ಕೊರೊನಾ ಅಲ್ಲ ಮಿಡತೆಯಿಂದ ರೈತರನ್ನು ರಕ್ಷಿಸಿ..!

ಡಿಜಿಟಲ್ ಕನ್ನಡ ಟೀಮ್:

ದೇಶದಲ್ಲಿ ಕೊರೊನಾ ಸೋಂಕು ಉಲ್ಬಣವಾಗುತ್ತಲೇ ಇದೆ. ಆದರೆ ಈ ಬಾರಿ ಜನರು ನಗರಗಳನ್ನು ತೊರೆದು ಹಳ್ಳಿಗಳನ್ನು ಸೇರಿರುವ ಕಾರಣ ಕೃಷಿ ಚಟುವಟಿಕೆ ಉತ್ತಮವಾಗಲಿದೆ ಎಂದು ಆಹಾರ ತಜ್ಞರು ನಿರೀಕ್ಷೆ ಮಾಡಿದ್ದರು. ಆದರೆ, ಇದೀಗ ಎದುರಾಗಿರುವ ಮಿಡತೆ ಹಾವಳಿ ರೈತ ವರ್ಗವನ್ನು ಸಂಕಷ್ಟಕ್ಕೆ ದೂಡುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ. ಆಫ್ರಿಕಾ ದೇಶದಿಂದ ವಲಸೆ ಬಂದಿರುವ ಮಿಡತೆಗಳ ಹಿಂಡು ಪಾಕಿಸ್ತಾನದ ಮೂಲಕ ಭಾರತಕ್ಕೆ ಪ್ರವೇಶ ಪಡೆದಿದ್ದು ಬೆಳೆಗಳನ್ನು ಸರ್ವನಾಶ ಮಾಡುವ ಸಾಧ್ಯತೆಯಿದೆ.

ಈಗಾಗಲೇ ಉತ್ತರ ಭಾರತದ ರೈತರು ಮಿಡತೆ ಹಾವಳಿಯಿಂದ ತತ್ತರಿಸಿದ್ದಾರೆ. ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಮಿಡತೆ ಹಾವಳಿ ವ್ಯಾಪಕವಾಗಿದೆ. ರೈತರ ಬೆಳೆಯನ್ನು ಕೆಲವೇ ನಿಮಿಷದಲ್ಲಿ ಸ್ವಾಹ ಮಾಡಿ ಮುಂದೆ ಸಾಗುವ ಮಿಡತೆ ಹಿಂಡು, ಉತ್ತರ ಭಾರತದ 4 ರಾಜ್ಯಗಳಲ್ಲಿ 47,308 ಹೆಕ್ಟೇರ್​ ಅಂದರೆ 1 ಲಕ್ಷದ 16 ಸಾವಿರದ 900 ಎಕರೆ ಬೆಳೆಯ ಮೇಲೆ ಮಿಡತೆ ಹಿಂಡು ನಿಯಂತ್ರಣ ಮಾಡಿವೆ ಎಂದು ಸ್ವತಃ ಕೇಂದ್ರ ಕೃಷಿ ಸಚಿವರೇ ಬೆಚ್ಚಿ ಬೀಳುವ ಮಾಹಿತಿ ನೀಡಿದ್ದಾರೆ.

ರಾಜಸ್ಥಾನ, ಗುಜರಾತ್​, ಪಂಜಾಬ್​, ಮಧ್ಯಪ್ರದೇಶದಲ್ಲಿ ಮಿಡತೆ ಹಾವಳಿ ಹೆಚ್ಚಾಗಿದೆ. ರಾಜಸ್ಥಾನದ 21 ಜಿಲ್ಲೆ, ಮಧ್ಯಪ್ರದೇಶದ 18 ಜಿಲ್ಲೆ, ಗುಜರಾತ್​ನ 2 ಜಿಲ್ಲೆ, ಪಂಜಾಬ್​ನ ಒಂದು ಜಿಲ್ಲೆಯಲ್ಲಿ ಮಿಡತೆ ಹಿಂಡು ದಾಳಿ ಮಾಡಿವೆ. ಇದೀಗ ಉತ್ತರ ಪ್ರದೇಶ, ಮಹಾರಾಷ್ಟ್ರದ ಕಡೆಗೂ ಮಿಡತೆ ದಾಂಗುಡಿ ಇಟ್ಟಿದ್ದು, ಗಾಳಿ ಬೀಸಿದಂತೆಲ್ಲಾ ವೇಗವಾಗಿ ಮಾರಕ ಮಿಡತೆ ಚಲಿಸುತ್ತಿವೆ. ಕಾರಿಫ್​ ಬೆಳೆ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಆದರೆ ಮಾನ್ಸೂನ್​ ಮಳೆ ಶುರುವಾದ ಬಳಿಕ ನಿಯಂತ್ರಣ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಕೃಷಿ ಅಧ್ಯಯನ ಸಂಸ್ಥೆ ನಿರ್ದೇಶಕರ ತ್ರಿಲೋಕ್​ ಚಂದ್ರ ಮಹಾಪಾತ್ರ ಮಾಹಿತಿ ಕೊಟ್ಟಿದ್ದಾರೆ.

ಇನ್ನೂ ಮಹಾರಾಷ್ಟ್ರದಿಂದ ಕರ್ನಾಟಕದತ್ತ ಮಿಡತೆ ಹಿಂಡು ವಲಸೆ ಬರುತ್ತಿದೆ. ನಾಗ್ಪುರ ಸುತ್ತಮುತ್ತ ಮಿಡತೆ ಬೀಡು ಬಿಟ್ಟಿದ್ದು, ಬೀದರ್ ಜಿಲ್ಲೆಗೆ ದಾಳಿ ಮಾಡುವ ಸಂಭವ ಹೆಚ್ಚಾಗಿದೆ. ಮಿಡತೆಯಿಂದ ಬೆಳೆ ಉಳಿಸಿಕೊಳ್ಳಲು ಮುಂದಾಗುವಂತೆ ರೈತರಿಗೆ ಬೀದರ್​ ಡಿಸಿ ಕರೆ ಕೊಟ್ಟಿದ್ದಾರೆ. ಮುಂಜಾಗ್ರತೆ ಕ್ರಮ ವಹಿಸಲು ಅರಣ್ಯಾಧಿಕಾರಿಗಳಿಗೂ ಸೂಚನೆ ಕೊಟ್ಟಿದ್ದಾರೆ. ಜೊತೆಗೆ ಬೀದರ್ ಜಿಲ್ಲೆಯ ಬೆಳೆ ಸಮೀಕ್ಷೆ ಮಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದು, ಮಿಡತೆ ಬಗ್ಗೆ ಕೀಟ ವಿಜ್ಞಾನಿಗಳಿಂದಲೂ ಮಾಹಿತಿ ಕೋರಿದ್ದಾರೆ. ಇನ್ನೂ ಬಿಸಿಲು ಹೆಚ್ಚಾಗಿರುವ ಪ್ರದೇಶಗಳತ್ತ ಮಿಡತೆ ಪಯಣ ಮಾಡುವ ಸಾಧ್ಯತೆಯಿದೆ ಎಂದು ಬೀದರ್​ ಜಿಲ್ಲಾಧಿಕಾರಿ ಹೆಚ್. ಆರ್. ಮಹದೇವ್ ಮಾಹಿತಿ ನೀಡಿದ್ದಾರೆ.

ರೈತರ ಬೆಳೆ ನಾಶ ಆಗುವ ಬಗ್ಗೆ ವಿರೋಧ ಪಕ್ಷಗಳು ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದ್ದು, ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯರಿಂದ ಟ್ವೀಟ್ ಮೂಲಕ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಇನ್ನೂ ಸಿಎಂ ಬಿ.ಎಸ್​ ಯಡಿಯೂರಪ್ಪಗೆ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವ ಎಂ.ಬಿ ಪಾಟೀಲ್ ಒತ್ತಾಯ ಮಾಡಿದ್ದಾರೆ. ಉತ್ತರ ಭಾರತದಲ್ಲಿರುವ ರಕ್ಕಸ ಮಿಡತೆಗಳು ವಲಸೆ ಬರುತ್ತಿವೆ. ಈಗಾಗಲೇ ಮಹಾರಾಷ್ಟ್ರ ಪ್ರವೇಶಿಸಿದ್ದು ಕರ್ನಾಟಕಕ್ಕೂ ಆತಂಕವಿದೆ. ರೈತರು ಬೆಳೆದ ಬೆಳೆಯನ್ನು ಕ್ಷಣಾರ್ಧದಲ್ಲಿ ಬೆಳೆ ತಿಂದು ಮುಗಿಸುವ ಸಾಮರ್ಥ್ಯ ಈ ಮಿಡತೆ ಹಿಂಡುಗಳಿಗೆ ಇದೆ. ಒಮ್ಮೆ ದಾಳಿ ಮಾಡಿದರೆ ಭವಿಷ್ಯದಲ್ಲಿ ಆಹಾರ ಕೊರತೆಗೆ ಕಾರಣ ಆಗುತ್ತೆ. ಕೂಡಲೇ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಈ ಮಿಡತೆಗಳ ಹಿಂಡು ದಿನಕ್ಕೆ 150 ಕಿಲೋ ಮೀಟರ್​ ದೂರ ಹಾರಬಲ್ಲವು. ತನ್ನ ತೂಕದಷ್ಟೇ ಆಹಾರವನ್ನು ಸೇವಿಸಬಲ್ಲವು. ಒಂದು ಹಿಂಡು ಒಂದು ದಿನಕ್ಕೆ 35 ಸಾವಿರ ಜನ ಸೇವಿಸುವಷ್ಟು ಆಹಾರಧಾನ್ಯ ಒಮ್ಮೆಗೆ ತಿನ್ನಬಲ್ಲವಾಗಿವೆ. ಅದರಲ್ಲೂ
ಮುಂಬೈ-ಕರ್ನಾಟಕ ಭಾಗದಲ್ಲಿ ರೈತರಿಗೆ ಹೆಚ್ಚು ಹಾನಿಯಾಗುವ ಸಾಧ್ಯತೆ iದೆ. ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ರೈತರನ್ನು ರಕ್ಷಣೆ ಮಾಡುವ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್​ ಆಗ್ರಹ ಮಾಡಿದ್ದಾರೆ.

ಕರ್ನಾಟಕಕ್ಕೆ ರಕ್ಕಸ ಮಿಡತೆಗಳ ಭೀತಿ ವಿಚಾರ ಸರ್ಕಾರದ ಗಮನದಲ್ಲಿದೆ. ಕೃಷಿ ಇಲಾಖೆ ಹಾಗೂ ಜಲ ಸಂಪನ್ಮೂಲ ಇಲಾಖೆ ಜಂಟಿಯಾಗಿ ಸಭೆ ನಡೆಸಿ ಮಿಡತೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಜಲ ಸಂಪನ್ಮೂಲ ಖಾತೆ ಸಚಿವ ರಮೇಶ್​ ಜಾರಕಿಹೊಳಿ ಮೈಸೂರಿನಲ್ಲಿ ತಿಳಿಸಿದ್ದಾರೆ. ಮಿಡತೆಗಳ ಹಾವಳಿಯಿಂದ ಕೃಷಿ ಸಮುದಾಯವನ್ನು ರಕ್ಷಿಸಲು, ನಾಳೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದೇನೆ. ರೈತರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ಮಿಡತೆ ದಾಳಿಯನ್ನು ತಡೆಗಟ್ಟಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್​ ತಿಳಿಸಿದ್ದಾರೆ. ಒಟ್ಟಾರೆ, ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ಇದೀಗ ಮಿಡತೆ ಹಿಂಡು ಕಾಡಲು ಶುರು ಮಾಡಿದೆ. ಮುಂದಿನ ದಿನಗಳಲ್ಲಿ ಮಿಡತೆ ಪರಿಣಾಮ ಹೇಗಿರಲಿದೆ ಎನ್ನುವುದು ಗೊತ್ತಾಗಬೇಕಿದೆ.

Leave a Reply