ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡ ಕೊರೊನಾ ಸೋಂಕು..!

ಡಿಜಿಟಲ್ ಕನ್ನಡ ಟೀಮ್:

ಕರ್ನಾಟದಲ್ಲಿ ಇಂದು ಮಧ್ಯಾಹ್ನದ ತನಕ ಬರೋಬ್ಬರಿ 196 ಹೊಸ ಕೊರೊನಾ ಸೋಂಕುಗಳು ಪತ್ತೆಯಾಗಿದ್ದು, ಸಂಜೆ ಬುಲೆಟಿನ್​ನಲ್ಲಿ ಮತ್ತಷ್ಟು ಸೋಂಕು ಪತ್ತೆಯಾಗಲಿದೆ ಎನ್ನಲಾಗಿದೆ. ಇಲ್ಲೀವರೆಗೂ 50-60 ಸೋಂಕು ಪತ್ತೆಯಾಗುತ್ತಿದ್ದು, ಆ ಬಳಿಕ 150ರ ಆಸುಪಾಸಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿತ್ತು. ಇಂದು ಮಧ್ಯಾಹ್ನದ ವೇಳೆಗೆ 196 ಕೇಸ್​ಗಳು ಪತ್ತೆಯಾಗಿವೆ. ಬಹುತೇಕ ಎಲ್ಲರಿಗೂ ಮಹಾರಾಷ್ಟ್ರದ ಸಂಪರ್ಕ ಇದೆ. ಎಲ್ಲರನ್ನೂ ಕ್ವಾರಂಟೈನ್​ ಮಾಡಲಾಗಿದ್ದು, ಅಲ್ಲಿಂದಲೇ ಚಿಕಿತ್ಸೆಗೆ ರವಾನೆ ಮಾಡಲಾಗಿದೆ ಎನ್ನುವುದು ಒಂದೇ ಸಮಾಧಾನದ ವಿಚಾರ. ಆದರೂ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಪ್ರಮಾಣದಲ್ಲಿ ದಾಖಲೆ ಸೃಷ್ಟಿ ಮಾಡುತ್ತಿದ್ದು ರಾಜ್ಯದ ಜನರನ್ನು ಆತಂಕಕ್ಕೆ ದೂಡಿದೆ.

ಇಂದಿನ ಮಧ್ಯಾಹ್ನದ ವರದಿಯಂತೆ ನಿನ್ನೆ ಸಂಜೆಯಿಂದ ಮಧ್ಯಾಹ್ನದವರೆಗೆ 196 ಕೇಸ್‌ ದಾಖಲಾಗಿದೆ. ರಾಜ್ಯದಲ್ಲಿ ಒಂದು ದಿನದಲ್ಲಿ ದಾಖಲಾದ ಗರಿಷ್ಟ ಸೋಂಕಿತರ ಸಂಖ್ಯೆ ಇದಾಗಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಒಟ್ಟು 1939ಕ್ಕೆ ಏರಿಕೆಯಾಗಿದೆ. ಯಾದಗಿರಿಯಲ್ಲಿ ಬರೋಬ್ಬರಿ 72 ಕೇಸ್ ಪಾಸಿಟಿವ್ ಬಂದಿದೆ. ರಾಯಚೂರಿಗೆ ಕೊರೊನಾ ಬಿಗ್ ಶಾಕ್ ಕೊಟ್ಟಿದ್ದು 38 ಪಾಸಿಟಿವ್ ಕೇಸ್ ಬಂದಿದೆ. ಇನ್ನು ಸಕ್ಕರೆ ನಾಡು ಮಂಡ್ಯದಲ್ಲಿ 28 ಜನರಲ್ಲಿ ಸೋಂಕು ಪತ್ತೆಯಾಗಿದೆ. ಚಿಕ್ಕಬಳ್ಳಾಪುರದಲ್ಲಿ 20 ಜನರು ಸೋಂಕಿಗೆ ತುತ್ತಾಗಿದ್ದಾರೆ. ಗದಗದಲ್ಲಿ 15 ಕೇಸ್ ಪತ್ತೆಯಾಗಿದೆ. ಕೋಲಾರ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ತಲಾ 2 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಇನ್ನೂ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 42ಕ್ಕೆ ಏರಿಕೆಯಾಗಿದೆ.

ಇಂದಿನ ವರದಿಯಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಬರೊಬ್ಬರಿ 72 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 84ಕ್ಕೆ ಏರಿಕೆಯಾಗಿದೆ. ಇಂದು ದೃಢಪಟ್ಟ 72 ಜನರೂ ಮುಂಬೈನಿಂದ ಜಿಲ್ಲೆಗೆ ವಾಪಸ್​ ಬಂದವರಾಗಿದ್ದಾರೆ. ಕೊರೊನಾ ಸೋಂಕಿತರನ್ನ ಕೋವಿಡ್​ ಆಸ್ಪತ್ರೆಯ ಐಸೋಲೆಷನ್ ವಾರ್ಡ್​ಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗ್ತಿದೆ. ಮುಂಬೈನಲ್ಲಿ ಕೆಲಸ ಅರಸಿಕೊಂಡು ಹೋಗಿದ್ದ ಯಾದಗಿರಿ ವಲಸೆ ಕಾರ್ಮಿಕರು ಇತ್ತೀಚಿಗೆ ಲಾಕ್​ಡೌನ್​ ಸಡಿಲಿಕೆ ಆದ ಬಳಿಕ ಜಿಲ್ಲೆಗೆ ಆಗಮಿಸಿದ್ದರು. ಎಲ್ಲರನ್ನೂ ಸರ್ಕಾರಿ ಹಾಸ್ಟೆಲ್​, ವಸತಿ ಶಾಲೆಗಳಲ್ಲಿ ಕ್ವಾರಂಟೈನ್​ ಮಾಡಲಾಗಿತ್ತು. ಇದೀಗ ಕೊರೊನಾ ಪರೀಕ್ಷೆಯಲ್ಲಿ 72 ಮಂದಿಗೆ ಸೋಂಕು ಇರೋದು ಖಚಿತವಾಗಿದೆ.

ಬೆಂಗಳೂರಿನಲ್ಲಿ ಕೊರೊನಾ ರಣಕೇಕೆ ಕಡಿಮೆ ಆಗಿದೆ. ಆದರೆ 4 ತಿಂಗಳ ಪುಟ್ಟಮಗುವಿನಲ್ಲಿ ಸೋಂಕು ಪತ್ತೆಯಾಗಿದೆ. ದೆಹಲಿಯಿಂದ ವಾಪಸ್​ ಬಂದಿದ್ದ ಕುಟುಂಬದ ಮಗು ಇದಾಗಿದ್ದು, ಸೋಂಕಿತ ಮಗು ಪೋಷಕರ ಜೊತೆ ದೆಹಲಿ ಸಂಪರ್ಕ ಹೊಂದಿದೆ. ರೋಗಿ ಸಂಖ್ಯೆ 1793 ಎಂದು ಸೋಂಕಿತ ಮಗುವನ್ನು ಗುರುತಿಸಲಾಗಿದೆ. ಅತ್ತ ಯಾದಗಿರಿಯಲ್ಲೂ 1 ವರ್ಷದ ಮಗುವಿನಲ್ಲೂ ಸೋಂಕು ಪತ್ತೆಯಾಗಿದೆ. ರಾಯಚೂರು ಜಿಲ್ಲೆಯಲ್ಲೂ 38 ಹೊಸ ಕೇಸ್ ದಾಖಲು ಆಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟು 65ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಿಂದ ಬಂದವರು ಸೋಂಕಿಗೆ ತುತ್ತಾಗುತ್ತಿದ್ದು ಜಿಲ್ಲೆಯ ಜನರನ್ನು ಆತಂಕಕ್ಕೆ ಈಡು ಮಾಡಿದೆ.

Leave a Reply