ಮುಖ್ಯಮಂತ್ರಿ ಬದಲಾವಣೆಗೆ ಮುನ್ನುಡಿ.. ನಾಯಕರ ವಿಭಿನ್ನ ಹೇಳಿಕೆಗಳು..!

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ, ಅತೃಪ್ತಿ ಮತ್ತೆ ಕುದಿಯಲು ಆರಂಭಿಸಿದೆ. ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ಪಕ್ಷದೊಳಗಿನ ಅಪಸ್ವರ ಹೆಚ್ಚು ಕಡಿಮೆ ನಾಯಕತ್ವದ ಬದಲಾವಣೆಗೆ ಆಗ್ರಹಿಸುತ್ತಿದೆ.

ನಾಯಕತ್ವ ಬದಲಾವಣೆಗಾಗಿ ಶಾಸಕರು ಸಭೆ ಮೇಲೆ ಸಭೆ ನಡೆಸುತ್ತಲೇ ಇದ್ದಾರೆ. ಕಳೆದ ವರ್ಷಾರಂಭದಲ್ಲಿ ಸಚಿವ ಸಂಪುಟ ವಿಸ್ತರಣೆ ವೇಳೆಯಲ್ಲಿ ನಡೆದಿದ್ದ ಬಂಡಾಯದ ಸಭೆ ಇದೀಗ ಮತ್ತೆ ರಂಗು ಪಡೆದುಕೊಂಡಿದೆ. ಕಳೆದ ವಾರ ಹಿರಿಯ ಶಾಸಕ ಉಮೇಶ್‌ ಕತ್ತಿ ನೇತೃತ್ವದಲ್ಲಿ ನಡೆದಿರುವ ಬಂಡಾಯ ಸಭೆ ಬಿಜೆಪಿ ನಾಯಕರಿಗೆ ನುಂಗಲಾರದ ಬಿಸಿ ತುತ್ತಾಗಿದೆ. ಕೆಲವು ಬಿ.ಎಸ್‌ ಯಡಿಯೂರಪ್ಪ ಆಪ್ತ ನಾಯಕರು ಯಾವುದೇ ಬಂಡಾಯ ಸಭೆ ನಡೆದಿಲ್ಲ ಎಂದು ಸಮರ್ಥನೆ ಮಾಡಿಕೊಳ್ಳಲು ಮುಂದಾಗಿದ್ದರೆ, ಆದರೆ ಇನ್ನೂ ಕೆಲವರು ನೇರವಾಗಿ ಸಭೆ ನಡೆದಿರುವುದು ಸತ್ಯ ಎಂದು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಈ ಮೂಲಕ ಬಿಜೆಪಿಯಲ್ಲಿ ಬಣ ರಾಜಕೀಯ ಶುರುವಾಗಿದೆ ಎನ್ನುವುದನ್ನು ಒತ್ತಿ ಹೇಳುತ್ತಿದ್ದಾರೆ.

ಮೈಸೂರಿನಲ್ಲಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌, ಬೆಂಕಿಯಿಲ್ಲದೆ ಹೊಗೆಯಾಡಲ್ಲ, ಬೆಂಕಿಗೆ ನೀರು ಹಾಕಿದರೂ ಹೊಗೆ ಬರುತ್ತದೆ ಎಂದು ಬಿಜೆಪಿ ಶಾಸಕರ ಪ್ರತ್ಯೇಕ ಸಭೆ ಬಗ್ಗೆ ಮಾರ್ಮಿಕ ನುಡಿದಿದ್ದಾರೆ. ಬಳಿಕ ಪ್ರತ್ಯೇಕ ಸಭೆ ಮಾಡಿರುವ ನಾಯಕರನ್ನ ಸಮಾಧಾನ ಮಾಡುತ್ತಿದ್ದೇವೆ ಎಂದಿರುವ ಅವರು, ಅಭಿವೃದ್ಧಿ ವಿಚಾರದಲ್ಲಿ ಎಲ್ಲರು ಒಂದಾಗಿದ್ದಾರೆ. ಪ್ರತ್ಯೇಕ ಸಭೆ ನಡೆಸಿದ ನಾಯಕರು ಯಾವುದೇ ಬೇಡಿಕೆ ಇಟ್ಟಿಲ್ಲ. ಅವರು ಬ್ಲಾಕ್‌ಮೇಲ್ ಮಾಡುತ್ತಿಲ್ಲ. ಊಟಕ್ಕೆ ಸೇರಿ ಚರ್ಚೆ ಮಾಡಿದ್ದಾರೆ. ಇದನ್ನೆ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದಿದ್ದಾರೆ.

ಬಳ್ಳಾರಿಯಲ್ಲಿ ಮಾತನಾಡಿರುವ ಡಿಸಿಎಂ ಲಕ್ಷ್ಮಣ ಸವದಿ, ಬೆಂಗಳೂರಲ್ಲಿ ಉಮೇಶ್ ಕತ್ತಿ ಅವರ ಮನೆಯಲ್ಲಿ ಸಭೆ ಆಗಿದ್ದು ನಿಜ. ಬೆಂಗಳೂರಲ್ಲಿ ಹೋಟೆಲ್ ಇಲ್ಲದೇ ಇರೋದ್ರಿಂದ ಊಟಕ್ಕೆ ಹೋಗಿದ್ದರು. ಈ ವೇಳೆ ಕೆಲವೊಂದು ರಾಜಕೀಯ ವಿಚಾರ ಚಚೆ ಆಗಿರಬಹುದು. ಇದನ್ನ ಭಿನ್ನಮತ ಅಂತಾ ಹೇಳೋಕೆ ಆಗಲ್ಲ. ಎಲ್ಲರಿಗೂ ಒಂದೊಂದು ಅಪೇಕ್ಷೆ ಇರುತ್ತೆ.‌ ಸಿಎಂ ಸೇರಿ ಅದನ್ನ ಎಲ್ಲರೂ ಗಮನಿಸಿದ್ದಾರೆ. ಬಸನಗೌಡ ಪಾಟೀಲ್‌ ಯತ್ನಾಳ್ ಅವರು ಬಿಎಸ್‌ ಯಡಿಯೂರಪ್ಪ ನಮ್ಮ ನಾಯಕನಲ್ಲ ನಮ್ಮ ರಾಜ್ಯದ ಮುಖ್ಯಮಂತ್ರಿ ಅಷ್ಟೆ ಎಂದಿರುವುದು ಅವರ ವೈಯಕ್ತಿಕ ವಿಚಾರ. ಕತ್ತಿ ಅವರು ಸೀನಿಯರ್ ಇದ್ದೀನಿ ಮಂತ್ರಿಸ್ಥಾನ ಕೊಡಿ ಎಂದಿದ್ದಾರೆ. ಪಕ್ಷ ಎಲ್ಲವನ್ನೂ ಗಮನಿಸುತ್ತಾ ಇರುತ್ತೆ, ಅವರನ್ನ ನಾಯಕರು ಕರೆದು ಮಾತನಾಡಿಸ್ತಾರೆ ಎಂದಿದ್ದಾರೆ.

ಆದರೆ, ಸಭೆಯಲ್ಲಿ ಭಾಗಿಯಾಗಿ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡಿದ ಬಿಜೆಪಿ ಶಾಸಕರ ಫೋಟೋ ವಿಚಾರದ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಎಸ್‌.ಎ ರಾಮದಾಸ್‌, ನಾನು ಟೀ ಕುಡಿಯಲು ಅಲ್ಲಿಗೆ ಹೋಗಿದ್ದೆ. ಪ್ರತ್ಯೇಕ ಸಭೆ ಬಗ್ಗೆ ನನಗೆ ಗೊತ್ತೆ ಇಲ್ಲ. ಅದು ಜನವರಿ ತಿಂಗಳಲ್ಲಿ ತೆಗೆದ ಫೋಟೋ. ನಾನು ಸ್ನೇಹಿತರ ಜೊತೆ ಕೆಲಸಕ್ಕೆಂದು ಬೆಂಗಳೂರಿಗೆ ಹೋಗಿದ್ದೆ. ಆ ವೇಳೆ ನಿರಾಣಿ ಅವರು ನನ್ನನ್ನು ನೋಡಿ ಕಚೇರಿಗೆ ಬರುವಂತೆ ಸೂಚಿಸಿದ್ರು. ಉತ್ತರ ಕರ್ನಾಟಕದ ಬಹುತೇಕರು ಆ ಕಾಂಪ್ಲೆಕ್ಸ್‌ನಲ್ಲಿ ಇದ್ದರು. ನಾನು, ನಿರಾಣಿ, ಉಮೇಶ್ ಕತ್ತಿ ಮಾತಾಡಿದ್ವಿ. ಅಲ್ಲಿ ಕೇವಲ ಅರ್ಧ ಟೀ ಕುಡಿದು 3 ನಿಮಿಷ ಮಾತ್ರ ಅಲ್ಲಿದ್ದು ವಾಪಸ್‌ ಬಂದೆ ಎಂದಿದ್ದಾರೆ. ಜೊತೆಗೆ ಎಷ್ಟೇ ಬಂಡಾಯದ ಸಮಯದಲ್ಲೂ ರಾಮದಾಸ್‌ನನ್ನ ಯಾರು ಅಲಗಾಡಿಸಲು ಆಗಲ್ಲ. ಬಿಜೆಪಿ ನನಗೆ ತಾಯಿ ಸಮಾನ. ಬಿಜೆಪಿ ನನಗೆ ಎಲ್ಲ ಸ್ಥಾನಮಾನ ಕೊಟ್ಟಿದೆ. ನಾನು ಸಾಮಾನ್ಯ ಕಾರ್ಯಕರ್ತ, ಯಡಿಯೂರಪ್ಪ ನನಗೆ ತಂದೆ ಸ್ಥಾನದಲ್ಲಿದ್ದಾರೆ ಎಂದಿದ್ದಾರೆ.

ಇತ್ತ ಬಿಜೆಪಿ ಶಾಸಕರ ಬಂಡಾಯ ಸಭೆ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ, ರಾಜ್ಯದ ಅಭಿವೃದ್ಧಿ, ಕೊರೊನಾ ನಿಯಂತ್ರಣದ ಕಡೆಗಷ್ಟೇ ನಾನು ಗಮನ ಕೊಟ್ಟಿದ್ದೇನೆ. ಬೇರೆ ವಿಷಯಗಳ ಬಗ್ಗೆ ನಾನು ತಲೆ ಕೆಡೆಸಿಕೊಳ್ಳುವುದಿಲ್ಲ. ನಾನು ಆ ಬಗ್ಗೆ ಎಲ್ಲಾ ಪ್ರತಿಕ್ರಿಯೆ ಯನ್ನೂ ಕೊಡಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಬಂಡಾಯ ಸಭೆ ನಡೆಸಿರುವ ಶಾಸಕರ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.

ಬಂಡಾಯ ಸಭೆ ನಡೆಸಿ ಬಂಡಾಯ ನಾಯಕರ ಲೀಡರ್‌ ಆಗಿರುವ ಶಾಸಕ ಉಮೇಶ್‌ ಕತ್ತಿ ಮಾತ್ರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆದ್ರೆ, ಬೆಂಗಳೂರಿಗೆ ಬರುವ ಮುನ್ನ ಒಂದು ಹೇಳಿಕೆ ನೀಡಿದ್ದು, ಕೊರೊನಾ ಸುದ್ದಿಯಿಂದ ಮಾಧ್ಯಮದವರನ್ನು ಡೈವರ್ಟ್ ಮಾಡಲು ನಾನು ಈ ರೀತಿ ಮಾಡಿದ್ದೇನೆ. ಯಡಿಯೂರಪ್ಪ ವಿರುದ್ಧ ಅಲ್ಲ, ಬಿಜೆಪಿ ವಿರುದ್ಧ ಅಲ್ಲ, ಹೈಕಮಾಂಡ್ ವಿರುದ್ಧ ಅಲ್ಲ ಎಂದಿದ್ದಾರೆ. ಹುಬ್ಬಳ್ಳಿಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಪಕ್ಷದಲ್ಲಿ ಭಿನ್ನಮತ ಇರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಶಾಸಕರಿಗೆ ಆಸೆ ಆಕ್ಷಾಂಕೆಗಳು ಸಹಜ. ಪಕ್ಷದ ಚೌಕಟ್ಟಿನೊಳಗೆ ಎಲ್ಲವನ್ನೂ ಚರ್ಚೆ ಮಾಡಬೇಕು. ಭಿನ್ನಮತ ಚಟುವಟಿಕೆಗಳನ್ನು ಯಾರೂ ಮಾಡಬಾರದು ಎಂದಿರುವ ಅವರು, ನನ್ನನ್ನು ಮತ್ತೆ ಸಿಎಂ ಮಾಡಬೇಕು ಅನ್ನೋ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಯಾರು ಸಹ ನನ್ನ ಜೊತೆ ಚರ್ಚೆ ಮಾಡಿಲ್ಲ.
ಶಾಸಕರು ಪ್ರತ್ಯೇಕವಾಗಿ ಭಿನ್ನಮತೀಯ ಸಭೆಗಳನ್ನು ನಡೆಸಬಾರದು ಎಂದಿದ್ದಾರೆ.

ಇನ್ನೊಂದು ಕಡೆ ಶಾಸಕ ಯತ್ನಾಳ್‌, ಮುರುಗೇಶ್‌ ನಿರಾಣಿ ಹಾಗೂ ಉಮೇಶ ಕತ್ತಿ ತಮ್ಮ ಅಭಿಪ್ರಾಯಗಳನ್ನ ಹೇಳಿದ್ದಾರೆ. ಅವರು ಕೂಡ ಪಕ್ಷದ ಹಿರಿಯ ನಾಯಕರುಗಳೇ ಆಗಿದ್ದಾರೆ. ಮುಂದಿನ ಮೂರು ವರ್ಷ ಯಡಿಯೂರಪ್ಪನವರೇ ಸಿಎಂ ಆಗಿರ್ತಾರೆ. ಪಕ್ಷದಲ್ಲಿ ಸಣ್ಣಪುಟ್ಟ ಗೊಂದಲಗಳು ಇವೆ. ‌ಎಲ್ಲ ಪಕ್ಷಗಳಲೂ ಇಂತಹ ಗೊಂದಲಗಳು ಸಾಮಾನ್ಯ ಎಂದಿದ್ದಾರೆ. ಗದಗದಲ್ಲಿ ಮಾತನಾಡಿರುವ ಸಚಿವ ಸಿ.ಸಿ ಪಾಟೀಲ್, ನಮ್ಮ ಹಿರಿಯ ಶಾಸಕ ಭಿನ್ನಮತ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಏನಾದರೂ ಸಮಸ್ಯೆ ಇದ್ದರೆ ಸಿಎಂ ಜೊತೆಗೆ ಕುಳಿತು ಬಗೆ ಹರಿಸಿಕೊಳ್ಳುತ್ತಾರೆ. ಸರ್ಕಾರ ಸುಭದ್ರವಾಗಿದೆ ಎಂದಿದ್ದಾರೆ. ಇದೇ ರೀತಿ ಡಿಸಿಎಂ ಅಶ್ವತ್ಥ ನಾರಾಯಣ ಸೇರಿದಂತೆ ಸಾಕಷ್ಟು ಜನ ಸಿಎಂ ಪರವಾಗಿ ಬ್ಯಾಟ್‌ ಬೀಸಿದ್ದಾರೆ. ಆದ್ರೆ ಪಕ್ಷ ನಿಷ್ಟರು ಎನಿಸಿಕೊಂಡ ಎಲ್ಲಾ ನಾಯಕರು ಸಭೆ ಬಗ್ಗೆ ನೇರಾನೇರಾ ಮಾತಿಗೆ ಇಳಿದಿದ್ದುಮ ಸಭೆ ನಡೆದಿದ್ದು ಸತ್ಯ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಒಟ್ಟಾರೆ, ಸಿಎಂ ಬದಲಾವಣೆಯ ಪರ್ವಕ್ಕೆ ಕಮಲಪಾಳಯದಲ್ಲಿ ಮುನ್ನುಡಿ ಬರೆಯಲಾಗಿದೆಯಾ..? ಎನ್ನುವ ಅನುಮಾನ ಹುಟ್ಟು ಹಾಕುತ್ತಿದೆ.

Leave a Reply