ರಾಜ್ಯಸಭೆಗೆ ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿ ಆಯ್ಕೆ.. ಕಂಗಾಲಾದ ಕಮಲ ಪಡೆ..!

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಬಿಜೆಪಿ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ರಾಜ್ಯ ನಾಯಕರು ಶಿಫಾರಸ್ಸು ಮಾಡಿದ್ದ ಮೂವರು ನಾಯಕರನ್ನು ಹೊರತುಪಡಿಸಿ ಇಬ್ಬರು ಹೊಸ ನಾಯಕರಾದ ಅಶೋಕ್ ಗಸ್ತಿ ಹಾಗೂ ಈರಣ್ಣ ಕಡಾಡಿ ಅವರನ್ನು ಹೈಕಮಾಂಡ್ ಆಯ್ಕೆ ಮಾಡಿದೆ.

ರಾಜ್ಯ ಬಿಜೆಪಿ ನಾಯಕರು ಕೋರ್ ಕಮಿಟಿ ಸಭೆ ನಡೆಸಿ ಮೂವರು ನಾಯಕರನ್ನು ರಾಜ್ಯಸಭೆಗೆ ಕಳುಹಿಸಲು ಶಿಫಾರಸು ಮಾಡಿದ್ದರು. ರಾಜ್ಯಸಭಾ ಸದ್ಯಸ್ಯರಾಗಿ ನಿವೃತ್ತಿ ಆಗುತ್ತಿರುವ ಪ್ರಭಾಕರ್ ಕೋರೆ ಅವರನ್ನು ಮರು ಆಯ್ಕೆ ಹಾಗೂ ಬಂಡಾಯ ಎದ್ದಿದ್ದ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಮತ್ತು ಉದ್ಯಮಿ ಪ್ರಕಾಶ್ ಶೆಟ್ಟಿ ಅವರ ಹೆಸರು ಶಿಫಾರಸು ಮಾಡಿದ್ದ ರಾಜ್ಯ ಬಿಜೆಪಿ ಘಟಕ ಈ ಮೂವರಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಅಂತಿಮ ಮಾಡುವಂತೆ ಮನವಿ ಮಾಡಿದ್ದರು. ಆದರೆ ಹೈಕಮಾಂಡ್ ಬೇರೆ ನಾಯಕರನ್ನು ಆಯ್ಕೆ ಮಾಡಿ ರಾಜ್ಯ ಬಿಜೆಪಿ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಶಾಕ್ ಕೊಟ್ಟಿದೆ.

ಈ ಬಗ್ಗೆ ಮಾತನಾಡಿರುವ ಅಶೋಕ್ ಗಸ್ತಿ, ‘ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ನಾನು ರಾಜ್ಯಸಭಾ ಟಿಕೆಟ್ ಕೇಳಿರಲಿಲ್ಲ. ಕಳೆದ 30 ವರ್ಷದಿಂದ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ನನ್ನನ್ನು ಗುರುತಿಸಿ ನಮ್ಮ ಪಕ್ಷ ಆಯ್ಕೆ ಮಾಡಿದೆ. ನನ್ನನ್ನು ಆಯ್ಕೆ ಮಾಡಿರುವುದು ಪಕ್ಷದ ನಿರ್ಧಾರ ಆಗಿದೆ. ಆಯ್ಕೆ ಮಾಡಿರುವುದೇ ನನ್ನ ಗಮನಕ್ಕೆ ಬಂದಿರಲಿಲ್ಲ. ಇದೀಗ ಗೊತ್ತಾಗಿದೆ’ ಎಂದಿದ್ದಾರೆ.

ಇನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಮಾತನಾಡಿ, ‘ರಾಜ್ಯಸಭೆಗೆ ಕರ್ನಾಟಕ ರಾಜ್ಯದಿಂದ ಇಬ್ಬರು ಸಾಮಾನ್ಯ ಕಾರ್ಯಕರ್ತರನ್ನು ಆಯ್ಕೆ ಮಾಡಲಾಗಿದೆ. ತೀರ ಹಿಂದುಳಿದ ಸಮಾಜದ ವ್ಯಕ್ತಿಯನ್ನೂ ರಾಜ್ಯಸಭೆ ಆಯ್ಕೆ ಮಾಡಲಾಗಿದೆ. ಪಕ್ಷದ ಸಂಘಟನೆಗೆ ಒತ್ತು ಕೊಡುವ ಸಾಮಾನ್ಯ ಕಾರ್ಯಕರ್ತರನ್ನು ಆಯ್ಕೆ ಮಾಡುವ ಶಕ್ತಿ ಇರುವುದು ಕೇವಲ ಭಾರತೀಯ ಜನತಾ ಪಾರ್ಟಿಗೆ ಮಾತ್ರ’ ಎಂದಿದ್ದಾರೆ.

ಮಾಜಿ ಸಿಎಂ ಹಾಗೂ ಹಾಲಿ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ‘ಇಬ್ಬರು ಸಾಮಾನ್ಯ ಕಾರ್ಯಕರ್ತರನ್ನು ಆಯ್ಕೆ ಮಾಡಿರುವುದು ನಮ್ಮ ಪಕ್ಷದ ನಿರ್ಧಾರ ಆಗಿದೆ. ಪಕ್ಷ ಸಂಘಟನೆ ನೋಡಿಕೊಂಡು ಬಿಜೆಪಿ ಹೈಕಮಾಂಡ್ ಈ ತೀರ್ಮಾನ ಮಾಡಿದೆ. ಪ್ರಭಾಕರ ಕೋರೆ, ರಮೇಶ ಕತ್ತಿಗೆ ಅಸಮಾಧಾನವಾಗುವ ಪ್ರಶ್ನೇಯೆ ಇಲ್ಲ. ಪಕ್ಷದ ಹೈಕಮಾಂಡ ತಿರ್ಮಾನಕ್ಕೆ ಎಲ್ಲರೂ ಬದ್ದರಾಗಿರಬೇಕು. ಕೋರೆ ಮತ್ತು ರಮೇಶ ಕತ್ತಿ ಜೊತೆ ನಾನು ಮಾತನಾಡುತ್ತೇನೆ. ರಾಜ್ಯ ಬಿಜೆಪಿ ಮೂವರ ಹೆಸರನ್ನು ಶಿಫಾರಸು ಮಾಡಿ ಹೈಕಮಾಂಡಗೆ ಕಳುಹಿಸಿತ್ತು. ಅಂತಿಮವಾಗಿ ಇಬ್ಬರ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸಿದೆ. ಈಗ ಟಿಕೆಟ್ ಸಿಕ್ಕವರು ಪಕ್ಷಕ್ಕಾಗಿ ದುಡಿದಿದ್ದಾರೆ. ಹೈಕಮಾಂಡ ಅವರನ್ನು ಗುರುತಿಸಿದೆ’ ಎಂದಿದ್ದಾರೆ.

ಆದರೆ, ಪ್ರತಿ ಬಾರಿ ಹೈಕಮಾಂಡ್ ನಾಯಕರು ಯಡಿಯೂರಪ್ಪ ಆಯ್ಕೆ ಮಾಡಿದ ಯಾರೊಬ್ಬರಿಗೂ ಅವಕಾಶ ಕೊಡದೆ ಬೇರೆಯದೇ ತಂತ್ರಗಾರಿಕೆ ಮಾಡುತ್ತಿದೆ. ಬಿ.ಎಸ್ ಯಡಿಯೂರಪ್ಪ ಅವರಿಗೆ ಶಾಕ್ ಮೇಲೆ ಶಾಕ್ ಕೊಡುತ್ತಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭಾ ಟಿಕೆಟ್ ಆಯ್ಕೆಯಿಂದ ಹಿಡಿದು, ಬಿಬಿಎಂಪಿ ಮೇಯರ್, ವಿಧಾನಸಭಾ ಸ್ಪೀಕರ್, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ, ಮೂವರು ಉಪಮುಖ್ಯಮಂತ್ರಿಗಳ ನೇಮಕ ಸೇರಿದಂತೆ ರಾಜ್ಯಸಭೆ ಅಭ್ಯರ್ಥಿಗಳು ಆಯ್ಕೆಯಲ್ಲೂ ಕೌಂಟರ್ ಮುಂದುವರಿಸಿದ್ದಾರೆ ಎನ್ನಲಾಗ್ತಿದೆ. ಇದೀಗ ಉಮೇಶ್ ಕತ್ತಿ ಮತ್ತೆ ಬಂಡಾಯ ಬಾವುಟ ಹಾರಿಸುತ್ತಾರಾ ಎನ್ನುವುದೇ ಕೌತುಕದ ವಿಚಾರ.

Leave a Reply