ಭಾರತದಿಂದ ವಿಮುಖವಾಗಿ ಚೀನಾದತ್ತ ಸ್ನೇಹ ಹಸ್ತ ಚಾಚುತ್ತಿವೆ ನೆರೆ ರಾಷ್ಟ್ರಗಳು! ಮೋದಿಯವರೆ ಇದೇನಾ ನಿಮ್ಮ ವಿದೇಶಾಂಗ ನೀತಿ?

ಡಿಜಿಟಲ್ ಕನ್ನಡ ವಿಶೇಷ:

ಇಂದು ಚೀನಾ, ನೇಪಾಳ, ಅಫ್ಘಾನಿಸ್ತಾನ, ಪಾಕಿಸ್ತಾನದ ವಿದೇಶಾಂಗ ಸಚಿವರುಗಳು ವರ್ಚುವಲ್ ಸಭೆ ನಡೆಸಿದ್ದು, ಚೀನಾದ ಬಹುದೊಡ್ಡ ಕನಸು ಭೂ ಹಾಗೂ ಸಮುದ್ರ ಮಾರ್ಗಗಳ ಸಂಪರ್ಕ ಮಾರ್ಗದ ಕುರಿತು ಚರ್ಚೆ ನಡೆಸಿದೆ. ಈ ಚರ್ಚೆ ಪರೋಕ್ಷವಾಗಿ ಭಾರತಕ್ಕೆ ಎಚ್ಚರಿಕೆ ಗಂಟೆಯೂ ಆಗಿದೆ.

ಕಾರಣ, ಭಾರತ ಶೀಘ್ರದಲ್ಲೇ ಜಾಗತಿಕ ಮಟ್ಟದಲ್ಲಿ ಬಲಿಷ್ಠ ರಾಷ್ಟ್ರವಾಗಲಿದೆ ಎಂಬ ನಿರೀಕ್ಷೆ ಎಲ್ಲರಲ್ಲೂ ಮೂಡಿತ್ತು. ಜಾಗತಿಕ ಮಟ್ಟದಲ್ಲಿ ಬಲಿಷ್ಠ ರಾಷ್ಟ್ರವಾಗುವ ಮುನ್ನ ದಕ್ಷಿಣ ಏಷ್ಯಾದಲ್ಲಿ ಚೀನಾಗೆ ಪ್ರತಿಸ್ಪರ್ಧಿ ರಾಷ್ಟ್ರವಾಗಲು ಪ್ರಯತ್ನಿಸುತ್ತಿದೆ. ಸೂಪರ್ ಪವರ್ ರಾಷ್ಟ್ರವಾಗುವ ಕನಸು ಕಾಣುತ್ತಿರುವ ಹೊತ್ತಲ್ಲೇ ಭಾರತ ನೆರೆ ರಾಷ್ಟ್ರಗಳ ಸ್ನೇಹ ಕಳೆದುಕೊಳ್ಳುತ್ತಿರುವುದು ಭಾರತದ ಕನಸು ಕಮರುವಂತೆ ಮಾಡಿದೆ.

ಭಾರತ ವಿಶ್ವ ಮಟ್ಟದಲ್ಲಿ ಬಲಿಷ್ಠವಾಗಿ ಬೆಳೆಯಬೇಕಾದರೆ ಇತರೆ ರಾಷ್ಟ್ರಗಳ ಜತೆ ಯಾವ ಸಂಬಂಧ ಇಟ್ಟುಕೊಳ್ಳಲಿದೆ ಎಂಬುದು ಪ್ರಮುಖವಾಗಲಿದೆ. ಸದ್ಯದ ಬೆಳವಣಿಗಗಳು ಭಾರತದ ಕನಸನ್ನು ಕಮರಿಸುವ ಆತಂಕ ಸೃಷ್ಟಿಸಿದೆ. ಇದಕ್ಕೆ ಕಾರಣವೇನು ಎಂದು ನೋಡಿದಾಗ ಭಾರತದ ವಿದೇಶಾಂಗ ನೀತಿಯ ಮೇಲೆ ಪ್ರಶ್ನೆ ಮೂಡುತ್ತಿದೆ. ಭಾರತದ ವಿದೇಶಾಂಗ ನೀತಿ ಹಾಗೂ ಇತರೆ ರಾಷ್ಟ್ರಗಳ ಜತೆಗಿನ ಸಂಬಂಧ ದುರ್ಬಲಗೊಳ್ಳುತ್ತಿದೆಯೇ ಎಂಬ ಅನುಮಾನ ಹುಟ್ಟುಹಾಕಿದೆ.

ಹೌದು, 2014ರ ಹೊತ್ತಿಗೆ ದಕ್ಷಿಣ ಏಷ್ಯಾದಲ್ಲಿ ಚೀನಾಗೆ ಪ್ರತಿಸ್ಪರ್ಧಿಯಾಗಿ ಭಾರತ ಬೆಳೆಯುವ ಎಲ್ಲ ಲಕ್ಷಣಗಳು ಗೋಚರಿಸಿತ್ತು. ಅದಕ್ಕೆ ಕಾರಣ ಆ ಸಮಯದಲ್ಲಿ ಭಾರತ ಎಂದರೆ ಪಾಕಿಸ್ತಾನ ಹೊರತಾಗಿ ಮಿಕ್ಕ ಎಲ್ಲ ನೆರೆ ರಾಷ್ಟರಗಳು ಚೀನಾಗಿಂತ ಭಾರತದ ಜತೆ ಕೈ ಜೋಡಿಸಲು ಮುಂದಾಗಿದ್ದವು. ಆದರೆ ಕಳೆದ ಆರು ವರ್ಷಗಳ ನಂತರ ಪರಿಸ್ಥಿತಿ ಉಲ್ಟಾ ಆಗಿದೆ.

ಭಾರತ ದಕ್ಷಿಣ ಏಷ್ಯಾ ರಾಷ್ಟ್ರ ಸೇರಿದಂತೆ ಇತರೆ ಜಾಗತಿಕ ಪ್ರಮುಖ ರಾಷ್ಟ್ರಗಳ ಜತೆಗಿನ ಸಂಬಂಧ ಹೇಗಿದೆ ಎಂದು ನೋಡೋಣ ಬನ್ನಿ…

ನೇಪಾಳ: ಪಾಕಿಸ್ತಾನ, ಚೀನಾ ಜತೆಗೆ ನೇಪಾಳ ಕೂಡ ತನ್ನ ಭೂಪಟ ಬದಲಿಸಿ ಭಾರತಕ್ಕೆ ಸವಾಲೆಸೆಯುತ್ತಿದೆ. ಇದರ ಹಿಂದೆ ಚೀನಾ ಕುಮ್ಮಕ್ಕು ಇರುವುದು ಗೊತ್ತಿರುವ ವಿಚಾರವಾದರೂ ಭಾರತದ ಮಾತಿಗೆ ತಲೆಯಾಡಿಸುತ್ತಿದ್ದ ನೇಪಾಳ ಈಗ ಭಾರತದ ವಿರುದ್ಧ ತೊಡೆ ತಟ್ಟುತ್ತಿದೆ.

ಶ್ರೀಲಂಕಾ: ದ್ವೀಪ ರಾಷ್ಟ್ರ ಶ್ರೀಲಂಕಾ ತನ್ನ ಬಂದರುಗಳನ್ನು ಚೀನಾದ ಪಾದದಡಿಗೆ ಇಟ್ಟು ಸಂಪೂರ್ಣವಾಗಿ ಶರಣಾಗಿದೆ. ಆ ಮೂಲಕ ಶ್ರೀಲಂಕಾ ಮೇಲೆ ಭಾರತಕ್ಕಿಂತ ಚೀನಾ ಹೆಚ್ಚಿನ ನಿಯಂತ್ರಣ ಸಾಧಿಸಿದೆ.

ಬಾಂಗ್ಲಾದೇಶ: ಮೊನ್ನೆ ಮೊನ್ನೆವರೆಗೂ ಭಾರತದ ಜತೆ ಸ್ನೇಹದ ಹಸ್ತ ಚಾಚಿದ್ದ ಬಾಂಗ್ಲಾ, ಈಗ ಪಾಕಿಸ್ತಾನ ಜತೆ ತನ್ನ ಸಂಬಂಧ ಚಿಗುರಿಸಲು ಪ್ರಯತ್ನಿಸುತ್ತಿದೆ. ಕೆಲವು ದಿನಗಳ ಹಿಂದೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸರ್ಕಾರಗಳ ನಡುವಣ ದೂರವಾಣಿ ಕರೆ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಇದರ ಜತೆಗೆ ಎರಡೂ ದೇಶಗಳು ಕಾಶ್ಮೀರದ ವಿಚಾರವಾಗಿ ಚರ್ಚೆ ಮಾಡಿವೆ ಎಂಬ ವರದಿಗಳು ಪ್ರಕಟವಾಗಿದ್ದು, ಭಾರತಕ್ಕೆ ಸವಾಲೆದುರಾಗುವ ಲಕ್ಷಣ ಗೋಚರಿಸುತ್ತಿದೆ. ಇನ್ನು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರು ಭಾರತಕ್ಕಿಂತ ಚೀನಾ ಹಾಗೂ ಪಾಕಿಸ್ತಾನದ ಜತೆಗಿನ ಸಂಬಂಧ ವೃದ್ಧಿಗೆ ಆಸಕ್ತಿ ವಹಿಸಿದ್ದು, ಕಳೆದ ನಾಲ್ಕು ತಿಂಗಳಿಂದ ಹಲವು ಬಾರಿ ಮನವಿ ಮಾಡಿದರೂ ಉದ್ದೇಶಪೂರ್ವಕವಾಗಿ ಭಾರತದ ರಾಯಭಾರಿ ಕಚೇರಿ ಹೈಕಮಿಷನರ್ ಅವರನ್ನು ಭೇಟಿ ಮಾಡಲು ನಿರಾಕರಿಸಿದ್ದಾರೆ.

ಇರಾನ್: ಭಾರತಕ್ಕೆ ಮಧ್ಯಪ್ರಾಚ್ಯ ರಾಷ್ಟ್ರಗಳ ಜತೆ ವ್ಯಾಪಾರಕ್ಕೆ ಇರುವ ಏಕೈಕ ಮಾರ್ಗ ಇರಾನ್. ಹೀಗಾಗಿ ಇರಾನಿನ ಚಹಬರ್ ಬಂದರು ಅಭಿವೃದ್ಧಿಗೆ ಭಾರತ ಬಂಡವಾಳ ಹೂಡುತ್ತಿದೆ. ಆದರೆ ಕೆಲವು ದಿನಗಳ ಹಿಂದೆ ಇರಾನ್, ಚಹಬರ್ ಹಾಗೂ ಜಹೆಡಾನ್ ನಡುವಣ ರೈಲು ಮಾರ್ಗಕ್ಕೆ ಭಾರತ ಜತೆ ಒಪ್ಪಂದ ಮಾಡಿಕೊಂಡಿಲ್ಲ. ಇದು ಇರಾನಿನ ಆರ್ಥಿಕ ಭವಿಷ್ಯದ ವಿಚಾರವಾಗಿದೆ ಎಂದು ತಿಳಿಸಿದೆ. ಈ ಮಧ್ಯೆ ನಾವು ಭಾರತದ ಜತೆಗೆ ಚೀನಾ ಜತೆಗೂ ಉತ್ತಮ ಸಂಬಂಧ ಇಟ್ಟುಕೊಳ್ಳಲು ಬಯಸುತ್ತೇವೆ ಎಂದಿದೆ.

ಈ ಎಲ್ಲ ಬೆಳವಣಿಗಗಳು ಏಷ್ಯಾದಲ್ಲೇ ಭಾರತದ ಸುತ್ತ ವಿರೋಧಿಗಳನ್ನು ಹುಟ್ಟುಹಾಕುವ ಪ್ರಯತ್ನವಾಗಿದ್ದು, ಭಾರತ ಇದಕ್ಕೆ ಪರಿಹಾರ ಕಂಡುಕೊಳ್ಳಲೇ ಬೇಕು. ತನ್ನ ವಿದೇಶಾಂಗ ನೀತಿಯನ್ನು ಪರಿಣಾಮಕಾರಿಯಾಗಿ ಮಾಡಿ ಮತ್ತೆ ಸ್ನೇಹ ರಾಷ್ಟ್ರಗಳ ಸಂಬಂಧ ವೃದ್ಧಿಸಬೇಕು. ಈ ಮಧ್ಯೆ ಚೀನಾ ಭಾರತದ ಗಡಿ ಅತಿಕ್ರಮಣ ಮಾಡುತ್ತಿದೆ. ಈ ವಿಚಾರವಾಗಿ ಇತ್ತೀಚೆಗೆ ರಾಹುಲ್ ಗಾಂಧಿ ಅವರು ವಿಡಿಯೋ ಸಂದೇಶದ ಮೂಲಕ ಎಚ್ಚರಿಕೆ ನೀಡಿದರಾದರೂ ಬಿಜೆಪಿ ನಾಯಕರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದೇ ರಾಹುಲ್ ವಿರುದ್ಧ ಟೀಕೆ ಮಾಡಿ ತಮ್ಮ ವೈಫಲ್ಯ ಮುಚ್ಚಿಕೊಳ್ಲುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

Leave a Reply