6 ವಾರ 26 ಬಾರಿ ಇಂಧನ ದರ ಏರಿಕೆ; ದಾಖಲೆ ಬರೆದ ಮೋದಿ ಸರ್ಕಾರ

ಡಿಜಿಟಲ್ ಕನ್ನಡ ಟೀಮ್:

ಇಂಧನ ದರ ಏರಿಕೆ ವಿಚಾರದಲ್ಲಿ ಮೋದಿ ಸರ್ಕಾರ ದೇಶದ ಇತಿಹಾಸದಲ್ಲೇ ದಾಖಲೆಯೊಂದನ್ನು ಬರೆದಿದೆ.

ಕೇವಲ 6 ವಾರಗಳ ಅಂತರದಲ್ಲಿ 26 ಬಾರಿ ಇಂಧನ ದರ ಏರಿಸುವ ಮೂಲಕ ಇಂತದ್ದೊಂದು ದಾಖಲೆ ಬರೆದಿದ್ದಾರೆ. ಆದರೆ ಮೋದಿ ಸರ್ಕಾರದ ಈ ಸಾಧನೆ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಬರೆ ಎಳೆದಿದೆ.

ಈ ವಾರ ಮೂರು ಬಾರಿ ಡೀಸೆಲ್ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ಜುಲೈ 7ರಂದು ಪ್ರತಿ ಲೀಟರ್ ಡೀಸೆಲ್ ಗೆ 25 ಪೈಸೆ ಹೆಚ್ಚಳ ಮಾಡಲಾಗಿತ್ತು. ಜುಲೈ 12ರಂದು) ಮತ್ತೆ 16 ಪೈಸೆ ಬೆಲೆ ಏರಿಕೆ ಮಾಡಲಾಗಿತ್ತು. ಇಂದು ಪ್ರತಿ ಲೀಟರ್ ಡೀಸೆಲ್ ಗೆ 11 ಪೈಸೆ ಹೆಚ್ಚಳ ಮಾಡಲಾಗಿದೆ. ಆಮೂಲಕ ಕಳೆದ ಒಂದು ತಿಂಗಳಿನಿಂದ ಪ್ರತಿ ಲೀಟರ್ ಡೀಸೆಲ್ ಗೆ 11.53 ರೂಪಾಯಿ ಹೆಚ್ಚಳವಾದಂತಾಗಿದೆ.

ಆರ್ಥಿಕ ಬಿಕ್ಕಟ್ಟು, ಕೊರೋನಾದ ಲಾಕ್ ಡೌನ್ ಎಫೆಕ್ಟ್ ನಿಂದ ಈಗಾಗಲೇ ಕಂಗೆಟ್ಟಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಕೇಂದ್ರ ಸರ್ಕಾರದ ಈ ನಿಲುವಿನಿಂದ ಮತ್ತಷ್ಟು ತೊಂದರೆ ಅನುಭವಿಸುವ ಪರಿಸ್ಥಿತಿ ಎದುರಾಗಿದೆ.

ಕೈಗಾರಿಕೆ, ಜನರ ಪರಿಸ್ಥಿತಿ ಜತೆಗೆ ಸರ್ಕಾರಿ ಸಾರಿಗೆ ಸಂಸ್ಥೆಗಳೂ ಈ ನಿರ್ಧಾರದಿಂದ ನಷ್ಟದ ಸುಳಿಗೆ ಸಿಲುಕಿವೆ. ಅದಕ್ಕೆ ಉದಾಹರಣೆ ನಮ್ಮ ಕೆಎಸ್ಆರ್ ಟಿಸಿ. ಇತ್ತೀಚೆಗೆ ಸಂಸ್ಥೆಯ ಅಧಿಕಾರಿಗಳು ನಷ್ಟವನ್ನು ಕಡಿಮೆ ಮಾಡುವ ಸಲುವಾಗಿ ತನ್ನ ಸಿಬ್ಬಂದಿಗೆ 1 ವರ್ಷ ವೇತನ ರಹಿತ ರಜೆ ನೀಡಬೇಕು ಎಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.

ಮೊದಲೇ ಕೊರೋನಾದಿಂದ ಹಾಗೂ ಲಾಕ್ ಡೌನ್ ನಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಅದರ ಜತೆಗೆ ಇಂಧನ ಬೆಲೆ ಏರಿಕೆ ಸಂಸ್ಥೆಯನ್ನು ಇನ್ನಿಲ್ಲದಂತೆ ಕಾಡಿದೆ. ಇದು ಕೇವಲ ಉದಾಹರಣೆ ಮಾತ್ರ. ಸರ್ಕಾರಿ ಸಾರಿಗೆ ಸಂಸ್ಥೆಗಳ ಸ್ಥಿತಿಯೇ ಇಷ್ಟು ಹೀನಾಯವಾಗಿರುವಾಗ ಇನ್ನು ಖಾಸಗಿ ಸಂಸ್ಥೆ, ಕೈಗಾರಿಕೆ, ಉದ್ಯಮಗಳ ಪರಿಸ್ಥಿತಿ ಹೇಗಿರಬೇಡ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಐತಿಹಾಸಿಕ ಬೆಲೆ ಕುಸಿದಿದ್ದರೆ, ನಮ್ಮ ಸರ್ಕಾರ ಬೆಲೆ ಇಳಿಸುವ ಬದಲು ಐತಿಹಾಸಿಕ ಬೆಲೆ ಏರಿಕೆ ಮಾಡಿದೆ. ಆಮೂಲಕ ಜನರನ್ನು ಕಿತ್ತುತಿನ್ನುವ ಮನಸ್ಥಿತಿ ಪ್ರದರ್ಶಿಸಿದೆ.

Leave a Reply