ಕೊರೊನಾ ಸಂಕಷ್ಟ; ರಾಜ್ಯಕ್ಕೆ ಮತ್ತೊಂದು ತಲೆನೋವು..?

ಡಿಜಿಟಲ್ ಕನ್ನಡ ಟೀಮ್:

ವಿಶ್ವದಲ್ಲಿ ಹೆಮ್ಮರವಾಗಿ ಬೆಳೆಯುತ್ತಿರುವ ಕೊರೊನಾ ಸೋಂಕು ಬರೋಬ್ಬರಿ 42 ಲಕ್ಷದ 69 ಸಾವಿರದ 684 ಜನರಿಗೆ ತಗುಲಿದೆ. ಅದರಲ್ಲಿ 2 ಲಕ್ಷದ 87 ಸಾವಿರದ 529 ಜನರು ಸಾವಿನ ಮನೆ ಸೇರಿದ್ದಾರೆ. ವಿಶೇಷ ಎಂದರೆ 15 ಲಕ್ಷದ 34 ಸಾವಿರದ 13 ಜನರು ಚೇತರಿಕೆ ಕಂಡಿದ್ದಾರೆ. ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 70 ಸಾವಿರ ದಾಟಿ ಮುಂದೆ ಸಾಗಿದೆ. 70,756 ಮಂದಿ ಕೊರೊನಾ ಪೀಡಿತರಾಗಿದ್ದಾರೆ. ಕೊರೊನಾದಿಂದ ಸತ್ತವರ ಸಂಖ್ಯೆ 2,293ಕ್ಕೆ ಏರಿಕೆ ಆಗಿದೆ. ಕೊರೊನಾದಿಂದ ಗುಣಮುಖ ಆದವರು 22,400 ಜನ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ. ಇನ್ನೂ ಕರ್ನಾಟಕದಲ್ಲಿ ಇಂದು‌ ೪೨ ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ ೯೦೪ಕ್ಕೆ ಏರಿಕೆಯಾಗಿದೆ.

ಇಂದು ಬೆಳಗ್ಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿಯಂತೆ ಬೆಂಗಳೂರು 03, ಹಾಸನ ೦5, ಬಾಗಲಕೋಟೆ ‌15, ಬಳ್ಳಾರಿ‌ ೦1, ಚಿಕ್ಕಬಳ್ಳಾಪುರ ೦1, ಕಲ್ಬುರ್ಗಿ ೦1, ಯಾದಗಿರಿ ೦2, ಬೀದರ್ ೦2, ಮಂಡ್ಯ‌ ೦1, ದಕ್ಷಿಣ ಕನ್ನಡ 02, ಧಾರವಾಡದಲ್ಲಿ 09 ಸೋಂಕಿಗೆ ತುತ್ತಾಗಿದ್ದಾರೆ. ಆದರೆ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆಯ ಅರ್ಧದಷ್ಟು ಜನರು ಗುಣಮುಖ ಆಗುತ್ತಿದ್ದಾರೆ ಎನ್ನುವ ನೆಮ್ಮದಿ ರಾಜ್ಯ ಸರ್ಕಾರಕ್ಕೆ ಇತ್ತು. ಇದೀಗ ಆ ನೆಮ್ಮದಿಗೆ ಕಲ್ಲು ಹೊಡೆದಿದೆ ಬೆಳಗಾವಿಯ ಪ್ರಕರಣ.

ಬೆಳಗಾವಿಯಲ್ಲಿ ಗುಣಮುಖನಾಗಿದ್ದ ವ್ಯಕ್ತಿಯಲ್ಲಿ ಮತ್ತೆ ಕೋವಿಡ್ – 19 ಸೋಂಕು ಪತ್ತೆಯಾಗಿದೆ. ಈ ವಿಚಾರ ಆರೋಗ್ಯ ಇಲಾಖೆ ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ. ಚೈನಾ, ತೈವಾನ್, ಇಟಲಿಯಲ್ಲೂ ಇದೇ ರೀತಿ ಪ್ರಕರಣಗಳು ವರದಿಯಾಗಿದ್ದವು. ಕೊರೊನಾ ವೈರಸ್‌ ಹಾಗೂ ಅರದ ಗುಣಲಕ್ಷಣಗಳ ಬಗ್ಗೆ ಇನ್ನೂ ಕೂಡ ಅಧ್ಯಯನ ನಡೆಯುತ್ತಿದೆ. ಸಂಪೂರ್ಣ ಮಾಹಿತಿಯೇ ಸರಿಯಾಗಿ ಜಗತ್ತಿಗೆ ಲಭ್ಯವಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ಕೊರೊನಾ ಸೋಂಕು ಮತ್ತೆ ಮತ್ತೆ ಬಾಧಿಸಿದರೆ ಏನು ಮಾಡುವುದು ಎನ್ನುವ ಆತಂಕ ಮನೆ ಮಾಡಿದೆ. ಒಮ್ಮೆ ಕೊರೊನಾ ಬಂದು ಗುಣವಾದರೂ ಮತ್ತೆ ಕಾಯಿಲೆ ಬಾಧಿಸುವುದಿಲ್ಲ ಎನ್ನುವ ನಂಬಿಕೆ ಹುಸಿಯಾದಂತೆ ಕಾಣುತ್ತಿದೆ.

ಒಮ್ಮೆ ಕೊರೊನಾ ಸೋಂಕು ಬಂದು ವಾಸಿಯಾದ ಬಳಿಕ ಕೊರೊನಾ ವಿರುದ್ಧ ಹೋರಾಟ ಮಾಡಬಲ್ಲ ಆಂಟಿಬಾಡಿ (ರೋಗನಿರೋಧಕ ಶಕ್ತಿ) ಜಾಗೃತಗೊಳ್ಳಲಿದ್ದು, ಯಾವುದೇ ಸಮಸ್ಯೆ ಇಲ್ಲ ಎನ್ನುವುದು ವೈದ್ಯಕೀಯ ಮೂಲಗಳ ಮಾಹಿತಿ. ಆದರೆ ಇದೀಗ ಬೆಳಗಾವಿಯಲ್ಲಿ ಸೋಂಕಿನಿಂದ ಗುಣಮುಖವಾಗಿದ್ದ ವ್ಯಕ್ತಿಗೆ ಮತ್ತೆ ಸೋಂಕು ಬಂದಿರುವುದು ರಾಜ್ಯ ಸರ್ಕಾರದ ನಿದ್ದೆಗೆಡಿಸಿದೆ. ಮತ್ತೆ ಕೊರೊನಾ ಸೋಂಕಿತನಿಗೆ ನೀಡುವ ಚಿಕಿತ್ಸೆಯಂತೆಯೇ ಮರು ಚಿಕಿತ್ಸೆ ನೀಡಬೇಕಾಗಿದ್ದು, ಇದೇ ರೀತಿ ಮತ್ತೆ ಮತ್ತೆ ಉಲ್ಬಣಿಸುತ್ತಿದ್ದರೆ ಮುಂದೇನು ಎನ್ನುವ ಆತಂಕ ಅಧಿಕಾರಿಗಳದ್ದಾಗಿದೆ. ಕೊರೊನಾ ಸೋಂಕಿಗೆ ಇನ್ನೂ ಕೂಡ ಚಿಕಿತ್ಸೆ ಲಭ್ಯವಿಲ್ಲ. ಚಿಕಿತ್ಸೆ ಪತ್ತೆಯಾಗುವ ಮುನ್ನ ದೇಶ ಅದೆಷ್ಟು ಬಾರಿ ಸಂಕಷ್ಟ ಎದುರಿಸಬೇಕಿದೆಯೋ ದೇವರೇ ಬಲ್ಲ ಎನ್ನುವಂತಾಗಿದೆ.

Leave a Reply