ಮಂಡ್ಯದಲ್ಲಿ ಮುಂಬೈ ಮಾರಿಯೋ..? ಜಿಲ್ಲಾಡಳಿತ ಎಡವಟ್ಟೋ..?

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದೇ ದಿನ 149 ಕೇಸ್​ಗಳನ್ನು ಕಂಡಿರುವ ದಿನ ಮಂಗಳವಾರ ಆಗಿದೆ. ಈ ಮಂಗಳವಾರ ಇಡೀ ಕರ್ನಾಟಕದ ಯಾವ ಜಿಲ್ಲೆಯಲ್ಲೂ ಇಲ್ಲೀವರೆಗೂ ಅಸಾಧ್ಯವಾಗಿದ್ದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಒಂದೇ ದಿನ ಇಡೀ ರಾಜ್ಯದ ಕೊರೊನಾ ಇತಿಹಾಸದಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಸೋಂಕಿತರು ಹೆಚ್ಚಾಗಿದ್ದಾರೆ. ಕೇವಲ ಸಕ್ಕರೆ ನಾಡು ಮಂಡ್ಯ ಒಂದರಲ್ಲೇ 72 ಜನರಿಗೆ ಸೋಂಕು ಹರಡಿದೆ.

ಮಂಡ್ಯ ಜಿಲ್ಲೆಯಲ್ಲೇ ಅತಿ ಹೆಚ್ಚು ಕೊರೊನಾ ಸೋಂಕಿತರ ಸಂಖ್ಯೆ ಬಗ್ಗೆ ಮಾತನಾಡಿರುವ ಉಸ್ತುವಾರಿ ಸಚಿವ ನಾರಾಯಣಗೌಡ, ಸೋಂಕಿನ ವಿಚಾರವಾಗಿ ಜಿಲ್ಲೆಯ ಜನ ಭಯಬೀಳುವ ಅಗತ್ಯ ಇಲ್ಲ. ಕೊರೊನಾ ಸೋಂಕಿತರ ಪ್ರಮಾಣ ಜಿಲ್ಲೆಯಲ್ಲಿ ಇರೋದು ನಿಜ. ಆದ್ರೆ ಸೋಂಕಿತರೆಲ್ಲರೂ ಹೊರ ರಾಜ್ಯಗಳಿಂದ ಬಂದು ಕ್ವಾರಂಟೈನ್ ಆಗಿರುವವರು. ಅವರಿಂದ ಜಿಲ್ಲೆಯ ಜನರಿಗೆ ಹರಡಲು ಅವಕಾಶವಿಲ್ಲ. ಹೊರ ರಾಜ್ಯಗಳಿಂದ ಮಂಡ್ಯ ಜಿಲ್ಲೆಗೆ ಬರಲು 2 ಸಾವಿರಕ್ಕು ಹೆಚ್ಚು ಜನ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ ಈಗಾಗಲೆ ಸುಮಾರು 1400 ಜನ ಜಿಲ್ಲೆಗೆ ಬಂದಿದ್ದಾರೆ. ಬಂದವರನ್ನೆಲ್ಲ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗಿದೆ. ಕ್ವಾರಂಟೈನ್ ಆಗಿರುವವರಲ್ಲೇ ಸೊಂಕಿತರು ಇದ್ದಾರೆ. ಹೀಗಾಗಿ ಸೋಂಕಿತರ ಸಂಖ್ಯೆ ಹೆಚ್ಚಾದರು, ಅವರಿಂದ ಸ್ಥಳಿಯರಿಗೆ ಹರಡುವ ಸಾಧ್ಯತೆ ಇಲ್ಲ ಎಂದು ಸಮಾಧಾನದ ಮಾತುಗಳು ಆಡಿದ್ದಾರೆ.

ಕ್ವಾರಂಟೈನ್ ಆಗಿರುವವರನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು. ಅವರಿಗೆ ಗುಣಮಟ್ಟದ ಊಟ ತಿಂಡಿ ನೀಡುವಂತೆಯೂ ಸಚಿವರ ವಿಡಿಯೋ ಕಾನ್ಫರೆನ್ಸ್​ ಸಭೆಯಲ್ಲಿ ಸೂಚನೆ ನೀಡಿದ್ದಾರೆ. ಕ್ವಾರಂಟೈನ್ ಆಗಿರುವವರಿಂದ ಯಾವುದೇ ರೀತಿಯ ದೂರು ಬರಬಾರದು. ಅವರಿಗೆ ಅಗತ್ಯ ಇರುವ ಎಲ್ಲ ಸೌಲಭ್ಯ ಕಡ್ಡಾಯವಾಗಿ ನೀಡಲು ಡಿಸಿಗೆ ಸೂಚನೆ ನೀಡಿದ್ದಾರೆ. ಮಂಡ್ಯ ಜಿಲ್ಲೆಗೆ ಬಂದು ಕ್ವಾರಂಟೈನ್ ಅವಧಿ ಮುಗಿಸಿದವರಿಗೆ ಮತ್ತೊಮ್ಮೆ ಟೆಸ್ಟ್ ಮಾಡಿ, ನೆಗೆಟಿವ್ ಬಂದವರನ್ನು ಮನೆಗೆ ಕಳುಹಿಸಿಕೊಡಲಾಗಿದೆ. ಜಿಲ್ಲೆಗೆ ಆಗಮಿಸಲು ಇರುವ ಎಲ್ಲ ಮಾರ್ಗಗಳನ್ನ ಬಂದ್ ಮಾಡಲಾಗಿದೆ. ಪ್ರತಿ ಮಾರ್ಗದಲ್ಲೂ ಚೆಕ್ ಪೋಸ್ಟ್ ಇದೆ. ಈ ಹಿಂದೆ ನೀಡಿದ್ದ ಪಾಸ್ ಅಥವಾ ಆನ್​ಲೈನಲ್ಲಿ ಅರ್ಜಿ ಸಲ್ಲಿಸಿ ಬಂದವರನ್ನ ಕಡ್ಡಾಯ ಕ್ವಾರಂಟೈನ್ ಮಾಡಲಾಗುತ್ತಿದೆ. ತಮಿಳುನಾಡು, ಆಂಧ್ರ, ಉತ್ತರಾಖಂಡ್, ಪಶ್ಚಿಮಬಂಗಾಳ, ಕೇರಳ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಗುಜರಾತ್​ನಿಂದ ಬಂದಿದ್ದಾರೆ. ಕೋವಿಡ್ – 19 ಪತ್ತೆ ಹಚ್ಚಲು ಪ್ರತಿನಿತ್ಯ ಹೆಚ್ಚು ಪರೀಕ್ಷೆ ನಡೆಸಬೇಕು. ಪರೀಕ್ಷಾ ಸಾಧನ, ಕ್ವಾರಂಟೈನ್ ಸ್ಥಳಾವಕಾಶದ ಕೊರತೆ ಇದ್ದರೆ, ಅನುದಾನದ ಅಗತ್ಯ ಇದ್ದರೆ ತಿಳಿಸಬೇಕು ಎಂದು ತಾಕೀತು ಮಾಡಿದ್ದಾರೆ.

ಈಗಾಗಲೇ ಕ್ವಾರಂಟೈನಲ್ಲಿ ಇರುವವರ ಪೈಕಿ 500 ಕ್ಕೂ ಹೆಚ್ಚು ಜನರ ಟೆಸ್ಟ್ ಮಾಡಲಾಗಿದ್ದು ಇನ್ನೂ ಕೂಡ ರಿಪೋರ್ಟ್ ಬರಬೇಕಿದೆ. ಇವರಲ್ಲಿ ಪಾಸಿಟಿವ್ ಬಂದವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕಿದೆ. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ಕೊಡಲಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮಂಡ್ಯ ಜಿಲ್ಲಾ ಜನಪ್ರತಿನಿಧಿಗಳ ಸಭೆಯನ್ನು ಬುಧವಾರ ಆಯೋಜನೆ ಮಾಡಲಾಗಿದೆ. ಆದರೆ ಮಂಡ್ಯ ಜಿಲ್ಲೆಗೆ ಆಗಮಿಸರುವ ಮುಂಬೈ ನಿವಾಸಿಗಳೆಲ್ಲಾ ಬರುವಾಗಲೇ ಕೊರೊನಾ ಸೋಂಕಿತರಾಗಿದ್ದರೋ ಅಥವಾ ಮಂಡ್ಯ ಜಿಲ್ಲಾ ಕ್ವಾರಂಟೈನ್​ ಕೇಂದ್ರಕ್ಕೆ ಕಾಲಿಟ್ಟ ಬಳಿಕ ಸೋಂಕಿತರಾಗುತ್ತಿದ್ದಾರೋ ಎನ್ನುವ ಅನುಮಾನ ಮೂಡಿಸಿದೆ. ಕ್ವಾರಂಟೈನ್​ ಕೇಂದ್ರದ ಕೊಠಡಿಗಳಲ್ಲಿ ಒಂದು ಅಥವಾ ಎರಡು ಕುಟುಂಬಗಳನ್ನು ಒಟ್ಟೊಟ್ಟಿಗೆ ಬಿಡುವುದಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಆ ಕುಟುಂಬದಲ್ಲಿ ಯಾರಿಗಾರೂ ಒಬ್ಬರಿಗೂ ಅದೇ ಕ್ವಾರಂಟೈನ್​ ಕೇಂದ್ರದ ಯಾರಿಂದಲಾದರೂ ಸೋಂಕು ಹರಡಿದ್ರೆ, ಇಡೀ ಕುಟುಂಬಗಳಿಗೆ ಹರಡುವ ಸ್ಥಿತಿ ಇದೆ ಎನ್ನಲಾಗ್ತಿದೆ. ಸೋಷಿಯಲ್​ ಡಿಸ್ಟೆನ್ಸ್​ ಕೂಡ ಮಾಡಲಾಗ್ತಿಲ್ಲ. ಮನೆಯಲ್ಲಿ ಯಾವ ರೀತಿ ಇರುತ್ತಾರೋ ಅದೇ ರೀತಿ ಎರ್ಮೂರು ಕುಟುಂಬಗಳನ್ನು ಬಿಟ್ಟಿರುವುದು ಜಿಲ್ಲಾಡಳಿತದ ನಿರ್ಧಾರ ಪ್ರಶ್ನೆ ಮಾಡುವಂತಾಗಿದೆ.

Leave a Reply