ಆರೋಗ್ಯ ಅಧಿಕಾರಿಗಳ ಯಡವಟ್ಟು, ಜನರಲ್ಲಿ ಆತಂಕ

ಡಿಜಿಟಲ್ ಕನ್ನಡ ಟೀಮ್:

ಹೊರ ರಾಜ್ಯಗಳಿಂದ ಬಂದವರನ್ನು ಕ್ವಾರಂಟೈನ್‌ ಮಾಡಿ, ಅವರ ಪರೀಕ್ಷೆ ಫಲಿತಾಂಶ ನೆಗೆಟಿವ್ ಬರುವ ಮುನ್ನ ಮನೆಗೆ ಕಳಿಸಿ ಆರೋಗ್ಯ ಇಲಾಖೆ ಅಧಿಕಾರಿಗಳು ಯಡವಟ್ಟು ಮಾಡಿದ್ದಾರೆ. ಪರಿಣಾಮ ಜನರು ಆತಂಕಕ್ಕೆ ಸಿಲುಕಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ಅತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ನಡುವೆ ಆರೋಗ್ಯ ಅಧಿಕಾರಗಳ ಬೇಜವಾಬ್ದಾರಿಯುತ ಕೆಲಸ ಜನರನ್ನು ಬೆಚ್ಚಿ ಬೀಳುವಂತೆಯೂ ಮಾಡಿದೆ. ಬೆಳಗಾವಿ ಹಾಗೂ ಮಂಡ್ಯದಲ್ಲಿ ನಡೆದಿರುವ ಘಟನೆ ಆರೋಗ್ಯ ಅಧಿಕಾರಿಗಳ ಮೇಲಿನ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ. ಈ ಎಡವಟ್ಟು ಕೆಲಸ ಕೊರೊನಾದಿಂದ ಪಾರಾಗಲು ಯಾರಿಗೆ ಸಾಧ್ಯ ಎನ್ನುವ ಅನುಮಾನವನ್ನು ಸೃಷ್ಟಿಸುತ್ತಿದೆ.

ಬೆಳಗಾವಿಯ ಚಿಕ್ಕೋಡಿಯಲ್ಲಿ ಆರೋಗ್ಯ ಅಧಿಕಾರಿಗಳು ಮಹಾನ್​ ಎಡವಟ್ಟು ಮಾಡಿದ್ದಾರೆ. ಜಾರ್ಖಂಡ್​ನಿಂದ ಅಥಣಿಗೆ ವಾಪಸ್​ ಆಗಿದ್ದ ಜನರಲ್ಲಿ 13 ಜನರಿಗೆ ಸೋಂಕು ಖಚಿತವಾಗಿದೆ. ಜಾರ್ಖಂಡ್‌ನ ಶಿಖರ್ಜಿಗೆ ಧಾರ್ಮಿಕ ಯಾತ್ರೆಗೆ ತೆರಳಿದ್ದರು. ಮೇ 6 ರಂದು ಜಾರ್ಖಂಡ್‌ನಿಂದ ಅಥಣಿಗೆ ವಾಪಸ್ ಆಗಿದ್ದ ಬಳಿಕ 44 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿದೆ. ಆ 44 ಜನರಲ್ಲಿ 13 ಜನರನ್ನು ನೆಗೆಟಿವ್​ ಬರುವ ಮುನ್ನವೇ ಮನೆಗೆ ವಾಪಸ್​ ಕಳುಹಿಸಿರುವುದು ಆತಂಕ ಮೂಡುವಂತೆ ಮಾಡಿದೆ. ಅಥಣಿ ತಾಲೂಕಿನ ನಂದಗಾಂವ, ಸವದಿ ಗ್ರಾಮದ ನಿವಾಸಿಗಳು
ಜಾರ್ಖಂಡ್ ರಾಜ್ಯದಿಂದ ಬಂದವರನ್ನ ಕ್ವಾರಂಟೈನ್ ಮಾಡಿದ ಬಳಿಕ ಅಥಣಿ ತಹಶೀಲ್ದಾರ್ ಬೇಜವಾಬ್ದಾರಿಯಿಂದ 4 ಗ್ರಾಮಗಳಿಗೆ ಸಂಕಷ್ಟ ಎದುರಾಗಿದೆ.

ಮೇ 20ಕ್ಕೆ ಊರಿಗೆ ತೆರಳಿದ್ದ ಶಂಕಿತರು, ತಮ್ಮ ಊರು ಸೇರಿದಂತೆ ಅಥಣಿ ತಾಲೂಕಿನ ಮಾರುಕಟ್ಟೆ ಸೇರಿದಂತೆ ಅಕ್ಕಪಕ್ಕದ ಗ್ರಾಮದಲ್ಲೂ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದರು. ಆದರೆ ಇಂದು 13 ಜನರಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಡಿಸಿಎಂ ಲಕ್ಷ್ಮಣ ಸವಧಿ ಗ್ರಾಮವಾದ ಅಥಣಿ ತಾಲೂಕಿನ ಸವದಿ ಗ್ರಾಮದ 8 ಜನ ಹಾಗೂ ಬೆಳವಕ್ಕಿ ಗ್ರಾಮದ ಓರ್ವ, ನಂದಗಾಂವದ 3 ಮಂದಿ, ಝುಂಜರವಾಡದ ಒಬ್ಬರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಇದೀಗ ನೆರೆ ಹೊರೆಯ ಗ್ರಾಮಗಳಿಗೆ ಅಕ್ಕಪಕ್ಕದ ಗ್ರಾಮಸ್ಥರಿಗೆ ಸಂಕಷ್ಟ ಎದುರಾಗಿದೆ.

ಮಂಡ್ಯದಲ್ಲಿ 7 ವರ್ಷದ ಬಾಲಕಿಗೆ ಸೋಂಕು ಬಂದಿತ್ತು. ಆದರೆ ಹಾವೇರಿಯ ರಾಣೆಬೆನ್ನೂರಿನ 11 ವರ್ಷದ ಬಾಲಕಿಗೆ ಸೋಂಕು ತಗುಲಿದೆ ಎಂದು ಮಾಜಿ ಸಚಿವ ಸಿ.ಎಸ್​ ಪುಟ್ಟರಾಜು ಅವರ ಹುಟ್ಟೂರು ಚಿನಕುರಳಿಯನ್ನು ಸೀಲ್​ಡೌನ್​ ಮಾಡಲಾಗಿತ್ತು. ಇದೀಗ ಮಂಡ್ಯ ಜಿಲ್ಲಾ ಆರೋಗ್ಯ ಅಧಿಕಾರಿ ಮಂಚೇಗೌಡ ಸ್ಪಷ್ಟನೆ ನೀಡಿದ್ದು, ತಾಂತ್ರಿಕ ದೋಷದಿಂದ ತಪ್ಪಾಗಿದೆ. ಹೆಲ್ತ್ ಬುಲೆಟಿನ್​ನಲ್ಲಿ 7 ವೃಷದ ಬಾಲಕಿ ಮತ್ತು ಮುಂಬೈ ಟ್ರಾವೆಲ್ ಹಿಸ್ಟರಿ ಎಂದು ತೋರಿಸಲಾಗಿತ್ತು. ಆದರೆ 11 ವರ್ಷದ ರಾಣೆಬೆನ್ನೂರಿನ ಬಾಲಕಿಗೆ ಚಿಕಿತ್ಸೆ ಕೊಡಲು ಕರೆದೊಯ್ಯಲಾಗಿತ್ತು. ತಾಂತ್ರಿಕ ದೋಷ ಅಷ್ಟೇ ಎಡವಟ್ಟು ಆಗಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಮಾಜಿ ಸಚಿವ ಸಿ.ಎಸ್​ ಪುಟ್ಟರಾಜು ಜಿಲ್ಲಾಡಳಿತ ವಿರುದ್ಧ ಆಕ್ರೋಶ ಹೊರಹಾಕಿದ್ದು, ಮೇಲುಕೋಟೆ ಕ್ಷೇತ್ರ ಶಾಸಕ ಸಿ.ಎಸ್​ ಪುಟ್ಟರಾಜು ಸೋಂಕಿಲ್ಲದ ಬಾಲಕಿಗೆ ಚಿಕಿತ್ಸೆ ಕೊಡಲು ಕರೆದುಕೊಂಡಿದ್ದು ಹೋಗಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಮಂಡ್ಯ DHO ಮಂಚೇಗೌಡ ಸ್ಪಷ್ಟನೆಯನ್ನು ಒಪ್ಪದ ಶಾಸಕ ಪುಟ್ಟರಾಜು, ಅಮಾಯಕ ಬಾಲಕಿ ಜೀವನದ ಜೊತೆ ಚೆಲ್ಲಾಟವಾಡದಂತೆ ಎಚ್ಚರಿಕೆ ಕೊಟ್ಟಿದ್ದಾಎ. ಜೊತೆಗೆ ಪ್ರಕರಣದ ಸಮಗ್ರ ತನಿಖೆಗೂ ಒತ್ತಾಯ ಮಾಡಿದ್ದಾರೆ.

ಒಟ್ಟಾರೆ, ಆರೋಗ್ಯ ಅಧಿಕಾರಿಗಳ ಎಡವಟ್ಟು ರಾಜ್ಯದ ಜನರನ್ನು ಕಂಗಾಲಾಗುವಂತೆ ಮಾಡಿದೆ. ಬೆಳಗಾವಿಯಲ್ಲಿ 13 ಜನ ಸೋಂಕಿತರ ವರದಿ ಬರುವ ಮುನ್ನವೇ ಊರುಗಳಿಗೆ ಕಳುಹಿಸಿದ್ದಾರೆ. ಮಂಡ್ಯದಲ್ಲಿ ಕೊರೊನಾ ಬಂದಿದ್ದು ಯಾರಿಗೂ ಚಿಕಿತ್ಸೆ ಕೊಟ್ಟಿದ್ದು ಯಾರಿಗೋ ಎನ್ನುವಂತಾಗಿದೆ. ಇನ್ನೂ ಚಿಕ್ಕಮಗಳೂರಿನ ವೈದ್ಯರೊಬ್ಬರಿಗೆ ಸೋಂಕು ಬಂದಿದೆ ಎಂದು ದೊಡ್ಡ ಸುದ್ದಿಯಾಗಿತ್ತು. ಆ ಬಳಿಕ 800ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್​ ಮಾಡಲಾಗಿತ್ತು. ಆರೇಳು ಬಾರಿ ತಪಾಸಣೆ ನಡೆಸಿದ ಬಳಿಕ ಕೊರೊನಾ ಸೋಂಕಿಲ್ಲ ಎಂದು ಖಚಿತವಾಗಿತ್ತು. ನಂತರ ಜಿಲ್ಲಾಡಳಿತ ನಿಟ್ಟುಸಿರು ಬಿಟ್ಟಿದೆ. ಆರೋಗ್ಯ ಅಧಿಕಾರಿಗಳೇ ಜವಾಬ್ದಾರಿ ಮರೆತು ಕೆಲಸ ಮಾಡಿದರೆ ರಾಜ್ಯ ಮತ್ತಷ್ಟು ಸಮಸ್ಯೆಗೆ ಸಿಲುಕುವುದು ಗ್ಯಾರಂಟಿ ಎನ್ನಲಾಗ್ತಿದೆ.

Leave a Reply