ಶ್ರೀರಾಮುಲು ಎಡವಟ್ಟು.. ರಾಜೀನಾಮೆಗೆ ವಿಪಕ್ಷ ಪಟ್ಟು..!

ಡಿಜಿಟಲ್ ಕನ್ನಡ ಟೀಮ್:

ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರೋಗ್ಯ ಸಚಿವ ಶ್ರೀರಾಮುಲು, ವೇದಾವತಿ ನದಿಗೆ ಭಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಬಳಿಯ ವೇದಾವತಿ ಬ್ಯಾರೇಜ್‌ಗೆ ವಾಣಿ ವಿಲಾಸ ಸಾಗರದಿಂದ 0.25 ಟಿಎಂಸಿ ನೀರು ಹರಿಸಿದ್ದು, ಭರ್ತಿಯಾಗಿದೆ. ಇಂದು ಖಾಸಗಿಯಾಗಿಯಾಗಿ ಶ್ರೀರಾಮುಲು ಅರ್ಪಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಸಂಸದ ಎ. ನಾರಾಯಣ ಸ್ವಾಮಿ, ಶಾಸಕ ಜಿ.ಎಚ್ ತಿಪ್ಪಾರೆಡ್ಡಿ ಸೇರಿದಂತೆ ಹಲವಾರು ನಾಯಕರು ಪಾಲ್ಗೊಂಡಿದ್ದರು. ನೂರಾರು ಜನರ ಜೊತೆ ಸಚಿವ ಶ್ರೀರಾಮುಲು, ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಸಾಮಾಜಿಕ ಅಂತರವನ್ನು ಮರೆತಿದ್ದರು. ಬೃಹತ್‌ ಗಾತ್ರದ ಸೇಬಿನ ಹಾರ ಹಾಕಿಸಿಕೊಂಡು ದರ್ಬಾರ್‌ ನಡೆಸಿದ ಶ್ರೀರಾಮುಲು ಹಾಗೂ ಕಂಡು ಕಾಣದಂತೆ ಇದ್ದ ಚಿತ್ರದುರ್ಗ ಜಿಲ್ಲಾಡಳಿತರ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.

ಓರ್ವ ಆರೋಗ್ಯ ಸಚಿವನಾಗಿ ಈ ರೀತಿ ಮಾಸ್ಕ್‌, ಸಾಮಾಜಿಕ ಅಂತರ ಯಾವುದನ್ನೂ ಲೆಕ್ಕಿಸದೆ ನೂರಾರು ಜನರನ್ನು ಸೇರಿದ್ದಕ್ಕೆ ಕಾಂಗ್ರೆಸ್‌ ಕೆಂಡಾಮಂಡಲವಾಗಿದೆ. ಸಚಿವ ಶ್ರೀರಾಮುಲು ಜನಸಂದಣಿ ಸೇರಿಸಿದ್ದ ವಿಚಾರದ ಬಗ್ಗೆ ಮಾತಾಡಿರುವ ಕಾಂಗ್ರೆಸ್‌ ನಾಯಕ ವಿ.ಎಸ್‌ ಉಗ್ರಪ್ಪ, ಸಚಿವರು ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ. ಮಾರ್ಚ್ ೯ ರಂದು ರಾಜ್ಯದಲ್ಲಿ ಒಂದೇ ಒಂದು ಕೇಸ್ ಇತ್ತು. ಇದೀಗ ರಾಜ್ಯದಲ್ಲಿ ಮೂರೂವರೆ ಸಾವಿರ ಕೊರೊನಾ ಕೇಸ್‌ಗಳಿವೆ. ಲಾಕ್‌ಡೌನ್ ಇದ್ದರೂ ಇಷ್ಟೊಂದು ಕೇಸ್ ಹೇಗೆ ಬಂತು..? ಎಂದು ಪ್ರಶ್ನಿಸಿದ್ದಾರೆ. ಕೋವಿಡ್ 19 ಹಿನ್ನೆಲೆ ಸರ್ಕಾರ ೮೪ ಗೈಡ್ ಲೈನ್ಸ್ ಕೊಟ್ಟಿದೆ. ಆದರೆ ಈ ಗೈಡ್‌ಲೈನ್ಸ್ ಯಥಾವತ್ತಾಗಿ ಪಾಲನೆಯಾಗ್ತಿವೆಯೇ..? ಸ್ವತಃ ಆರೋಗ್ಯ ಸಚಿವ ಶ್ರೀರಾಮುಲು ಇವತ್ತು ಮಾಡಿರೋದೇನು..? ಶ್ರೀರಾಮುಲು ಸರ್ಕಾರದ ಪ್ರತಿನಿಧಿಯಾಗಿದ್ದಾರೆ. ಬಾಗಿನ ಬಿಡುವಾಗ ಸಾವಿರಾರು ಮಂದಿ ಸೇರಿದ್ದಾರೆ. ಮಾಸ್ಕ್ ಇಲ್ಲ, ಸಾಮಾಜಿಕ ಅಂತರ ಇಲ್ಲ. ಮಕ್ಕಳು, ಮರಿ ಕೂಡ ಸೇರಿದ್ದಾರೆ. ಇದು ಅವರದೇ ಸರ್ಕಾರದ ಗೈಡ್‌ಲೈನ್ಸ್ ಉಲ್ಲಂಘನೆಯಲ್ವೇ..? ಚಿತ್ರದುರ್ಗ ಜಿಲ್ಲಾಡಳಿತ, ತಾಲೂಕು ಆಡಳಿತ ಏನು ಮಾಡ್ತಿದೆ..? ಎಂದು ಕಿಡಿಕಾರಿದ್ದಾರೆ.

ಸಚಿವರ ಕಾರ್ಯಕ್ರಮಕ್ಕೆ ಮೊದಲೇ ತಯಾರಿ ನಡೆಸಿರೋದು ಖಚಿತ. ಎರಡೂವರೆ ಸಾವಿರ ಕೆಜಿ ಸೇಬಿನ ಹಾರ ಅಂದರೆ ತಿಳಿಯಿರಿ. ಇದು ಮೊದಲೇ ಫ್ಲಾನ್ ಅಗಿರೋ ಕಾರ್ಯಕ್ರಮ. ಈ ಮೂಲಕ ಸಚಿವ ಶ್ರೀರಾಮುಲು ಸಂಪೂರ್ಣ ಕಾನೂನು ಉಲ್ಲಂಘಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸಚಿವರಿಗೆ ಜೈಲು ಹಾಗೂ ದಂಡದ ಶಿಕ್ಷೆ ವಿಧಿಸಬೇಕು ಎಂದು ಸರ್ಕಾರವನ್ನು ಆಗ್ರಹ ಮಾಡಿದ್ದಾರೆ. ಜನ ಮದುವೆ ಮಾಡಿದ್ರೆ ಕೇಸ್ ರಿಜಿಸ್ಟರ್ ಮಾಡ್ತಾರೆ. ಊರಿಗೆ ಯಾರಾದರೂ ‌ಹೋದ್ರೆ ಕ್ವಾರಂಟೈನ್ ಮಾಡ್ತಾರೆ. ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಮಗನ ಮದುವೆಯಲ್ಲಿ 98 ಜನರು ಭಾಗಿಯಾಗಿದ್ದಕ್ಕೆ ಕೇಸ್ ಹಾಕ್ತಾರೆ. ಆದರೆ ಸಚಿವ ಶ್ರೀರಾಮುಲು ಈ ರೀತಿ ಸಾವಿರಾರು ಜನರನ್ನು ಸೇರಿಸಿದ್ದರೂ ಕೇಸ್ ಇಲ್ಲ. ಒಬ್ಬರಿಗೊಂದು ಮತ್ತೊಬ್ಬರಿಗೊಂದು ಕಾನೂನು ಇದ್ಯಾ..? ಎಂದು ಗುಡುಗಿರುವ ಉಗ್ರಪ್ಪ, ನೈತಿಕ ಹೊಣೆ ಹೊತ್ತು ಸಚಿವ ಶ್ರೀರಾಮುಲು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಸಮಾಜಕ್ಕೆ ಮಾರಕವಾದ ಕೆಲಸ ಮಾಡಿದ್ದಾರೆ. ಬದ್ಧತೆ ಇದ್ದರೆ ಬಹಿರಂಗ ಕ್ಷಮೆಯಾಚಿಸಬೇಕು. ನೈತಿಕ ಹೊಣೆಯನ್ನ‌ ಹೊತ್ತು ರಾಜೀನಾಮೆ ನೀಡಬೇಕು. ಇಲ್ಲವೇ ಸಿಎಂ ರಾಜೀನಾಮೆಯನ್ನ ಪಡೆದುಕೊಳ್ಳಬೇಕು ಎಂದು ಆಗ್ರಹ ಮಾಡಿದ್ದಾರೆ.

ಒಟ್ಟಾರೆ, ಕೊರೊನಾ ಸಮಯದಲ್ಲೂ ಜವಾಬ್ದಾರಿ ಮರೆತು ಜನಜಂಗುಳಿ ಮಾಡಿಕೊಂಡು ಸಂಭ್ರಮಿಸಿದ ಸಚಿವ ಶ್ರೀರಾಮುಲು ಇಕ್ಕಟ್ಟಿಗೆ ಸಿಲುಕಿದ್ದಾರೆ. ಸಿಎಂ ಬಿ.ಎಸ್‌ ಯಡಿಯೂರಪ್ಪ ಕೂಡ ಶ್ರೀರಾಮುಲು ಬಗ್ಗೆ ಗರಂ ಆಗಿದ್ದಾರೆ ಎನ್ನಲಾಗಿದ್ದು, ಮುಂದೆ ಯಾವ ಕ್ರಮ ಕೈಗೊಳ್ತಾರೆ..? ಕ್ಷಮೆ ಕೇಳಿ ತಪ್ಪಿನಿಂದ ಪಾರಾಗ್ತಾರಾ..? ಎಂಬ ಪ್ರಶ್ನೆ ಉದ್ಭವಿಸಿದೆ.

Leave a Reply