ಕಾಂಗ್ರೆಸ್‌, ಬಿಜೆಪಿ ರಾಜ್ಯಸಭೆ ಲೆಕ್ಕಾಚಾರ, ಗೌಡರಿಗೆ ಹಾದಿ ಸುಗಮ..!

ಡಿಜಿಟಲ್ ಕನ್ನಡ ಟೀಮ್:

ರಾಜ್ಯಸಭಾ ಚುನಾವಣೆ ಅಖಾಡ ಅಂತಿಮ ಘಟ್ಟ ತಲುಪುತ್ತಿದೆ. ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಿದ ಬಳಿಕ ಇಂದು ಬಿಜೆಪಿ ಕೋರ್‌ ಕಮಿಟಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಕ್ತಾಯವಾಗಿದೆ. ಮೂವರು ಅಭ್ಯರ್ಥಿಗಳು ಹೆಸರು ಆಯ್ಕೆ ಮಾಡಿದ್ದು, ಪ್ರಭಾಕರ್ ಕೋರೆ, ರಮೇಶ್ ಕತ್ತಿ, ಹಾಗೂ ಉದ್ಯಮಿ ಪ್ರಕಾಶ್ ಶೆಟ್ಟಿ ಹೆಸರನ್ನು ಕಳುಹಿಸಲಾಗಿದೆ ಎನ್ನಲಾಗಿದೆ. ಈ ಮೂವರು ಹೆಸರನ್ನು ಕಳುಹಿಸಲು ಸಭೆ ನಿರ್ಧಾರ ಮಾಡಿದ್ದು, ಅಂತಿಮವಾಗಿ ಚುನಾವಣೆಗೆ ಇಬ್ಬರನ್ನು ಮಾತ್ರ ಕಣಕ್ಕಿಳಿಸಲು ಒಮ್ಮತದ ನಿರ್ಧಾರ ಮಾಡಿದ್ದಾರೆ. ಈ ಮೂವರಲ್ಲಿ ಇಬ್ಬರನ್ನು ಆಯ್ಕೆ ಮಾಡುವಂತೆ ಹೈಕಮಾಂಡ್‌ಗೆ ಶಿಫಾರಸು ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಇದೇ ಹೆಸರು ಅಂತಿಮವಾಗುತ್ತಾ ಬೇರೆ ಹೆಸರು ಮಧ್ಯದಲ್ಲಿ ತೂರಿ ಬರುತ್ತಾ ಎನ್ನುವ ಬಗ್ಗೆ ಕೌತುಕ ಸೃಷ್ಟಿಯಾಗಿದೆ.

ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾಗಬೇಕು ಎನ್ನುವುದು ಬಹುತೇಕ ರಾಜಕಾರಣಿಗಳ ಆಶಯ. ದೇವೇಗೌಡರು ಸ್ಪರ್ಧೆ ಮಾಡಿದರೆ ಶಾಸಕರು ಪಕ್ಷಾತೀತವಾಗಿ ಬೆಂಬಲಿಸುತ್ತಾರೆ ಎನ್ನುವುದು ಜೆಡಿಎಸ್‌ ಶಾಸಕರ ನಂಬಿಕೆ. ಈ ಬಗ್ಗೆ ಹಲವು ಜೆಡಿಎಸ್‌ ಶಾಸಕರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಆ ಮಾತು ಈಗ ಸತ್ಯವಾಗುವ ಕಾಲ ಹತ್ತಿರ ಬಂದಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಕ್ರಮವಾಗಿ ಒಂದು ಮತ್ತು ಎರಡು ಸ್ಥಾನಗಳಿಗೆ ಮಾತ್ರ ಸ್ಪರ್ಧೆ ಮಾಡುತ್ತಿದ್ದು, ಇನ್ನೊಂದು ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡದಿರಲು ನಿರ್ಧಾರ ಮಾಡಿವೆ. ಹಾಗಾಗಿ ಉಳಿದ ಸ್ಥಾನಕ್ಕೆ ಮಾಜಿ ಪ್ರಧಾನಿ ಹೆಚ್‌. ಡಿ ದೇವೇಗೌಡರು ಸ್ಪರ್ಧೆ ಮಾಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ನಾಮಪತ್ರ ಸಲ್ಲಿಕೆಗೆ ಮೇ 9 ಕಡೆ ದಿನವಾಗಿದೆ. ಸೋಮವಾರ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಬಿಜೆಪಿಯಿಂದ ಅಧಿಕೃತ ಘೋಷಣೆ ಹೊರಬಿದ್ದ ಬಳಿಕ ಜೆಡಿಎಸ್‌ ನಿರ್ಧಾರ ಹೊರ ಬೀಳುವ ಸಾಧ್ಯತೆಯಿದೆ.

ಗೌಡರ ಅವಶ್ಯಕತೆ ರಾಜ್ಯಸಭೆಯಲ್ಲಿ ಇದೆಯಾ..?

ಈ ರೀತಿಯ ಒಂದು ಚರ್ಚೆ ದೇವೇಗೌಡರ ಸ್ಪರ್ಧೆ ಬಳಿಕ ಶುರುವಾಗುವುದು ಬಹುತೇಕ ಖಚಿತ. ದೇವೇಗೌಡರು ಈ ವಯಸ್ಸಿನಲ್ಲಿ ಸ್ಪರ್ಧೆ ಮಾಡಬೇಕಾ ಎನ್ನುವ ಚರ್ಚೆ ಸಮಂಜಸ ಕೂಡ. ಆದರೆ ರಾಜ್ಯದ ಮುಖ್ಯಮಂತ್ರಿ ಆಗಿ, ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಹೆಚ್‌.ಡಿ ದೇವೇಗೌಡರು ರಾಜಕಾರಣದಲ್ಲಿ ಹಾಗೂ ಜನಸೇವೆಯಲ್ಲಿ ಸಾಕಷ್ಟು ಅನುಭವ ಹೊಂದಿರುವ ರಾಜಕಾರಣಿ ಎಂದರೆ ತಪ್ಪಾಗಲಾರದು. ರಾಜ್ಯಸಭೆ ಎಂದರೆ ಬುದ್ಧಿವಂತರ ಸಮೂಹ ಇರಬೇಕಾದರ ಸಂಸತ್‌. ಈದೀಗ ಭಾರತದ ಆರ್ಥಿಕತೆ ಒಂದು ಕಡೆ ಹಳ್ಳ ಹಿಡಿದಿದ್ದರೆ, ಇನ್ನೊಂದು ಕಡೆ ಕೊರೊನಾ ಸಂಕಷ್ಟಕ್ಕೆ ಸಿಲುಕಿ ಭಾರತ ಪರಿಸ್ಥಿತಿ ದಿಕ್ಕಾಪಾಲಾಗಿದೆ. ಈ ಸಮಯದಲ್ಲಿ ಸರ್ಕಾರಕ್ಕೆ ಸೂಕ್ತ ಸಲಹೆ ಸೂಚನೆಗಳ ಅವಶ್ಯಕತೆ ಇರುತ್ತದೆ. ಮಾಜಿ ಪ್ರಧಾನಿಯಾಗಿ ಸರ್ಕಾರಕ್ಕೆ ಸಲಹೆ ಸೂಚನೆ ಕೊಡಬಹುದು ಅಡ್ಡಿಯೇನಿಲ್ಲ. ಆದರೂ ಒಂದು ಸಂಸತ್‌ ಸದಸ್ಯನಾಗಿದ್ದರೆ, ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಲು ಸಹಕಾರಿಯಾಗಲಿದೆ. ಮಾಜಿ ಪ್ರಧಾನಿ ದೇವೇಗೌಡರಿಗೂ ಈ ವಯಸ್ಸಿನಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿ ಸಾಧನೆ ಮಾಡಬೇಕಾದ ಅವಶ್ಯಕತೆ ಏನೂ ಇಲ್ಲ. ಅದೇ ಕಾರಣಕ್ಕಾ ನಾನು ಸ್ಪರ್ಧೆ ಮಾಡುವುದಿಲ್ಲ, ಅವಿರೋಧವಾಗಿ ಆಯ್ಕೆ ಮಾಡಿದರೆ ನನ್ನ ಅನುಭವವನ್ನು ಹೇಳಿಕೊಳ್ಳಬಲ್ಲೆ ಎಂದಿದ್ದಾರಂತೆ. ಅದೇ ಕಾರಣಕ್ಕೆ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧಾರ ಮಾಡಲಾಗಿದೆ. ಉಳಿದೊಂದು ಸ್ಥಾನಕ್ಕೆ ಗೌಡರು ಕನ್ಫರ್ಮ್.‌

Leave a Reply