ರೈತ, ಕಾರ್ಮಿಕ, ಬೀದಿಬದಿ ವ್ಯಾಪಾರಿಗೆ ಕೇಂದ್ರದಿಂದ ಕೊರೊನಾ ಗಿಫ್ಟ್​..!

  ಡಿಜಿಟಲ್ ಕನ್ನಡ ಟೀಮ್:

  ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್​ನ 2ನೇ ಹಂತದ ಘೋಷಣೆ ಇವತ್ತು ಆಗಿದೆ. ನಿನ್ನೆ ಸಣ್ಣ ಹಾಗೂ ಮಧ್ಯಮ ಉದ್ಯಮಿಗಳಿಗೆ ಮೆಗಾ ಗಿಫ್ಟ್ ಕೊಟ್ಟಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಇಂದು ರೈತರು, ವಲಸೆ ಕಾರ್ಮಿಕರು, ಮುದ್ರಾ ಯೋಜನೆ ಶಿಶು ಸಾಲ, ಬೀದಿಬದಿ ವ್ಯಾಪಾರಿಳು, ವಲಸೆ ಕಾರ್ಮಿಕರಿಗೆ ಮನೆ ನಿರ್ಮಾಣ, ಬುಡಕಟ್ಟು, ಆದಿವಾಸಿ ಜನರಿಗೆ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಸಣ್ಣ ಕೃಷಿಕರಿಗೆ ಕೇಂದ್ರ ಸರ್ಕಾರ ನೆರವಿನ ದಿಂದ ಸಾಕಷ್ಟು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಅದರಲ್ಲಿ ಬೆಳೆ ಸಾಲ ಮೇಲಿನ ಬಡ್ಡಿ ಮನ್ನ, ಕಿಸಾನ್​ ಕ್ರೆಡಿಟ್​ ಕಾರ್ಡ್​, ನಬಾರ್ಡ್​ ಮೂಲಕ 29, 500 ಕೋಟಿ ಸಾಲ ಸೌಲಭ್ಯ ಘೋಷಣೆ ಮಾಡಲಾಗಿದೆ. 3 ಕೋಟಿ ರೈತರಿಗೆ 4 ಲಕ್ಷ ಕೋಟಿ ಸಾಲ ಈಗಾಗಲೇ ಕಳೆದ ಮೂರು ತಿಂಗಳಲ್ಲಿ ರೈತರಿಗೆ ಸಾಲ ವಿತರಿಸಲಾಗಿದ್ದು, ಬೆಳೆ ಸಾಲದ ಮೇಲಿನ ಬಡ್ಡಿಯನ್ನು ಮೇ 31ರವರೆಗೆ ಮನ್ನಾ ಮಾಡಲಾಗಿದೆ. ಹೊಸದಾಗಿ 25 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್ ಕೂಡ ವಿತರಣೆ ಮಾಡಲಾಗಿದೆ. ಮಾರ್ಚ್ ತಿಂಗಳಲ್ಲಿ ನಬಾರ್ಡ್​ನಿಂದ 29,500 ಕೋಟಿ ಸಾಲ ಸೌಲಭ್ಯ ನೀಡಲಾಗ್ತಿದ್ದು, ಸಹಕಾರಿ ಬ್ಯಾಂಕ್, ಗ್ರಾಮೀಣ ಬ್ಯಾಂಕ್​ಗಳ ಮೂಲಕ ಸಾಲ ಸಿಗಲಿದೆ. ಮಾರ್ಚ್​ ತಿಂಗಳಲ್ಲಿ ರಾಜ್ಯಗಳಿಗೆ ಹಣಕಾಸು ಸಹಾಯ ಮಾಡಲಿದ್ದು, ಗ್ರಾಮೀಣಾಭಿವೃದ್ಧಿಗೆ ಕೇಂದ್ರದಿಂದ ₹4,200 ಕೋಟಿ ಗ್ರಾಮೀಣಾಭಿವೃದ್ಧಿ ಅನುದಾನದಲ್ಲಿ ಬಿಡುಗಡೆ ಆಗಲಿದೆ. ಕೃಷಿ ಉತ್ಪನ್ನಗಳ ಖರೀದಿಗೆ ರಾಜ್ಯಗಳಿಗೆ ₹6,700 ಕೋಟಿ ಅನುದಾನ ಕೊಡಲಾಗಿದೆ ಎಂದಿದ್ದಾರೆ. ಇನ್ನೂ ರೈತರಿಗೆ ನಬಾರ್ಡ್ ಮೂಲಕವೂ ಸಣ್ಣ, ಮಧ್ಯಮ ರೈತರಿಗೆ ಸಹಾಯ ಸಿಗಲಿದ್ದು, ಮಳೆಯಾಧಾರಿತ ಬೆಳೆ ಬೆಳೆಯುವ ರೈತರಿಗೆ ವಾರ್ಷಿಕ ₹90 ಸಾವಿರ ಕೋಟಿ ಹಾಗೂ ಹೆಚ್ಚುವರಿಯಾಗಿ ₹30 ಸಾವಿರ ಕೋಟಿ ಬಿಡುಗಡೆ ಆಗಲಿದೆ. ಇದರಿಂದ 3 ಕೋಟಿ ರೈತರಿಗೆ ಲಾಭ ಆಗಲಿದೆ ಬಿತ್ತನೆ ನಂತರ ಹಾಗೂ ಸದ್ಯದ ಕೃಷಿಗೆ ಸಹಕಾರಿಯಾಗುವಂತೆ ಸಾಲ ನೀಡಲಾಗುವುದು ಎಂದಿದ್ದಾರೆ

  ವಲಸೆ ಕಾರ್ಮಿಕರ ಸಂಕಷ್ಟದ ಬಗ್ಗೆಯೂ ಸಾಕಷ್ಟು ಗಮನಹರಿಸಿದ್ದು ಮನರೇಗಾ ಯೋಜನೆ ಮೂಲಕ ಕೆಲಸಕ್ಕೆ 10 ಸಾವಿರ ಕೋಟಿ ವೆಚ್ಚ ಮಾಡಲಾಗುವುದು. ದೇಶದ ಎಲ್ಲಾ ಕಡೆ ಒಂದೇ ರೀತಿಯ ವೇತನ ಹಾಗೂ ಮಳೆಗಾಲದಲ್ಲೂ ಮನರೇಗಾ ಯೋಜನೆ ಕಾಮಗಾರಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಬುಧವಾರದ ತನಕ 14.62 ಕೋಟಿ ಮಾನವ ದಿನಗಳ ಕೆಲಸ ಉತ್ಪಾದನೆ ಮಾಡಲಾಗಿದೆ. ವಲಸೆ ಕಾರ್ಮಿಕರಿಗೆ MGNREGS ಮೂಲಕ ಬೆಂಬಲ ನೀಡಲು ನಿರ್ಧಾರ ಮಾಡಲಾಗಿದೆ. 1.87 ಲಕ್ಷ ಗ್ರಾಮ ಪಂಚಾಯ್ತಿಗಳ ಮೂಲಕ ಉದ್ಯೋಗ ಸೃಷ್ಟಿ ಮಾಡಲಿದ್ದು, 2.33 ಕೋಟಿ ಜನರಿಗೆ ಕೆಲಸ ನೀಡಲು ಸೂಚನೆ ಕೊಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಶೇಕಡ 40 ರಿಂದ 50ರಷ್ಟು ಹೆಚ್ಚು ನೋಂದಣಿ ಮಾಡಿಕೊಳ್ಳಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸರಾಸರಿ ಕೂಲಿ ಕೂಡ ಹೆಚ್ಚಾಗಿದೆ. ಕಳೆದ ವರ್ಷ ಸರಾಸರಿ ಕೂಲಿ ₹182 ಇತ್ತು, ಈ ವರ್ಷ ಸರಾಸರಿ ಕೂಲಿ ₹202ಕ್ಕೆ ಹೆಚ್ಚಳ ಮಾಡಲಾಗಿದೆ. ತಮ್ಮ ಊರುಗಳಿಗೆ ಮರಳಿರುವ ವಲಸೆ ಕಾರ್ಮಿಕರ ರಕ್ಷಣೆ ಸರ್ಕಾರ ಬದ್ಧವಾಗಿದ್ದು, ವಲಸೆ ಕಾರ್ಮಿಕರ ನೋಂದಣಿ ಕಾರ್ಯ ಆರಂಭವಾಗಿದೆ. ಆ ಬಳಿಕ ಕಾನೂನಾತ್ಮಕ ಉದ್ಯೋಗ ನೀಡಲು ಸೂಚನೆ ಕೊಡಲಾಗಿದೆ ಎಂದಿದ್ದಾರೆ.

  ಕೊರೊನಾ ವೈರಸ್​ ಸಂಕಷ್ಟಕ್ಕೆ ಸಿಲುಕಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿರುವ ಉದ್ಯೋಗಿಗಳ ರಕ್ಷಣೆಗೆ ಕೇಂದ್ರ ಸರ್ಕಾರ ತಯಾರಿ ನಡೆಸಿದ್ದು, ಎಲ್ಲಾ ಕಡೆ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಸಲು ಕ್ರಮಕೈಗೊಳ್ಳಲಾಗಿದೆ. ನಾಗರೀಕರಿಗೆ ಉದ್ಯೋಗ ಸೃಷ್ಟಿ ಅತ್ಯಾವಶ್ಯಕವಾಗಿದೆ. ಶೀಘ್ರದಲ್ಲೇ ₹6000 ಕೋಟಿ ಬಿಡುಗಡೆ ಮಾಡಲಿದ್ದು, ಅನುದಾನ ಬಳಕೆಗೆ ರಾಜ್ಯಗಳಿಗೆ ಅವಕಾಶ ಕೊಡಲಾಗಿದೆ. ನಗರಪ್ರದೇಶಗಳಲ್ಲಿ ಕಾಡು ಬೆಳೆಸಲು ಕ್ರಮ ಕೈಗೊಳ್ಳಲಾಗಿದೆ. ಅರಣ್ಯ ರಕ್ಷಣೆ, ಮಣ್ಣಿನ ರಕ್ಷಣೆಗೆ ಕ್ರಮ, ಅರಣ್ಯ, ವನ್ಯಜೀವಿಗಳ ರಕ್ಷಣೆಗೂ ಸೂಕ್ತ ಸೌಕರ್ಯ ಒದಗಿಸಲಾಗುತ್ತದೆ. ನಗರ ಪ್ರದೇಶ, ಅರೆ ನಗರ ಪ್ರದೇಶ, ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲೆಡೆ ಉದ್ಯೋಗ ಸೃಷ್ಟಿಗೆ ಸಕಲ ಕ್ರಮಕೈಗೊಳ್ಳಲಾಗಿದೆ. ಆದಿವಾಸಿಗಳು, ಬುಡಕಟ್ಟು ಜನರಿಗೂ ಉದ್ಯೋಗ ಸೃಷ್ಟಿ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದಿದ್ದಾರೆ

  ಕೊರೊನಾ ಲಾಕ್​ಡೌನ್​ ಆದಾಗಿನಿಂದ ಹೆಚ್ಚು ಸಂಕಷ್ಟಕ್ಕೆ ಒಳಗಾಗಿರುವುದು ಬೀದಿ ಬದಿ ವ್ಯಾಪಾರ ಮಾಡುತ್ತಿದ್ದವರು. ವ್ಯಾಪಾರವೂ ಇಲ್ಲದೆ, ಆದಾಯವೂ ಇಲ್ಲದೆ ಕೈ ಸುಟ್ಟುಕೊಂಡಿದ್ದಾರೆ. ಇದೀಗ ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಬೀದಿ ವ್ಯಾಪಾರಿಗಳಿಗೆ ಸಾಲ ಯೋಜನೆ ಜಾರಿ ಮಾಡುತ್ತಿದ್ದು, ₹5 ಸಾವಿರ ಕೋಟಿ ವಿಶೇಷ ಸಾಲ ಸೌಲಭ್ಯ ಕಲ್ಪಿಸಲಾಗ್ತಿದೆ. ಲಾಕ್​ಡೌನ್​ ಮುಗಿಯುತ್ತಿದ್ದ ಹಾಗೆ ತಿಂಗಳ ಒಳಗೆ ಬೀದಿ ವ್ಯಾಪಾರಿಗಳಿಗೆ ಸಾಲ ಸಿಗಲಿದೆ. ಆರಂಭಿಕವಾಗಿ ಒಬ್ಬರಿಗೆ ₹10 ಸಾವಿರ ಸಾಲದಂತೆ 50 ಲಕ್ಷ ಬೀದಿ ವ್ಯಾಪಾರಿಗಳಿಗೆ ಲಾಭವಾಗಲಿದೆ ಎನ್ನಲಾಗಿದೆ. ಡಿಜಿಟಲ್ ಪೇಮೆಂಟ್ ಅಳವಡಿಸಿಕೊಂಡವರಿಗೆ ಕ್ಯಾಶ್​ಬ್ಯಾಕ್ ಸೌಲಭ್ಯವೂ ಸಿಗಲಿದೆ.

  ಇನ್ನೂ ಬೆಂಗಳೂರು ಸೇರಿದಂತೆ ದೇಶದ ಮೆಟ್ರೋ ಸಿಟಿಗಳಲ್ಲಿ ಬಡ ಕೂಲಿ ಕಾರ್ಮಿಕರು ಮನೆ ಬಾಡಿಗೆ ಕಟ್ಟಲು ಸಾಧ್ಯವಾಗ್ತಿಲ್ಲ. ಅದರಲ್ಲೂ ಲಾಕ್​ಡೌನ್​ ವೇಳೆ ಕೆಲಸವಿಲ್ಲದೆ, ವೇತನವಿಲ್ಲದೆ ಬಾಡಿಗೆ ಕಟ್ಟಲು ಸಂಕಷ್ಟ ಎದುರಾಗಿದೆ. ಅದೇ ಕಾರಣಕ್ಕೆ ಪಬ್ಲಿಕ್​ ಪ್ರೈವೇಟ್​ ಪಾರ್ಟನರ್​ಶಿಫ್​ ಮೂಲಕ ಮನೆ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ನಗರಗಳಲ್ಲಿರುವ ವಲಸೆ ಕಾರ್ಮಿಕರು ಹಾಗೂ ಬಡವರಿಗೆ ಕಡಿಮೆ ದರದ ಬಾಡಿಗೆ ಮನೆ ನೀಡಲು ನಿರ್ಧಾರ ಮಾಡಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಾಣ ಮಾಡಲಿದ್ದು, ಕೈಗಾರಿಕೆಗಳು, ಸಂಸ್ಥೆಗಳಿಂದ ಖಾಸಗಿ ಜಮೀನಿನಲ್ಲಿ ಮನೆ ನಿರ್ಮಿಸಿ ಕಡಿಮೆ ಬಾಡಿಗೆಗೆ ನೀಡಲು ಚಿಂತನೆ ನಡೆಸಲಾಗಿದೆ. ಜೊತೆಗೆ ಕೇಂದ್ರ, ರಾಜ್ಯ ಸರ್ಕಾರಗಳಿಂದಲೂ ಮನೆಗಳ ನಿರ್ಮಾಣ ಮಾಡುವ ಮೂಲಕ ದುಬಾರಿ ಬಾಡಿಗೆ ಮನೆಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.

  ಇನ್ನೂ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದ ಮುದ್ರಾ ಯೋಜನೆಯ ಶಿಶು ಯೋಜನೆ ವಿಭಾಗದ ಮೂಲಕ ಸಾಲ ನೀಡಲು ನಿರ್ಧಾರ ಮಾಡಲಾಗಿದೆ. 50 ಸಾವಿರದ ಒಳಗಿನ ಸಾಲಕ್ಕೆ 1.62 ಲಕ್ಷ ಕೋಟಿ ಅನುದಾನ ನೀಡಲಾಗಿದೆ. ಶೇಕಡ 2 ರಷ್ಟು ಬಡ್ಡಿ ಸಬ್ಸಿಡಿ ಸಿಗಲಿದ್ದು, ಸಾಲ ವಾಪಸ್​ಗೆ 12 ತಿಂಗಳ ಕಾಲಾವಕಾಶ ಸಿಗಲಿದೆ. ಮುದ್ರಾ ಮೂಲಕ ಕಿರು ಸಾಲ ಯೋಜನೆಗೆ ₹1500 ಕೋಟಿ ನಿಗದಿ ಮಾಡಲಾಗಿದೆ. ಜೊತೆಗೆ ಒಂದು ದೇಶ ಒಂದೇ ರೇಷನ್​ ಕಾರ್ಡ್​ ಎಂದು ಘೋಷಣೆ ಮಾಡಿರುವ ಕೇಂದ್ರ ಸರ್ಕಾರ, ಯಾವುದೇ ರಾಜ್ಯದ ಕಾರ್ಮಿಕ ಬೇರೆ ರಾಜ್ಯದಲ್ಲೂ ದವಸ ಧಾನ್ಯ ಪಡೆಯಲು ಅನುವು ಮಾಡಿಕೊಡಲಾಗಿದೆ. ಇನ್ನೂ ರೇಷನ್​ ಕಾರ್ಡ್​ ಇಲ್ಲದವರಿಗೂ ಮುಂದಿನ 2 ತಿಂಗಳು ಉಚಿತ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಈ ಯೋಜನೆಗೆ ₹ 3,500 ಕೋಟಿ ವಿನಿಯೋಗ ಮಾಡುತ್ತಿದ್ದೇವೆ ಎಂದಿದ್ದಾರೆ.

  Leave a Reply