ಕೊರೊನಾ ನಾಗಾಲೋಟ ದಾಖಲೆ ಸೃಷ್ಟಿ..! ಯಾಕೆ ಗೊತ್ತಾ..?

ಡಿಜಿಟಲ್ ಕನ್ನಡ ಟೀಮ್:

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 56 ಸಾವಿರದ 342 ಮಂದಿಗೆ ಏರಿಕೆಯಾಗಿದೆ. ಭಾರತದಲ್ಲಿ ಇದುವರೆಗೂ ಸಾವನ್ನಪ್ಪಿದ್ದವರ ಸಂಖ್ಯೆ ಬರೋಬ್ಬರಿ 1,886ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರಿದ್ದು 17 ಸಾವಿರದ 974 ಮಂದಿಗೆ ಕೊರೊನಾ ಸೋಂಕು ತಗುಲಿದೆ. 694 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಎರಡನೇ ಸ್ಥಾನದಲ್ಲಿ ಗುಜರಾತ್ ಇದೆ. ಗುಜರಾತ್​ನಲ್ಲಿ 7 ಸಾವಿರದ 12 ಮಂದಿಗೆ ಸೋಂಕು ದೃಢಪಟ್ಟಿದೆ. ಗುಜರಾತ್​ನಲ್ಲಿ ಕೊರೊನಾಗೆ ಇಲ್ಲೀವರೆಗೂ 425 ಜನ ಸಾವನ್ನಪ್ಪಿದ್ದಾರೆ. ಮೂರನೇ ಸ್ಥಾನವನ್ನು ರಾಷ್ಟ್ರ ರಾಜಧಾನಿ ದೆಹಲಿ ತನ್ನದಾಗಿಸಿಕೊಂಡು 5 ಸಾವಿರದ 980 ಮಂದಿಗೆ ಕೊರೊನಾ ಸೋಂಕು ತಗುಲಿದೆ. 66 ಮಂದಿ ಬಲಿಯಾಗಿದ್ದಾರೆ. ವಿಶ್ವದಲ್ಲಿ 2 ಲಕ್ಷದ 71 ಸಾವಿರ ಜನ ಸಾವನ್ನಪ್ಪಿದ್ದಾರೆ. ಒಟ್ಟು 39 ಲಕ್ಷದ 48 ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಕೊರೊನಾ ವೈರಸ್ ​​ಸೋಂಕು ಕಾಣಿಸಿಕೊಂಡಿದೆ.

ನಮ್ಮ ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ 56 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ 761ಕ್ಕೆ ಏರಿಕೆಯಾಗಿದೆ. ದಾವಣಗೆರೆಯಲ್ಲಿ 14, ಉತ್ತರಕನ್ನಡದಲ್ಲಿ 12, ಬೆಳಗಾವಿಯಲ್ಲಿ 11, ಬೆಂಗಳೂರಿನಲ್ಲಿ 15 ಹಾಗೂ ಚಿತ್ರದುರ್ಗದಲ್ಲಿ 3 ಮತ್ತು ಬಳ್ಳಾರಿಯಲ್ಲಿ 1 ಪ್ರಕರಣ ಪತ್ತೆಯಾಗಿದೆ.

ಲಾಕ್​ಡೌನ್ ಸಡಿಲಿಕೆ ಮಾಡಿದ ಬಳಿಕ ದೇಶದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಮದ್ಯ ಖರೀದಿಸಲು ಮದ್ಯಪ್ರಿಯರು ಗಂಟೆಗಟ್ಟಲೇ ಕ್ಯೂ ನಲ್ಲಿ ನಿಲ್ಲುತ್ತಿದ್ದಾರೆ. ಹೀಗಾಗಿ ಸಮಾಜದಲ್ಲಿ ಕೊರೋನಾ ಹರಡದಂತೆ ನೋಡಿಕೊಳ್ಳಲು ಹಾಗೂ ಸಾಮಾಜಿಕ ಅಂತರದ ಹಿತದೃಷ್ಟಿಯಿಂದ ಎಲ್ಲಾ ರಾಜ್ಯಗಳು ಮಳಿಗೆಗಳಲ್ಲಿ ಮದ್ಯ ಮಾರಾಟ ಮಾಡುವ ಬದಲು ಹೋಂ ಡೆಲಿವರಿ ಮಾಡುವುದು ಸೂಕ್ತ ಎನ್ನುವ ನಿರ್ಧಾರಕ್ಕೆ ಸುಪ್ರೀಂಕೋರ್ಟ್‌ ಬಂದಿದೆ. ಈ ಕುರಿತಂತೆ ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರಿದ್ದ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿದ್ರು. ಆದರೆ ಸುಪ್ರೀಂಕೋರ್ಟ್ ಈ ಬಗ್ಗೆ ಯಾವುದೇ ಆದೇಶ ನೀಡುವುದಿಲ್ಲ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಗೂ ನಿಯಮ ಪಾಲಿಸಲು ಸಾಧ್ಯವಿಲ್ಲ. ಆಯಾ ರಾಜ್ಯಗಳು ಗ್ರಾಹಕರ ಮನೆ ಬಾಗಿಲಿಗೆ ಮದ್ಯ ಪೂರೈಸುವುದು ಒಳಿತು ಎಂದು ಅಭಿಪ್ರಾಯಪಟ್ಟಿದೆ.

ಸುಪ್ರೀಂಕೋರ್ಟ್​ ಅಭಿಪ್ರಾಯದ ನಡುವೆ ರಾಜ್ಯ ಸರ್ಕಾರ ಬೆಚ್ಚಿಬೀಳುವಂತ ನಿರ್ಧಾರ ಪ್ರಕಟ ಮಾಡಿದೆ. ಶನಿವಾರದಿಂದ ಬಾರ್, ಕ್ಲಬ್‌ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಆದೇಶ ಮಾಡಿದೆ. ಎಂಆರ್​​ಪಿ ದರದಲ್ಲಿ ಮಾತ್ರ ಮಾರಾಟ ಮಾಡಬೇಕು ಎಂದು ಸೂಚನೆ ಕೊಟ್ಟಿದೆ. ಜೊತೆಗೆ ಪಾರ್ಸೆಲ್ ಮಾತ್ರ ನೀಡಬೇಕು ಯಾವುದೇ ಕಾರಣಕ್ಕೂ ಅಲ್ಲಿಯೇ ಮದ್ಯ ಸೇವೆನೆಗೆ ಅವಕಾಶ ಕೊಡಬಾರದು ಎಂದು ಕಟ್ಟನಿಟ್ಟಾಗಿ ಪಾಲಿಸುವಂತೆ ಸೂಚನೆ ಕೊಟ್ಟಿದೆ. ಒಂದು ವೇಳೆ ಎಂಆರ್​ಪಿಗಿಂತ ಹೆಚ್ಚಿನ ದರದಲ್ಲಿ ಮದ್ಯ ಮಾರಾಟ ಮಾಡಿದ್ರೆ ಲೈಸನ್ಸ್ ರದ್ದು ಮಾಡೋದಾಗಿ ತಿಳಿಸಿದೆ. ಇನ್ನೂ ಬೆಳಗ್ಗೆ 9 ರಿಂದ ಸಂಜೆ 7 ಗಂಟೆ ತನಕ ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಅಬಕಾರಿ ಸಚಿವ ಹೆಚ್ ನಾಗೇಶ್ ಮಾಹಿತಿ ನೀಡಿದ್ದಾರೆ. ಮದ್ಯ ಮಾರಾಟ ಆರಂಭವಾದ ಬಳಿಕ ನೂರಾರು ಕೋಟಿ ಆದಾಯ ಬಂದಿದೆ ಎನ್ನುವ ಮಾಹಿತಿ ಬರುತ್ತಿದೆ. ಒಟ್ಟಾರೆ, ದಿನದಿಂದ ದಿನಕ್ಕೆ ಎಲ್ಲಾ ವ್ಯವಹಾರಗಳು ಓಪನ್​ ಆಗುತ್ತಿದ್ದು, ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗುತ್ತದೆ. ಯಾವುದೇ ಅನುಮಾನ ಬೇಡ ಎನ್ನುತ್ತಿದ್ದಾರೆ ತಜ್ಞರು.

Leave a Reply