ಡಿಜಿಟಲ್ ಕನ್ನಡ ಟೀಮ್:
ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಇದೇ ತಿಂಗಳು 24ರಂದು ಅಂತ್ಯವಾಗಲಿರುವ ಎಲ್ಲ ಪಂಚಾಯ್ತಿ ಸದಸ್ಯರ ಅಧಿಕಾರ ಅವಧಿಯನ್ನು ಚುನಾವಣೆ ನಡೆಯುವವರೆಗೂ ಮುಂದುವರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ವಿಚಾರವಾಗಿ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಮಾತನಾಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್ ಪಾಟೀಲ್, ಕಾರ್ಯಾಧ್ಯಕ್ಷರುಗಳಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್, ಸತೀಶ್ ಜಾರಕಿಹೊಳಿ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗ ಮುಖ್ಯಸ್ಥರಾದ ವಿ.ಎಸ್ ಉಗ್ರಪ್ಪ ಉಪಸ್ಥಿತರಿದ್ದರು.
ಈ ವೇಳೆ ಡಿಕೆ ಶಿವಕುಮಾರ್ ಅವರು ಹೇಳಿದ ಪ್ರಮುಖ ಅಂಶಗಳು ಹೀಗಿವೆ…
– ಮೇ 24ರಂದು ಎಲ್ಲ ಪಂಚಾತಿಗಳ ಅವಧಿ ಮುಗಿಯುತ್ತಿದ್ದು, ಈ ಸಂದರ್ಭದಲ್ಲಿ ಕೊರೋನಾ ಸಮಸ್ಯೆ ಇರುವುದರಿಂದ ಚುನಾವಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಪರಿಸ್ಥಿತಿಯನ್ನು ನಾವು ಅರಿತಿದ್ದೇವೆ. ಆದರೆ ಅಧಿಕಾರ ಅವಧಿ ಮುಗಿದಿದ್ದರೂ ವಿಶೇಷ ಸಂದರ್ಭಗಳಲ್ಲಿ 6 ತಿಂಗಳ ಕಾಲ ಈ ಅವಧಿ ಮುಂದುವರಿಸಲು ಅವಕಾಶವಿದೆ. ಕೊರೋನಾ ಸಮಸ್ಯೆ ಹಿನ್ನೆಲೆಯಲ್ಲಿ ಇದನ್ನೂ ವಿಶೇಷ ಸಂದರ್ಭ ಎಂದು ಪರಿಗಣಿಸಬೇಕು. ಇಂತಹ ಸಂದರ್ಭಗಳಲ್ಲಿ ಹಲವು ಚುನಾವಣೆಗಳನ್ನು ಮುಂದೂಡಿರುವುದನ್ನು ನಾವು ಗಮನಿಸಿದ್ದೇವೆ.
– ನಮಗೆ ಬಂದಿರುವ ಮಾಹಿತಿ ಪ್ರಕಾರ ಸರ್ಕಾರ ತಮಗಿರುವ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಅವರ ಪಕ್ಷದ ಕಾರ್ಯಕರ್ತರನ್ನು ನೇಮಕ ಮಾಡಲು ಜಿಲ್ಲಾಧಿಕಾರಿಗಳಿಗೆ ಮೌಖಿಕವಾಗಿ ಆದೇಶ ನೀಡಲು ತೀರ್ಮಾನಿಸಲಾಗಿದೆ. ಈ ಪಂಚಾಯ್ತಿ ಚುನಾವಣೆಗಳು ಪಕ್ಷಾತೀತವಾಗಿ ನಡೆಯಲಿದ್ದು, ಈಗ ಗ್ರಾಮ ಪಂಚಾಯ್ತಿಯಲ್ಲಿ ಇರುವ ಹಾಲಿ ಸದಸ್ಯರುಗಳು ಪಕ್ಷದ ಚಿಹ್ನೆಯಿಂದ ಆಯ್ಕೆಯಾದವರಲ್ಲ. ಹೀಗಾಗಿ ಇವರುಗಳನ್ನೇ ಮುಂದಿನ ಆರು ತಿಂಗಳ ಕಾಲ ಅಧಿಕಾರದಲ್ಲಿ ಮುಂದುವರಿಸಬೇಕು ಎಂಬುದು ಕಾಂಗ್ರೆಸ್ ಪಕ್ಷದ ಆಗ್ರಹ, ಒತ್ತಾಯ, ಮನವಿ.
– ನೀವು ನಿಮ್ಮ ಪಕ್ಷದ ಕಾರ್ಯಕರ್ತರ ಪಟ್ಟಿ ತರಿಸಿ ಜಿಲ್ಲಾಧಿಕಾರಿಗಳ ಮೂಲಕ ನೇಮಕ ಮಾಡಲು ಅಥವಾ ಅಧಿಕಾರಿಗಳನ್ನು ನೇಮಕ ಮಾಡುವ ಅವಕಾಶವೂ ಇದೆ. ಆದರೆ ನಮ್ಮ ರಾಜ್ಯದ ಸಂಪ್ರದಾಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಮೌಲ್ಯವನ್ನು ಉಳಿಸಿಕೊಳ್ಳು ಚುನಾವಣೆ ಮೂಲಕ ಆಯ್ಕೆಯಾದ ಪ್ರತಿನಿಧಿಗಳನ್ನೇ ಮುಂದಿನ ಕೆಲ ದಿನ ಕಾಲ ಮುಂದುವರಿಸಬೇಕು ಎಂಬುದು ನಮ್ಮ ನಿಲುವು.
*ಯೂಟರ್ನ್ ಸರ್ಕಾರ- ಸಂಪೂರ್ಣ ವಿಫಲ:*
– ಕೊರೋನಾ ವಿಚಾರದಲ್ಲಿ ಸರ್ಕಾರ ನಮ್ಮ ಒತ್ತಡದ ಮೇಲೆ ಒಂದಿಷ್ಟು ಕಾರ್ಯಕ್ರಮಗಳನ್ನು ಮಾಡಿರಬಹುದು. ಆದರೆ ಈ ಸಮಸ್ಯೆ ವಿಚಾರದಲ್ಲಿ ಪೂರ್ವ ತಯಾರಿ ಇಲ್ಲದೇ ಇದನ್ನು ವ್ಯವಸ್ಥಿತವಾಗಿ ಎದುರಿಸಲು ಸಾಧ್ಯವಾಗದೇ ಪ್ರತಿ ಹಂತದಲ್ಲೂ ಎಡವಟ್ಟು ಮಾಡಿಕೊಂಡಿರುವುದನ್ನು ನಾವು ನೋಡಿದ್ದೇವೆ. ಇದು ಪ್ರತಿ ಹಂತದಲ್ಲೂ ತನ್ನ ನಿಲುವುಗಳನ್ನು ಬದಲಿಸುತ್ತಾ ಯೂಟರ್ನ್ ಸರ್ಕಾರವಾಗಿದೆ.
– ಐಟಿ ಬಿಟಿ ಕಂಪನಿಗಳಲ್ಲಿ ಶೇ.50 ರಷ್ಟು ಉದ್ಯೋಗಿಗಳಿಗೆ ಕೆಲಸ ಮಾಡಲು ಅವಕಾಶ ಅಂತಾ ಒಬ್ಬರು ಹೇಳಿದರೆ, ಶೇ.33ರಷ್ಟು ಅವಕಾಶ ಅಂತಾ ಮುಖ್ಯಮಂತ್ರಿಗಳು ಹೇಳುತ್ತಾರೆ. ಆಮೇಲೆ ತಮ್ಮ ನಿರ್ಧಾರ ವಾಪಸ್ ತೆಗೆದುಕೊಂಡಿದ್ದೇವೆ. ಯಾವುದೇ ಅವಕಾಶ ಇಲ್ಲ ಅಂತಾ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಅಲ್ಲಿಂದ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸುವ ಹಾಗೂ ಹೊರಗಡೆಯಿಂದ ಕನ್ನಡಿಗರನ್ನು ವಾಪಸ್ ಕರೆತರುವ ವಿಚಾರದವರೆಗೂ ಪ್ರತಿ ವಿಷಯದಲ್ಲೂ ಸರ್ಕಾರ ಗೊಂದಲದ ಗೂಡಾಗಿದೆ.
– ಇದುವರೆಗೂ ಸರ್ಕಾರ ಈ ವಿಚಾರವಾಗಿ ಎಷ್ಟು ಹಣ ನೀಡಿದೆ, ಅದರಲ್ಲಿ ಎಷ್ಟು ಖರ್ಚಾಗಿದೆ, ಆ ಹಣ ಯಾರಿಗೆ ಸೇರಿದೆ, ದೇಣಿಗೆ ಎಷ್ಟು ಕಲೆಹಾಕಲಾಗಿದೆ ಎಂಬ ವಿಚಾರವಾಗಿ ಒಂದೇ ಒಂದು ಸ್ಪಷ್ಟ ಮಾಹಿತಿಯನ್ನು ಜನರಿಗೆ ನೀಡಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರ ಕೋವಿಡ್ ವಿಚಾರವಾಗಿ ಶ್ವೇತಪತ್ರ ಹೊರಡಿಸಬೇಕು ಅಂತಾ ಆಗ್ರಹಿಸುತ್ತೇವೆ.
– ಹೊರ ರಾಜ್ಯಗಳಿಂದ ಇಲ್ಲಿಗೆ ಆಗಮಿಸಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು, ಕಾರ್ಮಿಕರು ಈ ದೇಶವನ್ನು ಕಟ್ಟುತ್ತಿರುವವರು. ಲಾಕ್ ಡೌನ್ ಸಂದರ್ಭದಲ್ಲಿ ಅವರಿಗೆ ಸರ್ಕಾರ ಯಾವುದೇ ಸಹಾಯ ಮಾಡಲಿಲ್ಲ. ಕೆಲವು ನೋಂದಾಯಿತ ಕಾರ್ಮಿಕರಿಗೆ 2 ಸಾವಿರ ನೀಡಿದ್ದು ಬಿಟ್ಟರೆ, ಮಿಕ್ಕ ಎಲ್ಲ ಆಹಾರ, ದಿನಸಿ ಕಿಟ್ ಗಳನ್ನು ಬಿಜೆಪಿ ಕಾರ್ಯಕರ್ತರು ನಾಯಕರು, ಮತದಾರರಿಗೆ ಹಂಚಿಕೊಂಡರು.
– ತಮ್ಮ ಊರುಗಳಿಗೆ ವಾಪಸ್ಸಾಗುತ್ತಿರುವ ಕಾರ್ಮಿಕರನ್ನು ಒಮ್ಮೆ ಭೇಟಿ ಮಾಡಿ ಮಾತನಾಡಿಸಿ. ಈ ಕಾರ್ಮಿಕರಿಗೆ ಸಂಘ ಸಂಸ್ಥೆಗಳು, ಸರ್ಕಾರರೇತ್ತರ ಸಂಸ್ಥೆಗಳು, ಕಾಂಗ್ರೆಸ್ ಕಾರ್ಯಕರ್ತರು ಇವರಿಗೆ ನೆರವು ನೀಡಿದ್ದು ಬಿಟ್ಟರೆ, ಸರ್ಕಾರದಿಂದ ಯಾವುದೇ ರೀತಿಯ ನೆರವು ಇವರಿಗೆ ಸಿಕ್ಕಿಲ್ಲ. ಇದರಿಂದಾಗಿ 5 ಲಕ್ಷಕ್ಕೂ ಹೆಚ್ಚು ಜನ ರಾಜ್ಯದಿಂದ ಹೊರ ಹೋಗಲು ಅರ್ಜಿ ಹಾಕಿದ್ದಾರೆ.
*ಕಾಯಿದೆ ಬದಲಾವಣೆಗೆ ವಿರೋಧ*
– ಸರ್ಕಾರ ಈ ಎಲ್ಲ ವರ್ಗದ ಜನನ್ನು ಸಮಾನವಾಗಿ ನೋಡಲು ವಿಫಲವಾಗಿದೆ. ಈ ಎಲ್ಲದರ ಮಧ್ಯೆ ರಾಜ್ಯ ಸರ್ಕಾರ ಮೇಲ್ವರ್ಗದವರ ಒತ್ತಾಯಕ್ಕೆ ಮಣಿದು ಅನೇಕ ಕಾನೂನು ತರಲು ಹೊರಟಿದ್ದಾರೆ. ನಮ್ಮ ರಾಜ್ಯದಲ್ಲಿರುವ ಕಾರ್ಮಿಕ ಕಾನೂನನ್ನು ಸುಗ್ರೀವಾಜ್ಞೆ ಮೂಲಕ ರದ್ದುಗೊಳಿಸಲು ಮುಂದಾಗಿದೆ. ಇದರಿಂದ ಯಾರಿಗೂ ಸಹಾಯವಾಗುವುದಿಲ್ಲ. ಬಂಡವಾಳ ಹೂಡಿಕೆದಾರರಿಗೆ ಏನುಬೇಕಾದರೂ ಆಕರ್ಷಣೆ ಮಾಡಿ, ನಾವು ಬೇಡ ಅನ್ನುವುದಿಲ್ಲ. ಅದೇ ರೀತಿ ಎಪಿಎಂಸಿ ಕಾಯ್ದೆಯನ್ನು ಬದಲಿಸಲು ಸರ್ಕಾರ ಮುಂದಾಗಿದೆ.
– ಸರ್ಕಾರದ ಈ ಸುಗ್ರೀವಾಜ್ಞೆಗಳಿಂದ ರೈತರು, ಕಾರ್ಮಿಕರ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಿದೆ. ಇದು ಅಂತಾರಾಷ್ಟ್ರೀಯ ಕಾರ್ಮಿಕರ ಸಂಸ್ಥೆಯಲ್ಲಿ ಭಾರತ ಕೈಗೊಂಡ ನಿರ್ಣಯಕ್ಕೆ ವಿರುದ್ಧವಾಗಿದೆ. ಇದನ್ನು ನೋಡಿಕೊಂಡು ಸುಮ್ಮನೆ ಕೂರಲು ಕಾಂಗ್ರೆಸ್ ಪಕ್ಷದಿಂದ ಸಾಧ್ಯವಿಲ್ಲ. ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ಮಾದರಿಯಲ್ಲಿ ಕಾರ್ಮಿಕರ ಕಾಯ್ದೆ ರದ್ದಿಗೆ ಮುಂದಾಗಿರುವುದರ ವಿರುದ್ಧ ನಮ್ಮ ಹೋರಾಟ ಹಾಗೂ ಚಳುವಳಿಯನ್ನು ಮಾಡುತ್ತೇವೆ.
*ರಾಜ್ಯದ ವಿರುದ್ಧ ಕೇಂದ್ರದ ಮಲತಾಯಿ ಧೋರಣೆ*
– 15ನೇ ಹಣಕಾಸು ಆಯೋಗ ಶಿಫಾರಸ್ಸು ಮೇರೆಗೆ ಕೊರೋನಾ ಬಿಕ್ಕಟ್ಟಿನ ವೇಳೆ ನೆರವಾಗಲು 13 ರಾಜ್ಯಗಳಿಗೆ ಕೇಂದ್ರ ಸರ್ಕಾರ 6,195 ಕೋಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಕರ್ನಾಟಕಕ್ಕೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ಕೇವಲ ಇದೊಂದು ವಿಚಾರವಷ್ಟೇ ಅಲ್ಲ, ನೆರೆ ಪರಿಹಾರದಿಂದ ಹಿಡಿದು, ಜಿಎಸ್ ಟಿ ಬಾಕಿ, ಕಾರ್ಮಿಕರಿಗೆ ನರವಾಗಲು ರೈಲು ಸೇವೆವರೆಗೂ ಪ್ರತಿ ವಿಚಾರದಲ್ಲೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ.
– ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸದರು ರಾಜ್ಯದ ಪರವಾಗಿ ಕೆಲಸ ಮಾಡಲು ವಿಫಲರಾಗಿದ್ದಾರೆ. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಯಾವುದೇ ರೀತಿಯ ಸಹಕಾರ ನೀಡುತ್ತಿಲ್ಲ. ಇದು ಕೋವಿಡ್ ವಿಚಾರವಾಗಿ ನೀಡಲಾಗಿದೆ ಎಂದು ಹೇಳುತ್ತಿದ್ದಾರೆ. ಇದಕ್ಕೂ ಹಮಕಾಸು ಆಯೋಗಕ್ಕೂ ಏನು ಸಂಬಂಧ? ಬಜೆಟ್ ಭಾಷಣದ ವೇಳೆ ಮುಖ್ಯಮಂತ್ರಿಗಳೇ ನಮಗೆ ಆರ್ಥಿಕ ಬಿಕ್ಕಟ್ಟು ಇದೆ ಅಂತಾ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಕೇಂದ್ರ ಸರ್ಕಾರ ಈ ರೀತಿ ನಿರ್ಲಕ್ಷ್ಯ ತೋರುತ್ತಿರುವುದು ಖಂಡನೀಯ.
– ಕೇರಳ 20 ಸಾವಿರ ಕೋಟಿ, ತೆಲಂಗಾಣ 35 ಸಾವಿರ ಕೋಟಿ ಕೊಡುತ್ತಾರೆ. ಆದರೆ ನಮಗೆ ಇದು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿಯೇ ವಿಶೇಷ ಅಧಿವೇಶನ ಕರೆಯಿರಿ, ನಾವು ನಿಮಗೆ ಬೆಂಬಲ ನೀಡುತ್ತೇವೆ. ಎಲ್ಲ ವರ್ಗದವರಿಗೆ ಅನುಕೂಲ ಮಾಡಿಕೊಡಿ ಅಂತಾ ನಾವು ಆಗ್ರಹಿಸುತ್ತಿದ್ದೇವೆ.
– ಈ ಕಠಿಣ ಪರಿಸ್ಥಿತಿಯಲ್ಲಿ ಸರ್ಕಾರ ಒಬ್ಬ ರೈತನಿಂದಲೂ ಬೆಳೆ ಖರೀದಿ ಮಾಡಲಿಲ್ಲ. ರೈತನಿಗೆ ಬೆಂಬಲ ಬೆಲೆ ನೀಡುವುದರಿಂದ ಹಿಡಿದು, ಮಾರುಕಟ್ಟೆ ಕಲ್ಪಿಸುವುದರವರೆಗೂ ನಿರ್ಲಕ್ಷ್ಯ ಮಾಡಲಾಯಿತು. ಆದರೆ ನಮ್ಮ ಕಾರ್ಯಕರ್ತರು, ನಾಯಕರು ಸುಮಾರು 100 ಕೋಟಿಯಷ್ಟು ತರಕಾರಿಯನ್ನು ರೈತರಿಂದ ಖರೀದಿಸಿ ಬಡವರಿಗೆ ಹಂಚಿದ್ದಾರೆ.