ದೇಶದ ಚಿತ್ತ ಸಚಿವೆ ನಿರ್ಮಲಾರತ್ತ!

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ನಿನ್ನೆ ರಾತ್ರಿ ೮ ಗಂಟೆಗೆ ದೇಶವನ್ನು ಉದ್ದೇಶಿಸಿ 33 ನಿಮಿಷಗಳ ಕಾಲ ಭಾಷಣ ಮಾಡಿದ್ರು. ಕೊರೊನಾ ಸೋಂಕಿನ ಸಂಕಷ್ಟಕ್ಕೆ ಸಿಲುಕಿರುವ ಭಾರತವನ್ನು ಮತ್ತೆ ಸರಿದಾರಿಗೆ ತರುವ ಬಗ್ಗೆ ಸರ್ಕಾರದ ಮುಂದಿರುವ ಸವಾಲು ಹಾಗೂ ಯೋಜನೆಗಳನ್ನು ದೇಶದ ಜನರ ಮುಂದೆ ತೆರೆದಿಟ್ಟಿದ್ದಾರೆ. ಜೊತೆಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದೇಶವನ್ನು ಪಾರು ಮಾಡುವ ಉದ್ದೇಶದಿಂದ ಬರೋಬ್ಬರಿ 20 ಲಕ್ಷ ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್‌ ಕೂಡ ಘೋಷಣೆ ಮಾಡಿದ್ದಾರೆ. ವಿಶೇಷ ಕೊರೊನಾ ಪ್ಯಾಕೇಜ್‌ನಲ್ಲಿ ಏನೇನು ಇರಲಿದೆ..? ಯಾರಿಗೆಲ್ಲಾ ಅನುಕೂಲ ಆಗಲಿದೆ ಎನ್ನುವ ಲೆಕ್ಕಾಚಾರವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಸಂಜೆ 4 ಗಂಟೆಗೆ ವಿಶೇಷ ಪ್ಯಾಕೇಜ್‌ನ ರೂಪುರೇಷೆಗಳನ್ನು ಬಿಚ್ಚಿಡಲಿದ್ದಾರೆ, ಹೀಗಾಗಿ ದೇಶದ ಜನರ ಚಿತ್ತ ಸಂಜೆ ನಾಲ್ಕು ಗಂಟೆಗೆ ಸಚಿವರತ್ತ ಎನ್ನುವಂತಾಗಿದೆ.

ಪ್ರಮುಖವಾಗಿ ದೇಶವನ್ನು ಆರ್ಥಿಕ ಸಬಲಿಕರಣ ಮಾಡಬೇಕಾದರೆ ಸಣ್ಣ ಮತ್ತು ಬೃಹತ್‌ ಉದ್ಯಮಗಳ ನಷ್ಟವನ್ನು ಕಡಿಮೆ ಮಾಡುವ ಅನಿವಾರ್ಯತೆ ಕೇಂದ್ರ ಸರ್ಕಾರದ ಮುಂದಿದ್ದು, ವಿಶೇಷ ಪ್ಯಾಕೇಜ್‌ನಲ್ಲಿ ಕೈಗಾರಿಕೆಗಳಿಗೆ ಭಾರೀ ಕೊಡುಗೆ ಇರಲಿದೆ ಎನ್ನಲಾಗಿದೆ. ಇದರ ಜೊತೆಗೆ ತೆರಿಗೆದಾರರಿಗೂ ಸಣ್ಣ ಪ್ರಮಾಣದಲ್ಲಿ ಪ್ಯಾಕೇಜ್‌ನಿಂದ ಸೌಲಭ್ಯ ಸಿಗಲಿದೆ ಎನ್ನಲಾಗಿದೆ. ಕಾರ್ಮಿಕರು ಹಾಗೂ ರೈತರ ಹಿತವೂ ಪ್ಯಾಕೇಜ್‌ನಲ್ಲಿ ಸೇರಿದೆ ಎಂದು ಉನ್ನತ ಮೂಲಗಳ ಆಧಾರದಲ್ಲಿ ರಾಷ್ಟ್ರೀಯ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಜೊತೆಗೆ ಈ ಹಿಂದೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದ 1.17 ಲಕ್ಷ ಕೋಟಿಯ ಕೊರೊನಾ ಪ್ಯಾಕೇಜ್‌ ಕೂಡ ಇದರಲ್ಲಿ ಸೇರಲಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಈ ವಿಶೇಷ ಪ್ಯಾಕೇಜ್‌ ದೇಶದ ಜಿಡಿಪಿಯ ಶೇಕಡ 10ರಷ್ಟಿದ್ದು, ಭೂಮಿ, ಕಾರ್ಮಿಕ, ಆರ್ಥಿಕತೆಗೆ ಸಹಾಯವಾಗಲಿದೆ ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಮೇ 18ರ ಬಳಿಕ ನಾಲ್ಕನೇ ಹಂತದ ಲಾಕ್‌ಡೌನ್‌ ದೃಷ್ಟಿಯಲ್ಲಿ ಇಟ್ಟುಕೊಂಡು ಈ ಪ್ಯಾಕೇಜ್‌ ಘೋಷಣೆ ಆಗಲಿದೆ.

*ರಾಜ್ಯದಲ್ಲೂ ಸಂಜೆ 4 ಗಂಟೆಗೆ ವಿಶೇಷ ಪ್ಯಾಕೇಜ್‌..!*

ಹೌದು, ಕೇಂದ್ರ ಸರ್ಕಾರ ಈಗಾಗಲೇ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿ ಆಗಿದೆ. ಆ ಪ್ಯಾಕೇಜ್‌ನಲ್ಲಿ ಏನೇನು ಇರಲಿದೆ ಎನ್ನುವ ಪಟ್ಟಿ ಮಾತ್ರ ಬಿಡುಗಡೆ ಆಗಬೇಕಿದೆ. ಈ ನಡುವೆ ಸಂಜೆ ನಾಲ್ಕು ಗಂಟೆಗೆ ಮಹತ್ವದ ಸಚಿವ ಸಂಪುಟ ಸಭೆ ನಿಗದಿಯಾಗಿದೆ. ಲಾಕ್‌ಡೌನ್ 4ರ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗುತ್ತದೆ. ಈಗಿರುವ ಲಾಕ್‌ಡೌನ್‌ನಲ್ಲಿ ಮತ್ತಷ್ಟು ಸಡಿಲ ಹೇಗೆ ಮಾಡುವುದು ಎನ್ನುವ ಬಗ್ಗೆಯೂ ಚರ್ಚೆ ನಡೆಯಲಿದೆ. ಇದೇ ವೇಳೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದು ಹಾಗೂ ಎರಡನೇ ಪ್ಯಾಕೇಜ್ ಘೋಷಣೆಗೆ ಸಿದ್ಧವಾಗಿರುವ ಬಿಎಸ್ ಯಡಿಯೂರಪ್ಪ, ಯಾರಿಗೆಲ್ಲಾ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು ಎನ್ನುವ ಬಗ್ಗೆ ಅಂತಿಮ ನಿರ್ಧಾರ ಮಾಡಲಿದ್ದಾರೆ. ಇನ್ನೂ ಅಂತರ್ ಜಿಲ್ಲಾ ಬಸ್ ಸಂಚಾರ ಬೇಕಾ..? ಬೇಡ್ವಾ..? ಎಂಬುದರ ಬಗ್ಗೆಯೂ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ರಾಜ್ಯದ ವಿಶೇಷ ಪ್ಯಾಕೇಜ್‌ ಬಗ್ಗೆ ಮಾತನಾಡಿರುವ ವಸತಿ ಸಚಿವ ವಿ.ಸೋಮಣ್ಣ, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೊಂದು ಹಂತದ ಪ್ಯಾಕೇಜ್ ಘೋಷಣೆ ಮಾಡಲಿದ್ದಾರೆ. ಈ ಬಗ್ಗೆ ಚರ್ಚಿಸಲು ಇಂದು ಸಭೆ ಕರೆದಿದ್ದಾರೆ. ಇಂದು ರಾಜ್ಯ ಸರ್ಕಾರದಿಂದ ಎರಡನೇ ಹಂತದ ಪ್ಯಾಕೇಜ್ ಘೋಷಣೆ ಮಾಡುವ ನಿರೀಕ್ಷೆ ಇದೆ ಎಂದಿದ್ದಾರೆ. ರೈತರು, ಹೂ ಬೆಳೆಗಾರರರು ಸೇರಿದಂತೆ ಹಲವರಿಗೆ ನೆರವಾಗುವ ಉದ್ದೇಶದಿಂದ ಪ್ಯಾಕೇಜ್ ಘೋಷಣೆ ಮಾಡುವ ಚಿಂತನೆ ಸಿಎಂ ಅವರಲ್ಲಿದೆ ಎಂದಿರುವ ಸೋಮಣ್ಣ, ೫೦೦ ಕೋಟಿ ಆಗಬಹುದು, ೬೦೦ ಕೋಟಿ ಆಗಬಹುದು ಅಥವಾ ೧೦೦೦ ಕೋಟಿ ರೂಪಾಯಿ ಪ್ಯಾಕೇಜ್ ಆಗಿರಲೂ ಬಹುದು ಎನ್ನುವ ಮೂಲಕ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದ್ದಾರೆ. ಒಟ್ಟಾರೆ ನಿನ್ನೆ ರಾತ್ರಿ 8 ಗಂಟೆಗೆ ಮೋದಿ ಭಾಷಣಕ್ಕಾಗಿ ಕಾದಿದ್ದ ದೇಶ ಇಂದು ಸಂಜೆ 4 ಗಂಟೆಗೆ ನಿರ್ಮಲಾ ಅವರ ಮಾತುಗಳಿಗಾಗಿ ಕಾಯುತ್ತಿದೆ. ಈ ನಡುವೆ ರಾಜ್ಯದಲ್ಲೂ ವಿಶೇಷ ಪ್ಯಾಕೇಜ್‌ ಯಾರಿಗೆಲ್ಲಾ ಸಿಗುತ್ತೆ ಎನ್ನುವ ಬಗ್ಗೆ ರಾಜ್ಯದ ಜನರು ಕಾತುರರಾಗಿದ್ದಾರೆ.

Leave a Reply