ನಮಗೆ ರಕ್ಷಣೆ ಇಲ್ಲದೆ ಮೇಲೆ ನಾವ್ಯಾಕೆ ಕೆಲಸ ಮಾಡ್ಬೇಕು? ವೈದ್ಯರ ಪ್ರಶ್ನೆ

    ಡಿಜಿಟಲ್ ಕನ್ನಡ ಟೀಮ್:

    ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸರ್ಕಾರದ ನಿರ್ಧಾರವೋ..? ಜನಸಾಮಾನ್ಯರ ಬೇಜವಾಬ್ದಾರಿ ಕೆಲಸವೋ ಗೊತ್ತಿಲ್ಲ. ಆದ್ರೆ ಸೋಂಕಿನ ಸಂಖ್ಯೆ ಮಾತ್ರ ಇಳಿಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ದೇಶದಲ್ಲಿ ಪ್ರತಿದಿನ 3 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದರೆ, ರಾಜ್ಯದಲ್ಲಿ ಪ್ರತಿನಿತ್ಯ 50ರ ಆಸುಪಾಸಿನಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಲು ಶುರುವಾಗಿದೆ. ಇದು ಜನರನ್ನು ಬೆಚ್ಚಿ ಬೀಳಿಸಿದೆ. ಆದರೆ ಇದರ ಜೊತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುವ ವೈದ್ಯರನ್ನೂ ಆತಂಕಕ್ಕೆ ದೂಡಿದೆ ಎಂದರೆ ಅಚ್ಚರಿಯೇನಲ್ಲ. ಈಗಾಗಲೇ ದೇಶದಲ್ಲಿ 500ಕ್ಕಿಂತ ಹೆಚ್ಚಿನ ಆರೋಗ್ಯ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದೇ ಕಾರಣಕ್ಕಾಗಿ ಬೆಂಗಳೂರಿನಲ್ಲಿ ನಾವು ಚಿಕಿತ್ಸೆ ನೀಡುವುದಿಲ್ಲ ಎನ್ನುವ ನಿರ್ಧಾರಕ್ಕೆ ವೈದ್ಯರು ಹಾಗೂ ನರ್ಸ್​ಗಳು ಬಂದಿದ್ದಾರೆ.

    ವಾಣಿ ವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಗರ್ಭಿಣಿಗೆ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನಲೆಯಲ್ಲಿ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯಲ್ಲಿ ಆತಂಕ ಹೆಚ್ಚಾಗಿದೆ. ಆತಂಕಗೊಂಡ ಆಸ್ಪತ್ರೆ ಸಿಬ್ಬಂದಿಗಳು ಕೆಲಸ‌ ಮಾಡಲು ಹಿಂದೇಟು. ಹಾಕಿದ್ದಾರೆ. ಪೇಷೆಂಟ್​ ನಂಬರ್​ 709, 19 ವರ್ಷದ ಗರ್ಭಿಣಿ‌ ನಿನ್ನೆ ರಾತ್ರಿ ರಾತ್ರಿ ಚಿಕಿತ್ಸೆಗೆಂದು ಬಂದಾಗ ಅನುಮಾನಗೊಂಡು ಕೋವಿಡ್ ತಪಾಸಣೆ ನಡೆಸಿದಾಗ ಕೊರೊನಾ ಪಾಸಿಟಿವ್ ಬಂದಿತ್ತು. ಇದ್ರಿಂದ ಆಸ್ಪತ್ರೆ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದಾರೆ. ಇವರ ಆತಂಕಕ್ಕೆ ಪ್ರಮುಖ ಕಾರಣ ಎಂದರೆ ಸರ್ಕಾರದ ವತಿಯಿಂದ ಆಸ್ಪತ್ರೆ ಸಿಬ್ಬಂದಿಗಳಿಗೆ ಯಾವುದೇ ರೀತಿಯ ಕೊರೊನಾ ಸುರಕ್ಷಾ ವ್ಯವಸ್ಥೆಗಳನ್ನು ಕಲ್ಪಿಸದೆ ಇರುವುದು. ಆಸ್ಪತ್ರೆ ಆವರಣದಲ್ಲಿ ನಿಂತಿದ್ದ ಸಿಬ್ಬಂದಿಗಳು ನಾವು ನಮ್ಮ ಪ್ರಾಣವನ್ನು ಪಣವಾಗಿಟ್ಟು ಕೆಲಸ ಮಾಡೋದಿಲ್ಲ ಅಂತ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕೂಡಲೇ ಸೂಕ್ತ ಕೊರೊನಾ ಸುರಕ್ಷಾ ಕಿಟ್​ಗಳು ನೀಡಬೇಕೆಂದು ಒತ್ತಾಯ ಮಾಡಿದ್ದಾರೆ.

    ವಾಣಿ ವಿಲಾಸ ಆಸ್ಪತ್ರೆ ನಾನ್ ಕೊವೀಡ್ – 19 ಅಸ್ಪತ್ರೆ ಆಗಿದ್ದು, ನಮಗೆ ಕೊರೊನಾ ಸುರಕ್ಷತಾ ಕಿಟ್ ಕೊಟ್ಟಿಲ್ಲ. ಅದ್ರೆ ಈಗ ನಮಗೂ ಕೊರೊನಾ ಬರುವ ಭೀತಿ ಶುರುವಾಗಿದೆ ಎಂದು ಆತಂಕಗೊಂಡ ಅಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ವಾಣಿವಿಲಾಸ ಅಸ್ಪತ್ರೆ ಡೀನ್ ಜೊತೆ ಚರ್ಚೆಯನ್ನೂ ನಡೆಸಿದ್ದಾರೆ. ನಮ್ಮ ಸುರಕ್ಷತೆಗೂ ಆದ್ಯತೆ ಕೊಡಬೇಕು ಎಂದು ನರ್ಸ್​ಗಳು ಹಾಗೂ ಸಿಬ್ಬಂದಿ ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ದಾವಣೆಗೆರೆಯಲ್ಲಿ ಮಾತನಾಡಿರುವ ಆರೋಗ್ಯ ಸಚಿವ ಶ್ರೀರಾಮುಲು, ವಾಣಿ ವಿಲಾಸ ಆಸ್ಪತ್ರೆಯಲ್ಲಿ ಪ್ರತಿಭಟನೆ ವಿಚಾರ ನನ್ನ ಗಮನಕ್ಕೆ ಬಂದಿದೆ. ಗರ್ಭಿಣಿಯೊಬ್ಬರಿಗೆ ಪಾಸಿಟಿವ್ ಬಂದ ಕಾರಣ ಆತಂಕ ಸೃಷ್ಟಿಯಾಗಿತ್ತು. ಈಗಾಗಲೇ ವಾಣಿ ವಿಲಾಸ ಆಸ್ಪತ್ರೆ ಆಡಳಿತ ಮಂಡಳಿ ಜತೆ ಮಾತನಾಡಿದ್ದೇನೆ. ನಾನ್ ಕೋವಿಡ್ ಆಸ್ಪತ್ರೆ ಆಗಿದ್ದರಿಂದ ಪಿಪಿಇ ಕಿಟ್ ಕೊಟ್ಟಿರಲಿಲ್ಲ ಅನ್ನೋದು ಸತ್ಯ. ಇದರಿಂದಾಗಿ ಆತಂಕಗೊಂಡು ಸ್ವಲ್ಪ ಸಮಸ್ಯೆ ಆಗಿತ್ತು. ಈಗ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಿದ್ದೇವೆ. ಪಾಸಿಟಿವ್ ಬಂದ ಗರ್ಭಿಣಿಗೆ ಅಗತ್ಯ ಚಿಕಿತ್ಸೆ ನೀಡುತ್ತಿದ್ದೇವೆ. ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ. ಪಿಪಿಇ ಕಿಟ್​ಗಳನ್ನ ನಾನ್ ಕೋವಿಡ್ ಆಸ್ಪತ್ರೆಗಳಿಗೂ ಕಿಟ್ ಒದಗಿಸುತ್ತೇವೆ ಎಂದಿದ್ದಾರೆ. ಈ ಬಗ್ಗೆ ಟಾಸ್ಕ್ ಪೋರ್ಸ್ ಸಭೆಯಲ್ಲಿಯೂ ಚರ್ಚೆ ಮಾಡಿದ್ದೇವೆ ಎಂದಿದ್ದಾರೆ ಆರೋಗ್ಯ ಸಚಿವ ಸಚಿವ ಶ್ರೀರಾಮುಲು. ಇನ್ನೂ ವೈದ್ಯರು, ನರ್ಸ್ ಗಳು, ವೈದ್ಯ ವಿದ್ಯಾರ್ಥಿಗಳು ಯಾರೂ ಗಾಬರಿ ಪಡಬೇಕಿಲ್ಲ. ಸರ್ಕಾರ ಅಗತ್ಯ ಕ್ರಮಕೈಗೊಳ್ಳಲಿದೆ ಎಂದು ಧೈರ್ಯ ತುಂಬಿದ್ದಾರೆ.

    Leave a Reply