ಡಿಜಿಟಲ್ ಕನ್ನಡ ಟೀಮ್:
ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರವಾಗಿ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮಂಗಳ ಭೇಟಿ ನೀಡಿ ಮಾತುಕತೆ ನಡೆಸಿದ ಶಿವಕುಮಾರ್ ಹೇಳಿದ್ದಿಷ್ಟು…
‘ನಮ್ಮ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ವಿಧಾನ ಪರಿಷತ್ ಚುನಾವಣೆ ಟಿಕೆಟ್ ಕುರಿತು ನಮಗೆ ಬಂದಿರುವ ಅರ್ಜಿಗಳನ್ನು ಹೈಕಮಾಂಡ್ ಗೆ ಕಳುಹಿಸಲಾಗಿದ್ದು, ನಮ್ಮ ಕರ್ತವ್ಯ ನಾವು ಮಾಡಿದ್ದೇವೆ. ಈ ವಿಚಾರದಲ್ಲಿ ನಮ್ಮ ನಾಯಕರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ನಮಲ್ಲಿ ಇರೋದು 2 ಸ್ಥಾನ ಮಾತ್ರ. ಹೀಗಾಗಿ ನಮಗೆ ಯಾರು ಅರ್ಜಿ ಕೊಟ್ಟಿದ್ದರೋ ಅವರೆಲ್ಲರ ಮಾಹಿತಿಯನ್ನು ಹೈಕಮಾಂಡ್ ಗೆ ಕಳುಹಿಸಿ ಕೊಡಲಾಗಿದೆ. ಇದು ಕಾರ್ಯಕರ್ತರ ಹಕ್ಕಾಗಿದ್ದು, ಅದನ್ನು ವರಿಷ್ಠರಿಗೆ ಕಳಿಹಿಸುವುದು ನಮ್ಮ ಜವಾಬ್ದಾರಿ. ನಾವು ಅದನ್ನು ಮಾಡಿದ್ದೇವೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ.
ಇನ್ನು ಪದಗ್ರಹಣ ಕಾರ್ಯಕ್ರಮವನ್ನು ಜುಲೈ 2ರಂದು ಮಾಡುವುದಾಗಿ ನಾಯಕರು ತಿಳಿಸಿದ್ದಾರೆ. ಅದನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಿದೆವು.’