ಮೋದಿ ರಕ್ಷಣೆಗೆ ರಾಜ್ಯದ ಜನರ ಹಿತಾಸಕ್ತಿ ಬಲಿ; ಸಿಎಂ ಬಿಎಸ್ ವೈ ವಿರುದ್ಧ ಸಿದ್ದರಾಮಯ್ಯ ಕಿಡಿ

ಡಿಜಿಟಲ್ ಕನ್ನಡ ಟೀಮ್:

ಸಾಲ ಮಾಡಿ ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡುತ್ತೇನೆ ಎಂದಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಈಗ ಕೇಂದ್ರದಿಂದ ಜಿಎಸ್ ಟಿ ಪಾಲು ಪಡೆಯುವ ಬದಲು ಸಾಲ ಮಾಡಲು ಮುಂದಾಗಿರುವುದರ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಟ್ವಿಟ್ಟರ್ ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ‘ಕೇಂದ್ರ ಸರ್ಕಾರದ ವಿಶ್ವಾಸದ್ರೋಹಕ್ಕೆ ತಲೆಬಾಗಿರುವ ಕರ್ನಾಟಕದ ಮುಖ್ಯಮಂತ್ರಿ ಜಿಎಸ್ ಟಿ ಪರಿಹಾರವನ್ನು ತುಂಬಿಕೊಳ್ಳಲು ಆರ್ ಬಿ ಐನಿಂದ ಸಾಲ ಪಡೆಯಲು ತೀರ್ಮಾನಿಸುವ ಮೂಲಕ ರಾಜ್ಯದ ಜನತೆಯನ್ನು ಸಾಲದ ಶೂಲಕ್ಕೆ ಒಡ್ಡಿದ್ದಾರೆ. ಇದು ಜಿಎಸ್‌ಟಿ ಮೋಸ’ ಎಂದು ಕಿಡಿಕಾರಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ರಾಜ್ಯದ ಹಿತವನ್ನು ಬಲಿಗೊಡುತ್ತಿದ್ದಾರೆ. ರಾಜ್ಯ ಮತ್ತು‌ ಕೇಂದ್ರ ಸರ್ಕಾರ ಜನತೆಗೆ ಬಗೆದಿರುವ ದ್ರೋಹವನ್ನು‌ ಕಾಂಗ್ರೆಸ್ ಪಕ್ಷ ವಿಧಾನಮಂಡಲದ‌ ಅಧಿವೇಶನದಲ್ಲಿ ಬಿಚ್ಚಿಡಲಿದೆ’ ಎಂದರು.

ಹೊಸ ಸಾಲದ ಹೊರೆ ರೂ.11,324 ಕೋಟಿಗಷ್ಟೇ ಸೀಮಿತವೇ? ಇದು ಒಟ್ಟು ಜಿಎಸ್ ಟಿ ಪರಿಹಾರ 97,000 ಕೋಟಿಯಲ್ಲಿ ರಾಜ್ಯದ ಪಾಲು ಅಷ್ಟೆ. ಇದರ ಜೊತೆ ಕೊರೊನಾದಿಂದಾಗಿ ಜಿಎಸ್ ಟಿ ಒಟ್ಟು ನಷ್ಟ ರೂ.2,35,000 ಕೋಟಿ ಎಂದು ಅಂದಾಜು ಮಾಡಲಾಗಿದೆ. ಇದನ್ನು ಕೇಂದ್ರ ತುಂಬಿಕೊಡಲಿದೆಯೇ? ರಾಜ್ಯವೇ ಸಾಲ‌ಮಾಡಬೇಕೇ?

2020-21ರ ಅಂತ್ಯಕ್ಕೆ ರೂ.3,68,692 ಕೋಟಿ ಸಾಲದ ಅಂದಾಜನ್ನು ಕರ್ನಾಟಕದ ಮುಖ್ಯಮಂತ್ರಿ ಬಜೆಟ್‌ನಲ್ಲಿ ನೀಡಿದ್ದರು. ಈಗ ಕೊರೋನಾದಿಂದ ತೆರಿಗೆ ಸಂಗ್ರಹ ಕುಸಿದಿದೆ, ವಿತ್ತೀಯ ಕೊರತೆ ಹೆಚ್ಚಲಿದೆ, ಇವೆಲ್ಲದ್ದಕ್ಕೂ ಸಾಲ ಮಾಡಲು ಹೊರಟರೆ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಸಾಲದ ಮಿತಿ ಶೇ.25 ಅನ್ನು ಮೀರಲಾರದೇ? ಎಂದು ಪ್ರಶ್ನಿಸಿದ್ದಾರೆ.

‘ಸಾಲ ಮಾಡಿಯಾದರೂ ಕೊರೊನಾ ನಿಯಂತ್ರಿಸುತ್ತೇನೆ, ಪ್ರವಾಹ ಪೀಡಿತರಿಗೆ ಪರಿಹಾರ ನೀಡುತ್ತೇನೆ, ಸರ್ಕಾರಿ ನೌಕರರ ಸಂಬಳ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಪ್ರತಿಯೊಂದಕ್ಕೂ ಸಾಲದ ಮಂತ್ರ ಪಠಿಸುತ್ತಾ ಬಂದಿದ್ದಾರೆ. ಇವರೇನು ರಾಜ್ಯ ಸರ್ಕಾರವನ್ನು ದಿವಾಳಿ ಮಾಡಲು ತೀರ್ಮಾನಿಸಿದ್ದಾರೆಯೇ? ಇದು ಜಿಎಸ್‌ ಟಿ ಮೋಸ. ಅಲ್ಲದೆ, ಕೇಂದ್ರ ಸರ್ಕಾರದ ವಿಶ್ವಾಸದ್ರೋಹಕ್ಕೆ ತಲೆಬಾಗಿರುವ ಕರ್ನಾಟಕದ ಮುಖ್ಯಮಂತ್ರಿ ಜಿಎಸ್ ಟಿ ಪರಿಹಾರವನ್ನು ತುಂಬಿಕೊಳ್ಳಲು ಆರ್ ಬಿ ಐನಿಂದ ಸಾಲ ಪಡೆಯಲು ತೀರ್ಮಾನಿಸುವ ಮೂಲಕ ರಾಜ್ಯದ ಜನತೆಯನ್ನು ಸಾಲದ ಶೂಲಕ್ಕೆ ಒಡ್ಡಿದ್ದಾರೆ’ ಎಂದು ಕಿಡಿಕಾರಿದ್ದಾರೆ.

Leave a Reply