ಕಾಂಗ್ರೆಸ್ ಮನವಿಗೆ ಸ್ಪಂದಿಸಿದ ಆಯೋಗ, ಗ್ರಾಮ ಪಂಚಾಯತಿ ಚುನಾವಣೆಗೆ ತಯಾರಿ..!

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ನಿಯೋಗದ ಮನವಿಗೆ ಸ್ಪಂದಿಸಿರುವ ಚುನಾವಣಾ ಆಯೋಗ ಗ್ರಾಮ ಪಂಚಾಯತಿಗಳ ಚುನಾವಣೆಗೆ ಸಿದ್ಧತೆ ನಡೆಸಲು ತಯಾರಿ ನಡೆಸಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಚುನಾವಣಾ ಆಯೋಗ ಚುನಾವಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದೆ.

ರಾಜ್ಯದಲ್ಲಿ ಗ್ರಾಮ ಪಂಚಾಯತ್ ಅವಧಿ ಇದೇ ತಿಂಗಳ 25ಕ್ಕೆ ಅಂತ್ಯವಾಗುತ್ತಿದ್ದು, ಕೊರೊನಾ ಹಿನ್ನೆಲೆಯಲ್ಲಿ ಚುನಾವಣೆ ನಡೆಸದೆ ಕೇವಲ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಬಿಜೆಪಿ ಸರ್ಕಾರ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಬಿಜೆಪಿ ಬೆಂಬಲಿಸುವ ಜನರನ್ನು ಮಾತ್ರ ನೇಮಕ ಮಾಡಲಾಗುತ್ತದೆ ಎನ್ನುವ ಕಾರಣಕ್ಕೆ ಸರ್ಕಾರದ ನಿಲುವನ್ನು ಕಾಂಗ್ರೆಸ್ ವಿರೋಧ ಮಾಡಿತ್ತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಚುನಾವಣಾ ಆಯುಕ್ತರನ ಭೇಟಿ ಮಾಡಿದ ಕಾಂಗ್ರೆಸ್ ನಿಯೋಗ ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವಂತೆ ಮನವಿ ಮಾಡಿತ್ತು. ಪಂಚಾಯಿತಿಗಳಿಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡಲು ಅವಕಾಶ ನೀಡದಂತೆ ಕಾಂಗ್ರೆಸ್ ನಿಯೋಗ ಮನವಿ ಮಾಡಿಕೊಂಡಿತ್ತು.

ರಾಜ್ಯ ಚುನಾವಣಾ ಆಯೋಗಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಹೆಚ್.ಕೆ ಪಾಟೀಲ್, ಎಸ್. ಆರ್ ಪಾಟೀಲ್ ಸೇರಿ ಹಲವಾರು ನಾಯಕರು ಕಾಂಗ್ರೆಸ್ ನಿಯೋಗದಲ್ಲಿ ಭೇಟಿ ನೀಡಿದ್ದರು. ಗ್ರಾಮ ಪಂಚಾಯಿತಿಗಳಿಗೆ ನಾಮ ನಿರ್ದೇಶನ ಮಾಡಬಾರದು ಎಂದು ಮನವಿಯನ್ನು ಮಾಡಿದ್ದರು. ಇದೀಗ ಚುನಾವಣಾ ಆಯೋಗ ಕಾಂಗ್ರೆಸ್ ಮನವಿಯನ್ನು ಪುರಸ್ಕರಿಸಿದೆ. ಪಂಚಾಯಿತಿಗಳಿಗೆ ಚುನಾವಣೆ ನಡೆಸಬೇಕೆಂದು ಸರ್ಕಾರಕ್ಕೆ ಸೂಚನೆ ನೀಡುವಂತೆ ಕೇಳಿಕೊಂಡ ಬಳಿಕ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ರವಾನಿಸಿದ್ದಾರೆ.

ಚುನಾವಣಾ ಆಯುಕ್ತ ಡಾ ಬಿ ಬಸವರಾಜ ಅವರನ್ನು ಕನ್ನಿಂಗ್ ಹ್ಯಾಂ ರಸ್ತೆಯ ರಾಜ್ಯ ಚುನಾವಣಾ ಆಯೋಗದ ಕಚೇರಿಯಲ್ಲಿ ಭೇಟಿ ಮಾಡಿದ ಬಳಿಕ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಈಗಾಗಲೇ ಸರ್ಕಾರ ಚುನಾವಣಾ ದಿನಾಂಕ ನಿಗದಿ ಮಾಡಬೇಕಿತ್ತು. ಮೀಸಲಾತಿ ಘೋಷಣೆ ಮಾಡಬೇಕಿತ್ತು. ಆದ್ರೆ ಅದ್ಯಾವುದನ್ನೂ ಮಾಡಲೇ ಇಲ್ಲ. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಚುನಾವಣೆ ಮುಂದೂಡ್ತೇವೆ ಅಂತಾ ಹೇಳ್ತಾನೆ ಬರ್ತಿದ್ದಾರೆ. ಆದ್ರೆ ನಾವು ಹೇಳಿದ್ದು, ಚುನಾವಣೆ ಮಾಡಲೇಬೇಕು. ಚುನಾವಣೆ ಮುಂದೂಡಬಾರದು. ರಾಜ್ಯ ಚುನಾವಣಾ ಆಯುಕ್ತರು ನಮಗೆ ಚುನಾವಣೆ ನಡೆಸುವ ಭರವಸೆ ನೀಡಿದ್ದಾರೆ ಎಂದಿದ್ದಾರೆ.

ಇನ್ನೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಮಾತನಾಡಿ, ಕೋವಿಡ್ 19 ಹಿನ್ನಲೆಯಲ್ಲಿ ಚುನಾವಣೆ ನಡೆಸೋದಿಲ್ಲ ಅಂತಾ ರಾಜ್ಯ ಸರ್ಕಾರ ಹೇಳ್ತಿದೆ. ಜಿಲ್ಲಾಧಿಕಾರಿಗಳಿಗೂ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಈ ಪಂಚಾಯಿತಿ ಚುನಾವಣೆಯಲ್ಲಿ ಯಾವುದೇ ಗುರುತಿನ ಮೇಲೆ ಎಲೆಕ್ಷನ್ ನಡೆಯಲ್ಲ. ಹಾಗಿದ್ದಾಗ ಸರ್ಕಾರ ಯಾಕೆ ಚುನಾವಣೆ ಮಾಡ್ತಿಲ್ಲ..? ಚುನಾವಣೆ ಮಾಡೋದು ಚುನಾವಣಾ ಆಯೋಗದ ಕೆಲಸ. ಆದ್ರೆ ಸರ್ಕಾರ ಪ್ರಭಾವ ಬೀರ್ತಿದೆ. ಅದಕ್ಕೆ ಆಯೋಗ ಮಣಿಯಬಾರದು. ಈಗ ಆಯೋಗಕ್ಕೆ ಮನವಿ ಮಾಡಿದ್ದೇವೆ. ಮುಂದೆ ನೋಡಿಕೊಂಡು ಹೋರಾಟ ಮಾಡ್ತೇವೆ ಎಂದಿದ್ದರು.

ಇದೀಗ ಕಾಂಗ್ರೆಸ್ ಮನವಿಗೆ ಸ್ಪಂದಿಸಿದ ಚುನಾವಣಾ ಆಯೋಗ, ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ನಿರ್ಧಾರ ಕೈಗೊಂಡಿದ್ದು, ಚುನಾವಣಾ ಪೂರ್ವ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ರವಾನಿಸಿದೆ. ಪ್ರಸ್ತುತ ಮತದಾರರ ಪಟ್ಟಿಯನ್ನ ತಯಾರಿಸಿ, ಹೊಸ ತಿದ್ದುಪಡಿಯಂತೆ ಮೀಸಲಾತಿ ನಿಗದಿ ಪಡಿಸಿ. ಆಗಸ್ಟ್ ಒಳಗೆ 5800 ಗ್ರಾಮ ಪಂಚಾಯಿತಿ ಅವಧಿ ಮುಗಿಯಲಿದೆ. ಹೀಗಾಗಿ ಅವಧಿ ಮುಗಿಯುವ ಮುನ್ನವೇ ಚುನಾವಣೆ ನಡೆಸಬೇಕಿದೆ ಎಂದು ರಾಜ್ಯ ಚುನಾವಣಾ ಆಯೋಗ ಸೂಚಿಸಿದೆ. ಪಂಚಾಯತ್ ರಾಜ್ ಅಧಿನಿಯಮದಂತೆ ಚುನಾವಣೆ ನಡೆಸಬೇಕಿದೆ. ಹೀಗಾಗಿ ಸಮಗ್ರ ಮಾಹಿತಿಯನ್ನ ಕಲೆಹಾಕಿ. ಚುನಾವಣೆ ನಡೆಸುವ ಬಗ್ಗೆ ಅಭಿಪ್ರಾಯವನ್ನ ತಿಳಿಸಿ ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ಹೊರಡಿಸಲಾಗಿದೆ. ಜಿಲ್ಲಾಧಿಕಾರಿಗಳ ವರದಿ ಮೇಲೆ ಗ್ರಾಮ ಪಂಚಾಯಿತಿ ಚುನಾವಣಾ ಭವಿಷ್ಯ ನಿರ್ಧಾರ ಆಗಲಿದೆ.

Leave a Reply