ಚಪ್ಪಾಳೆ ತಟ್ಟಿ ಮೂಗಿಗೆ ತುಪ್ಪ ಸವರಿದ್ದು ಸಾಕು, ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಿ

ಡಿಜಿಟಲ್ ಕನ್ನಡ ಟೀಮ್:

‘ಕೊರೋನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ನಮಗೆ ಚಪ್ಪಾಳೆ, ಹೂ ಮಳೆಗಳ ಗೌರವ ಬೇಡ. ಗೌರವಯುತ ಬದುಕು ನಡೆಸಲು ಗೌರವ ಧನ ಬೇಕು…’ ಇದು ಕೊರೋನಾ ವಾರಿಯರ್ಸ್ ಎಂದು ಕರೆಯಲ್ಪಡುವ ಆಶಾ ಕಾರ್ಯಕರ್ತೆಯರ ಮಾತು.

ಕೊರೋನಾ ಸಮಯದಲ್ಲಿ ಆಶಾ ಕಾರ್ಯಕರ್ತೆಯರನ್ನು ಸರ್ಕಾರ ಕಡೆಗಣಿಸುತ್ತಿರುವುದನ್ನು ವಿರೋಧಿಸಿ, ರಾಜ್ಯಾದ್ಯಂತ 42 ಸಾವಿರ ಆಶಾ ಕಾರ್ಯಕರ್ತೆಯರು ಇದೇ 10ರಂದು ಅನಿರ್ದಿಷ್ಟಾವಧಿ ಕಾಲ ಪ್ರತಿಭಟನೆಗೆ ಮುಂದಾಗಿದ್ದಾರೆ. ಪರಿಣಾಮ ಜುಲೈ10 ರಿಂದ ಆಶಾ ಕಾರ್ಯಕರ್ತೆಯರ ಸೇವೆ ಸ್ಥಗಿತವಾಗಲಿದೆ.

ಮಾಸಿಕ ಗೌರವ ಧನವನ್ನು 12 ಸಾವಿರ ರೂ.ಗೆ ಹೆಚ್ಚಳ ಸೇರಿದಂತೆ ಅಗತ್ಯ ಸೌಲಭ್ಯಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಮುಷ್ಕರ ನಡೆಸಲಿದ್ದಾರೆ. ಇವರು ಜನವರಿಯಿಂದ ಸರ್ಕಾರಕ್ಕೆ 10 ಬಾರಿ ಮನವಿ ಪತ್ರ ನೀಡಿದರೂ ಸರ್ಕಾರ ಸ್ಪಂದಿಸಿಲ್ಲ.

ಕೊರೋನಾದಂತಹ ಕಠಿಣ ಪರಿಸ್ಥಿತಿಯಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರ ಸೇವೆಗೆ ಸರ್ಕಾರ ಕಿಂಚಿತ್ತೂ ಗೌರವ ನೀಡುತ್ತಿಲ್ಲ. ಆದರೆ ಚಪ್ಪಾಳೆ ತಟ್ಟಿಸಿ, ಜಾಗಟೆ ಬಾರಿಸಿ, ಹೂ ಮಳೆ ಸುರಿಸಿ, ದೀಪ ಹಚ್ಚಿಸಿ ಗೌರವ ನೀಡುತ್ತಿದ್ದೇವೆ ಎಂದು ಸರ್ಕಾರ ಪುಕ್ಕಟೆ ಪ್ರಚಾರ ಪಡೆಯಿತು. ಇದರಿಂದ ಆಶಾ ಕಾರ್ಯಕರ್ತೆಯರ ಹೊಟ್ಟೆ ತುಂಬಿತೆ? ಇಲ್ಲ. ಅವರ ಕಷ್ಟ ಪರಿಹಾರವಾಯ್ತೇ? ಇಲ್ಲ. ಅವರ ಬೇಡಿಕೆಗೆ ಸರ್ಕಾರ ಸ್ಪಂದಿಸಿತೇ? ಅದೂ ಇಲ್ಲ.

ಸರ್ಕಾರದ ಮೂಗಿಗೆ ತುಪ್ಪ ಸವರುವ ಗಿಮಿಕ್ ಗೆ ಬೇಸತ್ತಿರುವ ಆಶಾ ಕಾರ್ಯಕರ್ತೆಯರು ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದ್ದಾರೆ.

ಅತ್ತ ಕೊರೋನಾ ಚಿಕಿತ್ಸೆಗೆ ವೈದ್ಯರ ಕೊರತೆ ಎದುರಾಗಿದೆ. ಗುತ್ತಿಗೆ ವೈದ್ಯರು ತಮ್ಮ ನೇಮಕಾತಿ ಕಾಯಂಗೊಳಿಸಿ ಎಂಬ ಬೇಡಿಕೆಯನ್ನು ಸರ್ಕಾರ ಕ್ಯಾರೆ ಎನ್ನುತ್ತಿಲ್ಲ. ಪರಿಣಾಮ ಗುತ್ತಿಗೆ ನೌಕರರು ರಾಜೀನಾಮೆಗೆ ಮುಂದಾಗಿದ್ದಾರೆ. ಇದೀಗ ಅಶಾ ಕಾರ್ಯಕರ್ತೆಯರ ಪ್ರತಿಭಟನೆ ಸರ್ಕಾರದ ನಿರ್ಲಕ್ಷ್ಯ ಹಾಗೂ ವೈಫಲ್ಯಕ್ಕೆ ಸಾಕ್ಷಿ.

Leave a Reply