ನಾಳೆ ಲಾಕ್​ಡೌನ್​ ಇರಲ್ಲ..! ಸರ್ಕಾರದಲ್ಲೇ ಗೊಂದಲಗಳ ಸರಮಾಲೆ..!

ಡಿಜಿಟಲ್ ಕನ್ನಡ ಟೀಮ್:

ಕೊರೋನಾ ನಿರ್ವಹಣೆ ಹಾಗೂ ಲಾಕ್ ಡೌನ್ ತೆರವು ವಿಚಾರವಾಗಿ ಸರ್ಕಾರ ಗೊಂದಲಗಳ ಸುಳಿಗೆ ಸಿಕ್ಕಿ ನಲುಗುತ್ತಿದೆ. ಭಾನುವಾರ ಕರ್ಫ್ಯೂ ಎಂದು ಘೋಷಿಸಿದ್ದ ಸರ್ಕಾರ ನಾಳೆ ಕರ್ಫ್ಯೂ ಹಿಂಪಡೆದಿದೆ.

ಲಾಕ್​ಡೌನ್​ 4 ವಿನಾಯ್ತಿ ಘೋಷಣೆ ಮಾಡಿದ ಬಳಿಕ ಭಾನುವಾರ ಸಂಪೂರ್ಣ ಲಾಕ್​ಡೌನ್​ ಇರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಘೋಷಣೆ ಮಾಡಿದ್ದರು. ಪ್ರತಿದಿನ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆ ತನಕ ಕರ್ಫ್ಯೂ ಜಾರಿಯಲ್ಲಿದೆ. ಅದೇ ರೀತಿ ಪ್ರತಿ ಭಾನುವಾದ ಸಂಪೂರ್ಣ ಲಾಕ್​ಡೌನ್​ ಮಾಡಲಾಗುವುದು. ಭಾನುವಾರ ಯಾವುದೇ ಮುಕ್ತ ವ್ಯವಹಾರಕ್ಕೆ ಅವಕಾಶವಿಲ್ಲ. ಸಾರಿಗೆ ಸಂಚಾರವೂ ಇರುವುದಿಲ್ಲ ಎಂದು ಘೋಷಣೆ ಮಾಡಿದ್ದರು. ಕಳೆದ ವಾರ ಪೊಲೀಸರು ರಸ್ತೆಗಳನ್ನು ಬಂದ್​ ಮಾಡಿಕೊಂಡು ಅಡ್ಡಾದಿಡ್ಡಿ ಓಡಾಡುವ ಜನರನ್ನು ತಡೆದು ಕೇಸ್​ ಹಾಕಿದ್ದೂ ಆಯ್ತು. ದಂಡ ವಿಧಿಸಿದ್ದೂ ಆಯ್ತು. ಆದರೆ ಅದರೊಳಿಗೆ ಸಾಕಷ್ಟು ಗೊಂದಲ ಮಾಡಿಕೊಂಡು ಮದುವೆ ಕಾರ್ಯಕ್ರಮ, ದಿನಸಿ ಅಂಗಡಿ, ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಿತ್ತು. ಸರ್ಕಾರದ ಈ ನಿರ್ಧಾರ ಸಾಕಷ್ಟು ಟೀಕೆಗೆ ಕಾರಣವಾಗಿತ್ತು.

ಲಾಕ್​ಡೌನ್​ ಎನ್ನುವುದೇ ಹಾಸ್ಯಾಸ್ಪದ ಎನ್ನುವ ಟೀಕೆಯಿಂದ ಎಚ್ಚೆತ್ತಿರುವ ರಾಜ್ಯ ಸರ್ಕಾರ, ಈ ವಾರ ಲಾಕ್​ಡೌನ್​ ಇರುವುದಿಲ್ಲ ಎಂದು ಘೋಷಣೆ ಮಾಡಿದೆ. ಭಾನುವಾರದ ಲಾಕ್​ಡೌನ್ ಇರಲ್ಲ. ಜನರ ಹಿತದೃಷ್ಟಿಯಿಂದ ನಾಳೆ ಕರ್ಫ್ಯೂ ವಾಪಸ್​ ಪಡೆಯಲಾಗಿದೆ ಎಂದು ಸಿಎಂ ಯಡಿಯೂರಪ್ಪರಿಂದ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ನಾಳೆ ಎಂದಿನಂತೆ ಎಲ್ಲವೂ ಓಪನ್ ಇರಲಿದೆ. ಮದ್ಯದಂಗಡಿ, ಮಾರ್ಕೆಟ್​, ಸಂಚಾರ, ಆಟೋ, ಕ್ಯಾಬ್​, ಪಾರ್ಕ್​ ಯಾವುದಕ್ಕೂ ನಿರ್ಬಂಧ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ತಿಳಿಸಿದ್ದಾರೆ. ಸರ್ಕಾರಿ ಸಾರಿಗೆ ಕೂಡ ಸೇವೆ ನೀಡಲಿದ್ದು, ಭಾನುವಾರದ ಲಾಕ್​ಡೌನ್​ ನಿರ್ಧಾರದಿಂದ ಹಿಂದೆ ಸರಿಯಲಾಗಿದೆ.

ರಾಜ್ಯ ಸರ್ಕಾರ ಗೊಂದಲದಲ್ಲಿ ತನ್ನದೇ ನಿರ್ಧಾರಗಳನ್ನು ಬದಲಾಯಿಸುತ್ತಾ ಸಾಗುತ್ತಿದೆ. ಈ ನಡುವೆ ಲಾಕ್​ಡೌನ್​ ಗೊಂದಲದಲ್ಲಿ ಕೇಂದ್ರ ಸರ್ಕಾರವೂ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಎಡತಾಕುತ್ತಿದೆ. ನಾಳೆಗೆ ಲಾಕ್​ಡೌನ್​ 4 ಅಂತ್ಯವಾಗುತ್ತಿದೆ. ಈ ನಡುವೆ ಎಲ್ಲಾ ವ್ಯವಹಾರವೂ ಮುಕ್ತವಾಗಿದೆ. ಲಾಕ್​ಡೌನ್​ 5 ಎಂದು ಘೋಷಣೆ ಮಾಡಿದರೂ ಕೇವಲ ಹೆಸರಿಗೆ ಮಾತ್ರ ಇರಲಿದೆ ಎನ್ನಲಾಗ್ತಿದೆ. ಈ ನಡುವೆ ಭಾರತದಲ್ಲಿ ಸೋಂಕು ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ನಿನ್ನೆ ಒಂದೇ ದಿನ‌ 7,964 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಭಾರತ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1 ಲಕ್ಷದ 73 ಸಾವಿರದ 763ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆಯಲ್ಲೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ನಿನ್ನೆ ಒಂದೇ ದಿನ‌ ಕೊರೊನಾದಿಂದ ಸತ್ತವರ ಸಂಖ್ಯೆ 265 ಆಗಿದೆ. ದೇಶದಲ್ಲಿ ಇಲ್ಲೀವರೆಗೂ ಕೊರೊನಾದಿಂದ ಸತ್ತವರ ಸಂಖ್ಯೆ 4 ಸಾವಿರದ 971ಕ್ಕೆ ಏರಿಕೆ ಆಗಿದೆ. 82 ಸಾವಿರದ 370 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಒಟ್ಟಾರೆ, ಕೊರೊನಾ ನಿಯಂತ್ರಣ ಹಾಗೂ ಆರ್ಥಿಕ ಸಂಕಷ್ಟವನ್ನು ನಿರ್ವಹಣೆ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗೊಂದಲಕ್ಕೆ ಸಿಲುಕಿದ್ದು, ಕೊರೊನಾ ನಿಯಂತ್ರಣವೋ ಆರ್ಥಿಕ ಸಂಕಷ್ಟದಿಂದ ಪಾರಾಗುವ ಸೂತ್ರವೋ ಎನ್ನುವುದನ್ನು ನಿರ್ಧಾರ ಮಾಡಲು ತಿಣುಕಾಡುತ್ತಿದೆ. ಒಟ್ಟಾರೆ ಮುಂದಿನ ದಿನಗಳಲ್ಲಿ ಸೋಂಕು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎನ್ನಲಾಗ್ತಿದೆ. ಜನರು ಸ್ವಯಂ ಎಚ್ಚರಿಕೆ ವಹಿಸದಿದ್ದರೆ ಕೊರೊನಾ ಸೋಂಕು ತಗುಲುವುದು ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ.

Leave a Reply