ಸಚಿವ ಮಾಧುಸ್ವಾಮಿ ಗೂಂಡಾಗಿರಿ ನಿಲ್ಲೋದು ಯಾವಾಗ..?

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್​ ಹಾಗೂ ಜೆಡಿಎಸ್​ ನೇತೃತ್ವದ ಮೈತ್ರಿ ಸರ್ಕಾರವನ್ನು ಆಪರೇಷನ್​ ಕಮಲದ ಮೂಲಕ ಉರುಳಿಸುವಾಗ ಮಾಧುಸ್ವಾಮಿ ಸ್ಟಾರ್​ ಆಗಿದ್ದರು. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​, ಕೃಷ್ಣಭೈರೇಗೌಡ, ಪ್ರಿಯಾಂಕ ಖರ್ಗೆ ಸೇರಿದಂತೆ ಎಲ್ಲರೂ ಕಾನೂನು ಅಸ್ತ್ರವನ್ನು ಹಿಡಿದು ವಾಗ್ದಾಳಿ ಮಾಡುತ್ತಿದ್ದರೆ ಸಮರ್ಥನೆ ಮಾಡಿಕೊಳ್ಳಲು ಬಿಜೆಪಿ ಪಾಳಯದಲ್ಲಿ ಬಲಿಷ್ಟವಾಗಿ ಕಾಣಿಸಿದ್ದು ಖಡಕ್​ ಮಾತಿನ ಮಾಧುಸ್ವಾಮಿ. ಮುಖ್ಯಮಂತ್ರಿ ಆಗಲು ಮಾಧುಸ್ವಾಮಿಯೇ ಸೂಕ್ತ ಎನ್ನುವ ಅಭಿಪ್ರಾಯ ಮೂಡಿಬಂದಿತ್ತು. ಅದೇ ಗುಂಗಿನಲ್ಲಿದ್ದ ಮಾಧುಸ್ವಾಮಿ ಅವರೂ ಕೂಡ ಪ್ರಮಾಣ ವಚನದ ವೇಳೆ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದೇನೆ ಎಂದು ಕೊನೆಗೆ ಸರಿ ಮಾಡಿಕೊಂಡು ಮಂತ್ರಿಯಾಗಿ ಎಂದು ಪ್ರಮಾಣ ಎಂದಿದ್ದರು. ಆ ಬಳಿಕ ಶುರುವಾದ ಸಚಿವ ನಿಜರೂಪ ಇಂದಿನವರೆಗೂ ಮುಂದುವರಿದಿದೆ.

ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಿದೆ. ರಾಜ್ಯ ಸರ್ಕಾರ ಇಲ್ಲೀವರೆಗೂ ಸರಿಯಾದ ಪರಿಹಾರ ವ್ಯವಸ್ಥೆ ಮಾಡಿಲ್ಲ. ಕೇಂದ್ರ ಸರ್ಕಾರದಿಂದಲೂ ರಾಜ್ಯದ ಸಮಸ್ಯೆಗೆ ಸೂಕ್ತ ಬೆಂಬಲ ಸಿಕ್ಕಿಲ್ಲ ಎಂದಿದ್ದಕ್ಕೆ ಮಾಧ್ಯಮಗಳ ಮೇಲೆ ಕೂಗಾಡಿ ರಂಪಾಟ ಮಾಡಿದ್ದರು ಸಚಿವ ಮಾಧುಸ್ವಾಮಿ. ಇದೀಗ ರೈತ ಮಹಿಳೆ ಪ್ರಶ್ನೆ ಕೇಳುತ್ತಿದ್ದಾಗ ಕೋಪಗೊಂಡಿರುವ ಸಚಿವ ಮಾಧುಸ್ವಾಮಿ ‘ನಾನು ಕೆಟ್ಟವನು ಏಯ್ ರಾಸ್ಕಲ್​ ಭಾಯ್ ಮುಚ್ಚು ’ ಎಂದು ಗದರಿದ್ದಾರೆ. ಬಳಿಕ ಪೊಲೀಸರನ್ನು ಬಿಟ್ಟು ಆ ಮಹಿಳೆಯನ್ನು ಎಳೆದು ಬದಿಗೆ ಸರಿಸಿದ್ದಾರೆ. ಈ ಘಟನೆ ವಾಕ್ಚಾತುರ್ಯ ಹೊಂದಿರುವ ಮಾಧುಸ್ವಾಮಿ ಗೂಂಡಾಗಿರಿ ಯಾವಾಗ ನಿಲ್ಲಲಿದೆ ಎನ್ನುವ ಪ್ರಶ್ನೆ ಸಚಿವ ಮಾಧುಸ್ವಾಮಿ ಅವರ ಅಭಿಮಾನಿಗಳಲ್ಲಿಯೇ ವ್ಯಕ್ತವಾಗುತ್ತಿದೆ.

*ಇವತ್ತೆ ಮಾಧುಸ್ವಾಮಿ ಮಾಡಿದ ಗೂಂಡಾಗಿರಿ ಏನು..?*

ಬೆಂಗಳೂರಿನ ಕೊಳಚೆ ನೀರನ್ನು ಶುದ್ಧಿ ಮಾಡಿ ಬಯಲು ಸೀಮೆಯಾದ ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ಉಣಿಸುವ ಕೆಸಿ ವ್ಯಾಲಿ ಯೋಜನೆ ಕಳೆದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವೇಳೆ ಅಂದಿನ ಸ್ಪೀಕರ್​ ರಮೇಶ್​ ಕುಮಾರ್​ ಮುತುವರ್ಜಿಯಿಂದ ಯೋಜನೆ ಪೂರ್ಣಗೊಂಡಿತ್ತು. ಇವತ್ತು ಅದೇ ಯೋಜನೆಯ ವೀಕ್ಷಣೆಗಾಗಿ ಸಚಿವರ ಮಾಧುಸ್ವಾಮಿ ಆಗಮಿಸಿದ್ದರು. ಕೋಲಾರ ತಾಲೂಕಿನ ಎಸ್ ಅಗ್ರಹಾರ ಕೆರೆ ವೀಕ್ಷಣೆ ವೇಳೆ ಹೋರಾಟಗಾರ್ತಿ ನಳಿನಿಗೌಡ ಕೆರೆ ಒತ್ತುವರಿ ತೆರವು ಮಾಡಲು ಮನವಿ ಪತ್ರ ಕೊಡಲು ಬಂದ ವೇಳೆ ಸಚಿವ ಮಾಧುಸ್ವಾಮಿ ಉಗ್ರರೂಪ ತಾಳಿದರು. ರೈತ ಹೋರಾಟಗಾರ್ತಿಯನ್ನ ‘ನಾನು ಕೆಟ್ಟವನು ಏಯ್ ರಾಸ್ಕಲ್​ ಭಾಯ್ ಮುಚ್ಚು ’ ಎಂದು
ಬೆರಳು ತೋರಿಸಿ ಸಚಿವ ಮಾಧುಸ್ವಾಮಿ ಕಿಡಿಕಾರಿದರು. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷೆ ನಳಿನಿಗೌಡರನ್ನು ಪೊಲೀಸರ ಮೂಲಕ ಹೀನಾಯವಾಗಿ ನಡೆಸಿಕೊಂಡರು.

ರೈತ ಹೋರಾಟಗಾರ್ತಿಗೆ ಕಾನೂನು ಮತ್ತು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅವಮಾನ ಮಾಡುವಾಗ ಉಳಿದ ರೈತ ಹೋರಾಟಗಾರರನ್ನು ಪೊಲೀಸರು ಸ್ಥಳದಿಂದ ದೂರ ಕಳುಹಿಸಿದರು. ಕೆಸಿವ್ಯಾಲಿ ಹರಿಯುತ್ತಿರುವ ಕೆರೆಗಳ ವೀಕ್ಷಣೆ ನಡೆಸುವಾಗ ಸಚಿವ ಮಾಧುಸ್ವಾಮಿ ನಡೆದುಕೊಂಡ ರೀತಿಗೆ ಅನ್ನದಾತರು ಆಕ್ರೋಶಗೊಂಡಿದ್ದಾರೆ. ಸಚಿವರು ಕೂಡಲೇ ಬಹಿರಂಗವಾಗಿ ಕ್ಷಮೆಯಾಚನೆ ಮಾಡಬೇಕು ಎಂದು ವಿವಿಧ ರೈತಸಂಘಗಳು ಆಗ್ರಹ ಮಾಡಿವೆ. ಕ್ಷಮೆಯಾಚಿಸಿದೆ ಇದ್ದಲ್ಲಿ ಹೋರಾಟದ ಎಚ್ಚರಿಕೆಯನ್ನೂ ನೀಡಿವೆ. ಒಟ್ಟಾರೆ, ತನ್ನ ವಾಕ್ಚಾತುರ್ಯದಿಂದಲೇ ಹೆಸರು ಗಳಿಸಿದ್ದ ಸಚಿವರು ಮಂತ್ರಿ ಪಟ್ಟ ಪಡೆದ ಬಳಿಕ ಜನಸಾಮಾನ್ಯರ ಕಷ್ಟ ಕೇಳುವ ಸೌಜನ್ಯವಿಲ್ಲ ಎನ್ನುವುದನ್ನು ಸಾಬೀತು ಮಾಡುತ್ತಲೇ ಇದ್ದಾರೆ. ಏನಾದರೂ ಮಾತನಾಡಿದರೆ ರೇಗಾಡುವುದು. ತನ್ನ ಸೌಮ್ಯ ಸ್ವಭಾವವನ್ನು ಗೆದರಿ ನಿಲ್ಲುತ್ತಿದ್ದಾರೆ. ಇನ್ನಾದರೂ ಸಚಿವರು ಗೂಂಡಾವರ್ತನೆ ನಿಲ್ಲಿಸಿದರೆ ಉತ್ತಮ ಹೆಸರು ಗಳಿಸಲು ಸಾಧ್ಯ. ಸಿಎಂ ಬಿಎಸ್​ ಯಡಿಯೂರಪ್ಪ ಆದರೂ ಈ ಬಗ್ಗೆ ಕರೆದು ಬುದ್ಧಿ ಹೇಳುವ ಅವಶ್ಯತೆ ಇದೆ.

Leave a Reply