ಮಂಡ್ಯದಲ್ಲಿ ರಣಾಂಗಣವಾದ ಜಿಲ್ಲಾಡಳಿತ ಸಭಾಂಗಣ..!

ಡಿಜಿಟಲ್ ಕನ್ನಡ ಟೀಮ್:

ಮಂಡ್ಯದ ಜಿಲ್ಲಾಡಳಿತ ಸಭಾಂಗಣ ಬುಧವಾರ ಅಕ್ಷರಶಃ ರಣಾಂಗಣವಾಗಿದ್ದು, ಸಚಿವ ನಾರಾಯಣ ಗೌಡರನ್ನು ಮಂಡ್ಯದ ಇತರೆ ಶಾಸಕರು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೊರೊನಾ ಸಂಕಷ್ಟದಲ್ಲೂ ಮಂಡ್ಯದಲ್ಲಿ ರಾಜಕೀಯ ಮೇಲಾಟ ಜೋರಾಗಿ ನಡೆಯುತ್ತಿದೆ. ಕೊರೊನಾ ವಿಚಾರದಲ್ಲಿ ಸಚಿವರು ಏಕಚಕ್ರಾಧಿಪತಿಯಂತೆ ವರ್ತಿಸುತ್ತಿದ್ದಾರೆ ಎಂದು ಜಿಲ್ಲೆಯ ಜೆಡಿಎಸ್ ಶಾಸಕರು ಸಚಿವರ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಸಚಿವರು ಕೊರೊನಾ ವಿಚಾರದಲ್ಲಿ ನಮ್ಮನ್ನು ಯಾವುದಕ್ಕೂ ಕರೆಯದೆ ತನ್ನ ಮೂಗಿನ ನೇರಕ್ಕೆ ಕೆಲಸ ಮಾಡುತ್ತಿದ್ದಾರೆ. ಇದೇ ಕಾರಣದಿಂದ ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ ಎಂದು ಟೀಕಿಸಿದ್ದರು. ಅದಾದ ಬಳಿಕ ಇಂದು ಜಿಲ್ಲಾಡಳಿತ ಸಭಾಂಗಣದಲ್ಲಿ ನಡೆದ ಸಭೆ ರಣಾಂಗಣವಾಗಿ ಮಾರ್ಪಾಡಾಯಿತು.

ಮಂಡ್ಯ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಡಳಿತದೊಂದಿಗೆ ಸಭೆಯಲ್ಲೂ ಜೆಡಿಎಸ್ ಶಾಸಕರ ಮುನಿಸು ಮುಂದುವರಿದಿತ್ತು. ಮಧ್ಯಾಹ್ನ 3 ಗಂಟೆಗೆ ನಿಗಧಿಯಾಗಿದ್ದ ಸಭೆಗೆ 3.40ಕ್ಕೆ ಜೆಡಿಎಸ್ ಶಾಸಕರು ಬಂದರು. ಆದರೂ ಸಭೆ ನಡೆಯುತ್ತಿದ್ದ ಸಭಾಂಗಣಕ್ಕೆ ಬಾರದೆ ಕೆಳಗಡೆಯೇ ಇದ್ದರು. ಆ ಬಳಿಕ ಡಿಸಿ ಡಾ. ವೆಂಕಟೇಶ್ ಸೂಚನೆ ಮೇರೆಗೆ ಎಸಿ ಸೂರಜ್ ಸಂಧಾನ ಮಾಡಿಕೊಂಡು ಜೆಡಿಎಸ್ ಶಾಸಕರನ್ನು ಕರೆತಂದರು. ಬಳಿಕ ಕೋವಿಡ್ 19 ಸಭೆಯಲ್ಲಿ ನಡೆದಿದ್ದು‌ ಅಕ್ಷರಶಃ ಮಾತಿನ ಯುದ್ಧ.‌

ಜೆಡಿಎಸ್ ಶಾಸಕರು ಆಗಮಿಸಿದ ಬಳಿಕ ಸಭೆ ಮುಂದುವರಿಸಿದ ಸಚಿವ ನಾರಾಯಣಗೌಡ ವಿರುದ್ಧ ಕೋವಿಡ್ 19 ವಿಚಾರದಲ್ಲಿ ಜಿಲ್ಲೆಯ ಶಾಸಕರನ್ನು‌ ಕಡೆಗಣಿಸ್ತಿರೋದಕ್ಕೆ‌ ಅಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯ ಶಾಸಕರೊಂದಿಗೆ ಕೊರೊನಾ ಸ್ಥಿತಿಗತಿ‌ ಮತ್ತು‌ ಸಮಸ್ಯೆ ಬಗ್ಗೆ ಚರ್ಚೆ ಮಾಡ್ತಿಲ್ಲ ಸಚಿವರು ಎಂದು ಕಿಡಿಕಾರಿದರು. ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಶಾಸಕರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಜೆಡಿಎಸ್ ಶಾಸಕರು ಗುಡುಗಿದ್ರು. ಈ ವೇಳೆ ಸಭೆಯಲ್ಲಿ ಮಾತಿನ‌ ಚಕಮಕಿ ನಡೀತು.

ಸಚಿವ ನಾರಾಯಗೌಡ ಹಾಗೂ ಜೆಡಿಎಸ್ ಶಾಸಕರ ಜೊತೆ ಮಾತಿನ ಚಕಮಕಿ ಏಕವಚನಕ್ಕೂ ತಿರುಗಿಬಿಡ್ತು. ನೀನ್ಯಾವನು ಕೇಳೋಕೆ ಹೋಗಲೇ..! ಎಂದು ಸಚಿವರ ಜೊತೆ ಶಾಸಕರ ವಾಗ್ವಾದ ನಡೆಸಿದ್ರು. ಸಚಿವ ನಾರಾಯಣ ಗೌಡ ಜೊತೆಗೆ ಶಾಸಕರು ಏಕವಚನದಲ್ಲಿ ವಾಗ್ದಾಳಿ ನಡೆಸುತ್ತಿದ್ದರೆ ಸಭೆಯಲ್ಲಿದ್ದ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದರು. ಶಾಸಕರಾದ ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ ಸಚಿವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ್ರು. ಅಂತಿಮವಾಗಿ ಕೋವಿಡ್ 19 ಸಭೆ ಗೊಂದಲದಲ್ಲೇ ಮುಗೀತು.

ಮಂಡ್ಯ ಜಿಲ್ಲಾಧಿಕಾರಿ ಸಭಾಂಗಣ ರಣಾಂಗಣವಾದ ಬಗ್ಗೆ ಸಭೆ ಬಳಿಕ ಮಾತನಾಡಿದ ಸಚಿವ ನಾರಾಯಣಗೌಡ, ನಮ್ಮದು ಕೋಳಿ ಜಗಳ ಅಷ್ಟೆ. ನಾವೆಲ್ಲರೂ ಈ ಹಿಂದೆ ಒಂದೇ ಪಕ್ಷದಲ್ಲಿ ಇದ್ದವರು. ಒಂದೇ ಕಾರಿನಲ್ಲಿ ಓಡಾಡುತ್ತಿದ್ದವರು. ಕೊರೊನಾ ವಿಚಾರದಲ್ಲಿ ಸಣ್ಣ ಪುಟ್ಟ ನ್ಯೂನತೆಗಳು‌ ಇದ್ದವು. ಇಂದಿನ ಸಭೆಯಲ್ಲಿ ಎಲ್ಲವನ್ನೂ ಬಗೆಹರಿಸಿಕೊಂಡಿದ್ದೇವೆ. ಉದ್ಬವ ಆಗಿದ್ದ ಕೆಲವು ಅನುಮಾನಗಳಿಗೆ ಈ ಸಭೆಯಲ್ಲಿ ತೆರೆಬಿದ್ದಿದೆ. ಇಂದಿನ ಸಭೆಯಲ್ಲಿ ಯಾವುದೇ ಜಗಳವಾಗಿಲ್ಲ. ಕೇವಲ ಮಾತುಕತೆ ನಡೀತು ಅಷ್ಟೇ. ನಾವು ಮಂಡ್ಯದವರಲ್ಲವಾ..? ಅದಕ್ಕೆ ಸ್ವಲ್ಪ ಹಾಗೆ ಆಡ್ತಿವಿ. ಇದೆಲ್ಲಾ ರಾಜಕಾರದಲ್ಲಿ ಸಾಮಾನ್ಯ ಎಂದು ರಣಾಂಗಣ ತಣಿಸುವ ಕೆಲಸ ಮಾಡಿದ್ದಾರೆ. ಒಟ್ಟಾರೆ ನಾರಾಯಣ ಗೌಡರ ಏಕಚಕ್ರಾಧಿಪತ್ಯದ ವಿರುದ್ಧ ಸಿಡಿದೆದ್ದ ಜೆಡಿಎಸ್ ಶಾಸಕರು ಸಚಿವರನ್ನು ಸರಿದಾರಿಗೆ ತರುವ ಪ್ರಯತ್ನ ನಡೆಸಿದ್ದಾರೆ. ಮುಂದಿನ ದಿನಗಳ ಹೊಂದಾಣಿಕೆ ಹೇಗಿರಲಿದೆ ಎನ್ನುವುದಕ್ಕೆ ಉತ್ತರ ಸಿಗಬೇಕಿದೆ.

Leave a Reply