ಭಾರತದಲ್ಲಿ ಕೊರೋನಾ ಸೋಂಕಿನ ಏರಿಕೆಗೆ ಇಲ್ಲ ಲಗಾಮು

ಭಾರತ ದೇಶದಲ್ಲಿ ಕೊರೊನಾ ನಿಯಂತ್ರಣ ಮಾಡುವ ಉದ್ದೇಶದಿಂದ ಇಡೀ ದೇಶವನ್ನೇ ಲಾಕ್​ಡೌನ್​ ಮಾಡಿದ್ದ ಭಾರತ ಸರ್ಕಾರ ಇದೀಗ ಕೊರೊನಾ ನಿಯಂತ್ರಣ ಮಾಡಲು ಸಾಧ್ಯವಾಗದೆ ಕೈಚೆಲ್ಲಿ ಕುಳಿತಿದೆ. ಈ ನಡುವೆ ಕೊರೊನಾ ಸೋಂಕು ರುದ್ರ ನರ್ತನ ಮಾಡುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರು ಹಾಗೂ ಸಾವಿನ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆಯಾಗುತ್ತಲೇ ಸಾಗಿದೆ. ಸರ್ಕಾರ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಗದೆ ಎಲ್ಲಾ ವ್ಯವಹಾರಗಳಿಗೂ ಅಸ್ತು ಎಂದಿದೆ. ಇದೀಗ ಕರ್ನಾಟದಲ್ಲಿ ಮಧ್ಯಾಹ್ನದ ತನಕ ಮಾಹಿತಿಯಂತೆ ಸೋಂಕಿತರ ಸಂಖ್ಯೆ 1710ಕ್ಕೆ ಏರಿಕೆಯಾಗಿದ್ದು, ಇಂದು ಬೆಳಿಗ್ಗೆ ಹೊಸದಾಗಿ 105 ಸೋಂಕಿತರು ಪತ್ತೆಯಾಗಿದ್ದಾರೆ.

ಎಲ್ಲಾ ರಾಜ್ಯಗಳಲ್ಲೂ ಸಾರಿಗೆ ಸಂಚಾರ ಶುರುವಾಗಿದೆ. ಇಂದಿನಿಂದ ರೈಲುಗಳ ಸಂಚಾರವೂ ಶುರುವಾಗಿದೆ. ಜೂನ್​ 1 ರಿಂದ ಮತ್ತಷ್ಟು ಹೆಚ್ಚುವರಿ ರೈಲುಗಳ ಸೇವೆ ಆರಂಭವಾಗಲಿದೆ. ಮೇ 25 ರಿಂದ ದೇಶಿಯ ವಿಮಾನಯಾನ ಸಂಚಾರವೂ ಶುರುವಾಗಲಿದ್ದು, ಕೊರೊನಾ ಸೋಂಕು ಮತ್ತಷ್ಟು ಹೆಚ್ಚಳವಾಗುವ ಎಲ್ಲಾ ಸಾಧ್ಯತೆಗಳು ಇವೆ ಎನ್ನಲಾಗ್ತಿದೆ. ಈಗಾಗಲೇ ಸರ್ಕಾರಿ ಸಹಾಯದ ಪ್ರಯೋಜನ ಪಡೆಯಲು ಸರ್ಕಾರಿ ಕಚೇರಿಗಳಿಗೂ ಜನ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಸಾಮಾಜಿಕ ಅಂತರವೂ ಇಲ್ಲ, ಮಾಸ್ಕ್​ ಅಂತೂ ಇಲ್ಲವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಸ್​, ರೈಲು, ವಿಮಾನ ಸಂಚಾರ ಶುರುವಾದ ಮೇಲೆ ಕ್ವಾರಂಟೈನ್​ ವ್ಯವಸ್ಥೆ ತನ್ನ ರೂಪ ಬದಲಿಸಿಕೊಳ್ಳಲಿದೆ. ಅಂತಾರಾಜ್ಯಗಳಿಂದ sಆವಿರಾರು ಜನರು ಪ್ರಯಾಣ ಮಾಡಲಿದ್ದು, ಎಲ್ಲರನ್ನೂ ಸರ್ಕಾರ ಕ್ವಾರಂಟೈನ್​ ಮಾಡಿ ಉಸ್ತುವಾರಿ ನೋಡಿಕೊಳ್ಳುವುದು ಕಷ್ಟ ಎನ್ನುವ ನಿರ್ಧಾರಕ್ಕೆ ಬಂದಿದ್ದು, ಕರ್ನಾಟಕ ಸರ್ಕಾರವೂ ಸಾಂಸ್ಥಿಕ ಕ್ವಾರಂಟೈನ್​ ಬದಲಿಗೆ ಸ್ವಯಂ ಕ್ವಾರಂಟೈನ್​ ವ್ಯವಸ್ಥೆ ಜಾರಿ ಮಾಡಲು ಮುಂದಾಗಿದೆ. ಮನೆಗಳಲ್ಲಿಯೇ ಕ್ವಾರಂಟೈನ್​ ಮಾಡುವ ಉದ್ದೇಶ ಯಾವ ಮಟ್ಟಕ್ಕೆ ಫಲಪ್ರದ ಆಗಲಿದೆ ಎನ್ನುವ ಸಂಶಯವೂ ಮೂಡಿದೆ.

ಕಳೆದ ನಾಲ್ಕೈದು ದಿನಗಳ ಕೊರೊನಾ ಕೇಸ್​ಗಳನ್ನು ನೋಡುವುದಾದರೆ, ಮೇ 21 ರಂದು ಭಾರತದಲ್ಲಿ ಒಂದೇ ದಿನ ಸೋಂಕಿತರ ಸಂಖ್ಯೆ 6.088ಕ್ಕೆ ಏರಿಕೆಯಾಗಿದೆ. ಇದೇ ಮೊದಲ ಬಾರಿಗೆ ದಾಖಲೆಯ ಪ್ರಮಾಣ ಏರಿಕೆ ಅಂಕಿಸಂಖ್ಯೆ ದೇಶದ ಜನರನ್ನು ಬೆಚ್ಚಿ ಬೀಳಿಸಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1 ಲಕ್ಷದ 18 ಸಾವಿರದ 447ಕ್ಕೆ ಏರಿಕೆ ಆದಂತಾಗಿದೆ. ನಿನ್ನೆ ಗುರುವಾರ ಒಂದೇ ದಿನ ಕೊರೊನಾದಿಂದ ಸತ್ತವರು ಸಂಖ್ಯೆ 148 ಆಗಿದ್ದು, ಇದುವರೆಗೂ ಕೊರೊನಾದಿಂದ ದೇಶದಲ್ಲಿ sಆವನ್ನಪ್ಪಿದ ಜನರ ಸಂಖ್ಯೆ 3,583 ಆಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದೆ.

ಮೇ 20 ರಂದು ಭಾರತದಲ್ಲಿ ಪತ್ತೆಯಾದ ಹೊಸ ಕೊರೊನಾ ಕೇಸ್​ 5553, ಮೇ 19ರಂದು 6147, ಮೇ 18 ರಂದು 4630 ಪ್ರಕರಣ, ಮೇ 17 ರಂದು 5050 ಕೇಸ್​ಗಳು ಹೀಗೆ ಪ್ರತಿದಿನ ಸರಾಸರಿ 5 ಸಾವಿರ ಗಡಿಯಾಚೆಗೆ ಸೋಂಕು ಹೆಚ್ಚಳವಾಗುತ್ತಿದೆ. ಎಲ್ಲರೂ ಮುಂಬೈನಿಂದ ಬಂದವರು. ಬೇರೆ ರಾಜ್ಯಗಳಿಂದ ಬಂದವರು ಎಂದು ಎಲ್ಲಾ ರಾಜ್ಯಗಳು ಸಬೂಬು ಹೇಳುತ್ತಿವೆ. ಅಂದರೆ ಸಂಚಾರ ಶುರುವಾದ ಬಳಿಕ ಸೋಂಕು ಹೆಚ್ಚಳವಾಗುತ್ತಿದೆ. ಆದರೆ ಇದಿಗ ಎಲ್ಲಾ ರೀತಿಯ ಸಾರಿಗೆ ವ್ಯವಸ್ಥೆ ಮುಕ್ತವಾಗುತ್ತಿದೆ. ಇನ್ನು ಮುಂದೆ ಮತ್ತಷ್ಟೂ ಸೋಂಕು ಹೆಚ್ಚಳವಾಗುವ ಸಾಧ್ಯತೆ ನಿಚ್ಛಳವಾಗಿದೆ.

Leave a Reply