ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ, ಇದು ರೈತರ ಮರಣ ಶಾಸನ: ಸಿದ್ದರಾಮಯ್ಯ ಟೀಕೆ

ಡಿಜಿಟಲ್ ಕನ್ನಡ ಟೀಮ್:

ಕೊರೋನಾದಂತಹ ಸಂಕಷ್ಟದಲ್ಲಿ ಜನಸಾಮಾನ್ಯರನ್ನು ಕಾಪಾಡಲು ಸಾಧ್ಯವಾಗದಿದ್ದರೂ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರ ಮರಣ ಶಾಸನ ಬರೆಯಲು ಹೊರಟಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯನವರ ಪ್ರತಿಕ್ರಿಯೆ ಹೀಗಿದೆ…

ಕೊರೋನಾ ಹೆಸರಲ್ಲಿ ಲಾಕ್‌ಡೌನ್‌ ಮಾಡಿ ಇದನ್ನೇ ಬಳಸಿಕೊಂಡು ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿದೆ. ಈ ದಿನ ಕರ್ನಾಟಕದ ಇತಿಹಾಸದಲ್ಲಿ ಕರಾಳದಿನವಾಗಿ ಉಳಿಯಲಿದೆ.

ಭೂ ಸುಧಾಕರಣಾ ಕಾಯ್ದೆಗೆ ರಾಜ್ಯ ಸರ್ಕಾರ ಕಳೆದ ಹಲವು ದಿನಗಳಿಂದ ತಿದ್ದುಪಡಿ ತರಲು ಪ್ರಯತ್ನಿಸುತ್ತಿದೆ. ಆದರೆ, ವಿರೋಧ ಪಕ್ಷಗಳು, ರೈತರು ಈ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸುತ್ತಲೇ ಇವೆ. ಆದರೆ, ತೀವ್ರ ವಿರೋಧದ ನಡುವೆಯೂ ಕೊರೋನಾ ಲಾಕ್‌ಡೌನ್ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ “ಕರ್ನಾಟಕ ಭೂ ಸುಧಾರಣಾ ಕಾಯ್ದೆ”ಗೆ ತಿದ್ದುಪಡಿ ತಂದಿದೆ.

ಕೊರೋನಾದಂತಹ ಸಂಕಷ್ಟದ ಸಂದರ್ಭದಲ್ಲಿ ಸುಗ್ರೀವಾಜ್ಞೆ ತರುವ ಅಗತ್ಯತೆ ಏನಿತ್ತು..? ಕೊರೋನಾ ಸೋಂಕು ಪೀಡಿತ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನ, ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ. ಕೊರೋನಾ ನಿಯಂತ್ರಣ ಮಾಡುವುದನ್ನ ಬಿಟ್ಟು ರಾಜ್ಯ ಸರ್ಕಾರ ಕಳ್ಳದಾರಿಯಲ್ಲಿ ಹೊರಟಿದೆ.

ಭೂ ಸುಧಾರಣಾ ಕಾಯ್ದೆಯಲ್ಲಿ ಸೆಕ್ಷನ್ 63ಕ್ಕೆ ತಿದ್ದುಪಡಿ ತಂದಿರುವ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ, ಒಂದು ಕುಟುಂಬಕ್ಕೆ ಇದ್ದ118ಎಕರೆ ಮಿತಿಯನ್ನು 436 ಎಕರೆಗೆ ಏರಿಸಿದ್ದಾರೆ. 436 ಎಕರೆ ಯಾರು ತೆಗೆದುಕೊಳ್ತಾರೆ.? ರೈತರು ಅಷ್ಟು ಜಮೀನು ತೆಗೆದುಕೊಳ್ತಾರಾ..? ಈ ತಿದ್ದುಪಡಿಯಿಂದಾಗಿ ಬಂಡವಾಳಶಾಹಿಗಳಿಗೆ ಅನುಕೂಲವಾಗಲಿದೆ. ಈ ಮೂಲಕ ಬಿಎಸ್ವೈ ಸರ್ಕಾರ ಇಡೀ ರೈತ ಸಮುದಾಯವನ್ನು ನಾಶ ಮಾಡಲು ಹೊರಟಿದೆ.

ಭವಿಷ್ಯದಲ್ಲಿ ಎಲ್ಲಾ ರೈತರು ಕಾರ್ಪೋರೆಟ್ ಸಂಸ್ಥೆಗಳ ಬಾಗಿಲು ಕಾಯಬೇಕಾದ ಸ್ಥಿತಿ ಬರುತ್ತೆ. ಬಂಡಾವಳಶಾಹಿಗಳು ಭೂಮಿ ತಗೊಂಡು ರಿಯಲ್ ಎಸ್ಟೇಟ್ ಮಾಡ್ತಾರೆ. ಆನಂತರ ಆಹಾರ ಉತ್ಪಾದನೆ ಎಲ್ಲಿ ಆಗುತ್ತೆ..?

ಭೂ ಸುಧಾರಣಾ ಕಾಯ್ದೆಗೆ ದೇವರಾಜ ಅರಸು ಗೇಣಿದಾರರಿಗೆ ನ್ಯಾಯ ದೊರಕಿಸುವಂತೆ ತಿದ್ದುಪಡಿ ಮಾಡಿದ್ದರು. 1974 ರಲ್ಲಿ ಇಡೀ ದೇಶಕ್ಕೆ ಮಾದರಿ ಆಗುವಂತಹ ಕಾಯ್ದೆಯನ್ನು ಜಾರಿಗೊಳಿಸಿದ್ದರು. ದೂರದೃಷ್ಟಿಯ ಅವರ ನಾಯಕತ್ವಕ್ಕೆ ಇಡೀ ದೇಶವೇ ಮೆಚ್ಚುಗೆ ಸೂಚಿಸಿತ್ತು. ಆದರೆ, ಬಿಎಸ್‌ವೈ ಸರ್ಕಾರ ರೈತರ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ. ಭವಿಷ್ಯದಲ್ಲಿ ಕೃಷಿ ಭೂಮಿಗಳು ಕಾರ್ಪೋರೇಟ್ ಸಂಸ್ಥೆಗಳ ಪಾಲಾಗುವಂತೆ ಮಾಡಿದ್ದಾರೆ. ಅವರ ಈ ಕೆಲಸವನ್ನು ರೈತರು ಎಂದೂ ಕ್ಷಮಿಸುವುದಿಲ್ಲ.

Leave a Reply