ಡಿಜಿಟಲ್ ಕನ್ನಡ ಟೀಮ್:
ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಪದಗ್ರಹಣ ಸ್ವೀಕರಿಸುವ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದ್ದು, ಕೋವಿಡ್ ಪಿಡುಗು ಹೆಸರಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದೆಯೇ ಎಂಬ ಅನುಮಾನ ಮೂಡಿದೆ.
ಕೊರೊನಾ ಸೋಂಕು ರಾಜ್ಯ ಸೇರಿದಂತೆ ದೇಶದಲ್ಲಿ ರುದ್ರ ನರ್ತನ ಮಾಡುತ್ತಿದೆ. ಲಾಕ್ಡೌನ್ ವೇಳೆ ಕೊರೊನಾ ನಿಯಂತ್ರಣವನ್ನು ಕಟ್ಟುನಿಟ್ಟಾಗಿ ಮಾಡಲು ಸಾಧ್ಯವಾಗದ ರಾಜ್ಯ ಹಾಗೂ ಕೇಂದ್ರ ಸರ್ಕಾರ ಜೂನ್ 8 ರಿಂದ ಅನ್ಲಾಕ್ ಮಾಡಿದೆ. ಬಹುತೇಕ ಶೇಕ 95 ರಷ್ಟು ಎಲ್ಲಾ ವ್ಯವಹಾರಗಳು ಮುಕ್ತವಾಗಿವೆ. ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯ ಎಂದು ಹೇಳುವ ಮೂಲಕ ಮುಕ್ತ ವ್ಯವಹಾರಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ ವಿರೋಧ ಪಕ್ಷಗಳ ವಿಚಾರದಲ್ಲಿ ಮಾತ್ರ ರಾಜ್ಯ ಸರ್ಕಾರ ರಾಜಕಾರಣ ಮಾಡುತ್ತಿದ್ಯಾ ಎನ್ನುವ ಅನುಮಾನ ಶುರುವಾಗುವಂತೆ ಮಾಡಿದೆ.
ಕಳೆದ ಮೂರು ತಿಂಗಳ ಹಿಂದೆ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದರು. ಅಂದಿನಿಂದಲೂ ಕರೋನಾ ಸೋಂಕು ತಡೆಯುವ ಉದ್ದೇಶದಿಂದ ದೇಶದಲ್ಲಿ ಲಾಕ್ಡೌನ್ ಜಾರಿಯಲ್ಲಿತ್ತು. ಹಾಗಾಗಿ ಪದಗ್ರಹಣ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಇದೀಗ ಪದಗ್ರಹಣ ಕಾರ್ಯಕ್ರಮಕ್ಕೆ ವಕಾಶ ಕೋರಿ ಡಿ.ಕೆ ಶಿವಕುಮಾರ್ ಎರಡು ಬಾರಿ ಮನವಿ ಮಾಡಿಕೊಂಡರೂ ಸರ್ಕಾರ ಮಾತ್ರ ಅವಕಾಶ ನಿರಾಕರಣೆ ಮಾಡಿದೆ.
ಜೂನ್ ೧೪ ರಂದು ಕಾರ್ಯಕ್ರಮ ನಡೆಸಲು ಮುಂದಾಗಿದ್ದ ಡಿಕೆ ಶಿವಕುಮಾರ್ಗೆ ಶಾಕ್ ಕೊಟ್ಟಿದ್ದು, ಅಧಿಕಾರ ಹಸ್ತಾಂತರ ಕಾರ್ಯಕ್ರಮಕ್ಕೆ ಸರ್ಕಾರ ಅವಕಾಶ ನಿರಾಕರಣೆ ಮಾಡಿರುವ ಬಗ್ಗೆ ಅಧಿಕೃತವಾಗಿ ಪತ್ರದ ಮೂಲಕ ಸ್ಪಷ್ಟನೆ ಕಳುಹಿಸಲಾಗಿದೆ. ಮದುವೆ, ಶವಸಂಸ್ಕಾರಕ್ಕೆ ಮಾತ್ರ ಅವಕಾಶ ಕೊಡಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಸ್ಪಷ್ಟವಾಗಿದೆ. ಹೀಗಾಗಿ ರಾಜಕೀಯ ಕಾರ್ಯಕ್ರಮಕ್ಕೆ ಅವಕಾಶವಿಲ್ಲ ಎಂದು ಪತ್ರದ ಮೂಲಕ ಸರ್ಕಾರ ತಿಳಿಸಿದೆ.
ಲಾಕ್ಡೌನ್ ಆಗಿದ್ರಿಂದ ಕಳೆದ ಮೂರು ಬಾರಿ ನಿಗದಿಯಾಗಿದ್ದ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಮುಂದೂಡಿಕೆಯಾಗಿತ್ತು. ಇದೀಗ ಲಾಕ್ಡೌನ್ ಸಡಿಲಿಕೆ ನಂತರ ಅವಕಾಶ ಸಿಗು ನಿರೀಕ್ಷೆಯಿತ್ತು. ಆದರೆ ನಾಲ್ಕನೇ ಬಾರಿಯೂ ಡಿ.ಕೆ ಶಿವಕುಮಾರ್ ಅಧಿಕಾರ ಹಸ್ತಾಂತರಕ್ಕೆ ಅವಕಾಶ ನಿರಾಕರಣೆ ಮಾಡಲಾಗಿದೆ. ಸರ್ಕಾರದ ನಡೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ನಿರ್ಧಾರ ರಾಜಕೀಯ ಪ್ರೇರಿತ. ಇದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ. ಇದು ಪ್ರತಿಪಕ್ಷಗಳನ್ನ ಹತ್ತಿಕ್ಕುವ ಪ್ರಯತ್ನವಾಗಿದೆ. ರಾಜಕೀಯ ದುರುದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದೆ. ಅಮಿತ್ ಶಾ ಪಶ್ಚಿಮ ಬಂಗಾಳದಲ್ಲಿ ಪ್ರಚಾರ ಮಾಡಿದ್ದಾರೆ. ಅಲ್ಲಿ ಅನ್ವಯವಾಗದ ನಿಯಮ ಇಲ್ಲೇಕೆ..? ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ಸರ್ಕಾರ ಪದಗ್ರಹಣ ಕಾರ್ಯಕ್ರಮಕ್ಕೆ ಅವಕಾಶ ಕೊಡಬೇಕು ಎಂದು ಆಗ್ರಹ ಮಾಡಿದ್ದಾರೆ.
ಸರ್ಕಾರ ದಮನಕಾರಿ ಪ್ರವೃತ್ತಿ ತೋರಿದರೂ ನಾವು ಸುಮ್ಮನಿರಲ್ಲ. ಕಾಂಗ್ರೆಸ್ ಕಾರ್ಯಕರ್ತರು ಈ ಕಾರ್ಯಕ್ರಮ ಮಾಡಿ ಮುಗಿಸುತ್ತಿದ್ರು. ಆದರೆ ನಾವು ಕಾನೂನು ಗೌರವಿಸುವವರೇ ಹೊರತು ಕಾನೂನು ಭಂಗ ಮಾಡುವರಲ್ಲ ಎಂದು ಸರ್ಕಾರದ ನಡೆ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ. ಒಟ್ಟಾರೆ, ರಾಜ್ಯ ಸರ್ಕಾರ ಕೆಲವೊಂದು ವಿಚಾರದಲ್ಲಿ ಸುಮ್ಮನಿದ್ದು ಮೂಕಪ್ರೇಕ್ಷನಾಗಿರುತ್ತೆ. ಆದರೆ ಕಾನೂನು ಪ್ರಕಾರ ಅಧಿಕಾರ ಹಸ್ತಾಂತರಕ್ಕೆ ಡಿ.ಕೆ ಶಿವಕುಮಾರ್ ಮನವಿ ಮಾಡಿಕೊಂಡರೆ ಸರ್ಕಾರ ಅವಕಾಶ ನಿರಾಕರಣೆ ಮಾಡುವ ಮೂಲಕ ಬಂಡಾಟ ಪ್ರದರ್ಶನ ಮಾಡುತ್ತದೆ. ಸರ್ಕಾರದ ಧ್ವಂದ್ವನೀತಿ ಅನುಸರಿಸುವುದು ಯಾವ ನ್ಯಾಯ ಎಂದು ಜನಸಾಮಾನ್ಯರು ಪ್ರಶ್ನೆ ಮಾಡುವಂತಿದೆ.