ಅಧಿಕಾರದ ಆಸೆಗಿಂತ ಕಾರ್ಯಕರ್ತರ ಜತೆಗೆ ಒಟ್ಟಾಗಿ ದುಡಿಯಲು ಸಿದ್ಧರಿದ್ದರೆ ಮಾತ್ರ ಪಕ್ಷಕ್ಕೆ ಸೇರ್ಪಡೆ: ಡಿ.ಕೆ. ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

ಅನ್ಯ ಪಕ್ಷದಿಂದ ಅನೇಕ ನಾಯಕರು ಕಾಂಗ್ರೆಸ್ ಗೆ ಸೇರಲು ಇಚ್ಛಿಸಿದ್ದಾರೆ. ಇವರನ್ನು ಸೇರಿಸಿಕೊಳ್ಳುವ ಕುರಿತು ಪರಾಮರ್ಶೆ ನಡೆಸಲು ಅಲ್ಲಂ ವಿರಭದ್ರಪ್ಪ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಈ ಸಮಿತಿ ಶಿಫಾರಸ್ಸು ಮಾಡುವ ನಾಯಕರನ್ನು ಇತರೆ ನಾಯಕರು ಹಾಗೂ ಸ್ಥಳೀಯ ಕಾರ್ಯಕರ್ತರ ಜತೆ ಚರ್ಚಿಸಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ವಿಶ್ವ ಪರಿಸರ ದಿನ ಅಂಗವಾಗಿ ಶುಕ್ರವಾರ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ. ಶಿವಕುಮಾರ್, ‘ಕೇವಲ ಅಧಿಕಾರದ ಆಸೆಯಿಂದ ಪಕ್ಷಕ್ಕೆ ಮರಳುವವರ ಅಗತ್ಯ ನಮಗಿಲ್ಲ. ಪಕ್ಷದ ಸಿದ್ಧಾಂತ, ಶ್ರೀಮತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನಾಯಕತ್ವದ ಮೇಲೆ ನಂಬಿಕೆ ಇಟ್ಟು, ತಾಲೂಕು ಮಟ್ಟದಲ್ಲಿ ಕಾರ್ಯಕರ್ತರ ಜತೆ ಬೆರೆತು ಕೆಲಸ ಮಾಡಲು ಸಿದ್ಧವಿದ್ದರೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ. ಈ ವೇಳೆ ಅವರು ಹೇಳಿದ್ದಿಷ್ಟು…

‘ನಮ್ಮ ಪಕ್ಷದಿಂದ ಬೇರೆ ಪಕ್ಷಕ್ಕೆ ಹೋಗಿರುವವರುವವರಲ್ಲಿ ಅನೇಕರು ಮತ್ತೆ ಕಾಂಗ್ರೆಸ್ ಗೆ ಮರಳಲು ಇಚ್ಚಿಸಿದ್ದಾರೆ. ಅಂತಹ ನಾಯಕರನ್ನು ಏಕಪಕ್ಷೀಯ ನಿರ್ಧಾರದಿಂದ ಪಕ್ಷಕ್ಕೆ ಸೇರಿಸಿಕೊಳ್ಳಲು ನಾನು ಸಿದ್ಧವಿಲ್ಲ. ಈ ವಿಚಾರದಲ್ಲಿ ಎಲ್ಲ ನಾಯಕರು ಹಾಗೂ ಸ್ಥಳೀಯ ನಾಯಕರ ಜತೆ ಜತೆ ಚರ್ಚೆ ನಡೆಸಬೇಕಿದೆ. ಹೀಗಾಗಿ ಪಕ್ಷಕ್ಕೆ ಮರಳಲು ಇಚ್ಛಿಸುವ ನಾಯಕರನ್ನು ಸೇರಿಸಿಕೊಳ್ಳುವ ವಿಚಾರದಲ್ಲಿ ಸರಿಯಾದ ಪರಾಮರ್ಶೆ ನಡೆಸಲು ಮಾಜಿ ಅಧ್ಯಕ್ಷರು ಹಾಗೂ ಹಿರಿಯ ನಾಯಕರಾದ ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.

ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡ ನಂತರ ಪಕ್ಷಕ್ಕೆ ಯಾವುದೇ ತೊಂದರೆಯಾಗಬಾರದು. ಪಕ್ಷ ಹಾಗೂ ಅದರ ಮೇಲಿನ ನಿಷ್ಠೆ ಪ್ರಮುಖವಾಗಿದೆ. ಕೇವಲ ಅಧಿಕಾರದ ಆಸೆಗೆ ಪಕ್ಷಕ್ಕೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ. ಇದು ಸುದೀರ್ಘ ಪರಿಣಾಮ ಬೀರುವಂತಹ ವಿಚಾರ. ಹೀಗಾಗಿ ಪಕ್ಷದ ಸಿದ್ಧಾಂತ ಒಪ್ಪಿ, ನಮ್ಮ ಹೈಕಮಾಂಡ್ ನಾಯಕತ್ವವನ್ನು ಒಪ್ಪಿ ಪಕ್ಷಕ್ಕೆ ಬರಬೇಕಿದೆ. ಈ ಸಮಿತಿ ಪರಾಮರ್ಷೆ ನಡೆಸಿದ ನೀಡುವ ಹೆಸರುಗಳನ್ನು ನಂತರ ಇತರೆ ನಾಯಕರ ಜತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.

ಬೇರೆ ಪಕ್ಷದಲ್ಲಿ ಏನಾಗುತ್ತಿದೆ ಎಂಬ ವಿಚಾರದ ಬಗ್ಗೆ ನಾವು ಮಾತನಾಡುವುದಿಲ್ಲ. ನಮ್ಮ ಪಕ್ಷದ ನಾಯಕರೂ ಕೂಡ ಬೇರೆ ಪಕ್ಷದ ಆಂತರಿಕ ವಿಚಾರದ ಬಗ್ಗೆ ಹೇಳಿಕೆ ನೀಡದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದೇನೆ. ಆದರೆ ಯಾವುದೇ ಷರತ್ತು ಇಲ್ಲದೇ ಕಾಂಗ್ರೆಸ್ ಜತೆ ಕೈಜೋಡಿಸಲು ಇಚ್ಛಿಸುವವರಲ್ಲಿ ಕೆಲವರು ಅರ್ಜಿ ಕೊಟ್ಟಿದ್ದು, ಈ ಅರ್ಜಿ ಸುದೀರ್ಘ ಸಮಯದಿಂದ ಹಾಗೇ ಉಳಿದಿದೆ. ಈ ಅರ್ಜಿಗಳನ್ನು ಸಮಿತಿಗೆ ನೀಡಿದ್ದೇನೆ.

ಕಾಂಗ್ರೆಸ್ ಪಕ್ಷಕ್ಕೆ ಬರುವ ನಾಯಕರು ಕೇವಲ ಮೇಲ್ಮಟ್ಟದ ನಾಯಕರ ಜತೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದರೆ ಸಾಲದು. ಅವರು ಜಿಲ್ಲೆ ಹಾಗೂ ತಾಲೂಕು ಮಟ್ಟದ ನಾಯಕರು, ಕಾರ್ಯಕರ್ತರ ಜತೆ ಸೇರೆ ಕೆಲಸ ಮಾಡುವಂತಿರಬೇಕು. ಪಕ್ಷಕ್ಕೆ ಬರುವ ನಾಯಕರು ತಾಲೂಕು ಮಟ್ಟದಲ್ಲಿ ಪಕ್ಷಕ್ಕೆ ಆಸ್ತಿಯಾಗುವಂತಿರಬೇಕು. ಸ್ಥಳೀಯವಾಗಿ ಇವರು ಅನೇಕ ವರ್ಷಗಳಿಂದ ಪರಸ್ಪರ ಹೋರಾಟ ನಡೆಸಿದ್ದಾರೆ. ಹೀಗಾಗಿ ಈ ಮಟ್ಟದಲ್ಲಿ ಪಕ್ಷಕ್ಕೆ ಬರುವ ನಾಯಕರೂ ಹಾಗೂ ಕಾರ್ಯಕರ್ತರು ಮುಂದೆ ಹೊಂದಾಣಿಕೆಯಿಂದ ಕೆಲಸ ಮಾಡುವಂತಿರಬೇಕು.

ಈ ವಿಚಾರದಲ್ಲಿ ನನಗೆ ಆದ ಕೆಲವು ಅನುಭವಗಳಿವೆ. ಸ್ಥಳೀಯ ಮಟ್ಟದಲ್ಲಿ ಚರ್ಚೆ ನಡೆಸದೇ ಪಕ್ಷಕ್ಕೆ ಸೇರಿಸಿಕೊಂಡರೆ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಎದುರಾಗದಂತೆ ಸ್ಥಳೀಯ ಮಟ್ಟದಲ್ಲೂ ಕಾರ್ಯಕರ್ತರು ಹಾಗೂ ಪಕ್ಷಕ್ಕೆ ಸೇರ್ಪಡೆಗೊಳ್ಳುವ ನಾಯಕರ ನಡುವೆ ಸಮರಸ್ಯ ಸೃಷ್ಟಿಸಬೇಕಿದೆ. ಹೀಗಾಗಿ ಬೇರೆ ಪಕ್ಷದ ನಾಯಕರನ್ನು ಸೇರಿಸಿಕೊಳ್ಳುವ ಮುನ್ನ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಖ್ಯ.’

*ಹಸಿರೊಳಗೆ ನಮ್ಮ ಉಸಿರಿದೆ*

ಇಂದು ಪರಿಸರ ದಿನ, ಹಸಿರೇ ನಮ್ಮ ಉಸಿರು, ಹಸಿರೊಳಗೆ ಉಸಿರಿದೆ. ಗಿಡ ಮರಗಳನ್ನು ನಾವು ಬೆಳೆಸಿ, ಪ್ರಕೃತಿಯನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು. ನಾವು ಒಂದು ಗಿಡವನ್ನಾದರೂ ನೆಟ್ಟು ಸಮಾಜಕ್ಕೆ ಸೇವೆ ಸಲ್ಲಿಸಬೇಕು. ಇಂದು ನಮ್ಮ ಕಾಂಗ್ರೆಸ್ ಭವನದಲ್ಲಿ ಸಾಂಕೇತಿಕವಾಗಿ ಗಿಡ ನೆಡುವ ಕಾರ್ಯ ನೆರವೇರಿಸುತ್ತಿದ್ದೇನೆ. ಈ ಕಾರ್ಯವನ್ನು ನಾವೆಲ್ಲರೂ ಮುಂದುವರಿಸಿಕೊಂಡು ಹೋಗಬೇಕು. ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು ನಡೆಯುವುದು ನಮ್ಮ ಜವಾಬ್ದಾರಿ. ಈ ಗಿಡ ಮರ ಇರೋದು ಜನರಿಗೆ ನೆರಳು, ಹಣ್ಣು, ಒಳ್ಳೆಯ ಗಾಳಿ ನೀಡಲು. ಇದನ್ನು ನಾವು ಗಮನದಲ್ಲಿಟ್ಟುಕೊಂಡು ಕಾಪಾಡಬೇಕು. ಈ ಸಂದರ್ಭದಲ್ಲಿ ನಾಡಿನ ಜನರಿಗೆ ಪರಿಸರ ದಿನದ ಶುಭಾಶಯ ತಿಳಿಸಲು ಬಯಸುತ್ತೇನೆ.

*ರಾಜ್ಯಸಭೆ ವಿಚಾರ ಹೈಕಮಾಂಡ್ ತೀರ್ಮಾನ:*

ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ‘ಈ ವಿಚಾರದಲ್ಲಿ ರಾಷ್ಟ್ರೀಯ ನಾಯಕರು ರಾಷ್ಟ್ರಮಟ್ಟದಲ್ಲಿ ತೆಗೆದುಕೊಂಡಿರುವ ತೀರ್ಮಾನ. ಇವತ್ತಿನವರೆಗೂ ಈ ಬಗ್ಗೆ ನನ್ನ ಬಳಿ ಯಾರೂ ಚರ್ಚೆ ಮಾಡಿಲ್ಲ. ರಾಷ್ಟ್ರೀಯ ನಾಯಕರು ನಮಗೆ ನೀಡುವ ಆದೇಶವನ್ನು ನಾವು ಪಾಲನೆ ಮಾಡುತ್ತೇವೆ.’

*ದೇವೇಗೌಡರಿಗೆ ಬೆಂಬಲ, ಸೋನಿಯಾ ಗಾಂಧಿ ಅವರು ತೀರ್ಮಾನಿಸುತ್ತಾರೆ:*

‘ಕುಮಾರಸ್ವಾಮಿ ಅವರು ಹಿರಿಯರಿದ್ದಾರೆ. ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ನಮ್ಮ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿ ಅವರು ನಮಗೆ ನೀಡುವ ಆದೇಶವನ್ನು ನಾವು ಪಾಲಿಸುತ್ತೇವೆ. ಇದು ಪಕ್ಷದ ಅಧ್ಯಕ್ಷನಾಗಿ ನನ್ನ ಅಭಿಪ್ರಾಯ’

*ಮೆಂಟಲ್ ಗಳು ಸುಮ್ಮನೆ ಮಾತನಾಡುತ್ತಾರೆ:*

ಕೆಲವು ಮೆಂಟಲ್ ಗಳು ತಮಗೆ ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಚುನಾವಣೆಯನ್ನು ಕಡಲೆಪುರಿ ವ್ಯಾಪಾರ ಎಂದು ಭಾವಿಸಿ 20, 30 ಎಂದು ನಂಬರ್ ಹೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಶಾಸಕರಿಗೆ ಅಗೌರವ ನೀಡುವುದು ಬೇಡ. ಯಾವ ಮಂತ್ರಿ ಯಾವ ಹೇಳಿಕೆ ನೀಡುತ್ತಿದ್ದಾರೆ. ಯಾವ ಹೊಟೇಲ್ ನಲ್ಲಿ ಯಾರು ಸಭೆ ನಡೆಸುತ್ತಿದ್ದಾರೆ, ನಿನ್ನೆ ರಾತ್ರಿ ಯಾರು, ಎಲ್ಲಿ, ಏನು ಸಭೆ ನಡೆಸಿದ್ದಾರೆ ಎಂಬುದನ್ನು ಗಮನಿಸುತ್ತಿದ್ದೇವೆ. ನಾವು ಇಲ್ಲಿ ಸುಮ್ಮನೆ ಕೂತಿಲ್ಲ. ನಮಗೆ ಬೇರೆಯವರ ಮನೆ ವಿಚಾರ ಬೇಡ. ನಾವುಂಟು ನಮ್ಮ ಮನೆ ಉಂಟು, ನಮ್ಮ ಶಾಸಕರುಂಟು.

*ಶಾಲೆ ತೆರಿಯುವ ವಿಚಾರದಲ್ಲಿ ಸಚಿವರಿಗೆ ಅಭಿಪ್ರಾಯ ತಿಳಿಸಿದ್ದೇನೆ:*

ಕೊರೋನಾ ಸಂದರ್ಭದಲ್ಲಿ ಶಾಲೆ ತೆರೆಯುವ ವಿಚಾರವಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕರೆ ಮಾಡಿದ್ದರು, ಪತ್ರ ಬರೆದಿದ್ದಾರೆ. ನಾನು ಅವರಿಗೆ ನನ್ನ ಅಭಿಪ್ರಾಯ ತಿಳಿಸಿದ್ದೇನೆ. ನೀವು ಪೋಷಕರ ಜತೆ ಚರ್ಚಿಸಿ. ಪ್ರತಿ ಪೋಷಕರಿಗೂ ಅವರ ಮಕ್ಕಳ ವಿಚಾರವಾಗಿ ಆತಂಕವಿರುತ್ತದೆ. ಶಿಕ್ಷಣ ಸಂಸ್ಥೆಗಳು ಕೂಡ ಪಾಠದ ಬಗ್ಗೆ ಜವಾಬ್ದಾರಿ ಹೊಂದಿದ್ದಾರೆ ಅವರೊಂದಿಗೆ ಕೂತು ಚರ್ಚಿಸಿ ಎಂದಿದ್ದೇನೆ. ಸರ್ಕಾರದ ಆಡಳಿತದಲ್ಲಿ ನಾನು ಹಸ್ತಕ್ಷೇಪ ಮಾಡಲು ಇಚ್ಛಿಸುವುದಿಲ್ಲ.

Leave a Reply