ಬಿಜೆಪಿ ಸರಕಾರದ ಭ್ರಷ್ಟಾಚಾರದ ಬಗ್ಗೆ ಆರೆಸ್ಸೆಸ್ ಮೌನ ಏಕೆ?: ಸಂಸದ ಡಿ.ಕೆ ಸುರೇಶ್ ಪ್ರಶ್ನೆ

ಡಿಜಿಟಲ್ ಕನ್ನಡ ಟೀಮ್:

ಕೊರೋನಾ ಪಿಡುಗಿನ ಸಮಯದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದರೂ ಆರೆಸ್ಸೆಸ್ ಮುಖಂಡರು ಮೌನ ವಹಿಸಿರುವುದು ಯಾಕೆ? ಅವರ ಮೌನ ನೋಡಿದರೆ ಅವರು ಇದರಲ್ಲಿ ಭಾಗಿಯಾಗಿರುವ ಅನುಮಾನ ಮೂಡಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್ ತಿಳಿಸಿದ್ದಾರೆ.

ಸ್ಪೀಕ್ ಅಪ್ ಕರ್ನಾಟಕ ಕಾರ್ಯಕ್ರಮದ ಭಾಗವಾಗಿ ಸಂಸದ ಡಿ.ಕೆ ಸುರೇಶ್ ಹಾಗೂ ಮಾಜಿ ಸಂಸದರಾದ ಬಿ.ಎನ್ ಚಂದ್ರಪ್ಪ ಅವರು ಸೋಮವಾರ ಪತ್ರಿಗೋಷ್ಠಿ ನಡೆಸಿ, ಸರ್ಕಾರದ ವಿರುದ್ಧ ಕಿಡಿಕಾರಿದರು. ಈ ವೇಳೆ ಸುರೇಶ್ ಅವರು ಹೇಳಿದ್ದಿಷ್ಟು:

‘ಕೋವಿಡ್ ಪಿಡುಗಿನ ಸಮಯದಲ್ಲಿ ಜನರ ಪ್ರಾಣ ಉಳಿಸಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಮಾತ್ರವಲ್ಲದೇ ದೇಶದ ಎಲ್ಲ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಸರ್ಕಾರಕ್ಕೆ ಬೆಂಬಲ ಸೂಚಿಸಿ, ನಾವೆಲ್ಲರೂ ಒಂದು ಎಂಬುದನ್ನು ಸಾಬೀತುಪಡಿಸಲಾಗಿತ್ತು.

ಹಾಸನ ಜಿಲ್ಲೆಯಲ್ಲಿ 2 ಸಾವಿರಕ್ಕಿಂತ ಹೆಚ್ಚು ಮಂದಿ ಸೋಂಕಿತರಾಗಿದ್ದು, ಈ ಜಿಲ್ಲೆ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರದಲ್ಲಿ ಸೋಂಕು ತೀವ್ರವಾಗಿದೆ. ದೇಶದಲ್ಲಿ 38 ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಆದರೆ ರಾಜ್ಯ ಬಿಜೆಪಿ ಸರ್ಕಾರ ಕೋವಿಡ್ ಹೆಸರಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದು, ಇದನ್ನು ಜನರ ಮುಂದೆ ಇಡಲು ಕಾಂಗ್ರೆಸ್ ಮುಂದಾಗಿದೆ.

ಮಾ.23 ರಂದು ಪ್ರಧಾನಿಗಳು 21 ದಿನ ಲಾಕ್ ಡೌನ್ ಮಾಡುವುದಾಗಿ ಘೋಷಣೆ ಮಾಡಿದಾಗ ಎಲ್ಲರೂ ಸಹಕಾರ ಕೊಟ್ಟಿದ್ದೇವೆ. ಅವರು 21 ದಿನದಲ್ಲಿ ಕೊರೋನಾ ಹೋಗಲಾಡಿಸುತ್ತೇವೆ ಎಂದು ಹೇಳಿದಾಗ ಅವರ ಮಾತಿನ ಮೇಲೆ ಎಲ್ಲರೂ ಭರವಸೆ ಇಟ್ಟಿದ್ದರು. ಆದರೆ ಇಂದು ನಿಮ್ಮ ಜೀವ ನಿಮ್ಮ ಕೈಯಲ್ಲಿದೆ, ನೀವೇ ಕಾಪಾಡಿಕೊಳ್ಳಬೇಕು ಅಂತಾ ಕರೆ ನೀಡುತ್ತಿದ್ದಾರೆ.

120 ದಿನಗಳು ಕಳೆದರೂ ಸೋಂಕು ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ. ಲಾಕ್ ಡೌನ್ ಮಾಡಿದರೂ ಸರಿಯಾದ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.

ಕೊರೋನಾ ನಿಯಂತ್ರಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಾಗೂ ಆಡಳಿತ ಯಂತ್ರ ಸಂಪೂರ್ಣವಾಗಿ ವಿಫಲವಾಗಿವೆ. ಲಾಕ್ ಡೌನ್ ಸಂದರ್ಭದಲ್ಲಿ ಮಲಗಿದ್ದ ಸರ್ಕಾರ 120 ದಿನ ಆದಮೇಲೆ ಹಾಸಿಗೆ ಬೇಕು, ವೆಂಟಿಲೇಟರ್ ಬೇಕು ಅಂತಾ ಈಗ ಹುಡುಕಾಟ ನಡೆಸುತ್ತಿದೆ.

ಮೊದಲ 90 ದಿನಗಳ ಮಹತ್ವದ ಕಾಲಘಟ್ಟದಲ್ಲಿ ಸೋಂಕು ನಿಯಂತ್ರಣದ ಜತೆಗೆ ಜನರ ಭವಿಷ್ಯದ ಬಗ್ಗೆ ಚಿಂತಿಸಬೇಕಿತ್ತು. ಆದರೆ ಸರ್ಕಾರ ಭ್ರಷ್ಟಾಚಾರ ಮಾಡುವುದರಲ್ಲಿ ಮುಳುಗಿತ್ತು. ಬಿಜೆಪಿ ಹಾಗೂ ಅದರ ಮಂತ್ರಿಗಳು ಸತ್ತ ಹೆಣದ ಮೇಲೆ ಹಣ ಮಾಡುವ ಕೆಲಸಕ್ಕೆ ಇಳಿದಿದ್ದಾರೆ.

ಜನ ಹೇಗೆ ಆಹಾರ, ಹಾಸಿಗೆ, ಚಿಕಿತ್ಸೆ, ವೆಂಟಿಲೇಟರ್ ವ್ಯವಸ್ಥೆ ಇಲ್ಲದೆ ನರಳಾಡುತ್ತಿದ್ದಾರೆ ಎನ್ನುವುದನ್ನು ನಾವು ಮಾಧ್ಯಮಗಳಲ್ಲಿ ನೋಡಿದ್ದೇವೆ.

ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಕೊರೋನಾ ಸಾವಿನ ಪ್ರಮಾಣ ಶೇ.2.6 ರಷ್ಟಿದ್ದು, ಗರಿಷ್ಠ ಮಟ್ಟದಲ್ಲಿದೆ. ಈ ಕೊರೋನಾಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಜನ ಸತ್ತಿದ್ದಾರೆ ಅಂದರೆ ಅದಕ್ಕೆ ನೇರ ಹೊಣೆ ಸರ್ಕಾರ. ಸರ್ಕಾರ ಜನರನ್ನು ರಕ್ಷಿಸುವ ಬದಲು ಹಣ ಹೇಗೆ ಮಾಡುವುದು ಎಂಬುದರ ಮೇಲೆ ಹೆಚ್ಚು ಆಸಕ್ತಿ ಹೊಂದಿದೆ. ಮಾಸ್ಕ್, ಸ್ಯಾನಿಟೈಸರ್ ನಿಂದ ಹಿಡಿದು ಪಿಪಿಇ ಕಿಟ್ ಹಾಗೂ ವೆಂಟಿಲೇಟರ್ ವರೆಗೂ ಹಣ ಮಾಡುತ್ತಿದೆ.

ನಮ್ಮ ವಿರೋಧ ಪಕ್ಷದ ನಾಯಕರು ಪ್ರಶ್ನೆ ಮಾಡಿದಾಗ ಸಚಿವರು ನಾವು ಖರ್ಚು ಮಾಡಿರುವುದೇ 365 ಕೋಟಿ ರುಪಾಯಿ ಅಷ್ಟೇ, 2000 ಕೋಟಿ ಎಲ್ಲಿ ಅಂತಾ ಹೇಳಿದ್ದರು. ನಂತರ ಮತ್ತೊಬ್ಬರು ಬಂದು ನಾವು ಖರ್ಚು ಮಾಡಿರುವುದು 600 ಕೋಟಿ ಅಂತಾ ಹೇಳುತ್ತಾರೆ. ಹೀಗೆ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಾರೆ.

ನಾವು ವಿರೋಧ ಪಕ್ಷದಲ್ಲಿದ್ದೇವೆ, ಸರ್ಕಾರ ನಮಗೆ ಲೆಕ್ಕ ಕೊಡುವುದು ಬೇಡ. ಲೆಕ್ಕವನ್ನು ಕಾರ್ಮಿಕರು, ರೈತರು, ಬಡವರಿಗೆ ಕೊಡಬೇಕಿದೆ. ನಿಮ್ಮ ಲಾಕ್ ಡೌನ್ ನಿಂದ ಜನ ಕೆಲಸ ಕಳೆದುಕೊಂಡು ಬೀದಿಗೆ ಬೀಳುತ್ತಿದ್ದಾರೆ. ಅವರಿಗೆ ಪರಿಹಾರ ನೀಡಿ ಅಂತಾ ಕೇಳಿದೆವು. ಆದರೆ ಸರ್ಕಾರ ಕಾರ್ಮಿಕರು ತಿನ್ನುವ ಅನ್ನದಲ್ಲೂ ಅಕ್ರಮ ನಡೆಸಿದೆ.

ಸರ್ಕಾರ ಅರ್ಧ ಲೀಟರ್ ಸ್ಯಾನಿಟೈಸರ್ ಅನ್ನು 600 ರೂಪಾಯಿಗೆ ಖರೀದಿಸಿದೆ. ನೀವು ಖರೀದಿಸಿದ ಪಿಪಿಇ ಕಿಟ್ ಕಳಪೆ ಎಂದು ನಾವು ಹೇಳಿಲ್ಲ, ಆ ಪಕ್ಷದ ನಾಯಕರೇ ಹೇಳಿದ್ದಾರೆ.

ವೆಂಟಿಲೇಟರ್ ಅನ್ನು ಕೇಂದ್ರ ಸರ್ಕಾರ 4 ಲಕ್ಷ ರೂಪಾಯಿಗೆ ಖರೀದಿಸಿದರೆ, ತಮಿಳುನಾಡು 4.65 ಲಕ್ಷಕ್ಕೆ ಖರೀದಿಸಿದೆ. ಆದರೆ ರಾಜ್ಯ ಸರ್ಕಾರ 5ರಿಂದ 18 ಲಕ್ಷದ ವರೆಗೂ ನೀಡಿ ಖರೀದಿ ಮಾಡಿದೆ. ಒಬ್ಬೊಬ್ಬ ಮಂತ್ರಿ ಒಂದೊಂದು ದರಕ್ಕೆ ಖರೀದಿ ಮಾಡಿದ್ದಾರೆ.

ಜಾಹೀರಾತಿನಲ್ಲಿ 10100 ಹಾಸಿಗೆ ವ್ಯವಸ್ಥೆ ಎಂದು ಹೇಳಿಕೊಂಡಿದ್ದಾರೆ. ಆದರೆ 6500 ಬೆಡ್ ಗಳನ್ನು ಮಾತ್ರ ಹಾಕಿದ್ದಾರೆ. 120 ದಿನ ಕಮಿಷನ್ ತಿಂದು ಮಜಾ ಮಾಡಿದ ಪರಿಣಾಮ ಇಂದು ಜನ ಬೀದಿಯಲ್ಲಿ ಸಾಯುವ ಪರಿಸ್ಥಿತಿ ಬಂದಿದೆ. ಮಂತ್ರಿಗಳಲ್ಲಿ ಹೊಂದಾಣಿಕೆ ಇಲ್ಲದೆ, ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ.

ಹಾಸನದಲ್ಲಿ ಕೊರೋನಾ ನಿಯಂತ್ರಣ ಮಾಡಲು ಯಾರಾದರೂ ಸಚಿವರು ಉಸ್ತುವಾರಿ ವಹಿಸಿಕೊಳ್ಳಲು ಡಿಮ್ಯಾಂಡ್ ಮಾಡಿದ್ದಾರಾ? ಇಲ್ಲ. ಎಲ್ಲರಿಗೂ ಬೆಂಗಳೂರೇ ಬೇಕು. ಅಷ್ಟದಿಕ್ಪಾಲಕರಂತೆ ಎಂಟು ಮಂದಿ ಮಂತ್ರಿಗಳಿದ್ದಾರೆ.

ಇವತ್ತು ಹಾಸನ ಜಿಲ್ಲೆಯಲ್ಲಿ ಅಧಿಕಾರಿಗಳು ಸಾಯುತ್ತಿದ್ದಾರೆ. ಅವರಿಗೆ ರಕ್ಷಣೆ ಇಲ್ಲ. ಆರಂಭದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹೂವ ಚೆಲ್ಲಿದ್ದೇ, ಚೆಲ್ಲಿದ್ದು. ಇವತ್ತು ಅವರ ತಮ್ಮ ಬೇಡಿಕೆ ಈಡೇರಿಸಿ ಅಂತಾ ಪ್ರತಿಭಟನೆ ಮಾಡಿದರೆ ಅವರ ಕಷ್ಟ ಏನು ಅಂತಾ ಕೇಳಲು ಯಾರೂ ಗತಿ ಇಲ್ಲ. ಇದರಿಂದ ಬಿಜೆಪಿ ತಮಗೆ ಬೇಕಾದಾಗ ಬಳಸಿಕೊಂಡು ನಂತರ ಬಿಸಾಡುವ ಸಂಸ್ಕೃತಿಯನ್ನು ತೋರಿಸುತ್ತಿದೆ.

ಆರೆಸ್ಸೆಸ್ ನವರು ಶಿಸ್ತುಬದ್ಧವಾಗಿರುತ್ತಾರೆ ಎಂದು ಭಾವಿಸಿದ್ದೆ. ಆದರೆ ಭ್ರಷ್ಟಾಚಾರದ ವಿಚಾರವಾಗಿ ಅವರು ಬಾಯಿ ಬಿಡುತ್ತಿಲ್ಲ. ಅವರೂ ಕೂಡ ಇದರಲ್ಲಿ ಭಾಗಿಯಾಗಿದ್ದಾರಾ ಎಂಬ ಅನುಮಾನ ಮೂಡಿದೆ. ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ ಸಣ್ಣಪುಟ್ಟದಕ್ಕೆ ಸಿಬಿಐ ತನಿಖೆ ಮಾಡಿಸಿ ಅಂತಾ ಹೇಳುತ್ತಿದ್ದರು. ಈಗ ಒಂದೇ ಒಂದು ಮಾತು ಆಡುತ್ತಿಲ್ಲ. ಇದರಿಂದ ಅವರೂ ಪಾಲುದಾರರಾಗಿದ್ದಾರಾ ಎಂಬ ಅನುಮಾನ ಮೂಡಿದೆ.

ಈ ಸರ್ಕಾರದಿಂದ ನಮ್ಮ ಜೀವನ ರೂಪಿಸಿಕೊಳ್ಳುತ್ತೇವೆ ಎಂದು ಯಾರಾದರೂ ಭಾವಿಸಿದ್ದರೆ ಅದು ಎಳ್ಳಷ್ಟೂ ಸಾಧ್ಯವಿಲ್ಲ.

ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ ನೀಡದೆ ಹಣ ಲೂಟಿ ಮಾಡುವುದರಲ್ಲಿ ಸರ್ಕಾರ ಮುಳುಗಿದೆ.

ಹಸಿರು ಶಾಲು ಹಾಕಿಕೊಂಡು ಬಂದ ಸರ್ಕಾರ ಇಂದು ರೈತರನ್ನು ಮರೆತಿದೆ. ಆಲೂಗೆಡ್ಡೆ ಬೆಲೆ ಬಿದ್ದಿದೆ. ಕೊಬ್ಬರಿಗೆ ಬೆಲೆ ಇಲ್ಲ. ಇದರ ಬಗ್ಗೆ ಮಾತನಾಡುವವರು ಯಾರು?

ಈ ಮಧ್ಯೆ ಸರ್ಕಾರ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಮಾಡಿದೆ. ಮೊದಲೇ ದುಡ್ಡಿಲ್ಲ ಎನ್ನುತ್ತಿರುವ ಸರ್ಕಾರ ಮಂಡಳಿ ನೇಮಕ ಮಾಡಿದ್ದು ಯಾಕೆ? ಒಂದು ಮಂಡಳಿ ನೇಮಕ ಮಾಡಿ ಕಾರ್ಯ ನಿರ್ವಹಿಸಬೇಕಾದರೆ 5 ಲಕ್ಷ ರುಪಾಯಿ ಬೇಕು.

ಸರ್ಕಾರಕ್ಕೆ ನೈತಿಕತೆ ಇದ್ದರೆ, ಮಾನ ಮರ್ಯಾದೆ ಇದ್ದರೆ ಈ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸಲಿ.

Leave a Reply