್ಲಿ ತೋರಿಸಿದರು.
‘ನಿಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಮಂತ್ರಿಗಳು ಈ ರೀತಿ ಅಕ್ರಮಗಳನ್ನು ಮಾಡುತ್ತಿರುವಾಗ ಅದನ್ನು ಪ್ರಶ್ನೆ ಮಾಡಬಾರದೆ? ನಾವು ನೋಡಿಕೊಂಡು ತೆಪ್ಪಗೆ ಕೂರಬೇಕೇ? ಹಾಗಾದ್ರೆ ವಿರೋಧ ಪಕ್ಷದ ನಾಯಕರುಗಳಾಗಿ ನಮ್ಮ ಕೆಲಸ ಏನು? ನೀವು ಕೂಡ ಕೆಲಸ ಮಾಡಿಲ್ಲವೇ? ಆಗಿನ ಸರ್ಕಾರಗಳು ಅವುಗಳನ್ನು ತಿದ್ದುಕೊಂಡಿಲ್ಲವೇ? ಈಗ ನಾನು ನನ್ನ ಕೆಲಸ ಮಾಡುತ್ತಿರುವಾಗ ನನ್ನ ವಿರುದ್ಧ ನಿಮ್ಮ ಸಚಿವರು ಯಾಕೆ ಮಾತನಾಡುತ್ತಿದ್ದಾರೆ? ಇಂತಹ ಕೀಳುಮಟ್ಟದ ರಾಜಕಾರಣ ಮಾಡುವುದನ್ನು ಬಿಟ್ಟು, ನೆಟ್ಟಗೆ ಕೆಲಸ ಮಾಡಲು ನಿಮ್ಮ ಸಚಿವರುಗಳಿಗೆ ಹೇಳಿ’ ಎಂದು ಮುಖ್ಯಮಂತ್ರಿಗಳಿಗೆ ಖಾರವಾಗಿ ಹೇಳಿದರು.
‘ನಾವು ಕಷ್ಟದ ಸಮಯದಲ್ಲಿ ರಾಜಕೀಯ ಬದಿಗೊತ್ತಿ ನಿಮಗೆ ಸಂಪೂರ್ಣ ಸಹಕಾರ ನೀಡಲಿಲ್ಲವೇ? ಇಡೀ ಪಕ್ಷ ನಿಮ್ಮ ಬೆನ್ನಿಗೆ ನಿಂತಿಲ್ಲವೇ? ನಿಮಗೂ ಸ್ವಲ್ಪ ಆತ್ಮಸಾಕ್ಷಿ ಇರಬೇಕಲ್ಲವೇ? ನಾವು ಕೊಟ್ಟ ಸಹಕಾರವನ್ನು ನಮ್ಮ ನ್ಯೂನ್ಯತೆ, ದೌರ್ಬಲ್ಯ ಎಂದು ಭಾವಿಸಬೇಡಿ. ನಮಗೆ ಸಹಕಾರ ಕೊಡುವುದೂ ಗೊತ್ತಿದೆ. ತಪ್ಪು ಮಾಡಿದಾಗ ಬೀದಿಗಿಳಿದು ಹೋರಾಡುವುದೂ ಗೊತ್ತಿದೆ’ ಎಂದು ಎಚ್ಚರಿಸಿದರು.
ಸಭೆ ನಂತರ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆ
‘ನಾವು ಈ ಹಿಂದೆ ಇಟ್ಟ ಬೇಡಿಕೆಯಂತೆ ರಾಜ್ಯ ಸರ್ಕಾರ ತನ್ನ ಪ್ಯಾಕೇಜ್ ನಲ್ಲಿ ಎಲ್ಲ ವರ್ಗದವರಿಗೆ ಅವಕಾಶ ಮಾಡಿಕೊಟ್ಟಿಲ್ಲ. ರೈತರು, ಅಸಂಘಟಿತ ವಲಯದ ಕಾರ್ಮಿಕರು, ನರೇಗಾ ಕಾರ್ಮಿಕರು, ಮಾಧ್ಯಮಗಳು, ಛಾಯಾಗ್ರಾಹಕರು, ಕಲಾವಿದರು ಸೇರಿದಂತೆ ಅನೇಕ ವರ್ಗದ ಜನರನ್ನು ಗಣನೆಗೆ ತೆಗೆದುಕೊಂಡಿಲ್ಲ. ವೃತ್ತಿ ಆಧಾರಿತ ಸಮುದಾಯಗಳಿಗೆ ಆಗಿರುವ ಅನ್ಯಾಯವನ್ನು ಇವತ್ತಿನ ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ’ ಎಂದರು.
‘ನಾವು ಇಲ್ಲಿಗೆ ಬರುವ ಮುನ್ನ ಎಲ್ಲ ಪಕ್ಷದವರು, ಸಂಘಟನೆ, ಸಂಸ್ಥೆಗಳು, ಕೈಗಾರಿಕೆ, ವಾಣಿಜ್ಯೋದ್ಯಮ, ಸಣ್ಣ ಕೈಗಾರಿಕೆ ಪ್ರತಿನಿಧಿಗಳನ್ನು ಕರೆದು, ಅವರ ಜತೆ ಮಾತನಾಡಿದ್ದೇವೆ. ಅವರ ಸಮಸ್ಯೆಗಳನ್ನು ಕೇಳಿ ಅವುಗಳನ್ನು ಸರ್ಕಾರದ ಮುಂದೆ ಇಟ್ಟಿದ್ದೇವೆ. ಇವುಗಳ ಜತೆಗೆ ಬಿಜೆಪಿ ನಾಯಕರುಗಳು ಬಡವರ ಅಕ್ಕಿ, ಮಕ್ಕಳು ಮತ್ತು ಬಾಣಂತಿಯರ ಆಹಾರ ಪದಾರ್ಥಗಳನ್ನು ತಮ್ಮ ವೈಯಕ್ತಿಕ ಲಾಭಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದರೂ ಏಕೆ ಕಾನೂನು ಕ್ರಮ ಜರುಗಿಸಿಲ್ಲ ಎಂದು ಕೇಳಿದ್ದೇವೆ?’ ಎಂದರು.
‘ಕೆಂಪು ವಲಯದಲ್ಲಿ ಆಗುತ್ತಿರುವ ಉಲ್ಲಂಘನೆ ಹಾಗೂ ಮೊನ್ನೆ ಹೊಸಕೋಟೆಯಲ್ಲಿ ಮಾಜಿ ಸಚಿವರು ಅಧಿಕಾರಿಗಳನ್ನು ಇಟ್ಟುಕೊಂಡು ಸಾರ್ವಜನಿಕ ಸಭೆ ನಡೆಸಿದ್ದರೂ ಇವತ್ತಿನವರೆಗೂ ಅವರ ವಿರುದ್ಧ ಕಾನೂನಿನ ಕ್ರಮ ಕೈಗೊಂಡಿಲ್ಲದಿರುವ ಬಗ್ಗೆ ಸಿಎಂ ಗಮನ ಸೆಳೆದಿದ್ದೇವೆ’ ಎಂದು ತಿಳಿಸಿದರು.
‘ನರೇಗಾ ಕಾರ್ಮಿಕರಿಗೆ 100 ದಿನ ಕೆಲಸ ಕೊಡಲು ಸಾಧ್ಯವಾಗದಿದ್ದಾಗ ಅವರಿಗೆ ಒಂದು ತಿಂಗಳ ವೇತನ ಉಚಿತವಾಗಿ ನೀಡಲು ಕಾನೂನಿನಲ್ಲಿ ಅವಕಾಶವಿದೆ. ಅವರು ಇದಕ್ಕಾಗಿ ದುಡ್ಡು ಖರ್ಚು ಮಾಡಬೇಕಾಗಿಲ್ಲ. ಕೇಂದ್ರ ಸರ್ಕಾರ ಇದಕ್ಕೆ ಅನುದಾನ ನೀಡುತ್ತದೆ. ಈ ವಿಚಾರದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಮಲಗಿರುವ ವಿಚಾರವನ್ನೂ ಹೇಳಿದ್ದೇವೆ. ಇನ್ನು ನಮ್ಮ ವಿರೋಧ ಪಕ್ಷದ ನಾಯಕರು ಒಂದು ಮಹತ್ವದ ವಿಚಾರ ಪ್ರಸ್ತಾಪಿಸಿದ್ದಾರೆ. ಅದೇನೆಂದರೆ, ಎಲ್ಲ ಕೈಗಾರಿಕೆ, ಉದ್ದಿಮೆಗಳ 3 ತಿಂಗಳ ಬಡ್ಡಿ ಮನ್ನಾ ಮಾಡಬೇಕು. ಕೇಂದ್ರ ಸರ್ಕಾರ ಈಗ ನೀಡಿರುವ ಯೋಜನೆ ಜನರನ್ನು ತಲುಪಿಲ್ಲ. ಹೀಗಾಗಿ ಅವರ ಬಡ್ಡಿ ಮನ್ನಾ ಮಾಡಲು ಬ್ಯಾಂಕುಗಳಿಗೆ ನಿರ್ದೇಶನ ನೀಡಬೇಕು. ಇದಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ 50 ಸಾವಿರ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಬೇಕು’ ಎಂಬ ಬೇಡಿಕೆ ಇಟ್ಟಿದ್ದೇವೆ ಎಂದು ತಿಳಿಸಿದರು.