ಭಾರತದಲ್ಲಿ ಕೊರೋನಾ ರುದ್ರತಾಂಡವ; ಅಮೆರಿಕ, ಚೀನಾ ವರದಿ ಹೇಳ್ತಿರೊದೇನು?

ಡಿಜಿಟಲ್ ಕನ್ನಡ ಟೀಮ್:

ಭಾರತದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಲೇ ಸಾಗಿದೆ. ಇದೀಗ ವಿಶ್ವ ಮಟ್ಟದಲ್ಲಿ ಅತಿಹೆಚ್ಚು ಕೊರೊನಾ ಪೀಡಿತರನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಏರಿಕೆಯಾಗಿದೆ. ಸಾವಿನಿಂದಲೇ ಪ್ರಪಂಚದ ಗಮನ ಸೆಳೆದಿದ್ದ ಇಟಲಿಯನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೆ ಭಾರತ ಬಂದು ನಿಂತಿದೆ. ಇನ್ನೂ ನಿನ್ನೆ ಒಂದೇ ದಿನ‌ ದೇಶದಲ್ಲಿ ಕೊರೊನಾಗೆ 295 ಜನರು ಬಲಿಯಾಗಿದ್ದಾರೆ. ಕೊರೊನಾ ಆರಂಭದಿಂದಲೂ ದಿನವೊಂದರಲ್ಲಿ ಕೊರೊನಾಗೆ ಇಷ್ಟೊಂದು ಜನರು ಬಲಿಯಾಗಿದ್ದು ಇದೇ ಮೊದಲಾಗಿದೆ. ಇಲ್ಲೀವರೆಗೂ ಭಾರತದಲ್ಲಿ ಕೊರೊನಾದಿಂದ ಸತ್ತವರ ಸಂಖ್ಯೆ 6,642 ಆಗಿದೆ. ನಿನ್ನೆ ಒಂದೇ ದಿನ‌ ಹೊಸದಾಗಿ ಪತ್ತೆಯಾದ ಸೋಂಕಿತರ ಸಂಖ್ಯೆ 9,887 ಆಗಿದ್ದು, ದೇಶದದಲ್ಲಿ ಕೊರೊನಾ ಪೀಡಿತರ ಸಂಖ್ಯೆ 2 ಲಕ್ಷದ 36 ಸಾವಿರದ 657ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದೆ.

ಭಾರತದಲ್ಲಿ ಹೆಚ್ಚು ಪ್ರಕರಣ ಎಂದ ಅಮೆರಿಕ!

ಅಮರಿಕ ದೇಶ ಇಡೀ ವಿಶ್ವದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು ಹೊಂದಿದ ರಾಷ್ಟ್ರವಾಗಿದೆ. 19 ಲಕ್ಷದ 65 ಸಾವಿರದ 708 ಜನರಿಗೆ ಸೋಂಕು ಬಂದಿದ್ದು, ಸಾವಿನ ಸಂಖ್ಯೆ 1 ಲಕ್ಷದ 11 ಸಾವಿರದ 390 ಆಗಿದೆ. 7 ಲಕ್ಷದ 38 ಸಾವಿರದ 646 ಜನ ಗುಣಮುಖರಾಗಿದ್ದು, 11 ಲಕ್ಷದ 15 ಸಾವಿರದ 672 ಜನರಿಗೆ ಇನ್ನೂ ಚಿಕಿತ್ಸೆ ಕೊಡಲಾಗ್ತಿದೆ. ವಿಶ್ವದಲ್ಲೇ ಅತಿ ಹೆಚ್ಚು ಸೋಂಕಿತರನ್ನು ಹೊಂದಿದ್ದಾರೆ ಎನ್ನುತ್ತಿರುವ ಹೊತ್ತಿನಲ್ಲಿ ಅಮೆರಿಕ ಭಾರತ ಹಾಗೂ ಚೀನಾ ದೇಶದಕ್ಕೆ ಒಂದು ಸವಾಲು ಹಾಕಿದ್ದು, ಭಾರತ ಮತ್ತು ಚೀನಾದಲ್ಲಿ ಇನ್ನೂ ಹೆಚ್ಚು ಕೊರೊನಾ ಕರಣಗಳಿವೆ. ಹೆಚ್ಚು ಪರೀಕ್ಷೆ ಮಾಡಿದರೆ ಹೆಚ್ಚು ಪ್ರಕರಣಗಳು ಪತ್ತೆಯಾಗಲಿವೆ ಎಂದಿದ್ದಾರೆ. ಅಮೆರಿಕದಲ್ಲಿ ಅತಿಹೆಚ್ಚು ಕೊರೊನಾ ಪರೀಕ್ಷೆ ಮಾಡಿದ್ದೇವೆ. ಅದರಿಂದ ಅತಿಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಹೆಚ್ಚು ಪರೀಕ್ಷೆ ಮಾಡಿದರೆ ಭಾರತದಲ್ಲೂ ಹೆಚ್ಚು ಪ್ರಕರಣ ಬೆಳಕಿಗೆ ಬರಲಿದೆ. ಭಾರತ ಮತ್ತು ಚೀನಾದಲ್ಲಿ ಹೆಚ್ಚೆಚ್ಚು‌ ಕೊರೊನಾ ಪರೀಕ್ಷೆ ನಡೆಸಲಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಲಹೆ ರೂಪದಲ್ಲೇ ಸವಾಲು ಎಸೆದಿದ್ದಾರೆ.

ಸಂಕಷ್ಟದತ್ತ ಭಾರತ ಎಂದ ಚೀನಾ ವರದಿ..!

ಭಾರತದಲ್ಲಿ ಇನ್ನೂ ಹೆಚ್ಚಾಗಲಿದೆ ಕೊರೊನಾ ವೈರಸ್ ಹಾವಳಿ ಹೆಚ್ಚಾಗಲಿದೆ. ಇದೇ ತಿಂಗಳ ಮಧ್ಯ ಭಾಗದಲ್ಲಿ ಭಾರತದಲ್ಲಿ ಮಹಾ ಸ್ಫೋಟ ಆಗಲಿದೆ ಎಂದು ಚೀನಾ ದೇಶದ ವಿಶ್ವವಿದ್ಯಾಲಯವೊಂದು ವರದಿ ನೀಡಿದೆ. ಇದೀಗ ದಿನಕ್ಕೆ 10 ಸಾವಿರ ಸಮೀಪದಲ್ಲಿ ಹೊಸ ಕೇಸ್​ಗಳು ಪತ್ತೆಯಾಗುತ್ತಿದ್ದು, ಇನ್ಮುಂದೆ ದಿನಕ್ಕೆ 15 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಲಿವೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಚೀನಾದ ಲ್ಯಾಂಜೋ ವಿಶ್ವವಿದ್ಯಾಲಯದ ತಜ್ಞರು ಈ ಹಿಂದೆ ಭಾರತದಲ್ಲಿ ಜೂನ್​ ಆರಂಭದಲ್ಲಿ 9 ಸಾವಿರ ಆಸುಪಾಸಿನಲ್ಲಿ ಸೋಂಕು ಹೆಚ್ಚಳವಾಗಲಿದೆ ಎಂದು ಅಂದಾಜು ಮಾಡಿದ್ದರು. ಇದೀಗ ಭಾರತದಲ್ಲಿ ಅದೇ ಪ್ರಮಾಣದಲ್ಲಿ ಸೋಂಕು ಪತ್ತೆಯಾಗುತ್ತಿದೆ. ಜಾಗತಿಕವಾಗಿ ಕೊರೊನಾ ಹರಡಿಕೆ ಬಗ್ಗೆ ಸಂಶೋಧನೆ ಮಾಡುತ್ತಿರುವ ವಿಶ್ವವಿದ್ಯಾಲಯದ ತಜ್ಞರು, ಗ್ಲೋಬಲ್ ಕೋವಿಡ್ – 19 ಪ್ರೆಡಿಕ್ಟ್​ ಸಿಸ್ಟಮ್ ಹೆಸರಿನಲ್ಲಿ ಸಂಶೋಧನೆ ನಡೆಸಿದ್ದಾರೆ. 180 ದೇಶಗಳ ದೈನಂದಿನ ಮುನ್ಸೂಚನೆ ನೀಡುತ್ತಿದ್ದಾರೆ. ಅದೇ ರೀತಿ ಭಾರತದಲ್ಲಿ ಕೊರೊನಾ ಹೆಚ್ಚುವಿಕೆ ಬಗ್ಗೆ ಅಂದಾಜು ವರದಿ ಬಿಡುಗಡೆ ಮಾಡಿದ್ದಾರೆ. ಲಾಕ್​ಡೌನ್​ ವಿನಾಯಿತಿಯಿಂದ ಸೋಂಕು ಮತ್ತಷ್ಟು ಉಲ್ಬಣ ಆಗುತ್ತದೆ. ಸಾಮಾಜಿಕ ಅಂತರ, ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ಪಾಲನೆ ಮಾಡುವುದು ಅನುಮಾನ ಎಂದು ಲ್ಯಾಂಜೋ ವಿಶ್ವವಿದ್ಯಾಲಯದ ತಜ್ಞರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Reply