ಆಧುನಿಕ ಭಾರತದ ಹರಿಕಾರ ರಾಜೀವ್ ಗಾಂಧಿ!

ಡಿಜಿಟಲ್ ಕನ್ನಡ ಟೀಮ್:

ಇಂದು ದೇಶ ಕಂಡ ಅತ್ಯಂತ ಯುವ ಹಾಗೂ ಪ್ರಭಾವಿ ಮತ್ತು ಯಶಸ್ವಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಅವರ ಜನ್ಮದಿನ.

ಕೇವಲ 40ನೇ ವಯಸ್ಸಿಗೆ ಪ್ರಧಾನಮಂತ್ರಿ ಹುದ್ದೆ ಅಲಂಕರಿಸಿ ದೇಶವನ್ನು ಸಮರ್ಥವಾಗಿ ಮುನ್ನಡೆಸಿದ್ದಲ್ಲದೆ, ಆಧುನಿಕ ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಮಹಾನ್ ನಾಯಕ ರಾಜೀವ್ ಗಾಂಧಿ. ದೇಶದ ದೌರ್ಭಾಗ್ಯ ನಾವು ರಾಜೀವ್ ಗಾಂಧಿ ಅವರನ್ನು ಬೇಗನೆ ಕಳೆದುಕೊಂಡೆವು. ಅವರ ಜನ್ಮದಿನದ ಸಮಯದಲ್ಲಿ ಅವರನ್ನು ಆಧುನಿಕ ಭಾರತದ ಹರಿಕಾರ ಎಂದು ಯಾಕೆ ಕರೆಯುತ್ತಾರೆ, ಅವರು ಮಾಡಿದ ಕೆಲಸವಾದರೂ ಏನು ಎಂಬುದನ್ನು ನೋಡೋಣ ಬನ್ನಿ…

21ನೇ ಶತಮಾನಕ್ಕೆ ಪ್ರವೇಶಿಸುವ ಹೊತ್ತಲ್ಲಿ ದೇಶವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ ರಾಜೀವ್ ಗಾಂಧಿ ಆಧುನಿಕ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದರು. ಅವರು ಹಾಕಿದ ಆಧುನಿಕತೆಯ ಬೀಜ ಇಂದು ಹೆಮ್ಮರವಾಗಿ ಅದರ ಫಲವನ್ನು ನಾವು ಅನುಭವಿಸುವಂತಾಗಿದೆ. 70 ವರ್ಷಗಳಲ್ಲಿ ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು? ಎಂಬುದು ರಾಜಕೀಯ ಅಸ್ತ್ರವಾಗಿ ಬಳಕೆಯಾಗುವ ಪ್ರಶ್ನೆ. ಆದರೆ ರಾಜೀವ್ ಗಾಂಧಿ ಅವರ ಕೇವಲ ಐದು ವರ್ಷದ ಸರ್ಕಾರದ ಪ್ರಮುಖ ಕೊಡುಗೆಗಳನ್ನು ಒಮ್ಮೆ ನೋಡಿದರೆ ಸಾಕು ಅವರ ದೂರದೃಷ್ಟಿ ಹಾಗೂ ಅಭಿವೃದ್ಧಿ ವೇಗ ಎಷ್ಟರಮಟ್ಟಿಗೆ ಇತ್ತು ಎಂಬುದು ಅರಿವಾಗುತ್ತದೆ.

*1 ಟೆಲಿಕಾಂ ಕ್ರಾಂತಿ:* 1984ರಲ್ಲಿ C-DOT (Centre for Development of Telematics)
1986ರಲ್ಲಿ ಮಹಾನಗರ ಟೆಲಿಫೋನ್ ಲಿಮಿಟೆಡ್ (MTNL) ಸ್ಥಾಪನೆ ಮೂಲಕ ದೇಶದಲ್ಲಿ ಟೆಲಿಕಾಂ ಕಾಲಿಟ್ಟು ಕ್ರಾಂತಿಯಾಯಿತು.

*2 ಕಂಪ್ಯೂಟರೀಕರಣ:* ರಾಜೀವ್ ಗಾಂಧಿ ಅವರು ವಿಜ್ಞಾನ ಹಾಗೂ ತಂತ್ರಜ್ಞಾನ ಉದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ಅದಕ್ಕಾಗಿ ಕಂಪ್ಯೂಟರ್, ವಿಮಾನಯಾನ, ರಕ್ಷಣೆ, ಟೆಲಿಕಮ್ಯುನಿಕೇಶನ್ ದಂತಹ ತಂತ್ರಜ್ಞಾನಗಳ ಆಮದಿನ ಮೇಲೆ ತೆರಿಗೆ, ಸುಂಕವನ್ನು ಕಡಿಮೆ ಮಾಡಿದರು. ರೈಲ್ವೆಯಲ್ಲಿ ಕಂಪ್ಯೂಟರ್ ಟಿಕೆಟ್ ನೀಡಲು ಆರಂಭಿಸಿ ರೈಲ್ವೇ ಇಲಾಖೆ ಆಧುನೀಕರಣಕ್ಕೆ ನಾಂದಿ ಹಾಡಿದರು.

*3. ಮತದಾನದ ವಯಸ್ಸು:* ದೇಶದ ಯುವ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಯುವ ಸಮುದಾಯ ಹಾಗೂ ಅವರ ಸಾಮರ್ಥ್ಯದ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು. 1989ರಲ್ಲಿ ಸಂವಿಧಾನದ 61ನೇ ತಿದ್ದುಪಡಿಯಲ್ಲಿ ಮತದಾನದ ವಯೋಮಿತಿಯನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸಿದರು. ಇದರಿಂದ ವಿಧಾನಸಭೆಯಿಂದ ಸಂಸತ್ತಿನ ಚುನಾವಣೆಯಲ್ಲಿ ಯುವಕರು ಭಾಗವಹಿಸಲು ಅವಕಾಶ ಕಲ್ಪಿಸಿದರು.

*4. ಪಂಚಾಯತ್ ರಾಜ್*
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತಳಮಟ್ಟದವರೆಗೂ ತಲುಪಿಸುವ ಉದ್ದೇಶದಿಂದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತಂದರು. 1992ರಲ್ಲಿ 73 ಹಾಗೂ 74ನೇ ಸಂವಿಧಾನ ತಿದ್ದುಪಡಿಯಲ್ಲಿ ಇದನ್ನು ಜಾರಿಗೆ ತರಲಾಯಿತು. ಅವರು ಹತ್ಯೆಯಾಗುವ ಮುನ್ನ ಅವರ ನೇತೃತ್ವದ ಸರ್ಕಾರದಲ್ಲಿ ಇದರ ರೂಪುರೇಷೆ ಸಿದ್ಧಪಡಿಸಲಾಗಿತ್ತು.

*5. ಶಿಕ್ಷಣ ನೀತಿ*
ರಾಜೀವ್ ಗಾಂಧಿ ಅವರು 1986ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದು ದೇಶದ ಎಲ್ಲೆಡೆ ಆಧುನಿಕ ಹಾಗೂ ಪ್ರೌಢಶಿಕ್ಷಣ ಕಾರ್ಯಕ್ರಮವನ್ನು ವಿಸ್ತರಿಸಿದರು. ಇದರ ಮೂಲಕ ಜವಾಹಾರ್ ನವೋದಯ ವಿದ್ಯಾಲಯದಂತಹ ರೆಸಿಡೆನ್ಶಿಯಲ್ ಶಾಲೆಗಳು ಆರಂಭವಾದವು. ಇದು ಗ್ರಾಮೀಣ ಪ್ರತಿಭೆ ಬೆಳೆಯಲು ಅವಕಾಶ ಕಲ್ಪಿಸಿತು.

Leave a Reply