ಆ. 20 ರಂದು ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ “ಜನ ಧ್ವನಿ” ಕಾರ್ಯಕ್ರಮ: ಡಿ.ಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರ್ಕಾರ ಸುಗ್ರೀವಾಜ್ಞೆ ದುರ್ಬಳಕೆ ಮಾಡಿಕೊಂಡು ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ, ಕೊರೋನಾ ಭ್ರಷ್ಟಾಚಾರ ಹಾಗೂ ಅತಿವೃಷ್ಟಿ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯವನ್ನು ಖಂಡಿಸಿ ಇದೇ 20 ರಂದು ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಜನರ ಧ್ವನಿಯನ್ನು ರಾಜ್ಯ ಸರಕಾರಕ್ಕೆ ಮುಟ್ಟಿಸಲು “ಜನ ಧ್ವನಿ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಅವರು ಸೋಮವಾರ ಪತ್ರಿಕಾಗೋಷ್ಠಿ ನಡೆಸಿದರು. ಕಾರ್ಯಾಧ್ಯಕ್ಷ ಸಲೀಂ ಅಹಮದ್, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಬಿ.ಎಲ್ ಶಂಕರ್, ಉಪಮುಖ್ಯಸ್ಥ ವಿ.ಆರ್. ಸುದರ್ಶನ್, ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಅವರು ಇದ್ದರು. ಈ ವೇಳೆ ಅಧ್ಯಕ್ಷರು ಹೇಳಿದ್ದಿಷ್ಟು:

‘ಇದೇ 20ರಂದು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನ. ಈ ಇಬ್ಬರು ನಾಯಕರು ಉಳುವವರಿಗೆ ಭೂಮಿ ಸಿಗುವ ಕಾನೂನು ತಂದುಕೊಟ್ಟವರು. ಜನರ ಕಲ್ಯಾಣಕ್ಕಾಗಿ ಭೂಸುಧಾರಣೆ ಕಾಯಿದೆ ಜಾರಿಗೆ ತಂದರು. ಆದರೆ ಇಂದಿನ ಸರ್ಕಾರ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ಯಾರು ಬೇಕಾದರೂ ಕೃಷಿ ಭೂಮಿ ಖರೀದಿಸಬಹುದು ಎಂದು ಸುಗ್ರೀವಾಜ್ಞೆ ಹೊರಡಿಸಿದೆ. ರೈತರಿಂದ ಭೂಮಿ ಕಸಿದುಕೊಳ್ಳುವುದೂ ಒಂದೇ, ಈ ಕಾಯ್ದೆ ಜಾರಿಗೆ ತಂದಿರುವುದೂ ಒಂದೇ. ರೈತರ ಬಳಿ ಜಮೀನು ಕಬಳಿಸುವ ಪ್ರಯತ್ನ ನಡೆಯುತ್ತಿದೆ. ಇದರ ವಿರುದ್ಧ ಕಾಂಗ್ರೆಸ್ ಪಕ್ಷ ತನ್ನ ನಿಲುವು ತಿಳಿಸಿದೆ. ಇದರ ಜತೆಗೆ ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿಗಳ ಮೂಲಕ ಜನ ವಿರೋಧಿ, ರೈತವಿರೋಧಿ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದು, ಇದರ ಜತೆಗೆ ಕೊರೋನಾ ಉಪಕರಣ ಖರೀದಿಯಲ್ಲಿ ಎಸಗಿರುವ ಭ್ರಷ್ಟಾಚಾರ, ಅತಿವೃಷ್ಟಿ ನಿರ್ವಹಣೆಯಲ್ಲಿ ವೈಫಲ್ಯ ಖಂಡಿಸಿ, ಜನರ ಧ್ವನಿಯನ್ನು ಸರ್ಕಾರಕ್ಕೆ ಮುಟ್ಟಿಸಸಲು ‘ಜನ ಧ್ವನಿ’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅಂದು ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೂ ಪಕ್ಷದಿಂದ ಧರಣಿ ನಡೆಸಲಾಗುವುದು. ನಂತರ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಮನವಿ ಪತ್ರ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುವುದು.’

*ಶಾಶ್ವತ ಪರಿಹಾರವಾಗಿ 10 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ನೀಡಲಿ:*

ರಾಜ್ಯದಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾದ ಪ್ರದೇಶಗಳಿಗೆ ಭೇಟಿ ಕಾರ್ಯಕ್ರಮವನ್ನು ಕೊಡಗಿನಿಂದ ಪ್ರಾರಂಭಿಸಿದ್ದೇನೆ. ಕಾವೇರಿ ನಮ್ಮ ರಾಜ್ಯಕ್ಕೆ ಒಂದು ದೊಡ್ಡ ಆಸ್ತಿ. ಕರ್ನಾಟಕ, ತಮಿಳುನಾಡು, ಪುದುಚೇರಿಗೆ ಜೀವನದಿಯಾಗಿದೆ. ಈ ನದಿ ಉಗಮ ಸ್ಥಾನವನ್ನು ಕಾಪಾಡುವುದು ನಮ್ಮ ಕರ್ತವ್ಯ.

ನಾನು ಕೊಡಗಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಾಗ ಅಲ್ಲಿನ ಜನರ ನೋವು ಗಮನಿಸಿದೆ. ಕಳೆದ ಮೂರು ವರ್ಷಗಳಿಂದ ಸತತವಾಗಿ ಇಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಜನರ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಈಗಿನ ಸರ್ಕಾರ ಮನೆ, ಆಸ್ತಿ ಕಳೆದುಕೊಂಡವರಿಗೆ ಇದುವರೆಗೂ ತಾವು ಘೋಷಿಸಿದ ಪರಿಹಾರವನ್ನು ಕೊಟ್ಟಿಲ್ಲ.

ಮನೆ ಬಾಡಿಗೆಗೆ 5 ಸಾವಿರ ಕೊಡುತ್ತೇವೆ ಎಂದು ಘೋಷಿಸಿತ್ತು. ಕೇವಲ 3-4 ತಿಂಗಳು ಮಾತ್ರ ಕೊಟ್ಟು, ನಂತರ ಕೈತೊಳೆದುಕೊಂಡಿದೆ. ಆನಂತರ ಮನೆಯನ್ನೂ ಕೊಟ್ಟಿಲ್ಲ, ಬಾಡಿಗೆಯನ್ನೂ ಕೊಟ್ಟಿಲ್ಲ ಎಂದು ಅಲ್ಲಿನ ಜನ ಗೋಳು ತೋಡಿಕೊಂಡರು. ನಾವು ಈ ಪ್ರದೇಶಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ಹೀಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಂಟಿಯಾಗಿ ಕಾವೇರಿ ಜಲಾನಯನ ಪ್ರದೇಶಗಳ ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು 10 ಸಾವಿರ ಕೋಟಿ ರುಪಾಯಿಯ ವಿಶೇಷ ಪ್ಯಾಕೇಜ್ ಘೋಷಿಸಬೇಕು.

ಈ ವಿಚಾರವಾಗಿ ರಾಜ್ಯದ 25 ಬಿಜೆಪಿ ಸಂಸದರ ಜತೆಗೆ ಬೇಕಾದರೆ ನಮ್ಮ ಪಕ್ಷದ ಸಂಸದರನ್ನು ಕರೆದುಕೊಂಡು ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಿ ಕೇಂದ್ರದ ಮೇಲೆ ಪರಿಹಾರ ಪ್ಯಾಕೇಜ್ ಗಾಗಿ ಒತ್ತಾಯ ಹೇರಬೇಕಿದೆ. ವಿಧಾನಮಂಡಲದ ಅಧಿವೇಶನ ಕರೆದು ಈ ವಿಚಾರವಾಗಿ ಚರ್ಚಿಸಲಿ. ನಾವು ಇದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ. ಇದನ್ನು ಪಕ್ಷ, ರಾಜಕೀಯವಾಗಿ ನೋಡದೇ ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಯೋಚಿಸಬೇಕು.

ಕಳೆದ ವರ್ಷ ನೆರೆಯಿಂದ ರಾಜ್ಯದಲ್ಲಿ 35 ಸಾವಿರ ಕೋಟಿ ರುಪಾಯಿಯಷ್ಟು ನಷ್ಟವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಕೇಂದ್ರ ಸರ್ಕಾರ ಕೊಟ್ಟಿದ್ದು ಕೇವಲ 1800 ಕೋಟಿ ಪರಿಹಾರ. ಆದರೆ ಇವತ್ತಿಗೂ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಕಾಂಗ್ರೆಸ್ ಎಲ್ಕ ಜಿಲ್ಲಾಧ್ಯಕ್ಷರ ಜತೆ ಮಾತನಾಡಿ, ಮಾಹಿತಿ ಪಡೆದಿದ್ದೇನೆ. ಪಕ್ಷದಿಂದ ಆರು ತಂಡಗಳನ್ನು ರಚನೆ ಮಾಡಿದ್ದು, ಈ ತಂಡಗಳು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸರ್ಕಾರದ ಆಶ್ವಾಸನೆ ಎಷ್ಟರ ಮಟ್ಟಿಗೆ ಜಾರಿಯಾಗಿದೆ? ಪ್ರವಾಹದಿಂದ ಆಗಿರುವ ನಷ್ಟ ಎಷ್ಟು ಎಂಬ ಬಗ್ಗೆ ಪರಿಶೀಲನೆ ನಡೆಸಲಿವೆ.

ಇಂದು ಬೆಳಗ್ಗೆ ಪ್ರಧಾನ ಮಂತ್ರಿಗಳ ಜತೆಗಿನ ಸಭೆಯಲ್ಲಿ ನಮ್ಮ ಸಚಿವರುಗಳು ಪ್ರವಾಹ ಹಾನಿ ಕುರಿತ ವರದಿ ಸಲ್ಲಿಸಿದ್ದು, 4 ಸಾವಿರ ಕೋಟಿಯಷ್ಟು ಹಾನಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಪಾಪ, ಪ್ರಧಾನಮಂತ್ರಿಗಳಿಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಕಳೆದ ವರ್ಷ 35 ಸಾವಿರ ಕೋಟಿಗೆ 1800 ಕೋಟಿ ಕೊಟ್ಟಿದ್ದರು, ಈ ಬಾರಿ ಯಾವ ಲೆಕ್ಕಾಚಾರ ಇಟ್ಟುಕೊಂಡು ಕೊಡುತ್ತಾರೋ ನೋಡೋಣ. ನಮಗೆ ಹಣ ಬಂದು, ಜನರ ಸಮಸ್ಯೆ ತೀರಿದರೆ ಸಾಕು.

*ನನ್ನ ಹೆಸರು ತೆಗೆದುಕೊಳ್ಳದಿದ್ದರೆ ಕೆಲವರಿಗೆ ಸಮಾಧಾನನಾಗುವುದಿಲ್ಲ:*

ಸಚಿವ ಆರ್. ಅಶೋಕ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ ಶಿವಕುಮಾರ್ ಅವರು, ‘ಕೆಲವರಿಗೆ ನನ್ನ ಹೆಸರು ತೆಗೆದುಕೊಳ್ಳದಿದ್ದರೆ ಅವರಿಗೆ ಸಮಾಧಾನನಾಗುವುದಿಲ್ಲ. ಅವರ ಪಕ್ಷದಲ್ಲಿ ಅವರಿಗೆ ಮಾನ್ಯತೆ ಸಿಗುವುದಿಲ್ಲ. ಅದನ್ನು ಪಡೆಯಲು ಈ ರೀತಿ ಮಾತನಾಡುತ್ತಾರೆ. ನಾನು ಅವರ ಬಗ್ಗೆ ಮಾತನಾಡಲು ಹೋಗುವುದಿಲ್ಲ.’

ಇನ್ನು ಯಾರ ಕಾಲದಲ್ಲಿ ಎಷ್ಟು ಪರಿಹಾರ ಬಂದಿದೆ ಎಂಬುದರ ಬಗ್ಗೆ ಅಧಿವೇಶನದಲ್ಲಿ ದಾಖಲೆ ಸಮೇತ ಮಾತನಾಡೋಣ. ಆಗ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿ ಇರಲಿಲ್ಲ. ಈಗ ಒಂದೇ ಪಕ್ಷ ಎರಡೂ ಕಡೆ ಅಧಿಕಾರದಲ್ಲಿದೆ. ಇಬ್ಬರೂ ಕೂತು ಪರಿಹಾರ ನೀಡಲಿ. ಬೇರೆ ಸಂದರ್ಭದಲ್ಲಿ ರಾಜಕೀಯ ಮಾಡೋಣ. ಸದ್ಯಕ್ಕೆ ಜನರ ಜೀವ ಹಾಗೂ ಆಸ್ತಿ ಉಳಿಸೋಣ.

*ನನ್ನ ಹಾಗೂ ಸಿದ್ದರಾಮಯ್ಯನವರದ್ದು ಒಂದೇ ಧ್ವನಿ*

ಭೂ ಸುಧಾರಣಾ ಕಾಯ್ದೆ ವಿಚಾರವಾಗಿ ಸಿದ್ದರಾಮಯ್ಯನವರ ಹೋರಾಟ ಹಾಗೂ ನಮ್ಮ ಧ್ವನಿ ಎಲ್ಲವೂ ಪಕ್ಷದ ಧ್ವನಿಯಾಗಿದ್ದು, ಒಂದೇ ಧ್ವನಿಯಾಗಿದೆ. ಅದೇ ಜನ ಧ್ವನಿ.

Leave a Reply