ಕೋವಿಡ್ ಉಪಕರಣಗಳ ಖರೀದಿಯಲ್ಲಿ ಒಂದೇ ಒಂದು ರೂಪಾಯಿ ಕೂಡ ದುರ್ಬಳಕೆ ಆಗಿಲ್ಲ: ಡಿಸಿಎಂ ಅಶ್ವಥ ನಾರಾಯಣ

ಡಿಜಿಟಲ್ ಕನ್ನಡ ಟೀಮ್:

ಉಪಕರಣಗಳ ಖರೀದಿಯಲ್ಲಿ ಒಂದೇ ಒಂದು ರೂಪಾಯಿ ಕೂಡ ದುರ್ಬಳಕೆ ಆಗಿಲ್ಲ‌. ವೈದ್ಯಕೀಯ ಉಪಕರಣಗಳ ಖರೀದಿ ವಿಷಯದಲ್ಲಿ ಪ್ರತಿಪಕ್ಷ ನಾಯಕರು ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ ನಾರಾಯಣ ಅವರು ತಿಳಿಸಿದ್ದಾರೆ.

ಅಶ್ವಥ ನಾರಾಯಣ, ಆರೋಗ್ಯ ಸಚಿವ ಶ್ರೀರಾಮುಲು, ಆರೋಗ್ಯ ಇಲಾಖೆ ಕಾರ್ಯದರ್ಶಿ ಜಾವೇದ್ ಅಕ್ತರ್ ಅವರು ಸೋಮವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ವಿರೋಧ ಪಕ್ಷಗಳ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ಸಚಿವರುಗಳು ಹೇಳಿದ್ದಿಷ್ಟು…

ಡಾ.ಸಿ.ಎನ್.ಅಶ್ವಥ ನಾರಾಯಣ:

ವೈದ್ಯಕೀಯ ಉಪಕರಣಗಳ ಖರೀದಿ ವಿಷಯದಲ್ಲಿ ಪ್ರತಿಪಕ್ಷ ನಾಯಕರು ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿದ್ದಾರೆ. ಏನು ಎಂಬುದನ್ನು ಜನರಿಗೆ ತಿಳಿಸುತ್ತೇವೆ.

ನಾವು ನೇರವಾಗಿ ಖರೀದಿ ಮಾಡಲು ಅವಕಾಶವಿದ್ದರೂ ಕೂಡ, ನಮ್ಮ‌ಅಧಿಕಾರಿಗಳು ಕೊಟೇಷನ್ ಕರೆದು ಕಡಿಮೆ ದರಕ್ಕೆ ಉತ್ತಮ ಗುಣಮಟ್ಟದ ವಸ್ತುಗಳನ್ನು ಖರೀದಿ ಮಾಡಿದ್ದಾರೆ. ಯಾವುದೇ ಉಪಕರಣಗಳ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ.

ತಮಿಳುನಾಡು ಖರೀದಿ ಮಾಡಿರೋದು ಟ್ರಾನ್ಸಪೋರ್ಟ್ ಮಾಡಬಲ್ಲ, ಆಂಬುಲೆನ್ಸ್ ಗೆ ಫಿಕ್ಸ್ ಮಾಡುವ ವೆಂಟಿಲೇಟರ್ ಗಳು. ಅವನ್ಬು ಅಸಿಸ್ಟೆಡ್ ವೆಂಟಿಲೇಟರ್ ಗಳು ಎನ್ನುತ್ತಾರೆ. ಅವುಗಳ ದರವೂ ಕಡಿಮೆ. ಸಹಜವಾಗಿಯೇ 4 ಲಕ್ಷ ರೂ.ಗಳಿಗೆ ಸಿಗುತ್ತವೆ. ಆ ವೆಂಟಿಲೇಟರ್ ಗಳನ್ಬು ನಾವು ಖರೀದಿ ಮಾಡಿರುವ ವೆಂಟಿಲೇಟರ್ ಗಳ ಗುಣಮಟ್ಟ ಮತ್ತು ಫೀಚರ್ ಗಳಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ.

ಜನರ ಕಷ್ಟಗಳಿಗೆ ಸ್ಪಂದಿಸಬೇಕಾದವರು, ಏನೂ ಜವಾಬ್ದಾರಿ ತೆಗೆದುಕೊಳ್ಳದೆ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ.

ಅಧಿಕಾರಿಗಳಲ್ಲಿ ಭಯ ಹುಟ್ಟಿಸಬೇಕು ಎಂಬ ದುರುದ್ದೇಶದಿಂದ ಪ್ರತಿಪಕ್ಷದವರು ಆರೋಪಿಸಿದ್ದಾರೆ. ಈ ಲೆಕ್ಕವನ್ನು ಸದನದಲ್ಲೂ ಮಂಡಿಸುತ್ತೇವೆ. ಚರ್ಚೆಗೆ ತಯಾರಿದ್ದೇವೆ.

ಈ ಪ್ರಕರಣಗಳ ಬಗ್ಗೆ ಯಾವುದೇ ತನಿಖೆ ಅಗತ್ಯವೇ ಇಲ್ಲ. ನಾವು ಎಲ್ಲ ಅಂಕಿ-ಅಂಶಗಳನ್ನು ಜನರ ಮುಂದಿಟ್ಟಿದ್ದೇವೆ. ಎಲ್ಲ ಪಾರದರ್ಶಕವಾಗಿಯೇ ಖರೀದಿಯಾಗಿದೆ‌. ಯಾವುದೇ ಅವ್ಯವಹಾರವೇ ಆಗಿಲ್ಲ. ಹೀಗಾಗಿ ತನಿಖೆ ಅಗತ್ಯವಿಲ್ಲ.

ಜಾವೆದ್ ಆಖ್ತರ್‌:

ಡ್ರಗ್ಸ್ ಅಂಡ್ ಲಾಜಿಸ್ಟಿಕ್ ಸೊಸೈಟಿ ಮೂಲಕವೇ ಖರೀದಿ ಮಾಡಲಾಗಿದೆ‌. ಮಾರ್ಚ್ ತಿಂಗಳಲ್ಲೇ ಖರೀದಿ ಪ್ರಕ್ರಿಯೆ ಶುರುವಾಗಿದೆ. ಆರಂಭದಲ್ಲಿ 290 ಕೋಟಿ ರು ಮೌಲ್ಯದ ಔಷಧ ಮತ್ತು ವಸ್ತು ಖರೀದಿಸಲಾಗಿದೆ. ಆಗ ಪಿಪಿಇ ಕಿಟ್ ಮತ್ತು ಸ್ಯಾನಟೈಸರ್ ಪ್ರೊಡಕ್ಷನ್ ಇರಲಿಲ್ಲ. ಹಾಗಾಗಿ ಬೇರೆ ಕಡೆಯಿಂದ ಹೆಚ್ಚುವರಿ ಹಣ ಕೊಟ್ಟು ಖರೀದಿ ಮಾಡಬೇಕಾಯ್ತು. ಈಗ ಪರಿಸ್ಥಿತಿ ಹಾಗಲ್ಲ‌. ನಮ್ಮ‌ರಾಜ್ಯದಲ್ಲೇ ಪ್ರೊಡಕ್ಷನ್ ಹೆಚ್ಚಳವಾಗಿದೆ. ಅದಕ್ಕೆ ಅನುಗುಣವಾಗಿ ರೇಟ್ ಕಡಿಮೆಯಾಗಿದೆ. ಆರಂಭದಲ್ಲಿ 500ml ಸ್ಯಾನಿಟೈಸರ್ ಗೆ 500ರೂ ಇತ್ತು‌. ಈಗ 100 ರೂ.ಗೆ ಸಿಗುತ್ತಿದೆ.

ಪಿಪಿಇ ಕಿಟ್ ಕೂಡ 4000ರೂ ರೇಟ್ ಇತ್ತು. ಈಗ 450 ರೂ.ಗೆ ಸಿಗುತ್ತಿದೆ.

ಮೂರು ತರದ ವೆಂಟಿಲೇಟರ್ ಖರೀದಿಸಲಾಗಿದೆ. ಭಾರತ ಸರ್ಕಾರ 1600 ಮಂಜೂರು ಮಾಡಿದೆ. 640 ವಿತರಣೆ ಆಗಿದೆ. 130 ವೆಂಟಿಲೇಟರ್ ಗಳನ್ನು ಸ್ಕಾನ್ ರೇ ಕಂಪನಿಯಿಂದ ಖರೀದಿ ಮಾಡಲಾಗಿದೆ. 80 ಸಪ್ಲೈ ಆಗಿದೆ.18.40 ಲಕ್ಷದ ದರದಲ್ಲಿ ಖರೀದಿ ಮಾಡಿರೋದು ಕೇವಲ ಒಂದು ವೆಂಟಿಲೇಟರ್ ಮಾತ್ರ.

ಶ್ರೀರಾಮುಲು:

ಈ ಪರಿಸ್ಥಿತಿ ಉಂಟಾಗುತ್ತದೆ ಎಂದು ನಾವು ಯಾರೂ ನಿರೀಕ್ಷಿಸಿರಲಿಲ್ಲ. ಕೋವಿಡ್ ನಮಗೆ ಮುಖ್ಯಮಂತ್ರಿಗಳಿಗೆ ಹಾಗೂ ಎಲ್ಲ ಸಚಿವರಿಗೆ ಸವಾಲಾಗಿ ಕಾಡುತ್ತಿದೆ. ಡಿಮ್ಯಾಂಡ್ ಇದ್ದ ಸಂದರ್ಭದಲ್ಲಿ ಸಪ್ಲೈ ಮಾಡುವವರು ಕಡಿಮೆ ಇದ್ದರು. ಸಹಜವಾಗಿ ದರ ಹೆಚ್ಚಾಗಿತ್ತು. ಆದರೆ, ಈಗ ಸಪ್ಲೈ ಹೆಚ್ಚಾಗಿದೆ. ದರ ಕಡಿಮೆಯಾಗಿದೆ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ‌. ವೆಂಟಿಲೇಟರ್ ಖರೀದಿ ಮಾಡಬೇಕಾದರೆ ನಾವು ತಾಂತ್ರಿಕ ಸ್ಪೆಸಿಫಿಕೇಷನ್ ನೋಡಬೇಕಾಗುತ್ತದೆ‌. ತಾಂತ್ರಿಕವಾಗಿ ಹೆಚ್ಚು ಸ್ಪೆಸಿಫಿಕೇಶನ್ ಹೆಚ್ಚಿರುವ ಕಾರಣ 4 ಲಕ್ಷ ದಿಂದ 50-60 ಲಕ್ಷದವರೆಗೂ ದರ ವ್ಯತ್ಯಾಸವಾಗುತ್ತದೆ. ಒಂದೊಂದು ಸ್ಪೆಸಿಫಿಕೇಶನ್ ನ ವೆಂಟಿಲೇಟರ್ ಗಳಿಗೆ ಒಂದೊಂದು ದರ ಇದೆ. ಕೇಂದ್ರ ಸರ್ಕಾರದಿಂದ 640 ವೆಂಟಿಲೇರ್ ಬಂದಿದೆ. ನಂತರ 5.60 ಲಕ್ಣ ರೂ ದರದಲ್ಲಿ ಸ್ಕಾನರ್ ಕಂಪನಿಯಿಂದ 80 ವೆಂಟಿಲೇಟರ್‌ ಖರೀದಿ ಮಾಡಲಾಗಿದೆ. ಹೈ ಸ್ಪೆಸಿಫಿಕೇಶನ್ ಇರುವ ಒಂದು ವೆಂಟಿಲೇಟರ್ ಗೆ 15 ಲಕ್ಷ ರೂ ದರ ನೀಡಲಾಗಿದೆ. ಉಳಿದ 23 ವೆಂಟಿಲೇಟರ್ ಗಳಿಗೆ ಸಾಮಾನ್ಯ ದರ ನೀಡಿಯೇ ಖರೀದಿ ಸಲಾಗಿದೆ. ಇದುವರೆಗೆ 10.41 ಕೋಟಿ ರೂನಷ್ಟು ಮೌಲ್ಯದ ವೆಂಟಿಲೇಟರ್ ಗಳನ್ನು ಖರೀದಿಸಲಾಗಿದೆ. ಸಿದ್ದರಾಮಯ್ಯನವರು ಆರೋಪಿಸಿದಂತೆ 40 ಕೋಟಿ ರೂ. ಖರ್ಚು ಮಾಡಿಲ್ಲ.

ಪಿಪಿಇ ಕಿಟ್ ವಿಷಯದಲ್ಲೂ ಅಷ್ಟೇ. ಮಾರ್ಚ್ ನಲ್ಲಿ ನಾಲ್ಕು ಕಾಂಪೊನೆಂಟ್ ಮಾತ್ರ ಇರುವ ಪಿಪಿಇ ಕಿಟ್ ಖರೀದಿ ಮಾಡಲಾಗಿತ್ತು. ಈ ಪಿಪಿಇ‌ ಕಿಟ್ ಗಳು ಸುರಕ್ಷಿತವಲ್ಲ ಎಂದು ವೈದ್ಯರು ಸಲಹೆ ಮಾಡಿದ್ದರಿಂದ ಆರು ಕಾಂಪೊನೆಂಟ್ ಗಳಿರುವ ಒಂದು ಲಕ್ಷ ಪಿಪಿಇ ಕಿಟ್ ಗಳನ್ನು ಖರೀದಿ ಮಾಡಲಾಯ್ತು. ಇದುವರೆಗೆ 60,000 ಪಿಪಿಇ ಕಿಟ್ ಗಳನ್ನು ಮಾತ್ರ ಸರಬರಾಜು ಮಾಡಿದ್ದಾರೆ. ಈ ಪಿಪಿಇ ಕಿಟ್ ಸರಬರಾಜು ಮಾಡುವ ಕಂಪನಿಗಳನ್ನು ಗುರುತಿಸಿರೋದು ಕೂಡ ಕೇಂದ್ರ ಸರ್ಕಾರವೇ. ಅವರು ಸೂಚಿಸಿದ್ದ 10 ಕಂಪನಿಗಳ ಪೈಕಿ ಒಂದನ್ನು ನಾವು ಆಯ್ಕೆ ಮಾಡಿಕೊಂಡೆವು.

ಏಪ್ರಿಲ್ ನಲ್ಲಿ ಚೀನಾ ಮತ್ತು ಸಿಂಗಾಪುರ್ ನಿಂದ ಹತ್ತು ಕಾಂಪೊನೆಂಟ್ ಗಳಿರುವ ಪಿಪಿಇ ಕಿಟ್ ಗಳು ಬಂದವು. ಪ್ರತಿ ಕಿಟ್ ಗೆ 2117 ರೂ ದರದಲ್ಲಿ ಒಂದು ಲಕ್ಷ ಕಿಟ್ ಗಳನ್ನು ಖರೀದಿಸಲಾಯ್ತು. ಚೀನಾ ಮತ್ತು ಹಾಂಕಾಂಗ್ ಕಂಪನಿಗಳಿಂದಲೂ 9.65 ಲಕ್ಷ ಪಿಪಿಇ ಕಿಟ್ ಗಳನ್ನು 79.35 ಲಕ್ಷ ರು ಕೊಟ್ಟು ಖರೀದಿಸಲಾಗಿದೆ. ಸಿದ್ದರಾಮಯ್ಯನವರು ಆರೋಪಿಸಿರುವಂತೆ 150 ಕೋಟಿ ರೂ.ಅಲ್ಲ.

ಮಾಸ್ಕ ಗಳೂ ಅಷ್ಟೇ. ಮಾರ್ಚ ನಲ್ಲಿ n95 ಮಾಸ್ಕ ಗಳನ್ನು 125 ರೂ ದರಲ್ಲಿ11.66 ಲ್ಷ ಮಾಸ್ಕ ಗಳ ಖರೀದಿಗೆ 11.51 ಲಕ್ಷ ರೂ ವೆಚ್ಚ ಮಾಡಿದ್ದೇವೆ.

ಸರ್ಜಿಕಲ್ ಗ್ಲೌಸ್ ಗಳನ್ನು 9.50 ರೂ ದರದಲ್ಲಿ ಬೆಂಗಳೂರು ಕಂಪನಿಗೆ 1 ಲಕ್ಷ ಆರ್ಡರ್ ಕೊಟ್ಟರೆ, ಆತ 30,000 ಮಾತ್ರ ಪೂರೈಕೆ ಮಾಡಿದ್ದಾರೆ. ಒಟ್ಟು ಇದುವರೆಗೆ 28.50 ಲಕ್ಷ ರೂ ವೆಚ್ಚದಲ್ಲಿ 30,000 ಹ್ಯಾಂಡ್ ಗ್ಲೌಸ್ ಖರೀದಿ ಮಾಡಿದ್ದೇವೆ. ಸಿದ್ದರಾಮಯ್ಯನವರು ಆರೋಪಿಸಿದಂತೆ 10 ಕೋಟಿಯಲ್ಲ.

ಒಂದು ಲಕ್ಷ ಬಾಟೆಲ್ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು 2.65 ಕೋಟಿ ರೂ. ದರದಲ್ಲಿ ಖರೀದಿಸಲಾಗಿದೆ. ನಂತರ ಖಾಸಗಿ ಡಿಸ್ಟಿಲರಿಗಳಿಂದ ಸಿಎಸ್ ಆರ್ ಫಂಡ್ ನಿಂದ ಉಚಿತವಾಗಿ ಹ್ಯಾಂಡ್ ಸ್ಯಾನಿಟೈಸರ್ ಗಳ‌ ಪೂರೈಕೆ ಮಾಡಲಾಗುತ್ತಿದೆ.
ಇದುವರೆಗೆ ವೈದ್ಯಕಿಯ ಉಪಕರಣಗಳ ಖರೀದಿಗೆ 290 ಕೋಟಿ 60.57 ಲಕ್ಷ ಮಾತ್ರ ಖರ್ಚು ಮಾಡಲಾಗಿದೆ.

ಅಬ್ಬಬ್ಬಾ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಆರೋಪ‌ ಮಾಡೋದಕ್ಕೂ ಒಂದು ಮಿತಿ ಬೇಡವೇ. ನಮ್ಮ ಇಲಾಖೆಯ ಪ್ರತಿ ಖರೀದಿಯನ್ನು ಪ್ರಧಾನಿ ಕಾರ್ಯಾಲಯ ಮಾನಿಟರ್ ಮಾಡುತ್ತಿರುತ್ತದೆ. ಇಬ್ಬರು ವೈದ್ಯರು ನಮ್ಮ ಸಚಿವ ಸಂಪುಟದಲ್ಲಿ ಇದ್ದಾರೆ. ಹಾಗೆಲ್ಲಾ ಇಲ್ಲಿ ಮೋಸ ಅನ್ಯಾಯ ಆಗಲ್ಲ.

ನಮ್ಮ ಇಲಾಖೆಯಲ್ಲಿ ಎಲ್ಲ ಅಧಿಕಾರಿಗಳು ಪ್ರಾಮಾಣಿಕರಿದ್ದಾರೆ. ಡ್ರಗ್ಸ್ ಅಂಡ್ ಲಾಜಸ್ಟಿಕ್ ಡಿಪಾರ್ಟಮೆಂಟ್ ನ ಮಂಜುಶ್ರೀ ಆಗಲಿ ,ಇಲಾಖೆ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರಾಗಲಿ ನಮ್ಮ ಮಾತು ಕೇಳುತ್ತಾರೇನು? ಉಪಕರಣಗಳ ಖರೀದಿ ವಿಷಯದಲ್ಲಿ ನಾವು ಯಾರೂ ಮಧ್ಯಪ್ರವೇಶ ಮಾಡುವಂತೆಯೇ ಇಲ್ಲ.

Leave a Reply