ಕೊರೋನಾ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲ; ರೈತ ಮತ್ತು ಕಾರ್ಮಿಕ ವಿರೋಧ ನೀತಿ: ಸಿದ್ದರಾಮಯ್ಯ ಆಕ್ರೋಶ

ಡಿಜಿಟಲ್ ಕನ್ನಡ ಟೀಮ್:

ಕೊರೋನಾ ಪರಿಸ್ಥಿತಿ ನಿರ್ವಹಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ. ಈ ಮಧ್ಯೆ ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆ ವಿಚಾರದಲ್ಲಿ ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಿದ್ದು ಇದು ರೈತ ಹಾಗೂ ಕಾರ್ಮಿಕ ವಿರೋಧ ನೀತಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಈ ವಿಚಾರವಾಗಿ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಮಾತನಾಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್ ಪಾಟೀಲ್, ಕಾರ್ಯಾಧ್ಯಕ್ಷರುಗಳಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್, ಸತೀಶ್ ಜಾರಕಿಹೊಳಿ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗ ಮುಖ್ಯಸ್ಥರಾದ ವಿ.ಎಸ್ ಉಗ್ರಪ್ಪ ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು ಹೇಳಿದ್ದಿಷ್ಟು…

– ರಾಜ್ಯ ಸರ್ಕಾರ ಹೊಸದಾಗಿ ತೆಗೆದುಕೊಂಡಿರುವ ಕೆಲವು ಕಾನೂನಾತ್ಮಕ ವಿಚಾರಗಳು ರೈತರಿಗೆ ಹಾಗೂ ಕಾರ್ಮಿಕರಿಗೆ ಮಾರಕವಾಗಿದೆ.
– ಕೇಂದ್ರ ಮತ್ತು ರಾಜ್ಯ ಸರ್ಕಾರ ಕೋವಿಡ್ 19 ರೋಗವನ್ನು ವ್ಯವಸ್ಥಿತವಾಗಿ ತಡೆಗಟ್ಟಲು ವಿಫಲವಾಗಿದೆ.
– ಭಾರತದಲ್ಲಿ ಈ ರೋಗ ಪತ್ತೆಯಾದ 2 ತಿಂಗಳ ನಂತರ ದೇಶದಲ್ಲಿ ಲಾಕ್ ಡೌನ್ ಹೇರಲಾಯಿತು. ಈ ಅವಧಿಯಲ್ಲಿ ಸರ್ಕಾರ ಪೂರ್ವ ತಯಾರಿ ಮಾಡಿಕೊಳ್ಳಲಿಲ್ಲ.
– ವಿದೇಶದಿಂದ ಬರುವವರನ್ನು ತಡೆ ಹಿಡಿದು, ಅಲ್ಲಿಂದ ಬಂದವರನ್ನು ಲಾಕ್ ಮಾಡಿದ್ದರೆ, ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಈ ಕೆಲಸವನ್ನು ಪ್ರಧಾನಿಗಳು ಮಾಡಲಿಲ್ಲ, ರಾಜ್ಯ ಸರ್ಕಾರವೂ ಕೇಂದ್ರದ ಮೇಲೆ ಒತ್ತಡ ಹಾಕಲಿಲ್ಲ.
– ಕೋಮುವಾದಿಗಳು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ. ತಬ್ಲಿಘಿಗಳಿಂದ ಈ ರೋಗ ಹರಡುತ್ತಿದೆ ಅಂತಾ. ಇಟಲಿ, ಅಮೆರಿಕದಲ್ಲಿ ಯಾವ ತಬ್ಲಿಘಿಗಳಿದ್ದಾರೆ? ಅಲ್ಲಿ ಯಾಕೆ ಹೆಚ್ಚು ಹರಡಿತು? ಅವರಿಗೆ ಸಭೆ ನಡೆಸಲು ಅವಕಾಶ ಕೊಟ್ಟಿದ್ದು ಯಾರು? ದೆಹಲಿ ಪೊಲೀಸ್ ಯಾರ ಕೈಯಲ್ಲಿದೆ? ದೆಹಲಿ ಪೊಲೀಸ್ ಠಾಣೆ ಪಕ್ಕದಲ್ಲೇ ಸಭೆ ನಡೆಸಲು ಅನುಮತಿ ನೀಡಿದ್ದು ಯಾರು? ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆ. ರಾಜಕೀಯ ಬಣ್ಣ ಕೊಟ್ಟಿರುವುದು ಆರ್ ಎಸ್ಎಸ್ ನವರ ಹುನ್ನಾರ.
– ಇಡೀ ದೇಶದಲ್ಲಿ ವಲಸೆ ಕಾರ್ಮಿಕರು ಪರದಾಡುತ್ತಿದ್ದಾರೆ. ಈ ಸಮಸ್ಯೆ ನಿಭಾಯಿಸಲು ಮುಂಜಾಗ್ರತೆ ಕ್ರಮ ಕೈಗೊಳ್ಳಲಿಲ್ಲ. 5 ಲಕ್ಷ ಅರ್ಜಿಗಳಲ್ಲಿ 60 ಸಾವಿರ ಜನರಿಗೆ ಅನುಮತಿ ನೀಡಿ ಅವರಿಂದ ಡಬಲ್ ಹಣ ವಸೂಲಿ ಮಾಡುತ್ತಿದ್ದಾರೆ. ಈ ಜನ ಅವತ್ತು ಕೂಲಿ ಮಾಡಿ ಅವತ್ತು ಊಟ ಮಾಡುವವರಿದ್ದಾರೆ. ಬ್ಯಾಂಕಿನಲ್ಲಿ ಹಣ ಇಟ್ಟುಕೊಂಡು ಖರ್ಚು ಮಾಡುವವರಲ್ಲ.
– ಪಿಎಂ ಕೇರ್ಸ್ ಗೆ 35 ಸಾವಿರ ಕೋಟಿ ದೇಣಿಗೆ ಬಂದಿದೆ. ಕರ್ನಾಟಕದಿಂದಲೇ 3 ಸಾವಿರ ಕೋಟಿ ಸಿಎಸ್ ಆರ್ ಫಂಡ್ ನಿಂದ ಹೋಗಿದೆ. ಇದರಲ್ಲಿ ಮೋದಿ ಅವರು ಕಾರ್ಮಿಕರನ್ನು ಊರಿಗೆ ಕಳುಹಿಸಲು ಆಗುತ್ತಿರಲಿಲ್ಲವೇ? ಈ ಕೆಲಸ ಮಾಡಲು ಏನು ರೋಗ. ಕೇವಲ ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಅಂತಾ ಹೇಳಿದರೆ ಬಡವರ ಕಷ್ಟ ಬಗೆಹರಿಯುತ್ತಾ?
– ಕಾರ್ಮಿಕರು ದೇಶದ ಉತ್ಪಾದನೆಯ ಬೆನ್ನೆಲುಬು. ಆರ್ಥಿಕತೆಯ ಬೆನ್ನೆಲುಬು. ಅವರಿಗೆ ಸೇವೆ ಕಲ್ಪಿಸಲು ಮೀನಾಮೇಷ ಎಣಿಸುವವರು, ಅವರ ಬಗ್ಗೆ ಯಾವ ಕಾಳಜಿ ಇದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.
– ಹೊರಗಿರುವವರು ಇಲ್ಲಿಗೆ ಕರೆತರಲು, ಇಲ್ಲಿಂದ ಹೊರ ಹೋಗುವವರಿಗೆ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಬೇಕು ಅಂತಾ ನಮ್ಮ ಪಕ್ಷ ಆಗ್ರಹಿಸುತ್ತದೆ. ಸೋನಿಯಾ ಗಾಂಧಿ ಅವರು ನಮಗೆ ಪತ್ರ ಬರೆದು ಅವರ ವೆಚ್ಚ ಭರಿಸಲು ತಿಳಿಸಿದ್ದಾರೆ.
– ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ನಾವು ಕಠಿಣ ಶಬ್ಧದಲ್ಲಿ ಟೀಕಿಸಿಲ್ಲ. ನಾವು ಬೆಂಬಲ ನೀಡುತ್ತಾ ಬಂದಿದ್ದು, ರಾಜಕೀಯ ಮಾಡುತ್ತಿಲ್ಲ.
– ಕೋವಿಡ್, ರೈತರು, ಕಾರ್ಮಿಕರು, ಸಾಪ್ರದಾಯಿಕ ಕಸುಬು ಮಾಡುವವರಿಗೆ ಸಂಬಂಧಿಸಿದಂತೆ ರಾಜ್ಯಸರ್ಕಾರಕ್ಕೆ ಅನೇಕ ಸಲಹೆ ನೀಡಲಾಯಿತು. ಅದರಲ್ಲಿ 24 ಅಂಶಗಳನ್ನು ಪ್ರಸ್ತಾಪಿಸಿ ಹಕ್ಕೊತ್ತಾಯ ಪತ್ರ ನೀಡಲಾಯಿತು. ಆದರೂ ಏನು ಕ್ರಮ ಕೈಗೊಳ್ಳಲಿಲ್ಲ.
– ಶಿವಕುಮಾರ್ 1 ಕೋಟಿ ಚೆಕ್ ಕೊಟ್ಟ ಮೇಲೆ ಡಬಲ್ ಟಿಕೆಟ್ ದರ ಪಡೆಯುತ್ತಿದ್ದವರು ನಂತರ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿದರು. ನಂತರ ನಮ್ಮ ನಿಯೋಗ ಭೇಟಿ ಕೊಟ್ಟ ಮೇಲೆ 1610 ಕೋಟಿ ಸಣ್ಣ ಪ್ಯಾಕೇಜ್, ಅದರಲ್ಲಿ 400 ಕೋಟಿ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ಹಣ. ಅದನ್ನು ಕಳೆದರೆ ಸರ್ಕಾರ ಕೊಟ್ಟಿರೋದು 1100 ಕೋಟಿ ಮಾತ್ರ. ಅದರಲ್ಲೂ ಕೆಲವರಿಗೆ ಮಾತ್ರ ನೀಡಲಾಗಿದೆ.
– ಕಾರ್ಮಿಕರಿಗೆ ಸರ್ಕಾರ ನೀಡಬೇಕಾದ ಸವಲತ್ತು ನೀಡಿದ್ದರೆ, ಇಷ್ಟು ಜನ ವಾಪಸ್ ಹೋಗುತ್ತಿರಲಿಲ್ಲ. ಸರ್ಕಾರ ಜನರಿಗೆ ಕೊಟ್ಟಿರುವ ಆಹಾರ ಕಿಟ್ ಕೇವಲ ಶೇ.10ರಷ್ಟು ಮಾತ್ರ. ಉಳಿದದ್ದು ನಮ್ಮ ಶಾಸಕರು, ಸಂಘ ಸಂಸ್ಥೆಗಳು, ಎನ್ ಜಿಓಗಳು ಕೊಟ್ಟಿರೋದು ಶೇ.90ರಷ್ಟು. ಇವರು ಸಹಾಯ ಚಾಚದಿದ್ದರೆ, ರಾಜ್ಯದಲ್ಲಿ ಆಹಾಕಾರ ಉದ್ಭವಾಗಿ ಜನ ಹಸಿವಿನಿಂದ ಸಾಯುತ್ತಿದ್ದರು.
– ಇಷ್ಟೆಲ್ಲಾ ಆದರೂ ಕೇಂದ್ರ ಸರ್ಕಾರ ತಮ್ಮ ಬೆನ್ನನ್ನು ತಾನೇ ತಟ್ಟುಕೊಳ್ಳುತ್ತಿದೆ. ಮೋದಿ ಅವರಿಂದಲೇ ಕೋವಿಡ್ ನಿಯಂತ್ರವಾಗಿದೆ ಎಂದು ಬಿಂಬಿಸಲಾಗುತ್ತಿದೆ. ಕೊರೋನಾ ಎಲ್ಲಿ ನಿಯಂತ್ರಣವಾಗಿದೆ? ಸರಿಯಾಗಿ ಪರಿಸ್ಥಿತಿ ನಿಭಾಯಿಸಿದ್ದರೆ, ರೈತರು, ಕಾರ್ಮಿಕರು ಯಾಕೆ ಪರದಾಡುತ್ತಿದ್ದಾರೆ.
– ಆರ್ಥಿಕತೆ ಚೇತರಿಸಲು ಜನರ ಕೈಗೆ ಹಣ ಕೊಡಿ ಅಂತಾ ರಘುರಾಮ್ ರಾಜನ್, ಅಭಿಜಿತ್ ಬ್ಯಾನರ್ಜಿಯವರಂತಹ ಆರ್ಥಿಕ ತಜ್ಞರು ಹೇಳಿದರೂ ಕೇಂದ್ರ ಸರ್ಕಾರ ಕೇಳುತ್ತಿಲ್ಲ. ಕೇವಲ ಭಾವನಾತ್ಮಕ ವಿಚಾರವಾಗಿ ಮಾತನಾಡುತ್ತಿದ್ದಾರೆ.
– ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆ ಬದಲಿಸಲು ಮುಂದಾಗಿದೆ. ರೈತರು ಬೆಳೆದ ಹೂವು, ತರಕಾರಿ, ಹಣ್ಣುಗಳನ್ನು ಖರೀದಿಸಲಿಲ್ಲ. ಇದರಿಂದ ಕೇವಲ ರಿಲಾಯನ್ಸ್, ಫ್ಲಿಪ್ಕಾರ್ಟ್, ಮೋರ್, ಡಿ ಮಾರ್ಟ್ ನಂತಹ ಬಹುರಾಷ್ಟ್ರೀಯ ಕಂಪನಿಗಳಿಗೆ ಮಾತ್ರ ಅನುಕೂಲವಾಗುತ್ತದೆ. ಇವರ ಒತ್ತಡಕ್ಕೆ ಮಣಿದು ಈ ತೀರ್ಮಾನಕ್ಕೆ ಬಂದಿದ್ದಾರೆ
– ಮೇ 5ರಂದು ಕೇಂದ್ರ ಕೃಷಿ ಸಚಿವಾಲಯ ರಾಜ್ಯಗಳಿಗೆ ಪತ್ರ ಬರೆದು ಸುಗ್ರೀವಾಜ್ಞೆ ಮೂಲಕ ಈ ತಿದ್ದುಪಡಿ ಜಾರಿಗೆ ತರಲು ಸೂಚಿಸಿದೆ. ಇದು ರಾಜ್ಯಕ್ಕೆ ಸಂಬಂಧಿಸಿದ ವಿಚಾರವಾಗಿದ್ದು, ಕೇಂದ್ರ ಸರ್ಕಾರ ಹೇಗೆ ನಿರ್ದೇಶನ ನೀಡಲು ಸಾಧ್ಯ? ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ.
– 2017ರಲ್ಲಿ ಈ ಮಾದರಿಗೆ ವಿರೋಧ ವ್ಯಕ್ತವಾಗಿದ್ದು, ಇದನ್ನು ಈಗ ಜಾರಿಗೊಳಿಸಲು ಹೊರಟಿದ್ದಾರೆ. ಇದು ರೈತರಿಗೆ ಅನ್ಯಾಯ ಮಾಡುವಂತಹ ಕೆಲಸ. ಇದರ ಮೂಲಕ ಬೆಳೆಗಳ ಬೆಲೆಗಳ ನಿಗದಿ ಮಾರುಕಟ್ಟೆ ಒಳಗೆ ತೀರ್ಮಾನವಾಗಲ್ಲ. ಹೊರಗಡೆ ತೀರ್ಮಾನವಾಗಿ ರೈತರನ್ನು ಕೊಳ್ಳೆ ಹೊಡೆಯುತ್ತಾರೆ. ಇದು ರೈತರಿಗೆ ಮಾರಕ.
– ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ, ಸಾರ್ವಜನಿಕವಾಗಿ ಚರ್ಚೆಯಾಗಬಾರದೇ? ಇವುಗಳ ಬಗ್ಗೆ ಚರ್ಚೆ ನಡೆಸಿ ನಂತರ ಜಾರಿಗೆ ತರಬೇಕು.
– ಇವತ್ತು ಇರುವ ಎಲ್ಲ ಕಾರ್ಮಿಕ ಕಾಯ್ದೆಯನ್ನು 2-3 ವರ್ಷ ರದ್ದು ಮಾಡಲು ನಿರ್ಧರಿಸಿದ್ದಾರೆ. ಇದು ಕಾರ್ಮಿಕರಿಗೆ ಸಹಾಯ ಮಾಡಲು ತೆಗೆದುಕೊಂಡಿರುವ ತೀರ್ಮಾನವೇ? ಇದು ಜನಪರ, ಕಾರ್ಮಿಕರ ಪರ ನಿರ್ಣಯವೇ? ಇದನ್ನು ನಾವು ವಿರೋಧಿಸುತ್ತೇವೆ. ಇದನ್ನು ನಿಲ್ಲಿಸಲು ಆಗ್ರಹಿಸುತ್ತೇವೆ.

Leave a Reply