‘ಆತ್ಮನಿರ್ಭರ್ ಭಾರತ’ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ‘ವೋಕಲ್ ಫಾರ್ ಲೋಕಲ್’ ಮಂತ್ರ

ಡಿಜಿಟಲ್ ಕನ್ನಡ ಟೀಮ್:

74ನೇ ಸ್ವಾತಂತ್ರ್ಯೋತ್ಸವ ದಿನದ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನಿ ಮೋದಿ, ಆತ್ಮನಿರ್ಭರ್ ಭಾರತ್ ಸಾಧನೆಗೆ ‘ವೋಕಲ್ ಫಾರ್ ಲೋಕಲ್’ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಈ ವೇಳೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಮೋದಿ ಹೇಳಿದ್ದಿಷ್ಟು…

‘ಇಂದು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನ ಸ್ಮರಿಸುವ ದಿನ. ನಮ್ಮ ರಕ್ಷಣೆಗಾಗಿ ಗಡಿಯಲ್ಲಿ ನಿಂತಿರುವ ಸೈನಿಕರು ಹಾಗೂ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿರುವ ಪೊಲೀಸರು ಸೇರಿಂದತೆ ಭದ್ರತಾ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುವ ದಿನ. ಈ ದಿನವನ್ನು ಅವರಿಗೆ ಅರ್ಪಿಸಬೇಕು. ಈ ಮಾರಕ ಕೊರೋನಾ ನಡುವೆ ಭಾರತೀಯರು ಸ್ವಾವಲಂಬಿಗಳಾಗಬೇಕು.

ದೇಶದ ಪ್ರತಿಯೊಬ್ಬ ಪ್ರಜೆಯೂ ತಾನು ಸ್ವಾವಲಂಬಿಯಾಗಬೇಕೆಂದು ಸಂಕಲ್ಪ ಮಾಡಬೇಕು. ಆತ್ಮನಿರ್ಭರ್ ಭಾರತ್ ಪರಿಕಲ್ಪನೆ ಭಾರತೀಯರ ಮನಸ್ಸಿನಲ್ಲಿದೆ. ಈ ಕನಸು ಪ್ರತಿಜ್ಞೆಯಾಗಿ ಬದಲಾಗುತ್ತಿದೆ. ಇಂದು 130 ಕೋಟಿ ಭಾರತೀಯರ ಮನಸಲ್ಲಿ ಆತ್ಮನಿರ್ಭರ್ ಭಾರತದದ ಮಂತ್ರವಾಗಿ ಮಾರ್ಪಟ್ಟಿದೆ. ಆತ್ಮನಿರ್ಭರ್ ಕನಸನ್ನು ಭಾರತ ಸಾಕಾರಗೊಳಿಸುತ್ತದೆ ಎಂಬ ವಿಶ್ವಾಸ ನನಗಿದೆ. ಭಾರತೀಯರ ಸಾಮರ್ಥ್ಯ ಮತ್ತು ವಿಶ್ವಾಸದ ಬಗ್ಗೆ ನನಗೆ ನಂಬಿಕೆ ಇದೆ. ಒಮ್ಮೆ ನಾವು ಏನನ್ನಾದರೂ ಮಾಡಲು ನಿರ್ಧರಿಸಿದರೆ, ಆ ಗುರಿಯನ್ನು ಸಾಧಿಸುವವರೆಗೆ ನಾವು ವಿಶ್ರಾಂತಿ ಪಡೆಯುವುದಿಲ್ಲ.

ಇಡೀ ಜಗತ್ತು ಒಂದೇ ಕುಟುಂಬ ಎಂದು ಭಾರತ ಯಾವಾಗಲೂ ನಂಬುತ್ತದೆ. ನಾವು ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯತ್ತ ಗಮನ ಹರಿಸುವಾಗ, ಇದೇ ವೇಳೆ ನಮ್ಮ ಪಯಣದಲ್ಲಿ ಮಾನವೀಯತೆಯ ಗುಣವನ್ನೂ ಸಹ ಉಳಿಸಿಕೊಳ್ಳಬೇಕು. ದೇಶಕ್ಕೆ ಕೊರೋನಾ ಕಾಲಿಟ್ಟ ಬಳಿಕ ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ಕೊರೋನಾದಿಂದಾಗಿ ಅದೆಷ್ಟೋ ಮಂದಿ ಸಾವನ್ನಪ್ಪಿದ್ದಾರೆ. ಹೀಗೆ ಸಾವನ್ನಪ್ಪಿದವರಿಗೆ ನಾನು ಸಂತಾಪವನ್ನು ಸೂಚಿಸುತ್ತೇನೆ. ಮಾರಕ ಕೊರೋನಾದಿಂದಾಗಿ ಕೆಂಪುಕೋಟೆಯಲ್ಲಿ ಈ ಬಾರಿ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ಮಕ್ಕಳ ಕಲರವ ಇಲ್ಲ. ಕೊರೋನಾದಿಂದಾಗಿ ಅವರು ಸ್ವಾತಂತ್ರ್ಯ ಸಂಭ್ರಮದಿಂದ ದೂರ ಉಳಿಯಬೇಕಾಯಿತು.

ಪ್ರಸ್ತುತ ನಾವು ಕೊರೋನಾ ಜೊತೆಗೆ, ಪ್ರವಾಹ ಮತ್ತು ಭೂಕುಸಿತದಂತಹ ಸವಾಲುಗಳನ್ನು ದೇಶ ಎದುರಿಸುತ್ತಿದ್ದೇವೆ. ಈ ನೈಸರ್ಗಿಕ ವಿಕೋಪಗಳು ಅನೇಕ ಜನರನ್ನು ಬಲಿಪಡೆದುಕೊಂಡಿದೆ. ಈ ವಿಪತ್ತುಗಳನ್ನು ಎದುರಿಸುತ್ತಿರುವ ದೇಶದ ಅನೇಕ ರಾಜ್ಯಗಳಿಗೆ ನಾವು ಸದಾ ಬೆಂಬಲ ನೀಡುತ್ತೇವೆ. ಮುಂದಿನ ವರ್ಷ 75ನೇ ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ಹೊಸ ಗುರಿಗಳನ್ನು ಇಟ್ಟುಕೊಳ್ಳಬೇಕು.

Leave a Reply