ಗೌಡರನ್ನು ರಾಜ್ಯಸಭೆಗೆ ಕಳುಹಿಸಲು ವೇದಿಕೆ ಸಜ್ಜು..?

ಡಿಜಿಟಲ್ ಕನ್ನಡ ಟೀಮ್:

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂನ್‌ 19ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ನಲ್ಲಿ ಮಹತ್ವದ ಲೆಕ್ಕಾಚಾರಗಳು ನಡೆಯುತ್ತಿದೆ. ಯಾರು ಯಾರು ಬೆಂಬಲಿಸಬೇಕು, ಯಾವ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳಬೇಕು. ಯಾರೊಂದಿಗೆ ಮೈತ್ರಿ ಮಾಡಿಕೊಂಡು ರಾಜ್ಯಸಭೆಯಲ್ಲಿ ಹೆಚ್ಚು ಸ್ಥಾನ ಗಳಿಸಬೇಕು ಎಂದು ಎನ್ನುವ ಲೆಕ್ಕಾಚಾರಗಳು ನಡೆಯುತ್ತಿವೆ. ಬಿಜೆಪಿಯಲ್ಲಿ ಇನ್ನೂ ಕೂಡ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿದೆ. ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭೆಗೆ ಕಳುಹಿಸುವುದು ಬಹುತೇಕ ಖಚಿತವಾಗ್ತಿದೆ. ಇನ್ನು ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸುವ ಮಾತುಕತೆಗಳು ನಡೆಯುತ್ತಿವೆ. ನಾಳೆ ಅಂತಿಮ ನಿರ್ಧಾರ ಕೈಗೊಳ್ಳಲು ಜೆಡಿಎಸ್‌ ಶಾಸಕಾಂಗ ಸಭೆ ನಡೆಯುತ್ತಿದ್ದು, ಶಾಸಕರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲು ನಿರ್ಧಾರ ಮಾಡಲಾಗಿದೆ.

ಹಾಸನದಲ್ಲಿ ಶಾಸಕ ಶಿವಲಿಂಗೇಗೌಡ ಈ ಬಗ್ಗೆ ಮಾತನಾಡಿದ್ದು, ಏನಾದರೂ ಮಾಡಿ ನಾವು ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸಲು ಒಪ್ಪಿಸಿಯೇ ಒಪ್ಪಿಸುತ್ತೇವೆ. ದೇವೇಗೌಡರಂತ ಅನುಭವಿ ರಾಜಕಾರಣಿ ಸಲಹೆ ಸೂಚನೆಗಳು ಭಾರತ ಸರ್ಕಾರಕ್ಕೆ ಅವಶ್ಯಕತೆ ಇದೆ. ಕೆಟ್ಟ ಅನಿವಾರ್ಯ ರಾಜಕಾರಣದಿಂದ ಅವರು ಈ ಬಾರಿ ಸಂಸತ್ ಪ್ರವೇಶ ಮಾಡಲು ಸಾಧ್ಯವಾಗಲಿಲ್ಲ. ಈಗ ರಾಜ್ಯಸಭೆಗೆ ಆಯ್ಕೆ ಮಾಡುವುದನ್ನು ಹಿಂಬಾಗಿಲಿನಿಂದ ಎಂದು ಭಾವಿಸಬಾರದು. ಬಹಳಷ್ಟು ಜನ ಪ್ರಜ್ಞಾವಂತರ ರಾಜಕಾರಣಿಗಳ ಪ್ರಕಾರ ದೇವೇಗೌಡರು ಸಂಸತ್ ಪ್ರವೇಶ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏನಾದರೂ ಮಾಡಿ ನಾವು ದೇವೇಗೌಡರನ್ನು ಒಪ್ಪಿಸಿಯೇ ಒಪ್ಪಿಸುತ್ತೇವೆ. ದೇವೇಗೌಡರನ್ನು ಸಂಸತ್ ಪ್ರವೇಶ ಮಾಡಿಸುತ್ತೇವೆ. ಈಗ ಯಾವುದೇ ಉಪಚುನಾವಣೆ ಇದ್ದಿದ್ದರೆ, ಗೆಲ್ಲಿಸಬಹುದಿತ್ತು ಎಂದಿದ್ದಾರೆ.

ರಾಜ್ಯಸಭೆ ಹಿರಿಯರ ಸಂಸತ್ತು. ದೇವೇಗೌಡರು ರಾಜ್ಯಸಭೆಯಲ್ಲಿ ಕುಳಿತು ಕೆಲಸ ಮಾಡಿದರೆ ರೈತರಿಗೆ ಒಳಿತಾಗಲಿದೆ, ಅವರ ಅವಶ್ಯಕತೆ ಇಂದು ನಮಗೆ ಇದೆ. ರಾಜ್ಯದ ಜನತೆಗಾಗಿ ಆದರೂ ರಾಜ್ಯಸಭೆ ಪ್ರವೇಶಿಸಬೇಕು. ಒಂದಷ್ಟು ಮತ ನಮಗೆ ಕೊರತೆ ಇದೆ. ದೇವೇಗೌಡರಂಥ ಹಿರಿಯರನ್ನು ಪಕ್ಷಬೇಧ ಮರೆತು ಕಳುಹಿಸುತ್ತಾರೆ ಎಂಬುದು ನನ್ನ ಭಾವನೆ. ನಾವು ಹೋಗಿ ಯಾವ ಪಕ್ಷದವರನ್ನಾದರೂ ದೇವೇಗೌಡರಿಗೆ ಮತ ಹಾಕುವಂತೆ ಕೇಳಿಕೊಳ್ಳುತ್ತೇವೆ. ಕಾಂಗ್ರೆಸ್ ಅವರ ಬಳಿ ಹೆಚ್ಚಿರುವ ಮತ ಕೊಟ್ಟರೆ ನಾವು ಅವರಿಗೆ ಯಾವಾಗಲಾದರೂ ಸಹಾಯ ಮಾಡುತ್ತೇವೆ. ಹಿಂದೆ ದೇವೇಗೌಡರು ಎಸ್‌.ಎಂ ಕೃಷ್ಣ ಅವರಿಗೆ ಈ ರೀತಿ ಸಹಾಯ ಮಾಡಿದ್ದರು ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ನೆನಪು ಮಾಡಿಕೊಂಡಿದ್ದಾರೆ.

ನಾಳೆ ಜೆಡಿಎಸ್‌ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಶಾಸಕರ ನಿರ್ಧಾರದಂತೆ ನಡೆಯಲು ಜೆಡಿಎಸ್‌ ಮುಂದಾಗಿದೆ. ಶಾಸಕರು ದೇವೇಗೌಡರನ್ನು ಆಯ್ಕೆ ಮಾಡುವುದು ಬೇಡ ಎನ್ನುವುದು ಬಹುತೇಕ ಕಡಿಮೆ. ಎಲ್ಲರೂ ಒಕ್ಕೋರಲಿನಿಂದ ಆಯ್ಕೆ ಮಾಡಲಿದ್ದಾರೆ. ಆ ಬಳಿಕ ಉಳಿಕೆ ಮತಗಳನ್ನು ಕಾಂಗ್ರೆಸ್‌ನಿಂದ ಪಡೆಯಬೇಕಾ..? ಅಥವಾ ಬಿಜೆಪಿಯಿಂದ ಪಡೆಯಬೇಕಾ ಎನ್ನುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಯಾವುದೇ ನಿರ್ಧಾರ ಕೈಗೊಂಡರೂ ಪಕ್ಷ ಸಂಘಟನೆಗೆ ಪೂರಕವಾಗಿರಲಿದೆ ಎನ್ನಲಾಗಿದೆ.

Leave a Reply