ಭಾರತ ಮತ್ತೆ ಅಭಿವೃದ್ಧಿ ಹಾದಿಗೆ ಮರಳುತ್ತದೆ: ಪ್ರಧಾನಿ ಮೋದಿ

ಡಿಜಿಟಲ್ ಕನ್ನಡ ಟೀಮ್:

“ನನ್ನನ್ನು ನಂಬಿ ಭಾರತ ದೇಶ ಮತ್ತೆ ಅಭಿವೃದ್ಧಿಯಾಗುತ್ತೆ” ಇದು ಪ್ರಧಾನಿ ನರೇಂದ್ರ ಅವರು ಭಾರತೀಯ ಕೈಗಾರಿಕಾ ಒಕ್ಕೂಟದ 125ನೇ ವರ್ಷದ ವಾರ್ಷಿಕ ಅಧಿವೇಶನದಲ್ಲಿ ಕೊಟ್ಟಿರುವ ಭರವಸೆ.

ಕೊರೊನಾ ಹೊಸ ಕಾಲವೇ ಸಾಮಾನ್ಯ ಆಗುತ್ತಿದೆ. ಒಂದು ಕಡೆ ವೈರಸ್ ವಿರುದ್ಧ ಹೋರಾಟಕ್ಕೆ ಕಠಿಣ ಕ್ರಮ ಕೈಗೊಳ್ಬೇಕು. ಮತ್ತೊಂದೆಡೆ ದೇಶದ ಆರ್ಥಿಕತೆಯನ್ನೂ ವೃದ್ಧಿಸಬೇಕಿದೆ. ಆರ್ಥಿಕತೆ ರಕ್ಷಿಸಲು ಸೂಕ್ತ ಕ್ರಮಗಳನ್ನ ಕೈಗೊಳ್ಳಬೇಕಿದೆ. ನಾವು ನಮ್ಮ ಅಭಿವೃದ್ಧಿಯನ್ನು ವಾಪಸ್ ಪಡೆಯುತ್ತೇವೆ. ನನ್ನ ಇಷ್ಟೊಂದು ವಿಶ್ವಾಸಕ್ಕೆ ಕಾರಣಕ್ಕೆ ಭಾರತದ ಸಾಮರ್ಥ್ಯ ಹಾಗೂ ಭಾರತದ ರೈತರು, ಕೈಗಾರಿಕೆಗಳ ಮೇಲೆ ಇಟ್ಟಿರುವ ವಿಶ್ವಾಸ ಎಂದಿದ್ದಾರೆ.

ಭಾರತದ ಕೈಗಾರಿಕೋದ್ಯಮಿಗಳ ಮೇಲೆ ನನಗೆ ಸಂಪೂರ್ಣ ವಿಶ್ವಾಸ ಇದೆ. ಭಾರತ ಲಾಕ್​ಡೌನ್​ನ ಹಿಂದಿಕ್ಕಿದೆ, ಭಾರತ ಅನ್​ಲಾಕ್​ನ ಮೊದಲ ಹಂತದಲ್ಲಿದೆ. ಈಗಾಗಲೇ ಬಹುತೇಕ ಕೈಗಾರಿಕೆಗಳು ತೆರೆದಿವೆ. ಮುಂದಿನ ವಾರ ಮತ್ತೊಂದು ಹಂತದ ಲಾಕ್‌ಡೌನ್‌ ತೆರೆಯಲಿದೆ. ಮಹಿಳೆಯರು, ದಿವ್ಯಾಂಗರು, ವೃದ್ಧರು ಸೇರಿದಂತೆ ಬಡಕುಟುಂಬಗಳಿಗೆ 53 ಸಾವಿರ ಕೋಟಿ ಹಣಕಾಸಿನ ಸಹಾಯ ಮಾಡಿದ್ದೇವೆ. 8 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಎಲ್‌ಪಿಜಿ ಸಿಲಿಂಡರ್ ಬಡವರಿಗೆ ತಲುಪಿಸಿದ್ದೇವೆ. ಭಾರತವನ್ನು ಮತ್ತೆ ವೇಗದ ಅಭಿವೃದ್ಧಿ ಪಥಕ್ಕೆ ತರಬೇಕು. ಈಗಾಗಲೇ ಭಾರತ ಹೊಸ ಅಭಿವೃದ್ಧಿಯ ಪಥದತ್ತ ನಡೆಯುತ್ತಿದೆ. ನಮಗೆ ಬದಲಾವಣೆಗಳು ವ್ಯವಸ್ಥಿತವಾಗಿ ಗೋಚರಿಸುತ್ತಿದ್ದು, ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು ಎಂದಿದ್ದಾರೆ.

ಇನ್ನೂ ಕೇಂದ್ರ ಸರ್ಕಾರ ಹಲವಾರು ಕಾನೂನುಗಳಲ್ಲಿ ಬದಲಾವಣೆ ತರುತ್ತಿದೆ. ಇಂಥಾ ಬದಲಾವಣೆಗಳು ಭಾರತ ದೇಶದಲ್ಲಿ ಸಾಧ್ಯವಿಲ್ಲ ಎಂದುಕೊಂಡಿದ್ದರು. ಆದರೂ ನಮ್ಮ ಸರ್ಕಾರ ಬದಲಾವಣೆ ಮಾಡುತ್ತಿದೆ. ರೈತ ತನ್ನ ಬೆಳೆಯನ್ನು ಎಲ್ಲಿ ಮಾರಾಟ ಮಾಡಬೇಕು ಎನ್ನುವ ನಿಯಮ ರೂಪಿಸುತ್ತೇವೆ. ರೈತರಿಗೆ ದಶಕಗಳಿಂದ ಅನ್ಯಾಯ ಆಗ್ತಿದೆ. ರೈತರಿಗೆ ಆಗ್ತಿರೋ ಅನ್ಯಾಯ ಸರಿಪಡಿಸುವ ಕೆಲಸ ಮಾಡ್ತಿದ್ದೇವೆ. ರೈತರಿಗಾಗಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುತ್ತಿದ್ದೇವೆ. ರೈತರ ಎಲ್ಲಿ ಬೇಕಿದ್ದರೂ ತನ್ನ ಬೆಳೆ ಮಾರಾಟ ಮಾಡಬಹುದು. ತನ್ನ ಬೆಳೆಯನ್ನು ದೇಶದ ಯಾವುದೇ ರಾಜ್ಯದಲ್ಲಿ ಮಾರಾಟ ಮಾಡಬಹುದು. ಇ-ಟ್ರೇಡಿಂಗ್ ಮೂಲಕವೂ ಬೆಳೆ ಮಾರಾಟ ಸಾಧ್ಯವಾಗುವಂತೆ ತಿದ್ದುಪಡಿ ಮಾಡ್ತಿದ್ದೇವೆ ಎಂದಿದ್ದಾರೆ.

ಶ್ರಮಿಕ ವರ್ಗದ ಅಭಿವೃದ್ಧಿಗಾಗಿ ಲೇಬರ್ ರಿಫಾರ್ಮ್ಸ್ ಮಾಡಲಾಗಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎನ್ನುವುದು ನಮ್ಮ ಗುರಿ. ಭಾರತ ದೇಶದಲ್ಲಿ ಭಾರಿ ಪ್ರಮಾಣದ ಕಲ್ಲಿದ್ದಲು ನಿಕ್ಷೇಪ ಇದೆ. ಜಗತ್ತಿನಲ್ಲಿ ಅತಿ ಹೆಚ್ಚು ಕಲ್ಲಿದ್ದಲು ನಿಕ್ಷೇಪ ಹೊಂದಿರುವ 3ನೇ ಅತಿದೊಡ್ಡ ರಾಷ್ಟ್ರ. ಆದರೂ ಕಲ್ಲಿದ್ದಲು ಕೂಡ ಆಮದು ಆಗ್ತಿತ್ತು. ಈಗ ಕಲ್ಲಿದ್ದಲು ಕ್ಷೇತ್ರದಲ್ಲೂ ಭಾರೀ ಬದಲಾವಣೆ ಮಾಡಲಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಕೈಗಾರಿಕೋದ್ಯಮಿಗಳಿಗೆ ಅವಕಾಶ ಕೊಡುತ್ತೇವೆ. ಪ್ರತಿ ಕ್ಷೇತ್ರದಲ್ಲೂ ಯುವ ಸಮೂಹಕ್ಕೆ ಅವಕಾಶ ಕೊಡುತ್ತೇವೆ. ಬಾಹ್ಯಾಕಾಶ ವಲಯದಲ್ಲೂ ಈಗ ಹೂಡಿಕೆ ಸಾಧ್ಯವಾಗುತ್ತೆ. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ನಿಶ್ಚಿಂತೆಯಿಂದ ಕಾರ್ಯ ನಿರ್ವಹಿಸಬಹುದು. ಎಂಎಸ್​ಎಂಇಗಳ ಒಳಿತಿಗಾಗಿ ಜಾಗತಿಕ ಟೆಂಡರ್​ನ ನಿಷೇಧಿಸಲಾಗಿದೆ. ಸ್ವಾವಲಂಬಿ ಭಾರತದ ಕನಸು ನನಸಾಗಿಸಲು ಹಲವು ಕ್ರಮ ಕೈಗೊಂಡಿದ್ದೇವೆ.

ಸದ್ಯದ ಪರಿಸ್ಥಿತಿಯಲ್ಲಿ ದೇಶಗಳು ಪರಸ್ಪರ ಸಹಕಾರದ ನಿರೀಕ್ಷೆಯಲ್ಲಿವೆ. ಎಲ್ಲರೂ ತಮ್ಮನ್ನ ತಾವು ರಕ್ಷಿಸಿಕೊಳ್ಳುವುದರಲ್ಲಿ ಮಗ್ನವಾಗಿದ್ದರೂ ಭಾರತ 150ಕ್ಕೂ ಹೆಚ್ಚು ದೇಶಗಳಿಗೆ ಸಹಾಯ ಮಾಡಿದೆ. ಕೊರೊನಾ ಸಂಕಷ್ಟದಲ್ಲಿ ಜಗತ್ತಿಗೆ ಭಾರತದ ಸಹಾಯ ಮಾಡಿದೆ. ಭಾರತದ ಮೇಲಿನ ವಿಶ್ವಾಸ ಹೆಚ್ಚಾಗಿದೆ. ಭಾರತದಲ್ಲಿ ಉತ್ಪಾದನೆ ಜೊತೆ ವಿಶ್ವಾಸ ಹೆಚ್ಚಿಸಬೇಕಿದೆ. ನೀವು ಒಂದು ಹೆಜ್ಜೆ ಮುಂದಿಟ್ಟರೆ, ನಮ್ಮ ಸರ್ಕಾರ 4 ಹೆಜ್ಜೆ ಇಡಲಿದೆ. ಪ್ರಧಾನಿಯಾಗಿ ನಾನು ಭರವಸೆ ನೀಡುತ್ತೇನೆ. ನಾನು ನಿಮ್ಮ ಜೊತೆ ಇದ್ದೇನೆ, ವಿಶ್ವಾಸವಿಡಿ ಎಂದು ಕೈಗಾರಿಕೋದ್ಯಮಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಭಾರತದಲ್ಲಿ ಶಕ್ತಿಯುತ ಕೈಗಾರಿಕೋದ್ಯಮ ಸ್ಥಾಪನೆ ನಮ್ಮ ಗುರಿಯಾಗಿದ್ದು, ಮೇಕ್‌ ಇನ್ ಇಂಡಿಯಾ, ಮೇಡ್ ಫಾರ್ ದಿ ವರ್ಲ್ಡ್ ಎನ್ನುವಂತೆ ಮಾಡೋಣ ಎಂದು ಆತ್ಮವಿಶ್ವಾಸದಿಂದ ನುಡಿದ್ದಾರೆ.

ಒಟ್ಟಾರೆ, ಕೊರೊನಾ ಕಷ್ಟ ಕಾಲದಲ್ಲೂ ಪ್ರಧಾನಿ ಆತ್ಮವಿಶ್ವಾಸ ದೇಶದ ಜನರಲ್ಲಿ ಚೈತನ್ಯ ಮೂಡಿಸುವ ಕೆಲಸ ಮಾಡಿದೆ. ಆದರೆ ಸೋಂಕು ನಿಯಂತ್ರಣ ಮಾಡುವುದು ಹೇಗೆ..? ಅಥವಾ ಸೋಂಕಿನೊಂದಿಗೆ ಬದುಕುವುದು ಹೇಗೆ ಎನ್ನುವುದು ಜನರೇ ನಿರ್ಧಾರ ಮಾಡಬೇಕಿದೆ. ಕೊರೊನಾ ಸೋಂಕು ದಿನದಿಂದ ದಿನಕ್ಕೆ ಸಾವಿರಾರು ಜನರಲ್ಲಿ ಕಾಣಿಸಕೊಳ್ಳುತ್ತಲೇ ಇದೆ. ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಮುಗಿಬೀಳುತ್ತಿವೆ. ಸರ್ಕಾರ ಅಭಿವೃದ್ಧಿ ಹಿಂದೆ ಹೊರಟಿರುವುವ ಪ್ರಧಾನಿ ಭಾಷಣದ ಸಾರವಾಗಿದೆ.

Leave a Reply