ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ನಿಧನ

ಸುಮಾರು 2 ದಶಕಕ್ಕೂ ಹೆಚ್ಚು ಕಾಲ ಭೂಗತ ಲೋಕದ ಡಾನ್‌ ಆಗಿ ಮೆರೆದು ನಂತರ ಜಯ ಕರ್ನಾಟಕ ಸಂಘಟನೆ ಮೂಲಕ ಸಾಮಾಜಿಕ ಸೇವಕರಾಗಿ ಕಾರ್ಯ ನಿರ್ವಹಿಸಿದ ಮುತ್ತಪ್ಪ ರೈ, ಮಾರಕ ಕ್ಯಾನ್ಸರ್‌ ಎದುರು ಸೋಲೊಪ್ಪಿಕೊಂಡು ಇಂದು ತಮ್ಮ ಜೀವನ ಮುಗಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಕ್ಯಾನ್ಸರ್‌ ಉಲ್ಬಣವಾಗ ಬಳಿಕ ಚಿಕಿತ್ಸೆ ಪಡೆಯುತ್ತಿದ್ದ ಮುತ್ತಪ್ಪ ರೈ, ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾವು 2 ಗಂಟೆ 17 ನಿಮಿಷಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಮುತ್ತಪ್ಪ ರೈ ಪುತ್ರ ರಿಕ್ಕಿ ಶೆಟ್ಟಿ ತಿಳಿಸಿದ್ದಾರೆ. 68 ವರ್ಷದ ಮುತ್ತಪ್ಪ ರೈ, ಆರೋಗ್ಯ ಕಳೆದ ಎರಡು ದಿನದಿಂದ ಕ್ಷೀಣವಾಗುತ್ತಾ ಸಾಗಿತ್ತು. ಜೀವನ್ಮರಣದ ಹೋರಾಟ ನಡೆಸುತ್ತಿದ್ದ ರೈ ಇಹಲೋಕ ತ್ಯಜಿಸಿದ್ದಾರೆ. ಆಸ್ಪತ್ರೆ ಬಳಿ ಜೀವನ್ ಭಿಮಾನಗರ ಠಾಣಾ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಮಗ ರಿಕ್ಕಿ ಶೆಟ್ಟಿ ಮಾತನಾಡಿ ಬಿಡದಿಯ ನಿವಾಸದಲ್ಲಿ ಅಭಿಮಾನಿಗಳು, ಬೆಂಬಲಿಗರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದಿದ್ದಾರೆ. ಮುತ್ತಪ್ಪ ರೈ ಅಂತಿಮ ದರ್ಶನಕ್ಕೆ ಬಿಡದಿಯಲ್ಲಿ ವ್ಯವಸ್ಥೆ ಹಿನ್ನೆಲೆ, ಆಸ್ಪತ್ರೆ ಬಳಿ ಬೆಂಬಲಿಗರು, ಜಯ ಕರ್ನಾಟಕ ಸಂಘಟನೆಯವರು ಆಗಮಿಸುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಮಣಿಪಾಲ್ ಆಸ್ಪತ್ರೆ ಬಳಿ ಪೂರ್ವ ವಿಭಾಗದ ಡಿಸಿಪಿ ಡಾ‌.ಎಸ್.ಡಿ.ಶರಣಪ್ಪ ನೇತೃತ್ವದಲ್ಲಿ ಬಂದೋಬಸ್ತ್‌ ಮಾಡಲಾಗಿತ್ತು.

ಜಯಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಬಿ.ಎನ್ ಜಗದೀಶ್ ಮಾತನಾಡಿ, ಮುತ್ತಪ್ಪ ರೈ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಅವರ ಅಗಲಿಕೆ ನಮ್ಮೆಲ್ಲರಿಗೂ ತುಂಬಲಾರದ ನಷ್ಟ. ದೇಶ ವಿದೇಶದಲ್ಲಿ ರೈಗೆ‌ ದೊಡ್ಡ ಅಭಿಮಾನಿ‌ ಬಳಗ ಇದೆ. ಕ್ಯಾನ್ಸರ್ ರೋಗವನ್ನೂ ಸಹ ತಮ್ಮ ಹೋರಾಟದ ಮೂಲಕವೇ ಎದುರಿಸಿದರು. ತಮ್ಮ ಬೆಂಬಲಿಗರು ಮತ್ತು ಅಭಿಮಾನಿಗಳಲ್ಲಿಯೂ ಕ್ಯಾನ್ಸರ್ ಕಾಯಿಲೆ ಬಗ್ಗೆ ಅರಿವು‌ ಮೂಡಿಸಿದರು. ಲಾಕ್ ಡೌನ್ ಸಂದರ್ಭದಲ್ಲಿ ನಾನೂ ಸತ್ತರೂ ಹೆಚ್ಚು ಜನ ಸೇರಿಸಬೇಡಿ, ತೊಂದರೆ ಮಾಡಬೇಡಿ ಎಂದಿದ್ದರು, ಹಾಗಾಗಿ ಕಾರ್ಯಕರ್ತರು, ಅಭಿಮಾನಿಗಳು ಎಲ್ಲೆಲ್ಲಿ‌ ಇದ್ದೀರೋ ಅಲ್ಲಿಂದಲೇ ಶ್ರದ್ಧಾಂಜಲಿ ಅರ್ಪಿಸಿ. ಸರ್ಕಾರದ ನಿಯಮಗಳನ್ನ‌ ದಯವಿಟ್ಟು ಪಾಲಿಸಿ ಎಂದಿದ್ದಾರೆ.

ರಾಮನಗರ ಜಿಲ್ಲೆ ಬಿಡದಿಯ ನಿವಾಸದಲ್ಲಿ ಅಂತಿಮ ದರ್ಶನದ ಬಳಿಕ ಮುತ್ತಪ್ಪ ರೈ ಇಚ್ಚೆಯೆಂತೆ ಅವರ ಅಂತಿಮ ವಿಧಿವಿಧಾನ ನಡೆಯಲಿದ್ದು, ಅವರ ಧರ್ಮಪತ್ನಿ ಸಮಾಧಿಯ ಬಳಿಯಲ್ಲೇ ಅಂತಿಮ‌ ಸಂಸ್ಕಾರ ಮಾಡುತ್ತೇವೆ ಬಂಟ್ಸ್ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನಡೆಯಲಿವೆ ಎಂದು ಮುತ್ತಪ್ಪ ರೈ ಸಂಬಂಧಿ ರಾಕೇಶ್ ಲಾಬೋ ಮಾಹಿತಿ ನೀಡಿದ್ದಾರೆ. ಇಬ್ಬರು ಮಕ್ಕಳು, ಮೂವರು ಸಹೋದರರು ಹಾಗೂ ಓರ್ವ ಸಹೋದರಿ ಇದ್ದಾರೆ. ಹಿರಿಯ ಮಗ ರಾಕಿ ರೈ ಕೆನಡದಲ್ಲಿದ್ದು ಅಂತ್ಯಕ್ರಿಯೆ ಬರುವುದಕ್ಕೆ ಸಾಧ್ಯವಿಲ್ಲ. ಕಿರಿಯ ಮಗ ರಿಕ್ಕಿ ರೈ ಅಂತಿಮ ವಿಧಿ ವಿಧಾನ ನೆರವೇರಿಸಲಿದ್ದಾರೆ ಎನಮ್ನಲಾಗಿದೆ. ಅಂತಿಮ ವಿಧಿವಿಧಾನದ ವೇಳೆ ಕೇವಲ ಕುಟುಂಬಸ್ಥರು ಹಾಗೂ ಕೆಲವೇ ಕೆಲವು ಆಪ್ತರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಒಟ್ಟಾರೆ, ಭೂಗತ ಲೋಕದಲ್ಲಿ ಡಾನ್‌ ಆಗಿದ್ದ ಮುತ್ತಪ್ಪ ರೈ ಕ್ಯಾನ್ಸರ್‌ ಎದುರು ಸೋಲು ಒಪ್ಪಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಜಯ ಕರ್ನಾಟಕ ಹೆಸರಲ್ಲಿ ಸಂಘಟನೆ ಹುಟ್ಟುಹಾಕಿದ್ದ ಮುತ್ತಪ್ಪ ರೈ ಸಾಮಾಜಿಕ ಕೆಲಸಗಳನ್ನು ಮಾಡಲು ಮುಂದಾಗಿದ್ದರು. ಸಂಘಟನೆಗೆ ಶಕ್ತಿಯಾಗಿದ್ದರು. ಇದೀಗ ಸಂಘಟನೆ ಬಡವಾಗಿದೆ ಎನ್ನಬಹುದು.

Leave a Reply