ಅ.1ರಿಂದ ಕಾಲೇಜು ಆರಂಭ; ಸರ್ಕಾರದಿಂದ ಸ್ಪಷ್ಟನೆ

ಡಿಜಿಟಲ್ ಕನ್ನಡ ಟೀಮ್:

ಅಕ್ಟೋಬರ್‌ 01 ರಿಂದ ಕಾಲೇಜುಗಳು ತೆರೆಯಲಿವೆ, ಎಂದಿನಂತೆ ತರಗತಿಗಳು ನಡೆಯಲಿವೆ ಎಂದು ರಾಜ್ಯ ಸರ್ಕಾರ ಇಂದು ತಿಳಿಸಿದೆ.

ಕೊರೋನಾ ಭೀತಿಯಿಂದಾಗಿ ಈ ವರ್ಷ ಶಾಲಾ-ಕಾಲೇಜುಗಳ ಶೈಕ್ಷಣಿಕ ತರಗತಿಗಳು ಯಾವಾಗ ಆರಂಭವಾಗುವುದು ಎಂಬ ಗೊಂದಲಕ್ಕೆ ಸರ್ಕಾರ ತೆರೆ ಎಳೆದಿದೆ.

ಈ ಮಧ್ಯೆ ಆನ್ ಲೈನ್ ತರಗತಿ ವಿಚಾರವಾಗಿ ಸಾಕಷ್ಟು ಗೊಂದಲಗಳು ಮೂಡಿದ್ದು, ಆಕ್ಟೊಬರ್ ನಿಂದ ಸಹಜವಾಗಿ ತರಗತಿ ನಡೆಯುವ ಬಗ್ಗೆ ಸರ್ಕಾರ ಮಾಹಿತಿ ನೀಡಿದೆ.

ಈ ವಿಚಾರವಾಗಿ ಇಂದು ಪತ್ರಿಕಾಗೋಷ್ಠಿ ನಡೆಸಿದ ಡಿಸಿಎಂ ಅಶ್ವತ್ಥ್‌ ನಾರಾಯಣ್, ‘ಕಾಲೇಜು ಮತ್ತು ವಿಶ್ವವಿದ್ಯಾಲಯದ ಮಟ್ಟದಲ್ಲಿ ಸೆಪ್ಟೆಂಬರ್‌ ಮೊದಲ ತಿಂಗಳಿನಿಂದ ಆನ್‌ಲೈನ್‌ ತರಗತಿಗಳು ನಡೆಯಲಿವೆ. ಆದರೆ, ಅಕ್ಟೋಬರ್‌ 01 ರಿಂದ ಈ ವರ್ಷದ ಶೈಕ್ಷಣಿಕ ತರಗತಿಗಳು ಎಂದಿನಂತೆ ಜರುಗಲಿವೆ. ಪ್ರತಿ ವಿಶ್ವವಿದ್ಯಾಲಯದಲ್ಲೂ ಸಹಾಯವಾಣಿ ಪ್ರಾರಂಭ ಮಾಡಲಾಗುವುದು, ಈ‌ ಮೂಲಕ ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬಹುದು. ಇದರಿಂದ ಅಗತ್ಯ ಮಾಹಿತಿಯನ್ನೂ ಸಂಗ್ರಹಿಸಲಾಗುವುದು’ ಎಂದಿದ್ದಾರೆ.

ಅಂತಿಮ ವರ್ಷದವರಿಗೆ ಮಾತ್ರ ಪರೀಕ್ಷೆ:

ರಾಜ್ಯದ ಡಿಪ್ಲೊಮಾ, ಇಂಜಿನಿಯರ್ ಹಾಗೂ ಪದವಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗುವುದು. ಉಳಿದ ತರಗತಿಗಳಲ್ಲಿರುವವರಿಗೆ ಪರೀಕ್ಷೆ ಇಲ್ಲ. ಫೈನಲ್ ಪರೀಕ್ಷೆ ಜೊತೆಗೆ ಬ್ಯಾಕ್ ಲಾಗ್ ಪರೀಕ್ಷೆಗೂ ಅವಕಾಶ ನೀಡಲಾಗುತ್ತದೆ. ಇದೇ ವರ್ಷದ ಸೆಪ್ಟೆಂಬರ್​ನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿವೆ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ತಿಳಿಸಿದ್ದಾರೆ.

Leave a Reply