ಒಂದೆರಡು ದಿನಗಳಲ್ಲಿ ಪದಗ್ರಹಣ ದಿನಾಂಕ ಘೋಷಣೆ: ಡಿ.ಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

ಪಕ್ಷದ ಹಿರಿಯ ನಾಕರುಗಳ ಜತೆ ಚರ್ಚಿಸಿ ಮುಂದಿನ ಒಂದೆರಡು ದಿನಗಳಲ್ಲೇ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಪ್ರತಿಜ್ಞಾ ಕಾರ್ಯಕ್ರಮದ ದಿನಾಂಕ ಪ್ರಕಟಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಭಾನುವಾರ ಕೆಪಿಸಿಸಿ ನೂತನ ಕಟ್ಟ ನಿರ್ಮಾಣದ ಕಾಮಗಾರಿ ಪುನರಾರಂಭ ಅಂಗವಾಗಿ ವಿಶೇಷ ಪೂಜೆ ನೆರವೇರಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್ ಹೇಳಿದ್ದಿಷ್ಟು…

ಇಂದು ನಡೆದ ಪೂಜೆ, ಎರಡು ಮೂರು ವರ್ಷಗಳಿಂದ ನಿಂತು ಹೋಗಿದ್ದ ಪಕ್ಷದ ನೂತನ ಕಚೇರಿ ಕಟ್ಟಡ ಕಾಮಗಾರಿ ಪುನರಾರಂಭಿಸಲು ಯಾವುದೇ ವಿಘಗಳು ಅಡ್ಡಿಯಾಗಬಾರದು, ಇದರಿಂದ ನಮ್ಮ ನಾಯಕರುಗಳು, ಕಾರ್ಯಕರ್ತರಿಗೆ ಒಳ್ಳೆಯದಾಗಬೇಕು, ಇಲ್ಲಿ ಕೆಲಸ ಮಾಡಲಿರುವ ನೂರಾರು ಕಾರ್ಮಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ವಿಘ ನಿವಾರಕ ವಿನಾಯಕನ ಪೂಜೆ ಮಾಡಲಾಗಿದೆ.

ಈ ಪೂಜೆ ಕೊರೋನಾದಂತಹ ಸಮಯದಲ್ಲಿ ಎಲ್ಲ ಸಮಸ್ಯೆಗಳು ಬಗೆಹರಿದು ಲೋಕ ಕಲ್ಯಾಣವಾಗಲಿ ಎಂಬ ಉದ್ದೇಶದೊಂದಿಗೆ ನಮ್ಮ ನಂಬಿಕೆಗಳ ಪ್ರಕಾರ ಪೂಜೆ ಮಾಡಲಾಗುತ್ತಿದೆ. ಇದು ಪದಗ್ರಹಣಕ್ಕೆ ಸಂಬಂಧಿಸಿದ್ದಲ್ಲ. ಅದರ ಬಗ್ಗೆ ಆಮೇಲೆ ನೋಡೋಣ. ಸದ್ಯಕ್ಕೆ ಪಕ್ಷದ ಕಟ್ಟಡ ಕಾರ್ಯಕ್ಕೆ ಇದನ್ನು ಖಾಸಗಿ ಕಾರ್ಯಕ್ರಮದ ರೀತಿ ಮಾಡಲಾಗುತ್ತಿದೆ.

ನಮ್ಮ ವಿರೋಧ ಪಕ್ಷದ ನಾಯಕರು ಬೇರೆ ಊರಿನಲ್ಲಿದ್ದ ಕಾರಣ ಪದಗ್ರಹಣ ದಿನಾಂಕ ಕುರಿತು ಚರ್ಚೆ ನಡೆಸಿಲ್ಲ. ಇಂದು ನಮ್ಮ ಹಿರಿಯ ನಾಯಕರಾದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಎಸ್.ಆರ್ ಪಾಟೀಲ್ ಸೇರಿದಂತೆ ಕಾರ್ಯಾಧ್ಯಕ್ಷರುಗಳು ಹಾಗೂ ಶಾಸಕರ ಜತೆ ಮಾತುಕತೆ ನಡೆಸಬೇಕಿದೆ.

ಈ ಮಧ್ಯೆ ಪರಿಷತ್ ಚುನಾವಣೆ ಎದುರಾಗುತ್ತಿದ್ದು, ಈ ಸಂದರ್ಭದಲ್ಲಿ ನಾಮಪತ್ರ ಸಲ್ಲಿಕೆ ಸೇರಿದಂತೆ ಅನೇಕ ಕೆಲಸಗಳು ಬರಲಿವೆ. ಈ ಹೊತ್ತಲ್ಲಿ ಶಾಸಕರುಗಳಿಗೆ ತೊಂದರೆ ಕೊಡುವುದು ಬೇಡ. ಹೀಗಾಗಿ ನಾಯಕರುಗಳ ಜತೆ ಚರ್ಚಿಸಿ ಒಂದೆರಡು ದಿನಗಳಲ್ಲಿ ದಿನಾಂಕ ಪ್ರಕಟಿಸಲಾಗುವುದು.’

ನಾವೇನಿದ್ದರು ಪ್ರಸಾದ ಸ್ವೀಕರಿಸುತ್ತೇವೆ:

ಕೊರೋನಾ ಸೋಂಕು ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಸರ್ಕಾರಕ್ಕೆ ಸಲಹೆ ನೀಡುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿ.ಕೆ ಶಿವಕುಮಾರ್, ‘ಸರ್ಕಾರದ ನಿರ್ಧಾರದಲ್ಲಿ ನಾವು ತಲೆ ಹಾಕುವುದಿಲ್ಲ. ಅನೇಕ ವೈದ್ಯರು ಮಂತ್ರಿಗಳಿದ್ದಾರೆ. ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದನ್ನು ಪ್ರಸಾದವಾಗಿ ಸ್ವೀಕರಿಸುತ್ತೇವೆ. ಸರ್ಕಾರದಲ್ಲಿ ಅನೇಕ ಬುದ್ಧಿವಂತರು ಇದ್ದಾರೆ, ಅವರೊಂದಿಗೆ ನಾವು ಸ್ಪರ್ಧೆ ಮಾಡಲು ಹೋಗುವುದಿಲ್ಲ. ಅವರೇನು ಮಾಡುತ್ತಾರೋ ಮಾಡಲಿ’ ಎಂದರು.

ಇನ್ನು ಇಂದಿನ ಬಿಜೆಪಿ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು, ‘ಬಿಜೆಪಿ ಅವರು ಒಂದು ವರ್ಷದಿಂದ ಏನು ಮಾಡಿದ್ದಾರೆ ಅಂತಾ ಕಾರ್ಯಕ್ರಮ ಮಾಡುತ್ತಿದ್ದಾರೆ? ನುಡಿದಂತೆ ನಡೆಯಲಿಲ್ಲ, ಕೊಟ್ಟಮಾತು ಉಳಿಸಿಕೊಳ್ಳಲಿಲ್ಲ. ಅವರು ಏನು ಮಾತನಾಡುತ್ತಾರೆ ನೋಡೋಣ, ಆಮೇಲೆ ಮಾತನಾಡುತ್ತೀನಿ’ ಎಂದರು.

Leave a Reply