ಚೀನಾ ಸೇನೆ ಹಿಂದಕ್ಕೆ ಹೋಯ್ತು ಸರಿ, ಗಡಿ ಅತಿಕ್ರಮಣವಾಗಿದ್ದನ್ನು ಕೇಂದ್ರ ಒಪ್ಪಿಕೊಳ್ಳುತ್ತಾ?

ಡಿಜಿಟಲ್ ಕನ್ನಡ ಟೀಮ್:

ಭಾರತ-ಚೀನಾ ಗಡಿಯ ಲಡಾಖಿನ ಗಾಲ್ವಾನ್ ಕಣಿವೆಯಲ್ಲಿ ಎರಡೂ ದೇಶಗಳ ಸೇನೆ ನಡುವಣ ಸಂಘರ್ಷ ತಿಳಿಯಾಗುವ ಮುನ್ಸೂಚನೆ ಸಿಕ್ಕಿದೆ. ಹಲವು ಸುತ್ತಿನ ಮಾತುಕತೆಗಳ ಮೂಲಕ ಚೀನಾ ಸೇನೆ ಗಲ್ವಾನ್ ಪ್ರದೇಶದಿಂದ ಹಿಂದೆ ಸರಿದಿದ್ದು, ಪರಿಸ್ಥಿತಿ ಸುಧಾರಿಸುವ ಲಕ್ಷಣ ಗೋಚರಿಸಿರೋದು ನೆಮ್ಮದಿ ವಿಚಾರ.

ಭಾರತದ ಗಡಿಯೊಳಗೆ ಚೀನನಿಯರ ಆಕ್ರಮಣವನ್ನು ತಡೆಯಲು ಭಾರತೀಯ ಸೇನೆ ಮುಂದಾದಾಗ, ಸಂಘರ್ಷ ನಡೆದಿದ್ದು, ಇದರಲ್ಲಿ ನಮ್ಮ 20 ವೀರ ಯೋಧರು ಹುತಾತ್ಮರಾಗಿದ್ದರು. ಪರಿಣಾಮ ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿತ್ತಲ್ಲದೇ, ಬಾಯ್ಕಟ್ ಚೀನಾ ಎಂಬ ಆಂದೋಲನವು ಮತ್ತೆ ಚರ್ಚೆಗೆ ಬಂದಿತ್ತು.

ನಂತರ ಉಭಯ ದೇಶಗಳ ನಡುವಣ ರಾಜತಾಂತ್ರಿಕ ನಡೆಗಳು ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಪ್ರಯತ್ನ ಮುಂದುವರಿಸಿದ್ದವು.

ಚೀನಾ ಸೇನೆ ವಾಪಸ್ ಹೋಗಿರುವ ವಿಚಾರವಾಗಿ ಭಾರತೀಯ ಸೇನೆಯ ಮೂಲಗಳು ಮಾಹಿತಿ ನೀಡಿದ್ದು, ‘ಇಂದು ಬೆಳಗ್ಗೆ ಲಡಾಖಿನ ಗಾಲ್ವಾನ್ ಕಣಿವೆಯಿಂದ ಚೀನಾ ಸೇನೆ ವಿವಾದಿತ ಪ್ರದೇಶಗಳಾದ ಗಾಲ್ವಾನ್ ಕಣಿವೆಯಿಂದ 2 ಕಿ.ಮೀ ಹಿಂದಕ್ಕೆ ಸರಿದಿದೆ. ಗಲ್ವಾನ್ ನ ಗೋಗ್ರಾದಲ್ಲಿ 2 ತಿಂಗಳಿಂದ ಚೀನಾ ಸೇನೆ ಬೀಡುಬಿಟ್ಟಿತ್ತು. ಅಲ್ಲದೇ ತಾನು ನಿರ್ಮಿಸಿಕೊಂಡಿದ್ದ ಟೆಂಟ್ ಗಳನ್ನು ಕೂಡ ಎತ್ತಂಗಡಿ ಮಾಡಿದೆ.

ಅಂದಹಾಗೆ, ಮೊನ್ನೆ ಪ್ರಧಾನ ಮಂತ್ರಿಗಳು ಸಂಘರ್ಷ ನಡೆದ 250 ಕಿ.ಮೀ ದೂರದ ಲಡಾಕಿನ ನಿಮು ಎಂಬ ಪ್ರವಾಸಿ ತಾಣಕ್ಕೆ ಹೋಗಿ ಸೈನಿಕರ ಜತೆ ಸಂವಾದ ಮಾಡಿ ಒಂದಷ್ಟು ಪ್ರಚಾರ ಪಡೆದರು. ಆದರೆ ಸಂವಾದದ ಸಮಯದಲ್ಲಿ ಸೈನಿಯಕರ ಕೈಯಲ್ಲಿ ಕ್ಯಾಮೆರಾ ಕೊಟ್ಟಿರುವುದನ್ನು ವಿರೋಧ ಪಕ್ಷಗಳು ಟೀಕಿಸಿದ್ದವು.

ಇಲ್ಲಿ ಗಮನಿಸಬೇಕಾದ ಅಂಶ ಎಂದರೆ,  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸರ್ವ ಪಕ್ಷ ಸಭೆಯಲ್ಲಿ ‘ಭಾರತದ ಗಡಿಯನ್ನು ಯಾರೂ ಅತಿಕ್ರಮಣ ಮಾಡಿಲ್ಲ’ ಎಂಬ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಹೇಳಿಕೆಯನ್ನು ಚೀನಾ ಕೂಡ ತನ್ನ ಸೇನೆಯ ದುಷ್ಕೃತ್ಯ ಸಮರ್ಥನೆಗೆ ಬಳಸಿಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಇದನ್ನೇ ವಿರೋಧ ಪಕ್ಷಗಳು ಕೇಂದ್ರ ವಿರುದ್ಧ ದಾಳಿ ಮಾಡಲು ಅಸ್ತ್ರವಾಗಿ ಬಳಿಸಿತು. ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ವಿರೋಧ ಪಕ್ಷಗಳ ಮೇಲೆ ಒಂದಷ್ಟು ಆಪಾದನೆ ಮಾಡಿತು.

ರಾಜಕೀಯ ಕಚ್ಚಾಟಗಳನ್ನು ಬದಿಗಿಟ್ಟು ನೋಡುವುದಾದರೆ, ಚೀನಾ ಸೇನೆ ಗಡಿಯಲ್ಲಿ ಅತಿಕ್ರಮಣ ಮಾಡಿದೆ ಎಂಬುದು ಎಲ್ಲರಿಗೂ ಸ್ಪಷ್ಟವಾಗಿ ತಿಳಿದಿರೋ ವಿಚಾರ. ಆದರೆ ಪ್ರಧಾನಿ ಮೋದಿ ಅವರು ಕೊಟ್ಟ ಹೇಳಿಕೆ ಇದೆಯಲ್ಲ ಅದು, ದೇಶಕ್ಕಾಗಿ ಪ್ರಾಣ ಬಿಟ್ಟ 20 ಯೋಧರು ಹಾಗೂ ಚೀನಾ ಸೇನೆ ವಶಕ್ಕೆ ಸಿಲುಕಿ ನಂತರ ಬಿಡುಗಡೆಯಾದ ಸೈನಿಕರಿಗೆ ಮಾಡಿದ ಅಪಮಾನ ಎಂದರೆ ತಪ್ಪಲ್ಲ. ಹೀಗಾಗಿ ಕೇಂದ್ರ ಸರ್ಕಾರ ತನ್ನ ಘನತೆ ಬಗ್ಗೆ ಯೋಚಿಸದೇ, ಚೀನಾ ಗಡಿಯನ್ನು ಅತಿಕ್ರಮಣ ಮಾಡಿತ್ತು ಎಂಬುದನ್ನು ಒಪ್ಪಿಕೊಂಡರೆ ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರಯೋಧರಿಗೆ ನಿಜವಾದ ಗೌರವ ಸಲ್ಲಿಸಿದಂತಾಗಲಿದೆ.

Leave a Reply