ಭಾರತದಲ್ಲಿ ಒಂದು ಲಕ್ಷ ದಾಟಿದ ಕೊರೊನಾ ಸೋಂಕು..!

ಡಿಜಿಟಲ್ ಕನ್ನಡ ಟೀಮ್:

ಭಾರತದಲ್ಲಿ ಕೊರೊನಾ ನಿಯಂತ್ರಣ ಮಾಡುವ ಯಾವುದೇ ಉದ್ದೇಶ ಸರ್ಕಾರದ ಮುಂದಿಲ್ಲ. ಯಾಕೆಂದರೆ ಜೀವವನ್ನು ಉಳಿಸಿಕೊಳ್ಳೋಣ, ಆ ಬಳಿಕ ಜೀವನವನ್ನು ನೋಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು. ಆ ಬಳಿಕ ಕೋವಿಡ್ 19 ವಿರುದ್ಧ ಗೆಲುವು ಸಾಧಿಸಿಬಿಟ್ಟೆವು ಎನ್ನುವಂತೆ ಚಪ್ಪಾಳೆ, ಗಂಟೆ, ನಗಾರಿ ಹಿಡಿದು ಬಾರಿಸಿದ್ದು ಆಯ್ತು. ಮತ್ತೊಮ್ಮೆ ಮನೆಯ ದೀಪಗಳನ್ನೆಲ್ಲಾ ಆರಿಸಿ ಮೊಬೈಲ್ ಟಾರ್ಚ್ ಆನ್ ಮಾಡಿದ್ದೂ ಆಯ್ತು. ನಾವೆಲ್ಲಾ ಒಗ್ಗಟ್ಟಾಗಿ ಹೋರಾಡೋಣ, ಕೊರೊನಾ ಓಡಿಸೋಣ ಎಂದಿದ್ದೂ ಆಯ್ತು. ಆದರೀಗ ಭಾರತದಲ್ಲಿ ಕೊರೊನಾ ರಣಕೇಕೆ ಹಾಕುತ್ತ ಮುನ್ನುಗ್ಗುತ್ತಿದೆ. ಇವತ್ತಿಗೆ ಒಂದು ಲಕ್ಷ ಗಡಿ ದಾಟಿಕೊಂಡು ಮುಂದೆ ಸಾಗುತ್ತಿದೆ.

ಜನವರಿ 30, 2020ಕ್ಕೆ ಕಾಲಿಟ್ಟ ಕೊರೊನಾ ವೈರಸ್ ಇಲ್ಲೀವರೆಗೂ ಕುಂಟುತ್ತಲೇ ಸಾಗಿತ್ತು. ಇಲ್ಲೀವರೆಗೂ ಕುಂಟುತ್ತಾ, ತೆವಳುತ್ತಾ ಸಾಗಿದ ವೈರಸ್ ಇದೀಗ ವೇಗ ಪಡೆದುಕೊಂಡಿದೆ. ದಿನದಿಂದ ದಿನಕ್ಕೆ ತನ್ನ ಸಾಮರ್ಥ್ಯ ವೃದ್ಧಿಸಿಕೊಳ್ಳುತ್ತಿದ್ದು, ಕಡಿವಾಣಕ್ಕೆ ಸಿಗದಂತೆ ಮುನ್ನುಡಿ ಹಾಕುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈಗಾಗಲೇ ಕೈಚೆಲ್ಲಿ ಆಗಿದೆ. ಕೊರೊನಾ ನಿಯಂತ್ರಣಕ್ಕೆ ಇರುವ ಏಕೈಕ ಮಾರ್ಗ ಸಾಮಾಜಿಕ ಅಂತ ಮಾತ್ರ. ಸೋಷಿಯಲ್ ಡಿಸ್ಟೆನ್ಸ್‌ನಿಂದ ಕೊರೊನಾ ವೈರಸ್ ಎದುರಿಸಿ ಓಡಿಸೋಣ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಮೌನಕ್ಕೆ ಶರಣಾಗಿದ್ದಾರೆ. ಅದರ ಅರ್ಥ ನರೇಂದ್ರ ಮೋದಿ ಅವರಿಗೆ ಕೊರೊನಾ ನಿಯಂತ್ರಣ ಅಸಾಧ್ಯ ಎನ್ನುವುದು ಅರಿವಾಗಿದೆ ಎಂದರ್ಥ ಎನಿಸುತ್ತದೆ.

ಇದೀಗ ನಾಲ್ಕನೇ ಹಂತದ ಲಾಕ್‌ಡೌನ್ ಘೋಷಣೆಯಾಗಿದೆ. ಮೇ 18 ಸೋಮವಾರದಿಂದ ಲಾಕ್‌ಡೌನ್ ಆರಂಭವಾಗಿದ್ದು, ಮೇ 31 ರ ತನಕ ಲಾಕ್‌ಡೌನ್ ಇರಲಿದೆ. ಆದರೆ ಕೇಂದ್ರ ಸರ್ಕಾರದ ಮಾರ್ಗ ಸೂಚಿ ಅನ್ವಯ ರಾಜ್ಯ ಸರ್ಕಾರ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಂಡಿದ್ದು ಮಂಗಳವಾರದಿಂದ (19/05/2020) ಎಲ್ಲಾ ರೀತಿಯ ವ್ಯವಹಾರ ಓಪನ್ ಆಗಲಿದೆ. ಸಲೂನ್, ಬ್ಯೂಟಿ ಪಾರ್ಲರ್, ಬಸ್ ಸಂಚಾರ, ಆಟೋ, ಟ್ಯಾಕ್ಸಿ, ರಾಜ್ಯದ ಒಳಗೆ ರೈಲು ಎಲ್ಲವೂ ಖುಲ್ಲಂ ಖುಲ್ಲ. ಇದೀಗ 1 ಲಕ್ಷ ಸೋಂಕಿತರನ್ನು ಮುಟ್ಟಲು ಕೊರೊನಾ ವೈರಸ್ ತೆಗೆದುಕೊಂಡ ಸಮಯ ಬರೋಬ್ಬರಿ 109 ದಿನಗಳು. ಇದೀಗ ಸೋಂಕು ಹರಡುತ್ತಿರುವ ರೀತಿ ಗಮನಿಸಿದರೆ, ಮುಂದಿನ ಇಪ್ಪತ್ತು ದಿನಗಳ ವೇಳೆಗೆ ಮತ್ತೆ ಒಂದು ಲಕ್ಷ ಅಂದರೆ ಎರಡು ಲಕ್ಷ ಸೋಂಕಿತರನ್ನು ಮುಟ್ಟುತ್ತದೆಯೇ ಎನ್ನುವ ಸಂಶಯ ಬಲವಾಗಿ ಕಾಡುವುದಕ್ಕೆ ಶುರು ಮಾಡುತ್ತದೆ. ಅದಕ್ಕೆ ಕಾರಣ ತುಂಬಾ ಸರಳ, ಈಗಾಗಲೇ ವೈರಸ್ ತಮ್ಮ ಪ್ರಭಾವವನ್ನು ವಿಸ್ತರಿಸಿದೆ. ಇದೀಗ ಸರ್ಕಾರ ಎಲ್ಲಾ ವ್ಯವಹಾರಗಳನ್ನು ಮಾಡಲು ಅವಕಾಶ ಕಲ್ಪಿಸಿದೆ. ರೋಗಿ ಬಯಸಿದ್ದು ಹಾಲು ಅನ್ನ. ವೈದ್ಯರು ಹೇಳಿದ್ದು ಹಾಲು ಅನ್ನ ಎನ್ನುವಂತಾಗಿದೆ ಸದ್ಯದ ಪರಿಸ್ಥಿತಿ.

Leave a Reply