ಕೊರೋನಾ ಸೋಂಕಿನಿಂದ ಮೃತಪಟ್ಟವರಿಂದ ಹಾನಿ ಇಲ್ಲ, ಶವಸಂಸ್ಕಾರಕ್ಕೆ ಅಡ್ಡಿ ಬೇಡ: ಡಿ.ಕೆ ಸುರೇಶ್

ಡಿಜಿಟಲ್ ಕನ್ನಡ ಟೀಮ್:

ಇತ್ತೀಚಿನ ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಆತಂಕಕಾರಿ ವರದಿಯಂತೆ ಕೋವಿಡ್-19 ಸೋಂಕಿನಿಂದ ನಿಧನರಾದವರ ಅಂತಿಮ ಸಂಸ್ಕಾರ ಮಾಡುವ ವಿಚಾರದಲ್ಲಿ ಸಾರ್ವಜನಿಕರಲ್ಲಿ ಉಂಟಾಗಿರುವ ಭಯ ಮತ್ತು ಗೊಂದಲಗಳನ್ನು ನಿವಾರಿಸಲು ರಾಜ್ಯ ಸರ್ಕಾರದ ಯಾರೊಬ್ಬರೂ ಈವರೆಗೆ ಕಾರ್ಯೋನ್ಮುಖ ಆಗದಿರುವುದು ವಿಷಾದದ ಸಂಗತಿ.

ಈ ವೇಳೆ ಎಲ್ಲಾ ನಾಗರೀಕ ಬಂಧುಗಳಲ್ಲಿ ನಾನು ಮನವಿ ಮಾಡಿಕೊಳ್ಳುವುದೇನೆಂದರೆ, ಕೊರೊನ ಸೋಂಕಿನಿಂದ ಮರಣ ಹೊಂದಿದ ವ್ಯಕ್ತಿಗಳಿಂದ ಸಮಾಜಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ. ಈ ವಿಚಾರದಲ್ಲಿ ಬರೀ ಊಹಾಪೋಹಗಳನ್ನು ಹಬ್ಬಿಸಲಾಗಿದೆ. ಹೀಗಾಗಿ ಶವ ಸಂಸ್ಕಾರಕ್ಕೆ ಪ್ರತಿರೋಧ ಒಡ್ಡುವುದಾಗಲಿ, ಅಡ್ಡಿಪಡಿಸುವುದಾಗಲಿ ನಮ್ಮ ಸಂಸ್ಕೃತಿಯೂ ಅಲ್ಲ, ಸದಾಚಾರವೂ ಅಲ್ಲ. ಆದ್ದರಿಂದ ಆಯಾ ಪ್ರದೇಶಗಳಲ್ಲಿ ಕೋವಿಡ್ಚ ನಿಂದ ಮರಣ ಹೊಂದಿದ ವ್ಯಕ್ತಿಗಳ ಬಂಧುಗಳು ಹಾಗೂ ಗ್ರಾಮಸ್ಥರು ನಿರಾಂತಂಕವಾಗಿ, ಮೃತ ವ್ಯಕ್ತಿಗೆ ಗೌರವಯುತ ಅಂತಿಮ ಸಂಸ್ಕಾರ ನೆರವೇರಲು ಅವಕಾಶ ಮಾಡಿಕೊಡಬೇಕು. ಆ ಮೂಲಕ ಮಾನವೀಯತೆ ಮತ್ತು ಸೌಹಾರ್ದತೆ ಮೆರೆಯಬೇಕೆಂದು ನಾನು ವಿನಯಪೂರ್ವಕವಾಗಿ ಕೋರುತ್ತೇನೆ.

ಈ ವಿಚಾರದಲ್ಲಿ ಸಾರ್ವಜನಿಕರಲ್ಲಿ ಉಂಟಾಗಿರುವ ಅನಗತ್ಯ ಭಯ ಹಾಗೂ ಅನುಮಾನಗಳನ್ನು ತೊಡೆದುಹಾಕಲು ಸಮಾಜಮುಖಿ ಚಿಂತನೆಯುಳ್ಳವರು, ವಿಚಾರವಂತರು ಹಾಗೂ ಬುದ್ಧಿಜೀವಿಗಳು ಕೈಜೋಡಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.

(ಡಿ. ಕೆ. ಸುರೇಶ್)

Leave a Reply