ರಾಜ್ಯದಲ್ಲಿ ಮತ್ತೆ ಏರಿಕೆಯಾಗುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದೆ. ಇಂದು ರಾಜ್ಯದಲ್ಲಿ ಹೊಸದಾಗಿ 317 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಕರ್ನಾಟಕದಲ್ಲಿ ಒಟ್ಟು 7,530 ಜನರಿಗೆ ಸೋಂಕು ಹರಡಿದಂತಾಗಿದೆ. ಇಂದು 322 ಜನರು ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಅದರಲ್ಲೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದ ಉಡುಪಿ ಜಿಲ್ಲೆಯಲ್ಲಿ 81 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆ ಸೇರಿದ್ದಾರೆ. ಮಹಾರಾಷ್ಟ್ರದ ಪ್ರಯಾಣಿಕರು ಗುಣಮುಖರಾಗಿ ಮನೆಗೆ ಹೋಗಿರುವುದು ಜಿಲ್ಲೆಯಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಇನ್ನೂ 78 ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇಂದು ಕೊರೊನಾ ವೈರಸ್‌ಗೆ ರಾಜ್ಯದಲ್ಲಿ 7 ಜನರು ಬಲಿಯಾಗಿದ್ದಾರೆ.

ಇಷ್ಟು ದಿನಗಳ ಕಾಲ‌ ರಾಜ್ಯದಲ್ಲಿ ಯಾವುದೇ ರೋಗಿ ಐಸಿಯುವಿನಲ್ಲಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಎಲ್ಲಾ ಸಚಿವರು ಹೇಳುತ್ತಿದ್ದರು. ಆದರೆ ಲಾಕ್‌ಡೌನ್ ಮುಕ್ತಾಯವಾಗಿ ಅನ್‌ಲಾಕ್ ಶುರುವಾದ ಬಳಿಕ ಸೋಂಕಿತರ ಸಂಖ್ಯೆ ಏರುತ್ತಿರುವ ಜೊತೆಗೆ ಐಸಿಯೂ ಸೇರುವ ಜನರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಸದ್ಯ ರಾಜ್ಯದಲ್ಲಿ 72 ಕೊರೊನಾ ರೋಗಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವುದು ಆತಂಕದ ವಿಚಾರವಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ 35 ರೋಗಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಬೇರೆ ಆಸ್ಪತ್ರೆಗಳಿಂದ ವಿಕ್ಟೋರಿಯಾ ಆಸ್ಪತ್ರೆಗೆ ಶಿಫಾರಸ್ಸಿನ ಮೇಲೆ ಶಿಫ್ಟ್ ಆದವರು ಎನ್ನಲಾಗಿದೆ. ಅನೇಕರ ರೋಗಿಗಳು ಸೋಂಕಿನ ಆರಂಭಿಕ ಹಂತದಲ್ಲಿ ಚಿಕಿತ್ಸೆಗೆ ಬಾರದೆ, ರೋಗಲಕ್ಷಣ ಉಲ್ಬಣವಾದ ಬಳಿಕ ಬಂದಿದ್ದಾರೆ ಎನ್ನಲಾಗಿದೆ. ಹಾಗಾಗಿ ಇಷ್ಟೊಂದು ಜನರ ಆರೋಗ್ಯ ಸೂಕ್ಷ್ಮವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ‌ಒಂದೇ ದಿನ‌ 47 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇಷ್ಟು ದಿನಗಳಲ್ಲಿ ರಾಜಧಾನಿಯಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಸೋಂಕಿತರ ಸಂಖ್ಯೆ ಇದಾಗಿದೆ. ಇನ್ನುಳಿದಂತೆ ರಾಯಚೂರು ಜಿಲ್ಲೆಯಲ್ಲಿ 6 ಕೋವಿಡ್ 19 ಪ್ರಕರಣಗಳು ದೃಢವಾಗಿದೆ. ಒಂದು ವರ್ಷದ ಮಗು ಸೇರಿದಂತೆ ಇಬ್ಬರು ಮಕ್ಕಳಲ್ಲಿ ಸೋಂಕು ದೃಢಪಟ್ಟಿದೆ. ಟ್ರಾವೆಲ್ ಹಿಸ್ಟರಿ ಇಲ್ಲದ 3 ಜನರಿಗೆ ಸೋಂಕು ತಗುಲಿರುವುದು ಅಧಿಕಾರಿಗಳ ತಲೆಬಿಸಿಗೆ ಕಾರಣವಾಗಿದೆ. ಇತ್ತ ಮೈಸೂರಿನಲ್ಲಿ ಮತ್ತೆ 4 ಪಾಸಿಟಿವ್ ದೃಢಪಟ್ಟಿದ್ದು, ಓರ್ವ ಮಂಗಳಮುಖಿಗೂ ಕೊರೊನಾ ಸೋಂಕು ಬಂದಿದೆ. ಈ ಮೂಲಕ ಮೈಸೂರಿನಲ್ಲಿ 120 ಜನರಿಗೆ ಕೊರೊನಾ ಬಾಧಿಸಿದಂತಾಗಿದೆ. ಅತ್ತ ಕಾಫಿನಾಡು ಚಿಕ್ಕಮಗಳೂರಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸೋಂಕಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದ್ದು, 21 ಪ್ರಕರಣಗಳಿಗೂ ಮುಂಬೈ-ದೆಹಲಿ ನಂಟು ಇದೆ. ಕೋಲಾರದಲ್ಲಿ ಇಂದು ಹೊಸದಾಗಿ ಇಬ್ಬರಿಗೆ ಸೋಂಕು ಬಂದಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 46 ಕ್ಕೆ ಏರಿಕೆಯಾಗಿದೆ.

ಒಟ್ಟಾರೆ, ಕರ್ನಾಟಕದಲ್ಲಿ ಇಂದು 317 ಜನರಲ್ಲಿ ಸೋಂಕು ಬಂದಿದೆ. ಆದರೆ ಅದಕ್ಕಿಂತಲೂ ಹೆಚ್ಚಿನ ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ ಎನ್ನುವುದು ನೆಮ್ಮದಿಯ ವಿಚಾರ. ಆದರೆ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ 47 ಜನರಲ್ಲಿ ಸೋಂಕು ತಗುಲಿದ್ದು, ರಾಜ್ಯ ರಾಜಧಾನಿಯಲ್ಲಿ ಸೋಂಕು ಉಲ್ಬಣವಾಗುತ್ತಿರುವ ಮುನ್ಸೂಚನೆಯಂತಿದೆ. ಅನ್‌ಲಾಕ್ ಆದ ಬಳಿಕ ಬೆಂಗಳೂರಿನ ಜನ ಯಾವುದೇ ಭಯಭೀತಿಯಿಲ್ಲದೆ ಸಂಚಾರ ಮಾಡುತ್ತಿರುವುದು ಸೋಂಕು ಹೆಚ್ಚಳಕ್ಕೆ ಕಾರಣ ಎನ್ನಲಾಗ್ತಿದೆ.

Leave a Reply