ಬಿಜೆಪಿಯಲ್ಲಿ ಬಂಡಾಯದ ಬಾವುಟ..! ಬಿಎಸ್​ವೈ ಆಪ್ತ ಬಳಗ ನಾಪತ್ತೆ..?

ಡಿಜಿಟಲ್ ಕನ್ನಡ ಟೀಮ್:

ಕೊರೊನಾ ಸೋಂಕಿನಿಂದ ಇಡೀ ರಾಜ್ಯವೇ ಧಗಧಗನೆ ಹೊತ್ತಿ ಉರಿಯುತ್ತಿದ್ದರೆ, ಬಿಜೆಪಿಯಲ್ಲಿ ಅಧಿಕಾರಕ್ಕಾಗಿ ಕಿತ್ತಾಡುತ್ತಾ ಸರ್ಕಾವನ್ನೇ ಉರುಳಿಸಿ ಬೇರೆ ನಾಯತ್ವದಲ್ಲಿ ಅಧಿಕಾರ ಹಿಡಿಯವ ಕಸರತ್ತು ನಡೀತಿದೆ. ನಿನ್ನೆ ಮಾಜಿ ಸಚಿವ ಉಮೇಶ್​ ಕತ್ತಿ ನಿವಾಸದಲ್ಲಿ ಔತಣಕೂಟ ನೆಪದಲ್ಲಿ ನಡೆದಿರುವ ಬಂಡಾಯ ಸಭೆ, ಸಿಎಂ ಕುರ್ಚಿಯಿಂದ ಬಿ.ಎಸ್​ ಯಡಿಯೂರಪ್ಪ ಅವರನ್ನು ಇಳಿಸಲು ಸಂಚು ರೂಪಿಸಿದೆ ಎನ್ನಲಾಗ್ತಿದೆ. ಬಿ.ಎಸ್​ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಮಂತ್ರಿಗಳಾಗಲು ಸಾಧ್ಯವಾಗದೆ ಇರುವ ನಾಯಕರು ಒಟ್ಟಾಗಿ ಸಭೆ ಸೇರಿದ್ದು, ನಾಯಕತ್ವ ಬದಲಾವಣೆಯ ಪಟ್ಟು ಹಿಡಿಯಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ನಿನ್ನೆಯ ಸಭೆ ಬಗ್ಗೆ ಮಾತನಾಡಿರುವ ಉಮೇಶ್​ ಕತ್ತಿ, ನಾವು ಊಟಕ್ಕೆ ಎಲ್ಲರೂ ಒಟ್ಟಿಒಗೆ ಸೇರಿದ್ದೆವು. ಯಾವುದೇ ರಾಜಕೀಯ ವಿಚಾರ ಚರ್ಚೆ ನಡೆಸಿಲ್ಲ ಎಂದು ತೇಪೆ ಹಾಕುವ ಕೆಲಸ ಮಾಡಿದ್ದಾರೆ. ಆದರೆ ಮತ್ತೋರ್ವ ಬಂಡಾಯ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಮಾತ್ರ ನನಗೆ ಅಸಮಾಧಾನ ಇರುವುದು ಸತ್ಯ. ನಾನು ಮಂತ್ರಿ ಮಾಡಿ ಎಂದು ಯಡಿಯೂರಪ್ಪ ಬಳಿ ಕೇಳಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುವ ತನಕ ನಾನು ಮಂತ್ರಿ ಮಾಡಿ ಎಂದು ಕೇಳುವುದೂ ಇಲ್ಲ ಎಂದು ಕಡಾಖಂಡಿತವಾಗಿ ಹೇಳಿದ್ದಾರೆ. ಇನ್ನೂ ಯಡಿಯೂರಪ್ಪ ನಿಮ್ಮ ನಾಯಕರಲ್ಲವೇ ಎಂಬ ಪ್ರಶ್ನೆಗೆ ಅಷ್ಟೇ ಕಠೋರ ಉತ್ತರ ಕೊಟ್ಟಿರುವ ಯತ್ನಾಳ್​, ಅವರು ನಮ್ಮ ಮುಖ್ಯಮಂತ್ರಿ ಅಷ್ಟೆ ಎಂದಿದ್ದಾರೆ. ಸಿಎಂ ಬದಲಾವಣೆ ವಿಚಾರವಾಗಿ ನಾನು ಬಹಿರಂಗವಾಗಿ ಮಾತನಾಡಲ್ಲ, ನಮ್ಮ ಪಕ್ಷದ ಹಿರಿಯ ನಾಯಕರ ಎದುರು ಮಾತನಾಡ್ತೇನೆ ಎನ್ನುವ ಮೂಲಕ ಸಿಎಂ ಬದಲಾವಣೆಗೆ ವೇದಿಕೆ ರೂಪುಗೊಂಡಿದೆ ಎನ್ನುವುದನ್ನು ಹೇಳಿದ್ದಾರೆ.

ಕತ್ತಿ ಟೀಂನಲ್ಲಿರುವ ಶಾಸಕರು

ಶಾಸಕರ ಹೆಸರು ಕ್ಷೇತ್ರ

ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರ ನಗರ
ಮುರಗೇಶ್ ನಿರಾಣಿ ಬೀಳಗಿ
ಬಾಲಚಂದ್ರ ಜಾರಕಿಹೊಳಿ ಅರಬಾವಿ
ಶಿವರಾಜ್ ಪಾಟೀಲ್ ರಾಯಚೂರು ನಗರ
ರಾಜುಗೌಡ ಸುರಪುರ
ಅಪ್ಪುಗೌಡ ಕಲಬುರಗಿ ದಕ್ಷಿಣ
ರಾಜಕುಮಾರ್ ಪಾಟೀಲ್ ಸೇಡಂ
ಸುಭಾಷ್ ಗುತ್ತೇದಾರ್ ಅಳಂದ
ಬಸವರಾಜ ಮತ್ತಿಮಡು ಕಲಬುರಗಿ ಗ್ರಾಮೀಣ
ಪರಣ್ಣ ಮುನವಳ್ಳಿ ಗಂಗಾವತಿ
ಸೋಮಲಿಂಗಪ್ಪ ಸಿರಗುಪ್ಪ
ಗೂಳಿಹಟ್ಟಿ ಶೇಖರ್ ಹೊಸದುರ್ಗ
ಸಿದ್ದು ಸವದಿ ತೇರದಾಳ
ಮಹದೇವಪ್ಪ ಯಾದವಾಡ ರಾಮದುರ್ಗ
ದತ್ತಾತ್ರೇಯ ಪಾಟೀಲ ರೇವೂರ ಕಲಬುರಗಿ ದಕ್ಷಿಣ

15 ಮಂದಿ ಶಾಸಕರು ಒಟ್ಟಾಗಿ ಸಭೆ ಸೇರಿದ್ದಾರೆ. ಮುಖ್ಯಮಂತ್ರಿ ಬದಲಾವಣೆಗೆ ಹೈಕಮಾಂಡ್​ ಬಳಿ ದೂರು ಕೊಂಡೊಯ್ಯಲು ಸಿದ್ಧತೆಯನ್ನೂ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಈ ಎಲ್ಲರೂ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುವುದಿಲ್ಲ. ಬದಲಿಗೆ ಪಕ್ಷದಲ್ಲಿ ಇದ್ದುಕೊಂಡೇ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿಯಲಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಶಾಸಕರ ಸಂಖ್ಯೆ ಮತ್ತಷ್ಟು ಹೆಚ್ಚಾದರೆ ಹೈಕಮಾಂಡ್​ ಕೂಡ ಬೇಡಿಕೆಗೆ ಮಣಿಯಲಿದ್ದು, ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕಾದ ಸಂದರ್ಭ ಬರಲಿದೆ ಎನ್ನಲಾಗ್ತಿದೆ. ಆದರೆ ಇಷ್ಟೆಲ್ಲಾ ಆದ ಮೇಲೆ ಬಿಎಸ್​ ಯಡಿಯೂರಪ್ಪ ಪರಮಾಪ್ತ ಬಣ ಸುಮ್ಮನಿರುವುದೇ..? ಅಥವಾ ಅಧಿಕಾರದ ಆಸೆಗಾಗಿ ಯಡಿಯೂರಪ್ಪ ಅವರನ್ನು ಬಿಟ್ಟು ಬರುತ್ತದೆಯೇ ಎನ್ನುವ ಪ್ರಶ್ನೆಗೆ ಮುಂದಿನ ದಿನಗಳೇ ಉತ್ತರಿಸಬೇಕಿದೆ.

Leave a Reply