ಬಿಜೆಪಿ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದೆ: ಡಿ.ಕೆ ಶಿವಕುಮಾರ್ ಆಕ್ರೋಶ

ಡಿಜಿಟಲ್ ಕನ್ನಡ ಟೀಮ್:

ಕೆ.ಜಿ ಹಳ್ಳಿ ಮತ್ತು ಡಿ.ಜೆ ಹಳ್ಳಿ ಘಟನೆ ತಡೆಯುವಲ್ಲಿ ಗೃಹ ಸಚಿವಾಲಯ ವೈಫಲ್ಯವಾಗಿದ್ದು, ಅದನ್ನು ಮುಚ್ಚಿಹಾಕಲು ಕಾಂಗ್ರೆಸ್ ವಿರುದ್ಧ ಅನಗತ್ಯ ಆರೋಪ ಮಾಡಲಾಗುತ್ತಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಸ್ವಾತಂತ್ರ್ಯ ದಿನಾಚಾರಣೆ ಕಾರ್ಯಕ್ರಮದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು…

ಬೆಂಗಳೂರಿನ ಗಲಭೆ ವಿಚಾರದಲ್ಲಿ ಗೃಹ ಸಚಿವರ ಹೇಳಿಕೆ ಗಮನಿಸಿದ್ದೇನೆ. ಗಲಭೆಗೆ ಕಾಂಗ್ರೆಸ್ ಪಕ್ಷದ ಆತಂರಿಕ ಕಾರಣ ಎಂದು ಹೇಳಲು ಹೇಗೆ ಸಾಧ್ಯ? ಈ ರೀತಿಯ ತೀರ್ಮಾನ ತನಿಖಾ ವರಿದಿಗಳು ನೀಡಲು ಮಾತ್ರ ಸಾಧ್ಯ. ಅವರೇನಾದರೂ ತನಿಖಾ ನಡೆಸಿದ್ದಾರಾ? ನಮ್ಮ ಕಾರ್ಪೋರೇಟರ್ ಗಳಿಗೆ ನೋಟೀಸ್ ಕೊಟ್ಟು ಬೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾವು ಸುಮ್ಮನೆ ಕೂರುವುದಿಲ್ಲ. ಇಡೀ ಘಟನೆಗೆ ಅವರ ಪಕ್ಷದ ಕಾರ್ಯಕರ್ತರು ಕಾರಣ. ಅವರ ತಪ್ಪು ಮುಚ್ಚಿಕೊಳ್ಳಲು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಗೃಹ ಸಚಿವಾಲಯ ಈ ಘಟನೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ವಿಷಯದ ಆರಂಭದಲ್ಲೆ ಎಲ್ಲವನ್ನೂ ನಿಯಂತ್ರಿಸದೇ ಗಲಭೆಗೆ ಅವಕಾಶ ನೀಡಿ ಈಗ ಜಾತಿ ಬಣ್ಣ ಬಳೆಯುತ್ತಿದ್ದಾರೆ. ನಮ್ಮ ಶಾಸಕ, ಮುಖಂಡರ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಲಾಗಿದೆ.

ಈ ಕೃತ್ಯ ಎಸಗಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಅಂತಾ ನಾವೇ ಹೇಳುತ್ತಿದ್ದೇವೆ. ಅದಕ್ಕೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಅದನ್ನು ಬಿಟ್ಟು ಕಾಂಗ್ರೆಸ್ ಆಂತರಿಕ ತಿಕ್ಕಾಟದಿಂದ ಈ ಗಲಭೆ ಆಗಿದೆ ಅಂತಾ ಹೇಗೆ ಹೇಳುತ್ತಾರೆ? ಬಿಜೆಪಿಯ ಒಳತಂತ್ರದಿಂದ ಈ ಘಟನೆ ನಡೆದಿದೆ. ನಮ್ಮ ಮಾಜಿ ಗೃಹ ಸಚಿವರು ಈ ಕುರಿತು ಆಂತರಿಕ ತನಿಖೆ ನಡೆಸುತ್ತಿದ್ದಾರೆ. ನಮ್ಮ ಶಾಸಕರಿಗೆ ಬಲವಂತವಾಗಿ ಇದೇ ರೀತಿ ಹೇಳಿಕೆ ನೀಡುವಂತೆ ಒತ್ತಾಯ ಹಾಕುತ್ತಿದ್ದಾರೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಈ ರೀತಿಯ ಕೋಮುಗಲಭೆಗಳು ನಡೆಯುತ್ತಲೇ ಇವೆ. ಇದಕ್ಕೆ ಬಿಜೆಪಿ ಸರ್ಕಾರವೇ ಕಾರಣ. ಬಿಜೆಪಿ ನಾಯಕರು ಸಚಿವರುಗಳು ಕೋಮು ಗಲಭೆಗೆ ಪ್ರೇರೇಪಿಸುವ ಹೇಳಿಕೆ ನೀಡುತ್ತಿದ್ದು, ಯಾರಾದರೂ ಒಬ್ಬರ ವಿರುದ್ಧವಾದರೂ ಕ್ರಮ ಕೈಗೊಂಡಿದ್ದಾರಾ? ಜನರನ್ನು ಎತ್ತಿಕಟ್ಟುತ್ತಿರುವ ಬಿಜೆಪಿ ನಾಯಕರೇ ಕೋಮು ಸಂಘರ್ಷಕ್ಕೆ ಕಾರಣವಾಗುತ್ತಿದ್ದಾರೆ. ಮೊದಲು ಅವರ ವಿರುದ್ಧ ಕ್ರಮ ಕೈಗೊಳ್ಳಲಿ.

ಶೃಂಗೇರಿ ಘಟನೆಗೆ ಬಿಜೆಪಿ, ಬಜರಂಗದಳದ ಮೂಲ. ಬಜೆಪಿ ಇದನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದು, ಇದನ್ನು ಯಾರೂ ಮುಚ್ಚಿ ಹಾಕಲು ಸಾಧ್ಯವಿಲ್ಲ.

ನಾವು ಅಧಿಕಾರಕ್ಕೋಸ್ಕರ ಇಲ್ಲ:

ನಮಗೆ ಯಾವ ಚುನಾವಣೆ ಬಂದರೂ ಹೆದರಿಕೆ ಇಲ್ಲ. ಗ್ರಾಮ ಪಂಚಾಯ್ತಿ ಚುನಾವಣೆ ಬರಲಿ, ವಿಧಾನಸಭೆ ಚುನಾವಣೆ ಬರಲಿ, ಸಂಸತ್ ಚುನಾವಣೆಯೇ ಬರಲಿ. ನಾವು ಅಧಿಕಾರಕ್ಕೋಸ್ಕರ ಇಲ್ಲ. ನಮಗೆ ನಮ್ಮದೇ ಆದ ಇತಿಹಾಸ ಇದೆ. ನಮಗೆ ನಮ್ಮ ಧ್ವಜ ಹಾಗೂ ಈ ಜನ ಸಾಕು. ನಮ್ಮ ನಾಯಕರುಗಳು ದೇಶಕ್ಕಾಗಿ ಆಸ್ತಿ, ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ನಾವು ಇಂದು ಇಡೀ ಭಾರತೀಯ ಕಾಂಗ್ರೆಸ್ ಪಕ್ಷ ಹಾಗೂ ಕಾರ್ಯಕರ್ತರು ಅಖಂಡ ಶ್ರೀನಿವಾಸ ಮುರ್ತಿ ಅವರ ಜತೆ ನಿಲ್ಲಲಿದೆ. ನೀವು ಅವರಿಗೆ ಸಹಕಾರ ಕೊಡುತ್ತೀರೋ ಬಿಡುತ್ತೀರೋ ನಾವು ಅವರ ಜತೆ ನಿಲ್ಲುತ್ತೇವೆ.

ಕಾಂಗ್ರೆಸ್ ಪ್ರಧಾನಿ ಮತ್ತೆ ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಿಸುತ್ತಾರೆ

ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶಕ್ಕೆ ಕಾಂಗ್ರೆಸ್ ಪಕ್ಷ ಅನಿವಾರ್ಯವಾಗಿದೆ. ಕಾಂಗ್ರೆಸ್ ಪಕ್ಷ ಮಾತ್ರ ಇಡೀ ದೇಶವನ್ನು ಒಟ್ಟಾಗಿ ಮುಂದೆ ಕರೆದೊಯ್ಯಲು ಸಾಧ್ಯ. ದೇಶದ ಸಂವಿಧಾನಕ್ಕೆ ಧಕ್ಕೆಯಾಗಿ, ಅಶಾಂತಿ ಉಂಟಾಗಿದೆ. ದೇಶದ ಸಮಗ್ರತೆ ಹಾಗೂ ಐಕ್ಯತೆಗಾಗಿ ಹೋರಾಟ ಮಾಡಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲಿ ಇಂದು ಜನ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ಮುಂದಿನ ಚುನಾವಣೆ ನಂತರ ಕಾಂಗ್ರೆಸಿಗರು ದೆಹಲಿಯ ಕೆಂಪುಕೋಟೆ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲಿದ್ದಾರೆ ಎಂಬ ನಂಬಿಕೆ ನನಗಿದೆ.

Leave a Reply